ADVERTISEMENT

ಆರೋಗ್ಯ: ಹರ್ನಿಯಾ.. ಶಸ್ತಚಿಕಿತ್ಸೆಯೇ ಪರಿಹಾರ!

ಡಾ. ಜಯಪ್ರಭು ಉತ್ತೂರ ಲೇಖನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 23:31 IST
Last Updated 21 ಅಕ್ಟೋಬರ್ 2024, 23:31 IST
<div class="paragraphs"><p>ಆರೋಗ್ಯ: ಹರ್ನಿಯಾ.. ಶಸ್ತಚಿಕಿತ್ಸೆಯೇ ಪರಿಹಾರ!</p></div>

ಆರೋಗ್ಯ: ಹರ್ನಿಯಾ.. ಶಸ್ತಚಿಕಿತ್ಸೆಯೇ ಪರಿಹಾರ!

   

ಕನ್ನಡದಲ್ಲಿ ‘ಉಸುರು ಬುರುಡೆ’ ಅಥವಾ ‘ಬೂರು’ ಎಂದು ಕರೆಯಲಾಗುವ ರೋಗವನ್ನೇ ಇಂಗ್ಲಿಷನಲ್ಲಿ ‘ಹರ್ನಿಯಾ’ ಎಂದು ಕರೆಯಲಾಗುತ್ತದೆ. ಹೀಗಾಗಿ, ಹರ್ನಿಯಾ ಎಂಬ ಪದವೇ ಬಹು ಪ್ರಚಲಿತವಾಗಿದೆ. ದೇಹದ ಉದರ (ಹೊಟ್ಟೆ) ಭಾಗದಲ್ಲಿ ಅನೇಕ ಬಲಹೀನ ಜಾಗ ಅಥವಾ ರಂಧ್ರಗಳಿವೆ. ಇವುಗಳ ಮುಖಾಂತರ ಹೊಟ್ಟೆಯೊಳಗಿನ ಕರುಳು ಅಥವಾ ಮುಸುಕು ಪೊರೆ (ಓಮೆಂಟಮ್‌) ತೂರಿಕೊಂಡು ಚರ್ಮದಡಿಯಲ್ಲಿ ಬಲೂನಿನಂತೆ ಹೊಟ್ಟೆಯೊಳಗೆ ಸರಿದುಕೊಂಡು ಮಾಯವಾಗಿ ಬಿಡುವ ಸ್ಥಿತಿಗೆ ‘ಹರ್ನಿಯಾ’ ಎಂದು ಕರೆಯಲಾಗುತ್ತದೆ.

ಹರ್ನಿಯಾ ಎಲ್ಲಿ ಉಂಟಾಗುತ್ತದೆ?

ADVERTISEMENT

ಮನುಷ್ಯನ ದೇಹ ಅನುಭವಿಸುವ ಹರ್ನಿಯಾಗಳಲ್ಲಿ ಬಹುತೇಕವಾದವುಗಳು ಗೆಜ್ಜೆಕಟ್ಟು ಮತ್ತು ಹೊಕ್ಕಳು ಭಾಗದಲ್ಲಿ ಉಂಟಾಗುತ್ತವೆ. ಗೆಜ್ಜೆಕಟ್ಟು ನಾಳದ ಮುಖಾಂತರ ಆಗುವ ಹರ್ನಿಯಾ ಬಹು ಸಾಮಾನ್ಯ ಶಸ್ತ್ರಚಿಕಿತ್ಸೆಯ ನಂತರ ಹೊಲಿಗೆಯ ಜಾಗದಲ್ಲಿ ಬರುವ ಉಬ್ಬಿಗೂ ಹರ್ನಿಯಾ (ಇನ್ಸಿಜನಲ್) ಎಂದೇ ಕರೆಯಲಾಗುತ್ತದೆ.

ಹರ್ನಿಯಾ ಏಕೆ ಮತ್ತು ಹೇಗೆ ಆಗುತ್ತದೆ?

ಹರ್ನಿಯಾ ಉಂಟಾಗಲು ಅನೇಕ ಕಾರಣಗಳನ್ನು ನಿಡಬಹುದಾದರೂ ಕೆಲವರಲ್ಲಿ ಕಾರಣ ಗೊತ್ತೇ ಆಗುವುದಿಲ್ಲ. ಉದರದ ಸ್ನಾಯುಗಳಲ್ಲಿ ಜನ್ಮಗತವಾಗಿ ಬಂದ ಶಕ್ತಿಯ ಕೊರತೆಯಿಂದಾಗಿ ಹರ್ನಿಯಾ ಆಗುವ ಸಾಧ್ಯತೆ ಹೆಚ್ಚು. ಅತಿಯಾದ ಕೆಮ್ಮು, ಮಲಬದ್ದತೆ, ಪೌಷ್ಟಿಕತೆ ಕೊರತೆ, ಅತಿಯಾದ ಭಾರವನ್ನು ಎತ್ತುವ ಉದ್ಯೊಗ, ಬೊಜ್ಜು, ಮುಂತಾದ ಸ್ಥಿತಿಗಳು ಬಲಹೀನ ಜಾಗಗಳನ್ನು ಮತ್ತಷ್ಟು ದುರ್ಬಲಗೊಳಿಸಿ ಕರುಳನ್ನು ಹೊರಚಾಚುವಂತೆ ಮಾಡಿ ಹರ್ನಿಯಾವನ್ನು ಉಂಟು ಮಾಡುತ್ತವೆ. ಸಣ್ಣದಾಗಿ ಪ್ರಾರಂಭವಾದ ಹರ್ನಿಯಾ ಕಾಲಕ್ರಮೇಣ ದೊಡ್ಡದಾಗುತ್ತ ಹೋಗುತ್ತದೆ.

ಹರ್ನಿಯಾ ಉಂಟಾಗಲು ವಯಸ್ಸಿನ ಮಿತಿ ಇಲ್ಲ. ಸ್ನಾಯುಗಳಲ್ಲಿ ಶಕ್ತಿ ಕೊರತೆಯೊಂದಿಗೆ ಕೆಮ್ಮಿದಾಗ, ಎದ್ದು ನಿಂತಾಗ ಅಥವಾ ತಿಣುಕಿದಾಗ ಹೊಟ್ಟೆಯಲ್ಲಿನ ಕರುಳು ಹರ್ನಿಯಾ ಚೀಲದೊಳಕ್ಕೆ ನುಸುಳಿಕೊಂಡು ಗಂಟಿನಂತೆ ತೋರುತ್ತದೆ.

ಹರ್ನಿಯಾ ಗಂಟಿನಲ್ಲಿ ಏನಿರುತ್ತದೆ ?

ಸಾಮಾನ್ಯವಾಗಿ ಸಣ್ಣ ಕರುಳು ಹಾಗೂ ದೊಡ್ಡ ಕರಳು, ಕರುಳಿನ ಮುಸುಕು ಪೊರೆ (ಓಮೆಂಟಮ್) ಇರುತ್ತವೆ ಕೆಲವೊಮ್ಮೆ ದೊಡ್ಡ ಕರಳು ಅಥವಾ ಮೂತ್ರಚೀಲವು ಜರಿದು ಹರ್ನಿಯಾ ಗಂಟಿನಲ್ಲಿ ಕಾಣಿಸಿಕೊಳ್ಳಬಹುದು. ಗೆಜ್ಜೆಕಟ್ಟಿನ (ಇಂಗ್ವೇನಲ್) ಹರ್ನಿಯಾ ಜೊತೆಗೆ ವೀರ್ಯನಾಳ ರಕ್ತನಾಳ ಮತ್ತು ನರಗಳು ಇರುತ್ತವೆ ಜನ್ಮದಾಯಿತ್ವಕ್ಕೆ ಕಾರಣವಾದ ವೀರ್ಯನಾಳ ಇಲ್ಲಿ ಬಹುಮುಖ್ಯ ಭಾಗವಾಗಿದೆ.

ಹರ್ನಿಯಾ ಲಕ್ಷಣಗಳೇನು ?

ಹರ್ನಿಯಾ ಸಾಮಾನ್ಯವಾಗಿ ಹೊಟ್ಟೆಯ ಹೊಕ್ಕಳಿನ ಸೂತ್ತ ಮತ್ತು ಗೆಜ್ಜೆಕಟ್ಟಿನಲ್ಲಿ ಗಂಟಿನಂತೆ ಕಂಡುಬರುವುದು ಅಥವಾ ಉಬ್ಬಿರುವಂತೆ ಕಂಡುಬರುವುದು ಪ್ರಮುಖ ಲಕ್ಷಣ ಕೆಮ್ಮಿನಿಂದ ಉಬ್ಬು ಹೆಚ್ಚಾಗುವುದು, ಮಲಗಿದರೆ ಅಥವಾ ಒತ್ತಿದರೆ ಮಾಯವಾಗುವ ಗಂಟು ಒಂದು ರೀತಿಯ ಸೆಳೆತವನ್ನು ಉಂಟು ಮಾಡಬಹುದು. ಆದರೆ, ಇದು ಅತಿಯಾದ ನೋವನ್ನುಂಟು ಮಾಡುವುದಿಲ್ಲ.

ಹರ್ನಿಯಾದಿಂದ ಏನು ತೊಂದರೆಯಾಗಬಹುದು ?

ಕೆಲವು ರೀತಿಯ ಹರ್ನಿಯಾಗಳಿಂದ ಯಾವ ರೀತಿಯ ತೊಂದರೆಯೂ ಆಗದೇ ಇರಬಹುದು. ಆದರೂ ಕೂಡ ಯಾವುದೇ ರೀತಿಯಾ ಹರ್ನಿಯಾವನ್ನು ನಿರ್ಲಕ್ಷಿಸುವಂತಿಲ್ಲ. ಕರುಳು ಹರ್ನಿಯಾ ಚೀಲದಲ್ಲಿ ಜಾರಿಕೊಂಡಾಗ ತೂತಿನ ಹತ್ತಿರ ನೇಣು ಬಿಗಿದಂತಾಗಿ ಮರಳಿ ಒಳಹೊಗದಂತಾಗಿ, ಬಾವು ಉಂಟಾಗಿ ಹಿಸುಕಿದಂತಾದ ಕರುಳಿಗೆ ರಕ್ತ ಸಂಚಾರವಿಲ್ಲದಾಗಿ ಕರಳು ಕೊಳೆತು (ಗ್ಯಾಂಗ್ರಿನ್‌) ಆಗುವ ಸಂಭವ ಇರುತ್ತದೆ. ಇದೊಂದು ತುರ್ತು ಪರಿಸ್ಥಿತಿಯಾಗಿದ್ದು, ನಿರ್ಲಕ್ಷಿಸಿದರೆ ಪ್ರಾಣಕ್ಕೆ ಗಂಡಾಂತರ ಒದಗುವ ಸಾಧ್ಯತೆ ಇದೆ.

ಹರ್ನಿಯಾ ಉಂಟಾಗದಿರಲು ಏನು ಮಾಢಬೇಕು ?

ಅತಿಯಾದ ಭಾರವಿರುವ ವಸ್ತುಗಳನ್ನು ಎತ್ತಬಾರದು, ಅತಿಯಾದ ಕೆಮ್ಮು ಇರದಂತೆ ನೋಡಿಕೊಳ್ಳಬೇಕು, ಬೀಡಿ ಮತ್ತು ಸಿಗರೇಟಿನಿಂದ ದೂರವಿರಬೇಕು. ಮಲಬದ್ಧತೆ ಆಗದಂತೆ ಆಹಾರ ಕ್ರಮದಲ್ಲಿ ಎಚ್ಚರಿಕೆ ವಹಿಸಬೇಕು, ಮೂತ್ರ ವಿಸರ್ಜನೆ ಮಾಡುವಾಗ ತಿಣುಕುವಂಥ ಸ್ಥಿತಿ ಬಂದರೆ ಸೂಕ್ತ ವೈದ್ಯಕೀಯ ಸಲಹೆ ಪಡೆಯಬೇಕು. ಇದರಿಂದ ಹರ್ನಿಯಾ ಶಸ್ತ್ರಚಿಕಿತ್ಸೆಯ ನಂತರ ಮರುಕಳಿಸುವ ಸಾಧ್ಯತೆಯನ್ನು ತಪ್ಪಿಸಬಹುದು.

ಹರ್ನಿಯಾ ಆದವರು ಏನು ಮಾಡಬೇಕು ?

ಹರ್ನಿಯಾ ಲಕ್ಷಣಗಳು ಕಂಡುಬಂದ ಕೂಡಲೇ ಶಸ್ತ್ರಚಿಕಿತ್ಸಾ ತಜ್ಞರನ್ನು ಭೇಟಿ ಮಾಡಿ ಸೂಕ್ತ ಸಲಹೆಗಳನ್ನು ಪಡೆಯಬೇಕು. ಯಾವ ತೊಂದರೆಯೂ ಇಲ್ಲದಿದ್ದಾಗ ಸಾಧ್ಯವಾದಷ್ಟು ಹೊತ್ತು ಹರ್ನಿಯಾವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು. ಪ್ರಯತ್ನಪೂರ್ವಕವಾಗಿ ಕರುಳನ್ನು ಒಳಕ್ಕೆ ತಳ್ಳುವ ಪ್ರಯತ್ನ ಮಾಡಬಾರದು. ಕರುಳು ಒಳಕ್ಕೆ ಹೋಗದೇ ಇರುವ ಸ್ಥಿತಿ ತಲುಪಿದರೆ ಅಥವಾ ವಿಪರೀತ ನೋವು ಕಾಣಿಸಿಕೊಂಡರೆ ಕೊಡಲೇ ವೈದ್ಯರನ್ನು ಕಾಣಬೇಕು. ಇಂಥ ಸಂದರ್ಭದಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾತ್ರ ಜೀವ ಉಳಿಸಬಲ್ಲದು. ಇಂಥ ಸಂದಿಗ್ಧತೆಗೆ ಅವಕಾಶ ಕೊಡದೇ ಉಬ್ಬು ಕಾಣಿಸಿಕೊಂಡ ಕೊಡಲೇ ವೈದ್ಯರ ಸಲಹೆ ಪಡೆಯುವುದು ಜಾಣತನ.

ಹರ್ನಿಯಾಗೆ ಚಿಕಿತ್ಸೆ ಏನು ?

ಯಾವುದೇ ರೀತಿಯ ಔಷಧೋಪಚಾರ ಹರ್ನಿಯಾವನ್ನು ಕಡಿಮೆ ಮಾಡುವುದಿಲ್ಲ. ಶಸ್ತ್ರಚಿಕಿತ್ಸೆಯೊಂದೇ ಲಭ್ಯವಿರುವ ಸೂಕ್ತ ಪರಿಹಾರವಾಗಿದೆ. ಅನೇಕ ದಶಕಗಳ ಹಿಂದೆ ತೆರೆದ ಚಿಕಿತ್ಸೆ (ಓಪನ್ ಸರ್ಜರಿ) ಮಾತ್ರ ಲಭ್ಯವಿದ್ದ ವಿಧಾನವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಹರ್ನಿಯಾಗಳನ್ನು ‘ಲ್ಯಾಪರೋಸ್ಕೋಪಿ’ (ಕೀಹೋಲ್ ಸರ್ಜರಿ) ವಿಧಾನದ ಮೂಲಕ ಯಶಸ್ವಿಯಾಗಿ ನಿರ್ವಹಿಸಬಹುದಾಗಿದೆ. ಈ ವಿಧಾನ ಕನಿಷ್ಟ ಹಾನಿಯನ್ನು ಉಂಟುಮಾಡುವ ಶಸ್ತ್ರಚಿಕಿತ್ಸೆ ಆಗಿದ್ದು, ಶಸ್ತ್ರಚಿಕಿತ್ಸೆ ನಂತರದಲ್ಲಿ ವೇಗವಾದ ಚೇತರಿಕೆ ಕಂಡುಬರುತ್ತದೆ. ಕಡಿಮೆ ನೋವು ಹಾಗೂ ಹರ್ನಿಯಾ ಮರುಕಳಿಸುವ ಕನಿಷ್ಟ ಪ್ರಮಾಣ ‘ಲ್ಯಾಪರೋಸ್ಕೋಪಿ’ ವಿಧಾನದ ಪ್ರಮುಖ ಲಾಭಗಳು.

–––

ಲೇಖಕರು:, ಶಸ್ತ್ರಚಿಕಿತ್ಸಕರು, ಎಂಡೋಸ್ಕೋಪಿ ಮತ್ತು ಲ್ಯಾಪರೋಸ್ಕೋಪಿ ತಜ್ಞರು, ಸುಚಿರಾಯು ಆಸ್ಪತ್ರೆ, ಹುಬ್ಬಳ್ಳಿ

****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.