ಆನಂದವಾಗಿ ಬದುಕುವುದು ಪ್ರತಿಯೊಬ್ಬರ ಕನಸು. ನಾಳಿನ ಸಂತಸಕ್ಕಾಗಿ ಇಂದು ಕಷ್ಟ ಪಡಬೇಕು ಎನ್ನುವ ಧ್ಯೇಯ ಪ್ರಪಂಚದ ಬಹುತೇಕರದ್ದು. ಅಂತೆಯೇ, ಒಳ್ಳೆಯ ಆರೋಗ್ಯ ಕೂಡ. ಕಡೆಗಾಲದವರೆಗೆ ಆರೋಗ್ಯವಾಗಿ ಇರಬೇಕೆನ್ನುವ ಅಭಿಲಾಷೆ ಎಲ್ಲರದ್ದೂ ಆಗಿರುತ್ತದೆ. ಆರೋಗ್ಯಕ್ಕೂ ಆನಂದಕ್ಕೂ ಪರಸ್ಪರ ಸಂಬಂಧವಿದೆಯೇ? ಒಂದು ಮತ್ತೊಂದನ್ನು ಪ್ರಚೋದಿಸುತ್ತದೆಯೇ?
ಬಹುಕಾಲದ ದುಃಖ, ಖಿನ್ನತೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ದುರ್ಬಲಗೊಳಿಸುತ್ತವೆ ಎಂಬುದು ಸಿದ್ಧವಾಗಿದೆ. ಇದಕ್ಕೆ ವಿಲೋಮವಾಗಿ, ಆನಂದದ ಭಾವ ಒಳ್ಳೆಯ ಆರೋಗ್ಯಕ್ಕೆ ಕಾರಣವಾಗಬಹುದು ಎಂಬ ಊಹೆ ತರ್ಕಬದ್ಧವಾದದ್ದು. ಆನಂದಕ್ಕೆ ಅನೇಕ ಆಯಾಮಗಳಿವೆ. ಸಂತಸದ ಭಾವ, ಸ್ವಾತಂತ್ರ್ಯ, ಜೀವನದ ಅರ್ಥೋದ್ದೇಶಗಳನ್ನು ಕಂಡುಕೊಳ್ಳುವಿಕೆ, ಏಳಿಗೆ, ಸಮಾಧಾನದ ಬದುಕು, ವೈಯಕ್ತಿಕ ವಿಕಸನ – ಮುಂತಾದವು ಆನಂದದ ಪರಿಭಾಷೆಗಳು. ಉತ್ತಮ ಜೀವನಶೈಲಿ, ನಿಯಮಿತ ವ್ಯಾಯಾಮ, ಕ್ರಮಬದ್ಧ ಆಹಾರ ಮೊದಲಾದ ಪದ್ಧತಿಗಳು ದೀರ್ಘಕಾಲಿಕ ಆನಂದಕ್ಕೆ ಕಾರಣವಾಗಬಲ್ಲವು. ಇವು ಸ್ವತಂತ್ರವಾಗಿಯೇ ಉತ್ತಮ ಆರೋಗ್ಯ ನೀಡಬಲ್ಲವು. ಆನಂದಕರ ಮನಸ್ಸು ಶರೀರದ ಹಾರ್ಮೋನ್‌ಗಳನ್ನು ಸಮಸ್ಥಿತಿಯಲ್ಲಿ ಇಡುತ್ತದೆ; ರೋಗನಿರೋಧಕ ಶಕ್ತಿಯನ್ನು ಬೆಳೆಸುತ್ತದೆ; ಚಯಾಪಚಯಗಳನ್ನು ನಿಯಂತ್ರಣದಲ್ಲಿ ಇಡುತ್ತದೆ. ಇವೆಲ್ಲವೂ ಆರೋಗ್ಯದ ವಿಷಯದಲ್ಲಿ ಧನಾತ್ಮಕ ಅಂಶಗಳು.
ಕಳೆದ ಶತಮಾನದ ದ್ವಿತೀಯಾರ್ಧದಲ್ಲಿ ಪಾಶ್ಚಾತ್ಯ ದೇಶಗಳಲ್ಲಿನ ಜೀವನದರ್ಶನ ಸಾಕಷ್ಟು ಬದಲಾವಣೆ ಹೊಂದಿತು. ಇಪ್ಪತ್ತನೆಯ ಶತಮಾನದ ಮೊದಲಾರ್ಧ ಎರಡು ಭೀಕರ ಮಹಾಯುದ್ಧಗಳನ್ನು ಕಂಡಿತ್ತು. ಜನಸಾಮಾನ್ಯರ ಜೀವನದ ಮೇಲೆ ಅಪಾರ ಪ್ರಭಾವ ಬೀರಿದ ಈ ಘೋರ ಯುದ್ಧಗಳು ಬದುಕಿನ ಅರ್ಥವನ್ನು ಅಲುಗಾಡಿಸಿದ್ದವು. 1954ರಲ್ಲಿ ಅಮೆರಿಕೆಯ ಪ್ರಸಿದ್ಧ ಮನೋತಜ್ಞ ಅಬ್ರಹಾಮ್ ಮಾಸ್ಲೊ ‘ಪ್ರತಿಯೊಂದು ಪ್ರಗತಿಯೂ ಜೀವವನ್ನು ಉಳಿಸಲು ಹೆಣಗುತ್ತಿದೆಯೇ ಹೊರತು ಬದುಕಿನ ಮೌಲ್ಯಾಭಿವೃದ್ಧಿಗೆ ಆಗುತ್ತಿಲ್ಲ’ ಎಂದು ಅಭಿಪ್ರಾಯ ಪಟ್ಟಿದ್ದರು. ಆನಂತರದ ದಶಕಗಳಲ್ಲಿ ಬದುಕನ್ನು ಹೆಚ್ಚು ಒಳಿತುಗೊಳಿಸುವುದು ಹೇಗೆಂಬ ಚಿಂತನೆಗಳು, ಅಧ್ಯಯನಗಳು ನಡೆದವು.
ಜೀವನ ಸರಳರೇಖೆಯ ಪಯಣವಲ್ಲ; ಅದು ಹಲವಾರು ಏಳುಬೀಳುಗಳ ಮೂಲಕ ಹಾದುಹೋಗುವ ಕಸರತ್ತು. ಬದುಕಿನಲ್ಲಿ ಸಂತಸ ಹೊಂದಲು ಏಳುಬೀಳುಗಳನ್ನು ಸಮಾನವಾಗಿ ಗುರುತಿಸಬೇಕು; ಬೀಳುಗಳನ್ನು ನಿರಾಕರಿಸಬಾರದು ಎನ್ನುವುದು ಮನೋವೈದ್ಯರ ಅಭಿಪ್ರಾಯ. ಬದುಕನ್ನು ಸಹ್ಯವಾಗಿಸುವ ಮೂರು ಆಧಾರಗಳನ್ನು ತಜ್ಞರು ಗುರುತಿಸುತ್ತಾರೆ: ವೈಯಕ್ತಿಕ ಧನಾತ್ಮಕ ಅನುಭವಗಳು (ಆನಂದ, ತೃಪ್ತಿ); ವ್ಯಕ್ತಿ-ವಿಶೇಷ ಲಕ್ಷಣಗಳು (ಒಳ್ಳೆಯ ನಡತೆ, ಸಮಾಜದ ಅಂಗೀಕಾರ); ವ್ಯಕ್ತಿಯು ತೊಡಗಿಸಿಕೊಂಡ ಸಂಘಗಳು (ಕುಟುಂಬ, ಕೆಲಸದ ತಾಣ, ಸಾಮಾಜಿಕ ಚಟುವಟಿಕೆಗಳ ಕೇಂದ್ರಗಳು). ಈ ಎಲ್ಲೆಡೆ ಉತ್ತಮ ಫಲಿತಾಂಶಗಳು ದೊರೆಯುತ್ತಿದ್ದರೆ ವ್ಯಕ್ತಿಯ ಆನಂದದ ಮಟ್ಟ ಏರುತ್ತದೆ. ಅಂತೆಯೇ, ಜೀವನದ ಪಯಣ ಇಳಿಮುಖವಾದಾಗ ಈ ಎಡೆಗಳಲ್ಲಿನ ಉತ್ತಮ ಸಂಬಂಧಗಳು ವ್ಯಕ್ತಿಯ ಆಧಾರಕ್ಕೆ ನಿಲ್ಲುತ್ತವೆ; ಕಷ್ಟಗಳನ್ನು ಸಹ್ಯವಾಗಿಸುತ್ತವೆ. ಈ ರೀತಿಯಲ್ಲಿ ಕೌಟುಂಬಿಕ ಮತ್ತು ಸಾಮಾಜಿಕ ಬೆಂಬಲವಿರುವ ವ್ಯಕ್ತಿಗಳು ದೈಹಿಕ ಮತ್ತು ಮಾನಸಿಕ ಅನಾರೋಗ್ಯಗಳಿಂದ ಬೇಗನೆ ಚೇತರಿಸಿಕೊಳ್ಳುತ್ತಾರೆ ಎಂದು ಹಲವಾರು ಸಂಶೋಧನೆಗಳು ತಿಳಿಸಿವೆ.
ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ವಿಶ್ವ ಆರೋಗ್ಯ ಸಂಸ್ಥೆ ಮಾನಸಿಕ ಆರೋಗ್ಯವನ್ನು ‘ವ್ಯಕ್ತಿಯು ತನ್ನ ಸ್ವಂತ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಬಲ್ಲ, ಜೀವನದ ಸಾಮಾನ್ಯ ಒತ್ತಡಗಳನ್ನು ನಿರ್ವಹಿಸಬಲ್ಲ, ತನಗೆ, ತನ್ನ ಕುಟುಂಬಕ್ಕೆ, ತನ್ನ ಸಮಾಜಕ್ಕೆ ಫಲದಾಯಕವಾಗುವಂತಹ ಕೆಲಸಗಳನ್ನು ಮಾಡಬಲ್ಲ, ಒಟ್ಟಾರೆ ತಾನು ವಾಸಿಸುವ ವ್ಯವಸ್ಥೆಗೆ ಧನಾತ್ಮಕ ಕಾಣಿಕೆಯನ್ನು ನೀಡಬಲ್ಲ ಸ್ಥಿತಿ’ ಎಂದು ವ್ಯಾಖ್ಯಾನಿಸಿದೆ. ಅಂದರೆ, ವೈಯಕ್ತಿಕ ಮತ್ತು ಸಾಂಘಿಕ ಜೀವನಕ್ಕೆ ನೆರವಾಗಬಲ್ಲ ಆರೋಗ್ಯಕರ ಮನಃಸ್ಥಿತಿಯನ್ನು ಮಾನಸಿಕ ಆರೋಗ್ಯ ಎನ್ನಬಹುದು.
ಸಂತಸದ ಮೂಲಗಳು ಯಾವುವು? ಯಾವುದೇ ವ್ಯಕ್ತಿ ಮೂರು ವಿಧಗಳಿಂದ ಆನಂದ ಪಡೆಯಬಹುದು: ಇತರರಿಗೆ ಒಳಿತನ್ನು ಮಾಡುವುದರಿಂದ; ತನಗೆ ನೈಪುಣ್ಯವಿರುವ ಕೆಲಸಗಳನ್ನು ಮಾಡುವುದರಿಂದ; ಮತ್ತು ತನ್ನ ಸ್ವಂತಕ್ಕೆ ಮತ್ತು ಕುಟುಂಬಕ್ಕೆ ಒಳಿತನ್ನು ಮಾಡುವುದರಿಂದ. ಈ ಮೂರೂ ರೀತಿಯ ಕೆಲಸಗಳು ದೈಹಿಕ ಮತ್ತು ಮಾನಸಿಕ ಸಂತುಲನಗಳಿಗೆ ಕಾರಣವಾಗುತ್ತವೆ. ಇದು ಉತ್ತಮ ಆರೋಗ್ಯಕ್ಕೂ, ಅನಾರೋಗ್ಯದಿಂದ ಶೀಘ್ರವಾಗಿ ಚೇತರಿಸಿಕೊಳ್ಳುವುದಕ್ಕೂ ನೆರವಾಗುತ್ತವೆ. ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುವವರೂ ತಮ್ಮ ನೆಚ್ಚಿನ ಕೆಲಸಗಳನ್ನು ಮಾಡುವಾಗ ನೋವನ್ನು ಮರೆಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಅವರ ಔಷಧಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಸಿದ್ಧವಾಗಿದೆ. ಶರೀರದ ಸಹಜ ರೋಗನಿರೋಧಕ ವ್ಯವಸ್ಥೆ ಇಂತಹ ಸಂಧರ್ಭಗಳಲ್ಲಿ ಹೆಚ್ಚು ಚುರುಕಾಗಿರುತ್ತದೆ.
2005ರಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಬ್ರಿಟನ್ನಿನ ಸಂಶೋಧಕರು ಶರೀರದ ಜೈವಿಕ ಕ್ರಿಯೆಗಳ ಮೇಲೆ ಸಂತಸದ ಮನಃಸ್ಥಿತಿಯ ಪರಿಣಾಮಗಳನ್ನು ಅಳೆದರು. ಸತತ ಮೂರು ವರ್ಷಗಳ ಕಾಲ ನಡೆಸಿದ ಈ ಸಂಶೋಧನೆಯಲ್ಲಿ ಮಧ್ಯವಯಸ್ಕ ವ್ಯಕ್ತಿಗಳ ಮೇಲೆ ಆಯಾ ದಿನದ ಕೆಲಸದ ಕೊನೆಯಲ್ಲಿ ಅವರ ಆನಂದದ ಸ್ಥಿತಿಯನ್ನು ಶರೀರದ ಸಹಜ ಸ್ಟೀರಾಯ್ಡ್ ಹಾರ್ಮೋನುಗಳ ಮಟ್ಟ; ಒತ್ತಡದ ಸಮಯದಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳ ಮಟ್ಟ; ಹೃದಯ ಬಡಿತದ ಗತಿ; ರಕ್ತದ ಒತ್ತಡ ಮೊದಲಾದುವುಗಳ ಜೊತೆಯಲ್ಲಿ ಹೋಲಿಕೆ ಮಾಡಿದರು. ಒಂದೇ ರೀತಿಯ ಕೆಲಸ ಮಾಡುವ, ಸರಿಸುಮಾರು ಒಂದೇ ವಯಸ್ಸಿನ, ಒಂದೇ ರೀತಿಯ ಸಾಮಾಜಿಕ ಹಿನ್ನೆಲೆಯ ವ್ಯಕ್ತಿಗಳ ಮಧ್ಯೆ ಸಂತಸದ ಮನಃಸ್ಥಿತಿ ಉಳ್ಳವರು ಹೆಚ್ಚು ಆರೋಗ್ಯಶಾಲಿಗಳೂ, ಕಡಿಮೆ ಕಾಯಿಲೆ ಬೀಳುವವರೂ, ಅನಾರೋಗ್ಯಗಳಿಂದ ಬೇಗನೇ ಚೇತರಿಸಿಕೊಳ್ಳುವವರೂ ಆಗಿದ್ದರು.
ಈ ರೀತಿಯ ಪರಿಣಾಮಗಳು ವೃದ್ಧಾಪ್ಯಕ್ಕೂ ವಿಸ್ತರಿಸುತ್ತವೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಅಂದರೆ, ಸಂತಸದ ಮನಃಸ್ಥಿತಿ ಉಳ್ಳವರ ವೃದ್ಧಾಪ್ಯ ಹೆಚ್ಚು ಆರೋಗ್ಯಕರವೂ ಫಲಕಾರಿಯೂ ಮತ್ತು ಧನಾತ್ಮಕವೂ ಆಗಿರುತ್ತದೆಂದು ಅವರ ಅಭಿಮತ. ಅನಂತರ ನಡೆದಿರುವ ಹಲವಾರು ಅಧ್ಯಯನಗಳು ಈ ಮಾತನ್ನು ಪುಷ್ಟೀಕರಿಸಿವೆ.
ಈ ಮಾತಿಗೆ ವಿರುದ್ಧವಾಗಿ ಋಣಾತ್ಮಕ ಯೋಚನೆಗಳ, ಸಣ್ಣಪುಟ್ಟ ವಿಷಯಗಳಿಗೂ ಆತಂಕಿತರಾಗಿ ದುಃಖಪಡುವ ವ್ಯಕ್ತಿಗಳ ಅಧ್ಯಯನಗಳೂ ನಡೆದಿವೆ. 2006ರಲ್ಲಿ ಅಮೆರಿಕೆಯಲ್ಲಿ ನಡೆಸಿದ ಸಂಶೋಧನೆಯಲ್ಲಿ ಸರಿಸುಮಾರು ಒಂದೇ ವಯಸ್ಸಿನ, ಅಜಮಾಸು ಒಂದೇ ರೀತಿಯ ಸಾಮಾಜಿಕ ಹಿನ್ನೆಲೆಯ 334 ಜನರಿಗೆ ಒಂದು ವಿಧದ ಲಸಿಕೆಯನ್ನು ನೀಡಲಾಯಿತು. ಸಂತಸದ ಮನಃಸ್ಥಿತಿಯ ಮಂದಿಯಲ್ಲಿ ಈ ಲಸಿಕೆಗೆ ಉತ್ತಮ ರೋಗನಿರೋಧಕ ಪ್ರತಿಕಾಯಗಳು ಉತ್ಪತ್ತಿಯಾದವು. ಇದಕ್ಕೆ ಪ್ರತಿಯಾಗಿ, ದುಃಖದ ಮನಸ್ಥಿತಿಯವರಲ್ಲಿ ಉತ್ಪತ್ತಿಯಾದ ಪ್ರತಿಕಾಯಗಳ ಮಟ್ಟ ಕಡಿಮೆಯಾಗಿತ್ತು.
ಆನಂದದ ಅನುಭೂತಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ; ಶಾರೀರಿಕ ನೋವುಗಳ ಮಟ್ಟವನ್ನು ಇಳಿಸುತ್ತದೆ; ದೀರ್ಘಕಾಲಿಕ ಕಾಯಿಲೆಗಳನ್ನು ಸಹಿಸಿಕೊಳ್ಳಲು ನೆರವಾಗುತ್ತದೆ; ಒಟ್ಟಾರೆ, ಜೀವಿತದ ಅವಧಿಯನ್ನು ಮತ್ತು ಗುಣಮಟ್ಟವನ್ನು ಬೆಳೆಸುತ್ತದೆ. 2010ರಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ 6856 ಜನರನ್ನು ಸುಮಾರು ಮೂವತ್ತು ವರ್ಷಗಳ ಕಾಲ ಅಧ್ಯಯನ ಮಾಡಿದಾಗ, ಸಂತಸದ ಮನಃಸ್ಥಿತಿ ಉಳ್ಳವರು ದೀರ್ಘಕಾಲ ಆರೋಗ್ಯವಾಗಿ ಬದುಕುತ್ತಾರೆ ಎಂದು ಪತ್ತೆಯಾಯಿತು. ಅಂತೆಯೇ, ಋಣಾತ್ಮಕ ಮನಃಸ್ಥಿತಿಯ ಜನರ ಆಯುಸ್ಸು ಮತ್ತು ಆರೋಗ್ಯದ ಮಟ್ಟ ಕಡಿಮೆ ಇರುತ್ತದೆ ಎಂದು ತಿಳಿಯಿತು.
ಜೀವನದ ಏಳು-ಬೀಳುಗಳನ್ನು ಸಮನಾಗಿ ನೋಡುವ ಯೋಗಿಯ ಮನಃಸ್ಥಿತಿ ಸಾಮಾನ್ಯರಿಗೆ ಸಾಧ್ಯವಾಗದೆ ಇರಬಹುದು. ಆದರೆ, ಸುಖದಲ್ಲಿ ತೀರಾ ಹಿಗ್ಗದೆ, ದುಃಖದಲ್ಲಿ ತೀರಾ ಕುಗ್ಗದೆ ಇರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಸಾಧ್ಯ. ಆನಂದವೆನ್ನುವುದು ಜೀವನದ ಒಂದು ಆಯ್ಕೆ. ಅದನ್ನು ಸರಿಯಾಗಿ ರೂಢಿಸಿಕೊಳ್ಳುವುದು, ರೂಪಿಸಿಕೊಳ್ಳುವುದು ನಮ್ಮ ಕೈಲಿದೆ. ಸಂತಸದ ಮನಃಸ್ಥಿತಿ ಆರೋಗ್ಯಕರ ಬದುಕಿಗೆ ರಹದಾರಿಯಾಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ರೂಪಿತವಾದ ಸತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.