ADVERTISEMENT

ಆರೋಗ್ಯ: ಬಾಣಂತಿಯರಲ್ಲಿ ಚರ್ಮದ ಆರೈಕೆ ಹೀಗಿರಲಿ..

ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಬಾಣಂತಿಯರಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 1:19 IST
Last Updated 20 ಜನವರಿ 2024, 1:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಬಾಣಂತಿಯರಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಗುವಿನ ಆರೈಕೆಯ ಜತೆಗೆ ಸ್ವ ಆರೈಕೆಗೆ ಕಡೆಗೂ ಗಮನ ವಹಿಸುವುದು ಅತ್ಯವಶ್ಯಕ.

ಒಣ ಚರ್ಮ: ಹೆರಿಗೆಯಾಗಿ ಎರಡು ಮೂರು ವಾರಗಳಲ್ಲಿ ಚರ್ಮ ಡಿಹೈಡ್ರೇಟ್‌ ಆದಂತೆ ಅನಿಸಬಹುದು. ಒಣಗಿದ ತುಟಿ ಹಾಗೂ ಬಾಯಿ ಜತೆಗೆ ಚರ್ಮವೂ ಒಣಗಿದಂತೆ ಅನಿಸಬಹುದು.

ADVERTISEMENT

ಚರ್ಮ ಕಪ್ಪಾಗುವುದು: ಗರ್ಭಿಣಿಯರಲ್ಲಿ ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ದೇಹದ ನಾನಾ ಭಾಗಗಳಲ್ಲಿ ಚರ್ಮ ಕಪ್ಪಾಗುತ್ತದೆ. ಇದು ಹೆರಿಗೆಯ ನಂತರವೂ ಉಳಿಯುವ ಸಾಧ್ಯತೆ ಇರುತ್ತದೆ. ಕುತ್ತಿಗೆ, ಕಂಕುಳ, ತೊಡೆ, ಸ್ತನದ ತೊಟ್ಟುಗಳು ಕಪ್ಪಗಾಗಬಹುದು. ಮಗು ಹುಟ್ಟಿ ಆರು ತಿಂಗಳವರೆಗೂ ಇದು ಹಾಗೆ ಉಳಿದು, ಮತ್ತೆ ನಿಧಾನಕ್ಕೆ ತಿಳಿ ಬಣ್ಣಕ್ಕೆ ಬರಬಹುದು.

ಸೂಕ್ಷ್ಮ ಚರ್ಮ: ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಚರ್ಮ ಸೂಕ್ಷ್ಮಗೊಳ್ಳುತ್ತದೆ. ಅಲರ್ಜಿ, ಚರ್ಮ ಕೆಂಪಗಾಗುವುದು, ಸೂಕ್ಷ್ಮಗೊಳ್ಳುವುದೆಲ್ಲ ಸಾಮಾನ್ಯ.

ಹೈಪರ್‌ ಪಿಗ್ಮೆಂಟೇಷನ್‌: ಹಾರ್ಮೋನ್‌ ವ್ಯತ್ಯಾಸದಿಂದಾಗಿ ಹೈಪರ್‌ ‍ಪಿಗ್ಮೆಂಟೇಷನ್‌ ಉಂಟಾಗಬಹುದು. ಮೊಡವೆಗಳು ಕಾಣಿಸಿಕೊಳ್ಳಬಹುದು. ಹೆರಿಗೆಯ ಸುಸ್ತು ಹಾಗೂ ಮಾನಸಿಕ ಒತ್ತಡದಿಂದ ಕಣ್ಣಿನ ಕೆಳಗೆ ಕಪ್ಪು ವರ್ತುಲ ಬರಬಹುದು. ಹೊಟ್ಟೆ ಹಾಗೂ ತೊಡೆ ಹಾಗೂ ನಿತಂಬಗಳ ಮೇಲೆ ಸ್ಟ್ರೆಚ್‌ ಮಾರ್ಕ್‌ ಕಾಣಿಸಿಕೊಳ್ಳಬಹುದು.

ಕಾಳಜಿ ಕ್ರಮ ಹೇಗಿರಬೇಕು?

l ಸೂರ್ಯನ ಕಿರಣಗಳಿಗೆ ನೇರವಾಗಿ ಮೈ ಒಡ್ಡಿಕೊಳ್ಳಬೇಡಿ. ಇದರಿಂದ ಚರ್ಮಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು. ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ ಲೋಷನ್‌ ಹಚ್ಚುವುದನ್ನು ಮರೆಯಬೇಡಿ.

l ನಿತ್ಯ ಎರಡು ಲೀಟರ್ ನೀರು ಅಗತ್ಯವಾಗಿ ಕುಡಿಯಿರಿ. ನೀರು ನಿಮ್ಮ ಚರ್ಮದ ತೇವಾಂಶವನ್ನು ಹಿಡಿದಿಡಲು ಸಹಕರಿಸುತ್ತದೆ.

l ಮಗುವಿನ ಆರೈಕೆಯಲ್ಲಿ ಬಹುಪಾಲು ಕಳೆಯುವುದರಿಂದ ದೇಹಕ್ಕೆ ಅಗತ್ಯವಿರುವಷ್ಟು ನಿದ್ರೆ ಮಾಡಲು ಆಗದೇ ಇರಬಹುದು. ಮಗು ಮಲಗಿದಾಗೆಲ್ಲ ವಿಶ್ರಾಂತಿ ಪಡೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

l ಎಲ್ಲ ಬಗೆಯ ಹಣ್ಣು, ಹಸಿರು ತರಕಾರಿಗಳು ನಿಮ್ಮ ಊಟದ ಮೆನುವಿನಲ್ಲಿರಲಿ. ಇದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶ, ವಿಟಮಿನ್‌, ಖನಿಜಾಂಶಗಳು ದೊರೆಯುತ್ತದೆ. ಎಣ್ಣೆ ಹಾಗೂ ಕರಿದ ಪದಾರ್ಥಗಳಿಂದ ದೂರವಿರಿ.

l ಎಂಥ ಕಠಿಣ ಸಮಯದಲ್ಲಿಯೂ ಶಾಂತವಾಗಿರುವ ಮನಸ್ಥಿತಿಯನ್ನು ರೂಢಿಸಿಕೊಳ್ಳಿ. ಮಾನಸಿಕ ಒತ್ತಡ ನಿಯಂತ್ರಣಕ್ಕೆ ಧ್ಯಾನದ ಮೊರೆ ಹೋಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.