ADVERTISEMENT

ಆರೋಗ್ಯ: ಚಳಿಯಲ್ಲಿ ಸುಳಿಯದಿರಲಿ ರೋಗ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 23:30 IST
Last Updated 25 ನವೆಂಬರ್ 2024, 23:30 IST
<div class="paragraphs"><p>ಪ್ರಜಾವಾಣಿ ಸಂಗ್ರಹ ಚಿತ್ರ</p></div>

ಪ್ರಜಾವಾಣಿ ಸಂಗ್ರಹ ಚಿತ್ರ

   

ಆಯುರ್ವೇದದ ಅಷ್ಟಾಂಗಗಳಲ್ಲಿ ಕಾಯಚಿಕಿತ್ಸೆ ಮೊದಲಿನದು. ‘ಕಾಯ’ ಎಂದರೆ ದೇಹಾಗ್ನಿ, ಅರ್ಥಾತ್ ಜಠರದ ಹಸಿವೆ. ಅದು ಅಣುವೂ ಹೌದು; ಇಡೀ ದೇಹವ್ಯಾಪಿ ಸಹ. ಪಿತ್ತವು ಶರತ್ಕಾಲದಲ್ಲಿ ಕೆಡುತ್ತದೆ. ಪಿತ್ತಕ್ಕೆ ‘ತಾಪ’ ಎಂಬ ಪರ್ಯಾಯ ಹೆಸರಿದೆ. ದೇಹದ ತಾಪ, ಎಂದರೆ ‘ಟೆಂಪರೇಚರ್’ ಇದೇನೇ. ಹೊರಗಿನ ಚಳಿಗಾಳಿಗೆ ಇದು ವ್ಯತ್ಯಯ. ಹೀಗಾಗಿ ಈ ಅಣು ಮಾತ್ರದ, ಆದರೆ ಸಕಲ ದೇಹ ವ್ಯಾಪಿ ಪಿತ್ತವನ್ನು ತಹಬಂದಿಗೆ ತರುವ ಕಠಿಣ ಕೆಲಸ ಚಳಿಗಾಲದ ಆರೋಗ್ಯ ರಕ್ಷಣೆಯ ಉಪಾಯ.

‘ಸುಶ್ರುತ ಸಂಹಿತೆ’ಯು ತಿಳಿಸುವಂತೆ ಆಶ್ವಯುಜ ಕಾರ್ತಿಕ ಅಥವಾ ಆಶ್ವಯುಜ ಮಾರ್ಗಶಿರ ಪರ್ಯಂತ ಶರದೃತು ವ್ಯಾಪ್ತಿ. ಅನಂತರ ಹೇಮಂತಾಗಮನ. ಆ ಬಳಿಕ ಶಿಶಿರ. ಇವು ಮೂರೂ ಸಹ ವಿಸರ್ಗ ಕಾಲ. ಮಳೆಗಾಲದುದ್ದಕ್ಕೆ ಜರ್ಜರಿತಗೊಂಡ ದೇಹ ಕ್ರಮೇಣ ಚೇತರಿಕೆಗಿದು ಸಕಾಲ. ಮನುಷ್ಯನಿಗೆ ಕೊಂಚ ಬಲ, ಅರ್ಥಾತ್ ರೋಗನಿರೋಧಕ ಕಸುವಿನ ಏರುಮುಖದ ಸಮಯ. ಆದರೂ ಪಿತ್ತದೋಷ ಸಂಚಯವಾಗುವ ಕಾಲ. ಪಿತ್ತಶಾಮಕ ಆಹಾರಗಳಲ್ಲಿ ಮಧುರಪ್ರಾಯ ತಿಂಡಿ–ತಿನಿಸುಗಳು ಪ್ರಧಾನ. ಹಾಗಾಗಿಯೇ ನವರಾತ್ರಿಯಾಗಲಿ, ದೀವಳಿಗೆಯಿರಲಿ ಭಕ್ಷ್ಯ ಭೋಜ್ಯಗಳಿಗೆ ಬಲು ಮನ್ನಣೆ. ಕಡುಬು ಕಜ್ಜಾಯಗಳಿಗೆ ಆದ್ಯತೆ. ಪಿತ್ತಪರಿಹಾರಿ ಉಪಾಯಗಳಲ್ಲಿ ತುಪ್ಪಕ್ಕೆ ಅಗ್ರಸ್ಥಾನ. ಕಹಿ ಒಗರು ರಸದ ಅರಶಿನ ಬೆರಸಿದ ತುಪ್ಪದಡುಗೆ ಆರೋಗಣೆಯಿಂದ ಆರೋಗ್ಯ. ‘ಶರದೃತು ವಿರೇಚನ’ ಎಂಬ ಪಂಚಕರ್ಮದ ಒಂದು ಉಪಾಯವಿದೆ. ಇದು ಕ್ರಮವರಿತ ಭೇದಿ ಚಿಕಿತ್ಸೆ. ಅದನ್ನು ಅನುಸರಿಸಲು ಇದು ಸಕಾಲ.

ADVERTISEMENT

ಊಟೋಪಚಾರಕ್ಕೆ ಬೂದುಗುಂಬಳ, ತೊಂಡೆ, ಪಡವಲ, ಹಾಗಲ, ಸಂಬಾರ ಸೌತೆ, ಹೀರೆ, ಸೋರೆಯಂತಹ ಸಿಹಿಕಹಿ ತರಕಾರಿ ಬಳಸಿರಿ. ಹಾಲು–ಮಜ್ಜಿಗೆಗಳ ಬಳಕೆಗೆ ಇದು ಪ್ರಶಸ್ತ ಸಮಯ. ಶರದೃತುವಿನುದ್ದಕ್ಕೆ ಹೆಸರುಬೇಳೆಯ ನಾನಾ ಅಡುಗೆ ಪ್ರಶಸ್ತ; ಮಕರ ಸಂಕ್ರಮಣ ಪರ್ಯಂತ ಆರೋಗ್ಯದಾಯಿ. ಅದುವೆ ಪೊಂಗಲ್ ಅಡುಗೆ. ಚಳಿಯ ದಿನಗಳ ಚರ್ಮ ಬಿರುಸುತನಕ್ಕೆ, ನೆಗಡಿ ನಿರೋಧಕತನಕ್ಕೆ ಮೆಟ್ಟಲು ನೆಲ್ಲಿಕಾಯಿ ಸಹಕಾರಿ. ತುಳಸಿಯ ಹಬ್ಬದಲ್ಲಿ ತುಳಸಿ ಮತ್ತು ನೆಲ್ಲಿಯ ನೆನಪಾಗುತ್ತದೆ. ಸಣ್ಣಕ್ಕಿಯ ಅನ್ನದ ಸಂಗಡ ನೆಲ್ಲಿಯ ತಂಬುಳಿ, ಸಾರು ಬಳಸುವಿರಂತೆ. ನೆನಪಿಡಿ. ಹುಣಿಸೆ, ಲಿಂಬೆ, ನೆಲ್ಲಿಯಂತಹ ಹುಳಿಯಿಂದ ಎಂದಿಗೂ ಪಿತ್ತ ದೋಷ ಕೆಡದು. ಆದರೆ ಟೊಮೆಟೊದಲ್ಲಿ ಮಾತ್ರ ಯೂರಿಕ್ ಅಮ್ಲದ ಅಂಶ ಹೆಚ್ಚಾಗಿದೆ. ವಾತ ಮತ್ತು ರಕ್ತದೋಷ ಕೆಟ್ಟು ಗೌಟ್, ಕೀಲುಗಂಟಿನ ವಾತಕ್ಕೆ ಕಾರಣವಾಗುತ್ತದೆ ಈ ಪರದೇಶೀ ಬೆಳೆ. ಚಳಿಯ ದಿನಗಳಲ್ಲಿ ಸದ್ದಿಲ್ಲದ ನಿದ್ರೆಯಲ್ಲಾಗುವ ಹೃದಯಾಘಾತ ಬಹಳ ಹೆಚ್ಚು. ಅದರ ತಡೆಗೂ ಹಲವು ಉಪಾಯಗಳಿವೆ. ತುಳಸಿಯ ಹಬ್ಬದ ಹಿಂದೆ ತುಳಸಿ ಬಳಕೆಯ ಸಂಕೇತವಿದೆ. ಕುಡಿಯುವ ನೀರಿಗೆ ತುಳಸೀದಳವನ್ನು ಹಾಕಿಡಿರಿ. ಅದು ಕಡುರಸದ್ದು. ಅದು ಹಸಿವೆ ಹೆಚ್ಚಳಕ್ಕೂ ಮಾರ್ಗ.

ಕುಡಿಯಲು ಬಳಸುವ ನೀರಿಗೆ ಕೊಂಚ ಜೇನನ್ನೂ ಸೇರಿಸಲಾದೀತು. ಇದರಿಂದ ಕಫ, ಪಿತ್ತಗಳಿಗೆ ಕಡಿವಾಣವಾಗುತ್ತದೆ. ಇಂದು ನಾವು ಬಳಸುವ ‘ಆರ್ವೋ ನೀರು’ ಹಲವು ಕಾಯಿಲೆಗಳ ಮೂಲ; ಉಗುರು, ಕೂದಲು, ಮೂಳೆಗಳ ಮತ್ತು ಚರ್ಮಾರೋಗ್ಯಕ್ಕೆ ಬಾಧಕ. ಮೂಳೆಗಳ ಮಿದುತನ, ಅನ್ನಾಂಗ ದೇಹಕ್ಕೆ ಸೇರದಂತೆ ಮಾಡುವ ಹಾನಿಕರ ಜಲವದು.

ನಾವು ದಿನವೂ ನಸುಕಿನ ನಡಿಗೆ ಮಾಡುವೆವು ಎಂಬ ಹಮ್ಮು ಬಿಮ್ಮು ತರವಲ್ಲ. ಮುಂಜಾವಿನ ಮಂಜು ಮತ್ತು ಇದಿರು ಗಾಳಿ ಖಂಡಿತ ಅನಾರೋಗ್ಯಕರ. ಬಿಸಿಲೇರಿದರೆ ಖಂಡಿತ ಓಡಾಡಬಾರದು. ತೀಕ್ಷ್ಣ ಮದ್ಯಪಾನ ಅನುಚಿತ. ಹಗಲು ನಿದ್ರೆ ಖಂಡಿತ ತರವಲ್ಲ. ಮೈಗೆ ಶ್ರೀಗಂಧ, ಪಚ್ಚೆಕರ್ಪೂರ, ಪನ್ನೀರು ಬಳಿದುಕೊಳ್ಳುವಾ ಮತ್ತು ಬೆಳದಿಂಗಳ ವಿಹಾರದ ಸುಮಧುರ ಋತುಚರ್ಯೆಯನ್ನು ಆಚರಿಸುವಾ. ಚಳಿಗಾಲ, ಎಂದರೆ ಹೇಮಂತದ ಆರೋಗ್ಯ ಕಾಳಜಿ ನಮಗಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.