ಸೋರಿಯಾಸಿಸ್ ಒಂದು ದೀರ್ಘಕಾಲದ, ಹೆಚ್ಚಿನ ಸಂದರ್ಭಗಳಲ್ಲಿ ಮತ್ತೆ ಮತ್ತೆ ಮರುಕಳಿಸುವ ಚರ್ಮದ ಸಮಸ್ಯೆ. ಈ ಕಾಯಿಲೆಗೆ ನಿಖರವಾದ ಕಾರಣವಿನ್ನೂ ತಿಳಿದಿಲ್ಲ. ಆದರೆ ಮುಖ್ಯವಾಗಿ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯ ದೋಷದಿಂದ ಉಂಟಾಗುವ ಸಮಸ್ಯೆಯಿದು. ಆದ್ದರಿಂದ ಅನುವಂಶೀಯತೆಯ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತಹದ್ದಲ್ಲ. ಹಾಗೆಯೇ ಯಾವುದೇ ಸೂಕ್ಷ್ಮಾಣು ಅಥವಾ ವೈರಾಣು ಕೂಡ ಇದಕ್ಕೆ ಕಾರಣವಲ್ಲ. ಇದು ಯಾವುದೇ ವಸ್ತುವಿನ ಅಲರ್ಜಿಯಿಂದ ಉಂಟಾಗುವಂತಹದ್ದೂ ಅಲ್ಲ.
ಸೋರಿಯಾಸಿಸ್ ಗುಣಲಕ್ಷಣಗಳೇನು?
ಈ ಸಮಸ್ಯೆಯು ಮಹಿಳೆ ಹಾಗೂ ಪುರುಷರಿಬ್ಬರನ್ನೂ ಸಮನಾಗಿ ಕಾಡುತ್ತದೆ. ದೇಹದ ವಿವಿಧ ಭಾಗದ ಚರ್ಮದ ಮೇಲೆ ಸಣ್ಣ ಸಣ್ಣ ಬಿಲ್ಲೆಗಳಂತಹ ಗಂದೆಗಳು ಕಂಡುಬರುತ್ತವೆ. ಈ ಬಿಲ್ಲೆಗಳು ಒಂದು ಬಗೆಯ ಬೆಳ್ಳಿಬಣ್ಣದ ಒಣ ಚರ್ಮದಿಂದ ಮುಚ್ಚಲ್ಪಟ್ಟಿರುತ್ತವೆ. ಆ ಒಣಚರ್ಮವನ್ನು ಕಿತ್ತ ಕೂಡಲೇ ಅಲ್ಲಿ ಸಣ್ಣ ಸಣ್ಣ ರಕ್ತ ಸ್ರಾವದ ಬಿಂದುಗಳಿರುತ್ತವೆ. ಕೈ, ಕಾಲು, ಮೊಣ ಕೈ, ಮೊಣ ಕಾಲು, ನೆತ್ತಿಯ ಚರ್ಮ..ಹೀಗೆ ದೇಹದ ಯಾವುದೇ ಭಾಗದಲ್ಲಿಯೂ ಇವು ಕಂಡುಬರಬಹುದು. ಈ ಗಂದೆಗಳಲ್ಲಿ ಸಾಮಾನ್ಯವಾಗಿ ತುರಿಕೆ ಇರುತ್ತದೆ. ಒಮ್ಮೊಮ್ಮೆ ಇಲ್ಲದೆಯೂ ಇರಬಹುದು.
ಚರ್ಮದ ಪದರಗಳ ಜೀವಕೋಶಗಳು ವಿಭಜನೆಗೊಳ್ಳುವ ಪ್ರಕ್ರಿಯೆಯಲ್ಲಿನ ದೋಷವೇ ಈ ಕಾಯಿಲೆಗೆ ಮುಖ್ಯ ಕಾರಣ. ಸಾಮಾನ್ಯವಾಗಿ ಚರ್ಮದ ಪದರಗಳ ಜೀವಕೋಶಗಳು ಕೆಳಪದರದಿಂದ ಮೇಲಿನ ಪದರಕ್ಕೆ ಪಕ್ವವಾಗಿ ಬರಲು ಐವತ್ತೆರಡರಿಂದ ಎಪ್ಪತ್ತೈದು ದಿನಗಳು ಬೇಕಾಗುತ್ತವೆ. ಆದರೆ, ಈ ಸಮಸ್ಯೆಯಲ್ಲಿ ಕೇವಲ ಎಂಟರಿಂದ ಹತ್ತು ದಿನಗಳ ಒಳಗಾಗಿ ಈ ಜೀವಕೋಶಗಳು ಕೆಳ ಪದರದಿಂದ ಮೇಲಿನ ಪದರಗಳಿಗೆ ಪಕ್ವವಾಗಿ ಬರುತ್ತವೆ. ಬಹಳ ವೇಗವಾಗಿ ಜೀವಕೋಶಗಳು ವಿಭಜನೆ ಹೊಂದುವುದೇ ಇದಕ್ಕೆ ಕಾರಣ.
ಸೋರಿಯಾಸಿಸ್‍ನಲ್ಲಿ ಅನೇಕ ಬಗೆಗಳಿವೆ
ಬಗೆ 1: ಈ ಬಗೆಯಲ್ಲಿ ಕೈ, ಕಾಲು, ಮಂಡಿ, ಮೊಣ ಕೈ ಮೊದಲಾದ ಭಾಗಗಳಲ್ಲಿ ಸುಸ್ಪಷ್ಟವಾದ ಬೆಳ್ಳಿಬಣ್ಣದ ಒಣಚರ್ಮದಿಂದ ಮುಚ್ಚಲ್ಪಟ್ಟ ಗಂದೆಗಳು ಕಂಡುಬರುತ್ತವೆ. ಒಣಚರ್ಮವನ್ನು ಕಿತ್ತ ಕೂಡಲೇ ಅಲ್ಲಿ ರಕ್ತಸ್ರಾವದ ಬಿಂದುಗಳಿರುತ್ತವೆ.
ಬಗೆ 2: ಇನ್ನೊಂದು ಬಗೆಯ ಸೋರಿಯಾಸಿಸ್‍ನಲ್ಲಿ ಕೆಂಪು ಕೆಂಪಾದ ಗಂದೆಗಳು ಹೊಟ್ಟೆ, ಬೆನ್ನು ಹಾಗೂ ಕೈಗಳ ಮೇಲೆ ಕಾಣಿಸಿಕೊಳ್ಳಬಹುದು. ಈ ಬಗೆಯು ಸಾಮಾನ್ಯವಾಗಿ ಮಕ್ಕಳಲ್ಲಿ ಹಾಗೂ ಹದಿಹರೆಯದವರಲ್ಲಿ ಕಂಡುಬರುತ್ತದೆ.
ಬಗೆ 3: ಚರ್ಮದ ಮಡಿಕೆಗಳಿರುವ ದೇಹದ ಭಾಗಗಳಲ್ಲಿ ಗಂದೆಗಳು ಗೋಚರಿಸುತ್ತವೆ. ಕಂಕುಳ, ತೊಡೆಗಳ ಸಂಧುಗಳಲ್ಲಿ, ಮಹಿಳೆಯರಲ್ಲಿ ಸ್ತನಗಳ ಕೆಳ ಭಾಗದಲ್ಲಿ ಗಂದೆಗಳು ಕಂಡುಬರುತ್ತವೆ.
ಬಗೆ 4: ಶರೀರದ ಸುಮಾರು ತೊಂಬತ್ತಕ್ಕೂ ಹೆಚ್ಚು ಭಾಗವು ಕೆಂಪು ಬಣ್ಣದ ಗಂದೆಗಳನ್ನು ಹೊಂದಿರುತ್ತದೆ.
ಬಗೆ 5: ಗಂದೆಗಳು ಕೇವಲ ನೆತ್ತಿಯ ಚರ್ಮದ ಮೇಲೆ ಕಂಡು ಬರುತ್ತವೆ.
ಬಗೆ 6: ಚರ್ಮದ ಗಂದೆಗಳ ಜೊತೆಯಲ್ಲಿಯೇ ವ್ಯಕ್ತಿಯ ಉಗುರುಗಳಲ್ಲಿಯೂ ಬದಲಾವಣೆಗಳು ಕಂಡು ಬರುತ್ತವೆ. ಉಗುರು ಹಳದಿಬಣ್ಣಕ್ಕೆ ತಿರುಗುವುದು, ಉಗುರುಗಳ ಮೇಲೆ ಸಣ್ಣ ಸಣ್ಣ ತಗ್ಗುಗಳಾದಂತಾಗುವುದು.. ಉಗುರು ಟೊಳ್ಳಾಗುವುದು.
ಬಗೆ 7: ಕೀಲುಗಳಲ್ಲಿಯೂ ಉರಿಯೂತದಂತಹ ಬದಲಾವಣೆ. ಸಾಮಾನ್ಯವಾಗಿ ಅಂಗೈನ ಸಣ್ಣ ಕೀಲುಗಳು, ಕೆಲವೊಮ್ಮೆ ದೊಡ್ಡ ಕೀಲುಗಳೂ ಬದಲಾವಣೆ ತೋರಬಹುದು.
ಪತ್ತೆ ಹೇಗೆ?
ಸಾಮಾನ್ಯವಾಗಿ ರೋಗಿಯ ಗುಣಲಕ್ಷಣಗಳನ್ನು ಆಧರಿಸಿಯೇ ಕಾಯಿಲೆಯನ್ನು ಪತ್ತೆ ಮಾಡಲಾಗುತ್ತದೆ. ಕಾಯಿಲೆಯನ್ನು ದೃಢಪಡಿಸಲು ಗಾಯದ ಅಂಗಾಂಶದ ತುಣುಕೊಂದನ್ನು ಬಯಾಪ್ಸಿ ಪರೀಕ್ಷೆ ಮಾಡಿ ಚರ್ಮದ ಜೀವಕೋಶಗಳ, ಪದರಗಳಲ್ಲಿನ ನಿರ್ದಿಷ್ಟ ಬದಲಾವಣೆಗಳನ್ನು ಗಮನಿಸಬಹುದು.
ಚಿಕಿತ್ಸೆ ಏನು?
ಸೋರಿಯಾಸಿಸ್ ಕಾಯಿಲೆಯನ್ನು ಹೆಚ್ಚಿನ ಸಂದರ್ಭಗಳಲ್ಲಿ ಸಂಪೂರ್ಣವಾಗಿ ಗುಣಪಡಿಸಲಾಗುವುದಿಲ್ಲ. ಆದರೆ ಅದರ ನಿಯಂತ್ರಣ ಖಂಡಿತ ಸಾಧ್ಯ. ವ್ಯಕ್ತಿಯ ಕಾಯಿಲೆಯ ತೀವ್ರತೆಯನ್ನು ಅಳೆದು ಚಿಕಿತ್ಸೆಯ ಸೂಕ್ತ ವಿಧಾನವನ್ನು ಆರಿಸಿಕೊಳ್ಳಬಹುದು.
- ಗಂದೆಗಳ ಮೇಲೆ ಹಚ್ಚಲು ಕಾರ್ಟಿಕೋಸ್ಟಿರಾಯ್ಡ್ ಔಷಧ, ವಿಟಮಿನ್ ಡಿ ಮುಲಾಮುಗಳು.
- ಫೋಟೋಥೆರಪಿ ಅಥವ ಲೈಟ್ ಥೆರಪಿ (ನೇರಳಾತೀತ ವಿಕಿರಣ - ನ್ಯಾರೊಬ್ಯಾಂಡ್ ಬಿ ಓಃ-Uಗಿಃ ಕಿರಣಗಳು) ಬಳಸಿ ಚಿಕಿತ್ಸೆ.
- ರೆಟಿನಾಯ್ಡ್ ಗುಂಪಿನ ಔಷಧಗಳ ಬಳಕೆ.
- ಸೊರಲೇನ್ ಎಂಬ ಔಷಧ ಬಳಸಿ ಚಿಕಿತ್ಸೆ
- ರೋಗನಿರೋಧಕ ಶಕ್ತಿಯನ್ನು ಕುಂದಿಸುವ ಔಷಧಗಳು (ಮೆಥೋಟ್ರೆಕ್ಸೇಟ್, ಸೈಕ್ಲೋಸ್ಪೋರಿನ್)///
- ಜೈವಿಕ ಉತ್ಪನ್ನಗಳನ್ನು ಬಳಸಿ ಚಿಕಿತ್ಸೆ – ಇವು ರೋಗನಿರೋಧಕ ವ್ಯವಸ್ಥೆಯ ನಿರ್ದಿಷ್ಟ ಅಂಶಗಳನ್ನು ಗುರಿಯಾಗಿರಿಸಿಕೊಂಡು ಕಾರ್ಯನಿರ್ವಹಿಸುತ್ತವೆ.
ಈ ಕಾಯಿಲೆಗೆ ಉತ್ತಮ, ಸುರಕ್ಷಿತ ಔಷಧಗಳು ಹಾಗೂ ಇನ್ನೂ ಹೆಚ್ಚು ಖಚಿತವಾದ ಚಿಕಿತ್ಸಾತಂತ್ರಗಳನ್ನು ಅನ್ವೇಷಿಸುವ ಅವಶ್ಯಕತೆ ಇದೆ.
ನೆನಪಿನಲ್ಲಿಡಬೇಕಾದ ಅಂಶಗಳು
- ಹೇಗೆ, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ಒಮ್ಮೆ ಪತ್ತೆಯಾದರೆ ಸಂಪೂರ್ಣವಾಗಿ ಗುಣಪಡುವುದಿಲ್ಲವೋ ಹಾಗೆಯೇ ಸೋರಿಯಾಸಿಸ್ ಕೂಡ.
- ಕೆಲವು ಅಂಶಗಳು ಸೋರಿಯಾಸಿಸ್ ಕಾಯಿಲೆಯನ್ನು ಪ್ರಚೋದಿಸುತ್ತವೆ. ಅವೆಂದರೆ, ಶರೀರಕ್ಕೆ ಆಗುವ ಆಘಾತ, ಕೆಲವು ಬಗೆಯ ಸೋಂಕುಗಳು, ಕೆಲವು ಔಷಧಗಳು, ಒತ್ತಡ ತುಂಬಿದ ಜೀವನಶೈಲಿ, ಸೂರ್ಯನ ಬಿಸಿಲಿಗೆ ಅತಿಯಾಗಿ ಮೈಯೊಡ್ಡುವಿಕೆ, ಪದೇ ಪದೇ ಡಯಾಲಿಸಿಸ್‍ಗೆ ಒಳಪಡುವುದು, ಕ್ಯಾಲ್ಸಿಯಂ ಕೊರತೆ, ಮದ್ಯಪಾನ, ಧೂಮಪಾನ, ಮುಂತಾದುವು
- ಚಳಿಗಾಲದಲ್ಲಿಯೂ ಒಮ್ಮೊಮ್ಮೆ ಈ ಕಾಯಿಲೆಯು ಉಲ್ಬಣಗೊಳ್ಳುತ್ತದೆ. ಆ ಸಂದರ್ಭದಲ್ಲಿ ಚರ್ಮವನ್ನು ಮೃದುಗೊಳಿಸುವ ಔಷಧಗಳನ್ನು ಬಳಸಬಹುದು.
- ಈ ಕಾಯಿಲೆಯು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ.
- ಸೋರಿಯಾಸಿಸ್ ಮಾರಣಾಂತಿಕ ಕಾಯಿಲೆಯಲ್ಲ. ಸಾಮಾನ್ಯವಾಗಿ ಯಾವುದೇ ಅಪಾಯಕರ ಸಂಭವನೀಯ ಪರಿಣಾಮಗಳಿಗೆ ಕಾರಣವಾಗುವುದಿಲ್ಲ.
- ಈ ಕಾಯಿಲೆಯು ಪತ್ತೆಯಾದಾಗ, ವ್ಯಕ್ತಿಯು ಮಾನಸಿಕವಾಗಿ ಕುಗ್ಗಿ ಹೋಗದೇ ಸುರಕ್ಷಿತವಾದ ಚಿಕಿತ್ಸೆಯನ್ನು ಪಡೆದು ಸಾಮಾನ್ಯ ಜೀವನ ನಡೆಸಲು ದೃಢ ಮನಸ್ಸು ಮಾಡಬೇಕು.
ಸೋರಿಯಾಸಿಸನ್ನು ನಿಯಂತ್ರಿಸುವಲ್ಲಿ ಸಹಕರಿಸುವ ಇತರ ಅಂಶಗಳು
ದಿನನಿತ್ಯದ ವ್ಯಾಯಾಮ, ಪ್ರಾಣಾಯಾಮ, ಸಮತೋಲನ ಆಹಾರದ ಸೇವನೆ, ಹೆಚ್ಚು ನೀರಿನ ಬಳಕೆ, ಚರ್ಮದ ಮೃದುಕಾರಕಗಳ ಬಳಕೆ, ಮದ್ಯಪಾನ–ಧೂಮಪಾನಗಳ ವರ್ಜನೆ.
****
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.