ADVERTISEMENT

ಸ್ವಚ್ಛತೆಯಲ್ಲಿದೆ ಆರೋಗ್ಯ

ಡಾ.ಕಿರಣ್‌ ವಿ.ಎಸ್‌
Published 27 ಫೆಬ್ರುವರಿ 2023, 20:15 IST
Last Updated 27 ಫೆಬ್ರುವರಿ 2023, 20:15 IST
   

ಮಾನವ ಸಮಾಜಜೀವಿ ಎನ್ನುವ ಮಾತನ್ನು ಕೇಳಿರುತ್ತೇವಾದರೂ ಅದರ ಸಂಪೂರ್ಣ ಅರ್ಥವ್ಯಾಪ್ತಿಯನ್ನು ಅರಿಯುವ ಪ್ರಯತ್ನವನ್ನು ಹೆಚ್ಚು ಮಂದಿ ಮಾಡಿರುವುದಿಲ್ಲ. ಒಂದು ಬೃಹತ್ ಯಂತ್ರದ ಸಾವಿರಾರು ಬಿಡಿಭಾಗಗಳು ಇಡೀ ಯಂತ್ರದ ಕಾರ್ಯಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಅಂತೆಯೇ, ಯಂತ್ರದ ಕೆಲಸ ಏರುಪೇರಾದಾಗ ಕೆಲವು ಭಾಗಗಳ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ. ನಮ್ಮ ಸಮಾಜವೂ ಇಂತಹ ಒಂದು ಬೃಹತ್ ಜೀವಂತ ಯಂತ್ರ. ಪ್ರತಿಯೊಬ್ಬ ಪ್ರಜೆಯೂ ಇದರ ಬಿಡಿಭಾಗಗಳು. ಸಮಾಜದ ಆರೋಗ್ಯ ಪ್ರತಿಯೊಬ್ಬ ಪ್ರಜೆಯ ಮೇಲೂ ಹಲವಾರು ಸ್ತರಗಳಲ್ಲಿ ಪರಿಣಾಮ ಬೀರುತ್ತದೆ. ಹೀಗಾಗಿ, ಸಮಷ್ಟಿಯ ಆರೋಗ್ಯದ ಹಿತದೃಷ್ಟಿಯಿಂದ ಸಮಾಜದ ನೈರ್ಮಲ್ಯವನ್ನು ಕಾಪಾಡುವುದು ಪ್ರಜೆಗಳ ಆದ್ಯ ಕರ್ತವ್ಯವಾಗುತ್ತದೆ.

ಅಭಿವೃದ್ಧಿ ಹೊಂದಿರುವ ದೇಶಕ್ಕೂ, ಅಭಿವೃದ್ಧಿಶೀಲ ದೇಶಕ್ಕೂ ಇರುವ ವ್ಯತ್ಯಾಸ ಕೇವಲ ಹಣಕಾಸಿನದ್ದಲ್ಲ. ಬದಲಿಗೆ ಸಮಾಜ ಮತ್ತು ಅದರ ಪ್ರಜೆಗಳ ನಡುವಿನ ಪರಸ್ಪರ ಗೌರವ ಯಾವ ಮಟ್ಟದಲ್ಲಿದೆ ಎನ್ನುವುದು. ಇದರ ಒಂದು ಸೂಚ್ಯಂಕ ಪ್ರಜೆಗಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಯಾವ ರೀತಿಯಲ್ಲಿ ನೋಡಿಕೊಳ್ಳುತ್ತಾರೆ ಎನ್ನುವುದರಲ್ಲಿದೆ. ಈ ವಿಷಯದಲ್ಲಿ ನಾವು ದಶಕಗಳಿಂದ ಹಿಂದುಳಿದಿದ್ದೇವೆ. ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ ಆಂದೋಲನ ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಿದೆ. ಆದರೂ ಸಾರ್ವಜನಿಕ ನೈರ್ಮಲ್ಯದ ವಿಷಯದಲ್ಲಿ ಸಮಾಜ ಪ್ರಗತಿ ಸಾಧಿಸುವುದು ಬಹಳವಿದೆ.

ಸಾರ್ವಜನಿಕ ಸ್ಥಾನಗಳ ಸ್ವಚ್ಛತೆ ಆಯ್ಕೆಯಲ್ಲ; ಅದು ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಜವಾಬ್ದಾರಿ. ವೈಯಕ್ತಿಕ ಆರೋಗ್ಯದ ಮೇಲೆ ಸಮಾಜದ ಸ್ವಚ್ಛತೆ ಬಹಳ ಪರಿಣಾಮ ಬೀರುತ್ತದೆ. 1994ರಲ್ಲಿ ಗುಜರಾತಿನ ಸೂರತ್ ನಗರದಲ್ಲಿ ಪ್ಲೇಗ್‌ರೋಗ ವ್ಯಾಪಿಸಿತು. ಭಾರತದ ವಜ್ರಗಳ ಮಾರುಕಟ್ಟೆ ಎಂದೇ ಖ್ಯಾತವಾದ ಸೂರತ್, ವೈಯಕ್ತಿಕ ಮಟ್ಟದಲ್ಲಿ ಸಿರಿವಂತರ ನಗರವಾದರೂ, ಸಮಷ್ಟಿಯ ಸ್ವಚ್ಛತೆಯ ದೃಷ್ಟಿಯಿಂದ ತೀರಾ ಕೆಟ್ಟ ಪರಿಸ್ಥಿತಿಯಲ್ಲಿತ್ತು. ಮಧ್ಯಕಾಲೀನ ಯುಗದಲ್ಲಿ ಯುರೋಪಿನ ಹಲವಾರು ದೇಶಗಳನ್ನು ಕಂಗೆಡಿಸಿದ್ದ ಪ್ಲೇಗ್‌ರೋಗ, ಕಾಲಾಂತರದಲ್ಲಿ ಯುರೋಪು ಅಭಿವೃದ್ಧಿಯಾಗುತ್ತಿದ್ದಂತೆ ಇಲ್ಲವಾಯಿತು. ಆದರೂ, ಐತಿಹಾಸಿಕವಾಗಿ ಆ ರೋಗ ಸಾವು-ನೋವುಗಳ ಸಮಾನಾರ್ಥಕವಾಗಿ ಬಳಕೆಯಾಗುತ್ತದೆ. ಈ ಕಾರಣದಿಂದ ಸೂರತ್ ನಗರದ ಪ್ಲೇಗ್‌ರೋಗ ಜಗತ್ತಿನ ತಾತ್ಸಾರದ ಕಣ್ಣಿಗೆ ಗುರಿಯಾಯಿತು. ಇಡೀ ದೇಶಕ್ಕೆ ಜಾಗತಿಕವಾಗಿ ಕೆಟ್ಟ ಹೆಸರು ತಂದಿತ್ತ ಆ ಘಟನೆಯಿಂದ ಎಚ್ಚೆತ್ತ ಸೂರತ್ ನಗರದ ಅಧಿಕಾರಿಗಳು ಸಾಮಾಜಿಕ ಸ್ವಚ್ಛತೆಯ ಬಗ್ಗೆ ತೀವ್ರ ಕಾಳಜಿ ವಹಿಸಿದರು. ಈ ದಿನ ಭಾರತದ ಸ್ವಚ್ಛ ನಗರಗಳಲ್ಲಿ ಒಂದೆಂದು ಸೂರತ್ ಹೆಸರಾಗಿದ್ದರೂ, ಅದರೊಡನೆ ಜೋಡಿಸಿಕೊಂಡ ಪ್ಲೇಗ್ ಕುಖ್ಯಾತಿ ಮೂರು ದಶಕಗಳಾದರೂ ಅಳಿದಿಲ್ಲ. ಪರಿಸರ ಸ್ವಚ್ಛವಾಗಿಲ್ಲದಿದ್ದರೆ ಅದರೊಡನೆ ವಾಸಿಸುವ ಪ್ರತಿಯೊಬ್ಬರೂ ವೈಯಕ್ತಿಕ ಬೆಲೆ ತೆರಬೇಕಾಗುತ್ತದೆ.

ADVERTISEMENT

ಕೋವಿಡ್-19 ಆರಂಭವಾದಾಗ ವೈಯಕ್ತಿಕ ಮತ್ತು ಪರಿಸರದ ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿತ್ತು. ಈ ಜಾಗೃತಿ ಹಾಗೆಯೇ ಉಳಿದು, ಜನರ ಜೀವನಶೈಲಿಯಲ್ಲಿ ಸಮ್ಮಿಳಿತವಾದರೆ ಅದು ಕೋವಿಡ್-19 ಕಾರ್ಮೋಡದ ನಡುವಿನ ಬೆಳ್ಳಿಗೆರೆ ಎಂದು ತಜ್ಞರು ಬಣ್ಣಿಸಿದ್ದರು. ದುರದೃಷ್ಟವಶಾತ್ ಸಾರ್ವಜನಿಕ ನೆನಪು ಎನ್ನುವುದು ಅತ್ಯಂತ ಕ್ಷೀಣ ಎನ್ನುವುದನ್ನು ನಮ್ಮ ಜನರು ಮತ್ತೊಮ್ಮೆ ಸಿದ್ಧಮಾಡಿದರು. ಸಾರ್ವಜನಿಕ ಸ್ಥಳಗಳನ್ನು ಕೊಳಕು ಮಾಡುವುದು, ಸಿಕ್ಕಿದೆಡೆಯೆಲ್ಲ ಕಸ ಎಸೆಯುವುದು, ದಾರಿಯಲ್ಲಿ ಉಗುಳುವುದು, ಸಾಕುನಾಯಿಗಳನ್ನು ಸಂಚಾರಕ್ಕೆ ಕರೆದೊಯ್ಯುವಾಗ ಎಲ್ಲೆಂದರಲ್ಲಿ ಅವುಗಳ ಮಲ-ಮೂತ್ರ ವಿಸರ್ಜಿಸುವಂತೆ ಮಾಡುವುದು, ರಸ್ತೆಯಲ್ಲಿ ಹೋಗುವಾಗ ಖಾಲಿ ಸಿಕ್ಕ ಜಾಗಗಳಲ್ಲಿ ಮೂತ್ರ ವಿಸರ್ಜಿಸುವುದು - ಇಂತಹ ಕ್ರಿಯೆಗಳು ನಾಚಿಕೆಯ ವಿಷಯಗಳೆಂದು ಅನ್ನಿಸದ ಜನರೂ ಇದ್ದಾರೆ. ಆದರೆ ಇಂತಹವರಲ್ಲಿ ಬಹುತೇಕರು ತಮ್ಮ ಸ್ವಂತ ಮನೆಗಳನ್ನು ಬಹಳ ಸ್ವಚ್ಛವಾಗಿ ಇರಿಸಿಕೊಳ್ಳುತ್ತಾರೆ. ಅಂದರೆ, ಇವರುಗಳಿಗೆ ಸ್ವಚ್ಛತೆಯ ಅರಿವಿಲ್ಲ ಎಂದಲ್ಲ; ತಮ್ಮ ಸಮಾಜದ ಬಗ್ಗೆ ಗೌರವವಿಲ್ಲ ಎಂದೇ ಎಣಿಸಬೇಕು.

ಸದ್ಯದ ಸಮಾಜ ಬಹಳ ಸಂಕೀರ್ಣವಾಗಿದೆ. ಅನೇಕ ಸ್ಥಿತ್ಯಂತರಗಳ ಮೂಲಕ ಹಾದು ಹೋಗುತ್ತಿರುವ ಜನರು ಹೊಸ ಜೀವನಶೈಲಿಗಳಿಗೆ ಹೊಂದಿಕೊಳ್ಳುತ್ತಿದ್ದಾರೆ. ಜನರ ನಡುವೆ ಪರಸ್ಪರ ಅವಲಂಬನೆ ಹೆಚ್ಚಾದಷ್ಟೂ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರುವುದು ಬಹಳ ಮುಖ್ಯವಾಗುತ್ತದೆ. ಒಂದು ಉದಾಹರಣೆ ನೋಡುವುದಾದರೆ, ದಿನನಿತ್ಯದ ಊಟವನ್ನು ಹೊರಗಿನಿಂದ ಮನೆಗೆ ತರಿಸಿಕೊಂಡು ಸೇವಿಸುವವರ ಸಂಖ್ಯೆ ಸಾಕಷ್ಟು ಬೆಳೆದಿದೆ.

ಈ ರೀತಿಯ ಆಹಾರವನ್ನು ಸಿದ್ಧಪಡಿಸುವ ಸ್ಥಳಗಳು, ಅದನ್ನು ತಯಾರಿಸುವ ಬಾಣಸಿಗರು, ಅದನ್ನು ಪ್ಯಾಕ್ ಮಾಡುವ ಕೆಲಸಗಾರ, ಅದನ್ನು ಹೊತ್ತು ತಂದು ನಮ್ಮ ಮನೆಗೆ ತಲುಪಿಸುವ ವ್ಯಕ್ತಿ – ಇವೆಲ್ಲದರ ಸ್ವಚ್ಛತೆಯ ಮಟ್ಟ ಸಮಂಜಸವಾಗಿದ್ದರೆ ಮಾತ್ರ ಆ ಆಹಾರ ನಮ್ಮ ಆರೋಗ್ಯವನ್ನು ಕಾಯಬಲ್ಲದು. ಇಲ್ಲವಾದರೆ, ಅದೇ ನಮ್ಮ ಅನಾರೋಗ್ಯದ ಕಾರಣವಾದೀತು. ಈ ಪ್ರತಿಯೊಂದು ಹಂತವನ್ನೂ, ಪ್ರತಿದಿನವೂ ಪರೀಕ್ಷಿಸುವ ಸಾಧ್ಯತೆಗಳು ಇರುವುದಿಲ್ಲ. ಹೀಗಾಗಿ, ಇಡೀ ಸಮಾಜವೇ ತನ್ನ ನೈರ್ಮಲ್ಯದ ಮಟ್ಟವನ್ನು ಸಂದೇಹಕ್ಕೆ ಆಸ್ಪದವಿಲ್ಲದಂತೆ ಏರಿಸಿಕೊಳ್ಳಬೇಕು. ಈ ಕಾರಣಕ್ಕೆ ಸಮಷ್ಟಿಯ ಪ್ರಾಮಾಣಿಕತೆಯ ಮಟ್ಟ ಮೇಲಿನ ಸ್ತರದಲ್ಲಿರಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದರೆ ಸಮಾಜದ ಪ್ರಗತಿ ಕುಂಠಿತವಾಗುತ್ತದೆ.

ಸ್ವಚ್ಛ ಪರಿಸರವೆನ್ನುವುದು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಅದು ಮಾನಸಿಕ ನೆಮ್ಮದಿಗೂ ಕಾರಣ. ಮನೆಯಿಂದ ಹೊರಗೆ ಹೆಜ್ಜೆ ಇಟ್ಟ ಕೂಡಲೇ ಹೊಲಸನ್ನು ಕಾಣುವುದು ಯಾರಿಗೂ ಸಹ್ಯವಲ್ಲ. ಎಲ್ಲೆಂದರಲ್ಲಿ ಎಸೆದ ಕಸ, ಪ್ರಾಣಿಗಳ ಮಲಮೂತ್ರಗಳ ಮೇಲೆ ತಪ್ಪಿ ಹೆಜ್ಜೆ ಇಟ್ಟಾಗ ಆಗುವ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಇದು ನಾಗರಿಕ ಸಮಾಜದ ಲಕ್ಷಣವೂ ಅಲ್ಲ. ವೈಯಕ್ತಿಕ ನೈರ್ಮಲ್ಯದಷ್ಟೇ ಸಮಷ್ಟಿಯ ಸ್ವಚ್ಛತೆಯೂ ಮುಖ್ಯವೆಂದು ಮನಗಾಣುವವರೆಗೆ ಆರೋಗ್ಯಕರ ಸಮಾಜದ ನಿರ್ಮಾಣ ಅಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.