ADVERTISEMENT

ಗರ್ಭಿಣಿಯರು 3ನೇ ತ್ರೈಮಾಸಿಕದಲ್ಲಿ ಹೇಗೆ ಜಾಗ್ರತೆವಹಿಸಬೇಕು?

ಡಾ.ವೀಣಾ ಭಟ್ಟ
Published 5 ಮೇ 2023, 19:32 IST
Last Updated 5 ಮೇ 2023, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

1. ನನಗೆ 29 ವರ್ಷ. ಮೊದಲ ಮಗು 8 ತಿಂಗಳಿಗೆ ಜನಿಸಿತು. ಹುಟ್ಟಿದ 12 ದಿನಗಳ ನಂತರ ತೀರಿಕೊಂಡಿತು. ಯಾವುದೇ ಔಷಧವಿಲ್ಲದೇ ತಿಂಗಳು ಸರಿಯಾಗಿ ಮುಟ್ಟಾದ ಬಳಿಕ ಈಗ ಮತ್ತೆ ಗರ್ಭಿಣಿ. ಈಗ 6 ತಿಂಗಳು. ಸ್ಕ್ಯಾನಿಂಗ್‌ ರಿಪೋರ್ಟ್ ನಾರ್ಮಲ್ ಆಗಿದೆ. ಆದರೂ ಸಸ್ಟೆನ್ 200 ಮಾತ್ರೆ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ.  ಮಾತ್ರೆಯನ್ನು ಮೂರನೇ ತಿಂಗಳಿಗೆ ತೆಗೆದುಕೊಂಡೆ. ಮತ್ತೆ ಅದೇ, ಮಾತ್ರೆ ತೆಗೆದುಕೊಳ್ಳಲು ಹೇಳಿದ್ದಾರೆ. ಅದಕ್ಕೆ ಸರಿಯಾದ ಮಾಹಿತಿ ನೀಡಿಲ್ಲ. ಕ್ಯಾಲ್ಸಿಯಂ, ಐರನ್, ಫೋಲಿಕ್‌ಆಸಿಡ್ ಮಾತ್ರೆ ನಿರಂತರವಾಗಿ ತೆಗೆದುಕೊಳ್ಳುತ್ತಿದ್ದೇನೆ. ಒಂದೊಂದು ಬಾರಿ ಹೊಟ್ಟೆ ಮೇಲ್ಭಾಗದಲ್ಲಿ ನೋವು, ವಾಸನೆ ರಹಿತ ಬಿಳಿಮುಟ್ಟು ಆಗುತ್ತದೆ. ಇದರಿಂದ ಏನಾದರೂ ಸಮಸ್ಯೆ ಇದೆಯೇ?  ಮೂರನೇ ತ್ರೈಮಾಸಿಕ ಅವಧಿಯಲ್ಲಿ ಯಾವ ರೀತಿ ಜಾಗ್ರತೆ ವಹಿಸಬೇಕು?  

ಹೆಸರು, ಊರು ತಿಳಿಸಿಲ್ಲ

ಉತ್ತರ: ನಿಮಗೆ ಮೊದಲನೇ ಮಗು 8 ತಿಂಗಳಿಗೆ ಹುಟ್ಟಿ ನಂತರ 12ನೇ ದಿನಕ್ಕೆ ಮರಣಹೊಂದಿರುವುದರ ಬಗ್ಗೆ ಬೇಸರವಾಯಿತು. ಈ ಬಾರಿ ಸ್ಕ್ಯಾನಿಂಗ್‌ ವರದಿಗಳು ನಾರ್ಮಲ್ ಆಗಿರುವುದರಿಂದ ನೀವು ಚಿಂತಿಸಬೇಡಿ, ಧೈರ್ಯವಾಗಿರಿ. ಈಗಾಗಲೇ ನಿರಂತರವಾಗಿ ತೆಗೆದುಕೊಳ್ಳುತ್ತಿರುವ ಕ್ಯಾಲ್ಸಿಯಂ ಮತ್ತು ಐರನ್ ಮಾತ್ರೆಗಳನ್ನು ಮುಂದುವರಿಸಿ. ಸಸ್ಟೇನ್ 200 ಎಂ.ಜಿ ಮಾತ್ರೆಯು ಪ್ರೊಜೆಸ್ಟ್ರಾನ್‌ ಹಾರ್ಮೋನಿನ ಮಾತ್ರೆಯಾಗಿದ್ದು ಅದನ್ನು ಮುಂದುವರಿಸಿ. ಈ ಹಿಂದೆ ನಿಮಗೆ ಮೊದಲಿನಂತೆ ಅಕಾಲಿಕ ಹೆರಿಗೆಯಾಗದಿರಲಿ ಎಂದು ಆ ಮಾತ್ರೆ ಕೊಟ್ಟಿದ್ದಾರೆ.

ADVERTISEMENT

ಇನ್ನು ನಿಮಗಾಗುತ್ತಿರುವ ವಾಸನೆರಹಿತ ಬಿಳಿಮುಟ್ಟು ಹಾಗೂ ಸ್ವಲ್ಪ ಹೊಟ್ಟೆನೋವು ಮೇಲ್ಭಾಗದಲ್ಲಿದ್ದರೆ ಗಾಬರಿಯಾಗುವ ಅಗತ್ಯವಿಲ್ಲ. ಗರ್ಭಧಾರಣೆಯಲ್ಲಿ ಗರ್ಭಕೋಶಕ್ಕೆ ಹೆಚ್ಚು ರಕ್ತಸರಬರಾಜು ಆಗುವುದರಿಂದ ಸ್ವಲ್ಪಮಟ್ಟಿಗೆ ವಾಸನೆ ರಹಿತ ಬಿಳಿಮುಟ್ಟಾಗುವುದು ಸಹಜ. ಆಗಾಗ ಗರ್ಭಕೋಶ ಸಂಕುಚಿತಗೊಂಡಾಗ ಸ್ವಲ್ಪ ಹೊಟ್ಟೆಹಿಂಡಿದ ಅನುಭವ ಆಗಬಹುದು. ಹೊಟ್ಟೆ ನೋವು ಅಧಿಕವಾದಲ್ಲಿ ನಿಮ್ಮ ವೈದ್ಯರು ಅಕಾಲಿಕ ಹೆರಿಗೆ ಆಗದ ಹಾಗೆ, ಗರ್ಭಕೋಶ ಸಂಕುಚನಗೊಳ್ಳುವುದನ್ನ ತಡೆಗಟ್ಟಲು ಇರುವ ಮಾತ್ರೆಗಳನ್ನು ಬಳಸಲು ಹೇಳುತ್ತಾರೆ. ನೀವು ಧೈರ್ಯದಿಂದಿರಿ.

ಮೂರನೇ ತ್ರೈಮಾಸಿಕ ಸಮಯದಲ್ಲಿ ಜಾಗ್ರತೆವಹಿಸುವ ಬಗ್ಗೆ ಕೇಳಿದ್ದೀರಿ;  ಈ ಅವಧಿಯಲ್ಲಿ ನೀವು ಅನವಶ್ಯಕ ಪ್ರಯಾಣ ಮಾಡಬಾರದು. ಚಟುವಟಿಕೆಯಿಂದಿರಬೇಕು. ಆದರೆ ಅತಿ ಆಯಾಸದ ಕೆಲಸ ಮಾಡಬೇಡಿ. ಬೆಳೆಯುತ್ತಿರುವ ಮಗುವಿನಿಂದ ಹೊಟ್ಟೆಭಾರ ಎನಿಸಬಹುದು. ಆದ್ದರಿಂದ ಆಹಾರ ಸೇವನೆಯಲ್ಲಿ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು, ಸೊಪ್ಪು ತರಕಾರಿ, ಸೂಪ್ ಇತ್ಯಾದಿಗಳನ್ನ ಸೇವಿಸಿ. ಮೂರು ಹೊತ್ತು ಹೆಚ್ಚು ಆಹಾರ ಸೇವಿಸುವುದಕ್ಕಿಂತ, ಕಡಿಮೆ ಆಹಾರವನ್ನು ಐದು ಬಾರಿ ಸೇವಿಸುವುದು ಒಳ್ಳೆಯದು.

ಈ ಲಕ್ಷಣಗಳ ಬಗ್ಗೆ ಅರಿವಿರಲಿ: ಯೋನಿಯಿಂದ ರಕ್ತಸ್ರಾವವಾಗುವುದು, ಇದ್ದಕ್ಕಿದ್ದಂತೆ ನೀರು ಸೋರುವುದು, ಮುಖ, ಕೈಕಾಲುಗಳು ಊದಿಕೊಳ್ಳುವುದು, ಹೆಚ್ಚು ಕಡಿಮೆಯಾದ ಮಗುವಿನ ಚಲನೆ, ಮೂತ್ರವಿರ್ಸಜಿಸುವಾಗ ಉರಿ ಮತ್ತು ನೋವಿದ್ದಲ್ಲಿ, ಚಳಿ ಮತ್ತು ಜ್ವರ ಏನಾದರೂ ಇದ್ದಲ್ಲಿ, ಒಂದೇ ಸಮನೆ ಬಿಟ್ಟು ಬಿಟ್ಟು ಹೊಟ್ಟೆ ಅಥವಾ ಸೊಂಟದನೋವು ಹೆಚ್ಚಾದಲ್ಲಿ, ತೀವ್ರವಾದ ತಲೆನೋವು, ದೃಷ್ಟಿ ಮಂಜಾಗುವುದು, ಕಣ್ಣುಮುಂದೆ ಏನಾದರು ಬೆಳಕು ಹೊಳೆದಂತಾಗುವುದು... ಇವೆಲ್ಲ ಕೂಡಲೇ ವೈದ್ಯರನ್ನು ಕಾಣಬೇಕಾದ ತುರ್ತುಚಿಹ್ನೆಗಳು. ಇವೆಲ್ಲದರ ಬಗ್ಗೆ ನಿಮಗೆ ಅರಿವಿರುವುದು ಅಗತ್ಯ.

‌ಗರ್ಭಧಾರಣೆಯ ಕೊನೆಯ ಮೂರು ತಿಂಗಳಲ್ಲಿ ಕೆಮ್ಮಿದರೆ, ಸೀನಿದರೆ ಸ್ವಲ್ಪ ಮೂತ್ರ ಹೊರಬಂದ ಹಾಗೇ ಆಗಬಹುದು. ಇದನ್ನ ತಡೆಗಟ್ಟಲು ಪೆಲ್ವಿಕ್ (ಅಸ್ಥಿಕುಹರ) ಸ್ನಾಯುಗಳಿಗೆ ವ್ಯಾಯಾಮ ಕೊಡುವ ಕೆಗಲ್ಸ್ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು. ಜೊತೆಗೆ ಕಾಲುಗಳಲ್ಲಿ ನೀರು ತುಂಬಿ ಊತ ಆಗುವುದನ್ನು (ಎಡಿಮಾ) ತಡೆಗಟ್ಟಲು ಕಾಲು, ಕೈಗಳ ಸೂಕ್ಷ್ಮ ವ್ಯಾಯಾಮಗಳನ್ನ ಮಾಡುತ್ತಿರಬೇಕು.

ಮಗುವಿನ ಚಲನೆ ಬಗ್ಗೆ ಗಮನವಿರಲಿ: ಗರ್ಭಿಣಿಯರು 8 ತಿಂಗಳಾಗಿದ್ದಾಗ ನೇರವಾಗಿ ಮಲಗಿದರೆ ದೊಡ್ಡರಕ್ತನಾಳದ ಮೇಲೆ ಒತ್ತಡ ಬಿದ್ದು ರಕ್ತದೊತ್ತಡ ಸ್ವಲ್ಪ ಕಡಿಮೆ ಆಗಿ ತಲೆಸುತ್ತಿದ ಅನುಭವ ಆಗುತ್ತದೆ. ಗರ್ಭಿಣಿಯರು ಹೆಚ್ಚಾಗಿ ಒಂದು ಮಗ್ಗುಲಲ್ಲೇ ಮಲಗುವುದರಿಂದ ಇದನ್ನು ತಡೆಗಟ್ಟಬಹುದು. ಗರ್ಭದೊಳಗಿನ ಮಗುವಿನ ಮಿಸುಕಾಟ ಬೆಳಿಗ್ಗೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಸುಮಾರು 10 ಬಾರಿಯಾದರೂ ಇದ್ದು ಮತ್ತೆ 12 ರಿಂದ 6 ಗಂಟೆಯ ಒಳಗೆ ಇನ್ನೊಂದು 10 ಬಾರಿಯಾದರೂ ನಿಮಗೆ ಗೊತ್ತಾಗಬೇಕು. ಹಾಗಾಗದಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.‌

ಸಹಜ ಹೆರಿಗೆಯಾಗುವುದೆಂದು ಮಾನಸಿಕ ಸಂಕಲ್ಪ ಮಾಡಿಕೊಳ್ಳಿ ಅದಕ್ಕಾಗಿ ದೈಹಿಕ ತಯಾರಿಯಾಗಿ 8 ತಿಂಗಳು ತುಂಬಿ 9 ತಿಂಗಳು ಆರಂಭವಾದಾಗ ಬದ್ದಕೋಣಾಸನ, ಉತ್ಕಟಾಸನ, ಚಕ್ಕಿಚಲನಾಸನ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಿ. ನಿಮಗೆ ಸುಖ ಪ್ರಸವವಾಗಿ ಆರೋಗ್ಯವಂತ ಮಗು ಜನನವಾಗಲಿ ಎಂದು ಹಾರೈಸುತ್ತೇನೆ.

ಸ್ಪಂದನ
ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು
bhoomika@prajavani.co.inಗೆ ಕಳುಹಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.