ಶೀತಗಾಳಿ, ಮೋಡಕವಿದ ವಾತಾವರಣ, ಮಳೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಗಂಟಲುನೋವು, ಸುಲಭವಾದ ಆರೈಕೆಗಳಿಂದ ವಾಸಿಯಾಗುವುದು. ಗಂಟಲುನೋವಿನ ಜೊತೆಗೆ, ಸತತವಾಗಿ 101ಡಿಗ್ರಿ.ಸೆ. ತೀವ್ರ ತಾಪ, ವಾರ ಕಳೆದರೂ ನೋವು ಇಳಿಯದೆ, ಸ್ವರವು ಹೊರಡದೆ, ಮಾತನಾಡಲು ಕಷ್ಟವೆನಿಸುವುದು, ಬಾಯಿ ತೆರೆಯಲು ಕಷ್ಟವಾಗುವುದು, ಉಸಿರಾಟದ ಸಮಸ್ಯೆ, ಒಣಕೆಮ್ಮು, ನಾಲಿಗೆ-ಗಂಟಲು-ಬಾಯಿ ಒಣಗುವುದು, ಗಂಟಲು-ಕಣ್ಣುಉರಿಯುವುದು, ತುಟಿ-ಗಂಟಲು-ಕಿರುನಾಲಿಗೆ-ಬಾಯಿಯ ಮೇಲ್ಛಾಗ ಕೆಂಪಾಗಬಹುದು.
ಕೆನ್ನೆ-ಮುಖದ ಬಾವು, ತಲೆಭಾರ-ನೋವು, ಕುತ್ತಿಗೆ- ಗಂಟಲು ಪ್ರದೇಶದಲ್ಲಿ ಗಂಟುಗಳು, ಮೈನೋವು, ಕಿವಿನೋವು, ನೆಗಡಿ, ಸೀನುವುದು, ಎಂಜಲು ನುಂಗಲು ಕಷ್ಟವೆನಿಸುವುದು, ಜೊಲ್ಲುಸುರಿಯುವುದು, ಕುಡಿಯಲು-ತಿನ್ನಲು ಅಸಾಧ್ಯವೆನಿಸು
ವಷ್ಟು ತೀವ್ರವಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇವೆಲ್ಲವೂ ವೈದ್ಯರ ಸಹಾಯದಿಂದ ವಾಸಿಯಾಗ
ಬಹುದು. ಕೆಲವು ತೀವ್ರತರವಾದ ಸ್ಥಿತಿಯುಪ್ರಾಣಘಾತಕ. ಗಂಟಲು ನೋವಿಗೆ ಕಾರಣ ಹಾಗೂ ಪರಿಹಾರಗಳ ಬಗ್ಗೆ ತಿಳಿಯೋಣ.
l ಸೈಕ್ಲೋನ್ ಪರಿಣಾಮ ಶೀತಗಾಳಿ, ವಾಯುಭಾರಕುಸಿತ, ಮಳೆ- ಮೋಡದ ವಾತಾವರಣ, ಆರ್ದ್ರತೆಯನ್ನು ಅನುಭವಿಸುತ್ತಿದ್ದೇವೆ. ಇಂತಹ ಪರಿಸರದಲ್ಲಿ ಮುಖವನ್ನು ಎದುರಿಗೆ ಒಡ್ಡಿ ಪ್ರಯಾಣಿಸುವುದು, ತೆರೆದ ಪ್ರದೇಶದಲ್ಲಿ ಮಲಗುವುದು, ಮಳೆಯಲ್ಲಿ ನೆನೆಯುವುದು - ಇವುಗಳಿಂದ ಗಂಟಲುನೋವಿಗೆ ಒಳಗಾಗುವವರು ಹೆಚ್ಚು. ಕಿವಿ, ಮೂಗು, ಬಾಯಿ, ತಲೆಯು ಮುಚ್ಚುವಂತೆ ಬೆಚ್ಚಗೆ ಮಾಸ್ಕ್- ಸ್ಕಾರ್ಫ್- ಟೋಪಿ ಧರಿಸುವುದು ಉತ್ತಮ ಅಭ್ಯಾಸ. ಬೆಚ್ಚಗಿನ ಬಟ್ಟೆ, ದಪ್ಪವಾದ ಹಾಸಿಗೆ-ಹೊದಿಕೆಗಳ ಉಪಯೋಗವು ಸೂಕ್ತ. ಕಿಟಕಿ-ಬಾಗಿಲನ್ನು ಮುಚ್ಚಿದನಿರ್ವಾತಕೋಣೆಯಲ್ಲಿ ವಾಸಿಸುವುದು,ಮಲಗುವುದು ಕ್ಷೇಮ.
l ಮನೆಯೊಳಗೆ, ಕಚೇರಿಯಲ್ಲಿ ಅರಿಶಿನ, ಸಾಂಬ್ರಾಣಿ, ತುಪ್ಪಗಳ ‘ಧೂಪನ’ದಿಂದ ಆರ್ದ್ರತೆಯನ್ನು, ಉಷ್ಣತೆಯನ್ನು ಕಾಪಾಡಬಹುದು. ಧೂಪನದಿಂದ ಸೂಕ್ಷ್ಮಾಣು ಜೀವಿಗಳಿಂದ ರಕ್ಷಣೆ ಪಡೆಯಬಹುದು.
l ಅರಿಶಿನದ ಒಣಗಿದ ಕೊಂಬನ್ನು ತುಪ್ಪದಲ್ಲಿ ಅದ್ದಿಕೊಂಡು ಬೆಂಕಿಗೆ ಹಿಡಿದು, ಉರಿಯಲು ತೊಡಗಿದಾಗ ಆರಿಸಿ ಅದರಿಂದ ಹೊಮ್ಮುವ ಧೂಮವನ್ನು ಉಸಿರಾಟದೊಂದಿಗೆ ಸೇದುವುದು- ಗಂಟಲಿನ ಬಾವು, ಬಿಗಿತದಿಂದ ಉಂಟಾಗುವ ನೋವನ್ನು ಉಪಶಮನಗೊಳಿಸುತ್ತದೆ. ಕಣ್ಣು ಕೆಂಪಾಗಿದ್ದಾಗ, ಗಂಟಲಿನ ಉರಿ, ಕಣ್ಣುರಿ, ಬಾಯಿಹುಣ್ಣು ಇಂತಹ ಪಿತ್ತದ ಲಕ್ಷಣಗಳಿದ್ದಾಗ ಈ ಧೂಮವನ್ನು ಸೇವಿಸಬಾರದು. ಸಮಸ್ಯೆಯು ಉಲ್ಪಣಿಸುತ್ತದೆ.
l ನಿತ್ಯವೂ ಮುಂಜಾನೆ ಹಲ್ಲುಜ್ಜುವಾಗ ಕಹಿ-ಒಗರುರುಚಿಯ ದಂತಮಂಜನಗಳನ್ನು ಉಪಯೋಗಿ
ಸುವುದು ಉತ್ತಮ ದಿನಚರಿ. ಗಂಟಲಲ್ಲಿ ಕಫವು ಕಟ್ಟಿಕೊಂಡು ಉಂಟಾಗುವ ಬಾವು-ನೋವು- ಬಿಗಿತಗಳನ್ನು ನಿವಾರಿಸುತ್ತದೆ. ಗಂಟಲುನೋವಿದ್ದಾಗಲೂ ಇಂತಹ ಹಲ್ಲುಪುಡಿಯಿಂದ ಹಲ್ಲುಜ್ಜುವುದರಿಂದ ಬೇಗನೇ ಶಮನವನ್ನು ಕಾಣಬಹುದು.
l ಬಾಯಿಯನ್ನೂ ತೆರೆಯಲಾಗದಷ್ಟು ಗಂಟಲುನೋವಿದ್ದಾಗ ಹಲ್ಲುಜ್ಜುವ ಬದಲು, ಜೇನುತುಪ್ಪವನ್ನು ಬೆರಳಿನಿಂದ ಹಲ್ಲಿಗೆ ತಿಕ್ಕಿ, ಚೊಕ್ಕಗೊಳಿಸುವುದು ಸುಖಕರ.
l ಶೀತ-ಮಳೆಯ ವಾತಾವರಣದಲ್ಲಿ ಬಿಸಿನೀರಿನಿಂದ ಬಾಯಿಮುಕ್ಕಳಿಸುವುದು ಗಂಟಲುನೋವು ನಿವಾರಕ. ಗಟ್ಟಿಕಫವು ಶೇಖರಣೆಯಾಗಿದ್ದರೆ ಚಿಟಿಕೆ ಸೈಂಧವಲವಣ/ ಪಿಂಕ್-ಸಾಲ್ಟ್/ ಕಲ್ಲುಪ್ಪು ಸೇರಿಸಬಹುದು. ಉರಿಯೂತ, ಗಂಟಲು ಕೆಂಪಾಗಿದ್ದಾಗ ಇದನ್ನು ಮಾಡುವುದು ಸರಿಯಲ್ಲ.
l ಸ್ನಾನದ ಮೊದಲು, ಕಿವಿಗೆ-ಮೂಗಿಗೆ-ತಲೆಗೆ-ಪೂರ್ಣಶರೀರಕ್ಕೆ ಬೆಚ್ಚಗಿನ ಎಳ್ಳೆಣ್ಣೆಯನ್ನು ಹಚ್ಚುವುದು, ಹನಿಗಳನ್ನು ಬಿಡುವುದು ಉಪಯುಕ್ತ. ಮನೆಯಾಚೆ ಹೋಗುವಾಗ ಕಿವಿಗೆ-ಮೂಗಿಗೆ ಬೆಚ್ಚಗಿನ ಎಣ್ಣೆಯನ್ನು ಸವರಿಕೊಳ್ಳುವುದು. ಈ ಅಭ್ಯಾಸವು ವಾತಾವರಣದ ವ್ಯತ್ಯಾಸದಿಂದ ದೇಹದ ಮೇಲಾಗುವ ಪರಿಣಾಮವನ್ನು ತಡೆಯುತ್ತದೆ. ಚರ್ಮ-ಶರೀರದ ಉಷ್ಣತೆಯನ್ನು, ಆರ್ದ್ರತೆಯನ್ನು ಕಾಪಾಡುತ್ತದೆ. ಗಂಟಲುನೋವು, ನೆಗಡಿ, ಸೀನುವುದು,ಮೂಗುಕಟ್ಟುವುದು,ಉಸಿರಾಡಲು ಕಷ್ಟ, ಕಿವಿನೋವು ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ.
l ಗಂಟಲುಬಾವು-ನೋವಿದ್ದಾಗ ತಲೆಸ್ನಾನವನ್ನು ಮಾಡದೆ ಇರುವುದು ಉತ್ತಮ.
l ಶೀತ-ಆರ್ದ್ರಕಾಲದಲ್ಲಿ ಹೆಚ್ಚು ಹೆಚ್ಚು ದ್ರವಾಹಾರ ಸೇವನೆ, ಮೊಸರು- ಮಜ್ಜಿಗೆ- ಹಾಲಿನ ತಣ್ಣಗಿನ ಉತ್ಪನ್ನಗಳನ್ನು ಸೇವಿಸುವುದರಿಂದ ಜೀರ್ಣಶಕ್ತಿಯು ಮತ್ತಷ್ಟು ಹಾಳಾಗುತ್ತದೆ. ಆದ್ದರಿಂದ ತಾಜಾ-ಬಿಸಿಯಾದ ಆಹಾರಸೇವನೆಯೊಂದಿಗೆ ಚೆನ್ನಾಗಿ ಕುದಿಸಿದ ಬಿಸಿನೀರು ಕುಡಿಯುವುದು ಹಿತಕರ. ಜೀರಿಗೆ/ ಶುಂಠಿ/ ಕೊತ್ತಂಬರಿಬೀಜ/ ಸೋಂಪು/ ಏಲಕ್ಕಿಯಂತಹ ಜೀರ್ಣಕಾರಿ ಆಹಾರೋಪಯೋಗಿ ಪದಾರ್ಥಗಳನ್ನು ನೀರಿಗೆ/ ಹಾಲಿಗೆ ಹಾಕಿ ಕುದಿಸಿ ಕುಡಿಯುವುದು ಉಪಕಾರಿ. ಗಂಟಲುನೋವಿದ್ದಾಗಲೂ ಇಂತಹ ಆಹಾರ-ಪಾನ ಸೂಕ್ತ.
l ಕಫವು ಬಿಗಿದು ಗಂಟಲುಬಾವು-ನೋವಿದ್ದಾಗ ಶುಂಠಿ-ಜೀರಿಗೆ ನೀರುಬಿಸಿಯಾದ ಆಹಾರದಲ್ಲಿ ಸೂಕ್ತ.
l ಗಂಟಲು ಕೆಂಪಾಗಿ, ಒಣಕೆಮ್ಮು, ಉರಿಯಿದ್ದಾಗ ಬಿಸಿ ಆಹಾರದಲ್ಲಿ ಬೆಣ್ಣೆ, ಹಾಲು-ಸಕ್ಕರೆ, ಬಿಸಿಪಾಯಸ, ಖೀರು ಸೇವನೆ ಹಿತಕರ.
l ರಾತ್ರಿಯ ಆಹಾರದಲ್ಲಿ ಮೊಸರನ್ನು ಸೇವಿಸುವುದು,ಮಜ್ಜಿಗೆ ಕುಡಿಯುವುದು, ಬಾಳೆಹಣ್ಣು, ಕಿತ್ತಳೆ ಮೊದಲಾದ ಕಫವನ್ನು ಹೆಚ್ಚಿಸುವ ಹಣ್ಣುಗಳ ಸೇವನೆಯಿಂದ ಗಂಟಲುನೋವು ಕಾಡಬಹುದು. ತಲೆಭಾರ, ಮುಖ-ಗಂಟಲು ಬಾವು ಮೊದಲಾದ ತೊಂದರೆಗಳೂ ಜೊತೆಗೂಡಬಹುದು. ಈ ಸಂದರ್ಭದಲ್ಲಿ ರಾತ್ರಿಯ ಆಹಾರವನ್ನು ಒಂದು ಹೊತ್ತು ಬಿಡುವುದರಿಂದ, ಉಪವಾಸದಿಂದ ಹಿತ ಕಾಣಬಹುದು.
l ರಾತ್ರಿಯ ಆಹಾರವು ತಡವಾದಷ್ಟೂ ಗಂಟಲಿನ ಸಮಸ್ಯೆಗಳು ಜಾಸ್ತಿ. ಗಂಟಲುನೋವಿದ್ದಾಗಲೂ ತಡವಾಗಿ ರಾತ್ರಿಯ ಆಹಾರವನ್ನು ಸೇವಿಸುವುದರಿಂದಸಮಸ್ಯೆಯು ಉಲ್ಬಣಿಸುತ್ತದೆ. ಇಂತಹವರು ಸಂಜೆ 6-7 ಗಂಟೆಯೊಳಗೆ ತಾಜಾ-ಬಿಸಿ-ಜೀರ್ಣಕಾರಿ ಆಹಾರ ಸೇವಿಸಿ, ನಂತರ ಮಲಗುವವರೆಗೆ ಏನನ್ನೂ ಸೇವಿಸದಿರುವುದು ಗುಣಕಾರಿ.
l ತಣ್ಣಗಿನ ಹಣ್ಣಿನ ರಸ, ತಣ್ಣೀರು, ತಣ್ಣಗಿನ ಆಹಾರ, ಐಸ್-ಕ್ರೀಂ, ಮಿಲ್ಕ್-ಶೇಕ್, ಕೇಕ್, ಪೇಸ್ಟರಿ- ಮೊದಲಾದ ಸೇವನೆಯಿಂದ ಗಂಟಲುನೋವು ಬರುವುದು ಸಾಮಾನ್ಯ. ಈ ಕಾರಣಗಳಿದ್ದಾಗ ಒಂದೆರಡು ಹೊತ್ತು ಆಹಾರವನ್ನು ಸೇವಿಸದೆ ಬಿಸಿನೀರು, ಶುಂಠಿ ಮತ್ತು ಬೆಲ್ಲ ಹಾಕಿ ಕುದಿಸಿದ ನೀರು, ಜೀರಿಗೆ ಮತ್ತು ಬೆಲ್ಲ ಹಾಕಿ ಕುದಿಸಿದ ನೀರು ಸೇವಿಸಿ ಗುಣಹೊಂದಬಹುದು.
l ಗಂಟಲುಬಾವು-ಕಫ ಬಿಗಿದು ನೋವು ಇದ್ದಾಗ ಬಿಸಿಯಾದ ಲೇಪನವು ಹಿತಕಾರಿ. ಶುಂಠಿಯನ್ನುಹಾಲಿನಲ್ಲಿ ತೇಯ್ದು/ ಪೇಸ್ಟ್ ಮಾಡಿ ಬಿಸಿಮಾಡಿ ಗಂಟಲಿನ ಹೊರಗೆ ಹಚ್ಚುವುದು ಶಮನವನ್ನು ತರುತ್ತದೆ. ಮೇಲೆ ತಿಳಿಸಿದ ಆರೈಕೆಗಳು ಒಂದೆರಡು ದಿನಗಳಲ್ಲಿಯೇ ಶಮನವನ್ನು ತರುವಂತಹವು. ಇಷ್ಟಾಗಿಯೂ ಕಡಿಮೆಯಾಗದಿದ್ದರೆ, ತೀವ್ರತೆರನಾದ ಲಕ್ಷಣಗಳು, ವಾರ ಕಳೆದರೂ ವಾಸಿಯಾಗದ
ಗಂಟಲುಬೇನೆಗೆ ವೈದ್ಯರ ಸಲಹೆ ಪಡೆಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.