ದೇಹದ ಪ್ರಮುಖ ಅಂಗಾಗಳಾದ ಹೃದಯ ಮತ್ತು ಶ್ವಾಸಕೋಶದಂತೆ ಮಾನವನ ಮೂತ್ರಪಿಂಡವೂ (ಕಿಡ್ನಿ) ನಿರಂತರವಾಗಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ತನ್ನ ಕೆಲಸದಲ್ಲಿ ತೊಡಗಿರುತ್ತದೆ. ಮೂತ್ರಪಿಂಡವು ಮೂತ್ರದ ಮೂಲಕ ದೇಹಕ್ಕೆ ಬೇಡವಾದ ಪದಾರ್ಥಗಳನ್ನು ಹೊರಹಾಕುವುದರ ಜೊತೆಗೆ ದೇಹದೊಳಗೆ ವಿವಿಧ ಸಂಕೀರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ದೇಹದೊಳಗಿನ ನೀರು ಮತ್ತು ಲವಣಗಳ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ದೇಹದ ರಕ್ತದೊತ್ತಡ ಸಮತೋಲನವನ್ನು ಮೂತ್ರಪಿಂಡವು ಕಾಪಾಡುತ್ತದೆ. ನಾವು ಸೇವಿಸುವ ಔಷಧಗಳ ಕೆಲಸವಾದ ಮೇಲೆ ಅವುಗಳನ್ನು ನಿಷ್ಕ್ರಿಯಗೊಳಿಸಿ ದೇಹದಿಂದ ಹೊರಹಾಕುವ ಕೆಲಸವೂ ಮೂತ್ರಪಿಂಡಗಳದ್ದು. ಮೂತ್ರಪಿಂಡ ಹೊರಹಾಕುವ ವಿವಿಧ ಹಾರ್ಮೋನುಗಳು ರಕ್ತದ ಉತ್ಪಾದನೆ ಮತ್ತು ವಿಟಮಿನ್ ಡಿ ಉತ್ಪಾದನೆಯಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ನಮ್ಮೆಲ್ಲರ ದೇಹದಲ್ಲಿ ಸುಮಾರು ಐದು ಲೀಟರುಗಳಷ್ಟಿರುವ ರಕ್ತವನ್ನು ಮೂತ್ರಪಿಂಡವು ದಿನಕ್ಕೆ ಸುಮಾರು ನಲವತ್ತು ಸಲ ಜರಡಿ ಹಿಡಿಯುತ್ತದೆ (filter).
ಮೂತ್ರಪಿಂಡದೊಳಗೆ ಸುಮಾರು ಇನ್ನೂರು ಲೀಟರಿನಷ್ಟು ರಕ್ತವು ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಸಂಚಾರ ಮಾಡುತ್ತದೆ. ಹೀಗೆ ಸಂಚರಿಸುವ ಇನ್ನೂರು ಲೀಟರಿನಲ್ಲಿ ಮೂತ್ರಪಿಂಡವು ಸುಮಾರು ಎರಡು ಲೀಟರಿನಷ್ಟು ನೀರಿನಂಶವನ್ನು ದೇಹಕ್ಕೆ ಅನಗತ್ಯವಾಗಿರುವ ಲವಣಗಳ ಜೊತೆಗೆ ಮೂತ್ರದ ರೂಪದಲ್ಲಿ ಹೊರಹಾಕುತ್ತದೆ. ಮೂತ್ರಪಿಂಡದಿಂದ ಹೊರಹಾಕಲ್ಪಟ ಸುಮಾರು ಎರಡು ಲೀಟರಿನಷ್ಟು ಮೂತ್ರವು ಮೂತ್ರಕೋಶದಲ್ಲಿ ಶೇಖರಿಸಲ್ಪಡುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಆರರಿಂದ ಎಂಟು ಬಾರಿ ಮೂತ್ರ ವಿಸರ್ಜನೆ ಮಾಡುವ ಮೂಲಕ ದೇಹದಿಂದ ಮೂತ್ರವನ್ನು ಹೊರಹಾಕುತ್ತಾನೆ, ಮತ್ತು ತನ್ನ ದೇಹದೊಳಗಿನ ನೀರು ಮತ್ತು ಲವಣದ ಪ್ರಮಾಣವನ್ನು ನಿಯಂತ್ರಿಸುತ್ತಾನೆ.
ನಾವು ದಿನಕ್ಕೆ ಸೇವಿಸುವ ನೀರಿನ ಪ್ರಮಾಣ ಮತ್ತು ವಾತಾವರಣದ ಉಷ್ಣತೆಯ ಮೇಲೆ ಮೂತ್ರಪಿಂಡವು ತನ್ನ ಕಾರ್ಯಾಚರಣೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿದ್ದು ಮನುಷ್ಯ ಕಡಿಮೆ ನೀರನ್ನು ಸೇವಿಸಿದ್ದರೆ ಮೂತ್ರಪಿಂಡವು ಹೆಚ್ಚು ಸಾಂದ್ರತೆಯಿರುವ ಹಳದಿಬಣ್ಣದ ಮೂತ್ರವನ್ನು ಕಡಿಮೆ ಪ್ರಮಾಣದಲ್ಲಿ ಹೊರಹಾಕುವ ಮೂಲಕ ದೇಹದೊಳಗೆ ನೀರಿನಂಶವು ಹೆಚ್ಚು ಉಳಿದುಕೊಳ್ಳುವಂತೆ ಕಾರ್ಯನಿರ್ವಹಿಸುತ್ತದೆ. ಅಂತಹ ಸಂದರ್ಭದಲ್ಲಿ ದೇಹವು ದಿನಕ್ಕೆ ಸುಮಾರು ಎಂಟುನೂರು ಮಿಲಿಲೀಟರಿನಷ್ಟು ಮೂತ್ರವನ್ನು ಮಾತ್ರ ಹೊರಹಾಕುವ ಮೂಲಕ ದೇಹದೊಳಗೆ ನೀರು ಮತ್ತು ಲವಣಗಳ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ಆಹ್ಲಾದಕರ ವಾತಾವರಣದಲ್ಲಿ ಮನುಷ್ಯನು ಹೆಚ್ಚು ನೀರನ್ನು ಸೇವಿಸುತ್ತಿದ್ದರೆ ಮೂತ್ರಪಿಂಡವು ಸುಮಾರು ಮೂರರಿಂದ ನಾಲ್ಕು ಲೀಟರಿನಷ್ಟು ಸಾರಗುಂದಿಸಿದ ತೆಳುಬಣ್ಣದ ಮೂತ್ರವನ್ನು ಹೊರಹಾಕಿ ದೇಹದೊಳಗೆ ಅನಗತ್ಯ ಪ್ರಮಾಣದಲ್ಲಿ ನೀರು ಸೇರಿಕೊಳ್ಳದಂತೆ ಎಚ್ಚರವಹಿಸುತ್ತದೆ.
ಮಾನವನ ಮಿದುಳಿನ ಹೈಪೋಥೆಲಾಮಸ್ (hypothalamus) ಎಂಬ ಭಾಗವು ದೇಹದ ಬಾಯಾರಿಕೆಯನ್ನು ನಿಯಂತ್ರಿಸುತ್ತದೆ. ಬಾಯಾರಿಕೆಯ ಅನುಭವವನ್ನು ಮೂಡಿಸುವಲ್ಲಿ ಮತ್ತು ಬಾಯಾರಿಕೆಯಾಗುವ ಭಾವನೆಯನ್ನು ಅಳಿಸುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ದೇಹದಲ್ಲಿ ನೀರಿನ ಅಂಶವು ಕಡಿಮೆಯಾಗಿ ರಕ್ತದ ಸಾಂದ್ರತೆಯ ಹೆಚ್ಚಾದಂತೆ ಅದನ್ನು ಮಿದುಳಿನ ಹೈಪೋಥೆಲಾಮಸ್ ಭಾಗವು ಮೊದಲಿಗೆ ಗ್ರಹಿಸುತ್ತದೆ.ಅದು ಬಾಯಾರಿಕೆಯ ಭಾವನೆಯನ್ನು ಹುಟ್ಟು ಹಾಕಿ. ಮನುಷ್ಯನಿಗೆ ನೀರನ್ನು ಕುಡಿಯಲು ಪ್ರೇರಣೆ ನೀಡುತ್ತದೆ. ಜೊತೆಗೆ ಹೈಪೋಥೆಕಾಮಸ್ ವಿವಿಧ ಹಾರ್ಮೋನುಗಳ ಮೂಲಕ ಮೂತ್ರಪಿಂಡಗಳಿಗೆ ಸಂದೇಶವನ್ನು ರವಾನಿಸಿ ಮೂತ್ರದ ಸಾಂದ್ರತೆಯನ್ನು ಹೆಚ್ಚು ಮಾಡುವ ಮೂಲಕ ದೇಹದೊಳಗೆ ಹೆಚ್ಚು ನೀರಿನಂಶವು ಉಳಿದುಕೊಳ್ಳುವಂತೆ ಮಾಡುತ್ತದೆ. ಯಾವುದೇ ಕಾರಣದಿಂದ ಮನುಷ್ಯ ಹೆಚ್ಚು ನೀರನ್ನು ಸೇವಿಸಿದ ನಂತರ ರಕ್ತದ ಸಾಂದ್ರತೆ ಕಡಿಮೆಯಾಗಿದ್ದರೆ ಹೈಪೋಥೆಲಾಮಸ್ ಬಾಯಾರಿಕೆಯ ಭಾವವನ್ನು ಕಡಿಮೆ ಮಾಡುವುದರ ಜೊತೆ ಜೊತೆಗೆ ವಿವಿಧ ಹಾರ್ಮೋನುಗಳ ಮೂಲಕ ಮೂತ್ರಪಿಂಡ ದೇಹದೊಳಗೆ ಹೆಚ್ಚಾಗಿರುವ ನೀರಿನ ಪ್ರಮಾಣವನ್ನು ಮೂತ್ರದ ಮೂಲಕ ಹೊರಹಾಕುವಂತೆ ಕಾರ್ಯನಿರ್ವಹಿಸುತ್ತದೆ. ಬಾಯಾರಿಕೆಯನ್ನು ವ್ಯಕ್ತ ಪಡಿಸಲಾಗದವರ ಸಾಲಿನಲ್ಲಿ ಬರುವ ಚಿಕ್ಕ ಮಕ್ಕಳು ಮತ್ತು ಹಾಸಿಗೆ ಹಿಡಿದಿರುವ ಹಿರಿಯರು ಪ್ರತಿ ನಿತ್ಯ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸುವಂತೆ ನೋಡಿಕೊಳ್ಳಬೇಕು.
ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಸುಮಾರು ಮೂರರಿಂದ ನಾಲ್ಕು ಲೀಟರಿನಷ್ಟು ನೀರನ್ನು ಸೇವಿಸುವ ಮೂಲಕ ತಮ್ಮ ದೇಹದೊಳಗಿನ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳುತ್ತಾರೆ. ಬೇಸಿಗೆಯಲ್ಲಿ ದೇಹದ ತಾಪಮಾನವನ್ನು ತಣಿಸುವ ಸಲುವಾಗಿ ಬೆವರಿನ ಮೂಲಕ ದೇಹದಿಂದ ನೀರು ಮತ್ತು ಲವಣಗಳು ಹೊರಗೆ ಹೋಗುತ್ತದೆ. ಹಾಗಾಗಿ ಬೇಸಿಗೆಯ ಸಮಯದಲ್ಲಿ ದೇಹಕ್ಕೆ ಅಗತ್ಯವಿರುವ ಪ್ರಮಾಣದ ನೀರನ್ನು ಸೇವಿಸುವುದು ಅತಿಮುಖ್ಯ. ಒಬ್ಬ ಆರೋಗ್ಯವಂತ ವ್ಯಕ್ತಿಯು ತನ್ನ ಮೂತ್ರದ ಬಣ್ಣವನ್ನು ಗಮನಿಸುವ ಮೂಲಕ ಆತ ಬೇಸಿಗೆಯಲ್ಲಿ ಕುಡಿಯುವ ನೀರಿನ ಪ್ರಮಾಣವು ಸರಿಯಾಗಿದೆಯೊ ಇಲ್ಲವೊ ಎಂದು ಅಂದಾಜಿಸಬಹುದು.
ಮೂತ್ರದ ಸಾಂದ್ರತೆ ಹೆಚ್ಚಾಗಿ ಮೂತ್ರವು ಹೆಚ್ಚು ಕಾಲ ಶೇಖರಣೆಗೊಂಡರೆ ಅಥವಾ ಮೂತ್ರದ ಹರಿವಿನಲ್ಲಿ ಅಡಚಣೆಯಾದರೆ ಮೂತ್ರಪಿಂಡದಲ್ಲಿ ಅಥವಾ ಮೂತ್ರಕೋಶದೊಳಗೆ ಕೀಟಾಣುಗಳು ಬೆಳೆಯುವ ಸಾಧ್ಯತೆಯಿರುತ್ತದೆ. ಜ್ವರ ಮತ್ತು ಉರಿಮೂತ್ರದ ಲಕ್ಷಣಗಳು ಇಂತಹಾ ರೋಗಿಗಳಲ್ಲಿ ಕಾಣಿಸಿಕೊಂಡರೆ ಮೂತ್ರನಾಳದ ಸೋಂಕು ತಗಲಿರುವುದು ಖಚಿತವಾಗುತ್ತದೆ. ಕೆಲವು ಜನರಿಗೆ ಹುಟ್ಟಿನಿಂದಲೇ ಮೂತ್ರನಾಳದಲ್ಲಿ ಅಡಚಣೆಗಳಿದ್ದ ಪಕ್ಷದಲ್ಲಿ ಅಂತಹವರಿಗೆ ಮೂತ್ರನಾಳದ ಸೋಂಕು ಪದೇ ಪದೇ ಕಾಣಿಸಿಕೊಳ್ಳಬಹುದು. ಮೂತ್ರನಾಳದ ಸೋಂಕು ಪದೇ ಪದೇ ಉಂಟಾದರೆ ಮೂತ್ರದಲ್ಲಿ ಸೇರಿಕೊಂಡಿರುವ ಕೀಟಾಣುಗಳು ಮೂತ್ರಪಿಂಡಕ್ಕೆ ಹಾನಿಯುಂಟುಮಾಡಿ ಅವನ್ನು ನಿಷ್ಕ್ರಿಯಗೊಳಿಸಬಹುದು. ಮೂತ್ರಪಿಂಡದ ಕಾರ್ಯಕ್ಷಮತೆಯನ್ನು ಉತ್ತಮವಾಗಿಡುವ ಸಲುವಾಗಿ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯಗತ್ಯ. ನಾವು ದಿನನಿತ್ಯ ಸೇವಿಸುವ ನೀರಿನ ಪ್ರಮಾಣದ ಕುರಿತಾಗಿ ಬೇಸಿಗೆಯ ಕಾಲದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.