ಹೃದ್ರೋಗಗಳು ಮಕ್ಕಳಿಗೂ ಬರಬಹುದೇ ಎಂದು ಅಚ್ಚರಿ ಪಡಬೇಕಿಲ್ಲ. ಆರಂಭದಲ್ಲಿಯೇ ಮಕ್ಕಳ ಹೃದ್ರೋಗದ ಸಮಸ್ಯೆಗಳನ್ನು ಗುರುತಿಸಿದರೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
***
ಹೃದಯದ ಕಾಯಿಲೆ ಎಂದರೆ ಕಣ್ಣ ಮುಂದೆ ಕೂದಲು ನರೆತ ವೃದ್ಧರ ಚಿತ್ರ ಬರುತ್ತಿತ್ತು. ಈಚೆಗೆ ಮೂವತ್ತರ ಹರೆಯದಲ್ಲೂ ಹೃದ್ರೋಗದಿಂದ ಬಳಲುತ್ತಿರುವವರನ್ನು ಕಾಣುತ್ತಿದ್ದೇವೆ. ಆದರೆ ಹೃದ್ರೋಗ ಚಿಕಿತ್ಸೆ ಮಾಡುವ ಪ್ರಮುಖ ಆಸ್ಪತ್ರೆಗಳಲ್ಲಿ ‘ಮಕ್ಕಳ ಹೃದ್ರೋಗ ವಿಭಾಗ’ಗಳನ್ನು ಕಂಡವರು, ‘ಮಕ್ಕಳಿಗೆ ಹೃದಯದ ಕಾಯಿಲೆ ಬರುತ್ತದೆಯೇ?’ ಎಂದು ಅಚ್ಚರಿ ಪಡಬಹುದು.
ಮಕ್ಕಳಲ್ಲಿ ಕಾಣುವ ಹೃದಯದ ಸಮಸ್ಯೆಗಳು ವಿಶಿಷ್ಟವಾದವು. ಇವು ಹಿರಿಯರಲ್ಲಿ ಕಂಡುಬರುವ ಹೃದ್ರೋಗಗಳಿಗಿಂತ ಸಂಪೂರ್ಣ ಭಿನ್ನ. ವಯಸ್ಸಾದವರಲ್ಲಿ ಬಹುಮಟ್ಟಿಗೆ ಕಾಣುವುದು ಅಧಿಕ ರಕ್ತದೊತ್ತಡ, ಹೃದಯಕ್ಕೆ ರಕ್ತವನ್ನು ಪೂರೈಸುವ ಧಮನಿಗಳ ಅಡೆತಡೆ, ಹೃದಯದ ಮಾಂಸಖಂಡಗಳ ದೌರ್ಬಲ್ಯ ಮುಂತಾದುವು. ಆದರೆ, ಗರ್ಭಸ್ಥ ಶಿಶುವಿನ ಹೃದಯದ ರಚನೆಯಲ್ಲಿ ಆಗುವ ಜನ್ಮಜಾತದೋಷಗಳು ಮಗು ಹುಟ್ಟಿದ ಕೆಲಕಾಲದಲ್ಲಿ, ಇಲ್ಲವೇ ಎಳೆಯ ವಯಸ್ಸಿನಲ್ಲೇ ಕಾಣುತ್ತವೆ. ಹುಟ್ಟುವ ನೂರು ಮಕ್ಕಳಲ್ಲಿ ಒಂದು ಶಿಶುವಿಗೆ ಇಂತಹ ಜನ್ಮಜಾತ ಹೃದಯದ ಸಮಸ್ಯೆ ಇರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ.
ಹೃದಯ ಸರಳವಾದರೂ ಸಂಕೀರ್ಣವಾದ ಅಂಗ. ಆಕ್ಸಿಜನ್ ಪ್ರಮಾಣ ಕಡಿಮೆ ಇರುವ ಅಶುದ್ಧ ರಕ್ತ ಶರೀರದ ಎಲ್ಲೆಡೆಯಿಂದ ಅಪಧಮನಿಗಳ ಮೂಲಕ ಹೃದಯದ ಬಲಭಾಗವನ್ನು ಸೇರಿ, ಅಲ್ಲಿಂದ ಶ್ವಾಸಕೋಶಗಳನ್ನು ತಲುಪುತ್ತದೆ. ಅಲ್ಲಿ ಉಸಿರಾಟದ ಆಕ್ಸಿಜನ್ ಬೆರೆತು, ರಕ್ತದಲ್ಲಿನ ಆಕ್ಸಿಜನ್ ಪ್ರಮಾಣ ಹೆಚ್ಚಾಗಿ, ರಕ್ತ ಶುದ್ಧವಾಗುತ್ತದೆ. ಈ ಆಕ್ಸಿಜನ್-ಯುಕ್ತ ಶುದ್ಧ ರಕ್ತವು ಹೃದಯದ ಎಡಭಾಗವನ್ನು ಸೇರಿ, ಅಭಿಧಮನಿಗಳ ಮೂಲಕ ಇಡೀ ಶರೀರಕ್ಕೆ ಸರಬರಾಜಾಗುತ್ತದೆ. ಅಶುದ್ಧ ಮತ್ತು ಶುದ್ಧ ರಕ್ತಗಳನ್ನು ಪ್ರತ್ಯೇಕಿಸಲು ಹೃದಯದ ಎಡ ಮತ್ತು ಬಲಭಾಗಗಳ ನಡುವೆ ಎರಡು ಗೋಡೆಗಳು ಇರುತ್ತವೆ. ರಕ್ತದ ಏಕಮುಖ ಸಂಚಾರವನ್ನು ನಿಯಂತ್ರಿಸಲು ಹೃದಯದಲ್ಲಿ ಸ್ವಯಂಚಾಲಿತ ಬಾಗಿಲಿನಂತಹ, ನಿಶ್ಚಿತ ಸಮಯಕ್ಕೆ ಸರಿಯಾಗಿ ತೆರೆದು, ಮುಚ್ಚಿಕೊಳ್ಳುವ ನಾಲ್ಕು ಕವಾಟಗಳು ಇರುತ್ತವೆ. ಶ್ವಾಸಕೋಶಗಳಿಗೆ ಮತ್ತು ಶರೀರಕ್ಕೆ ರಕ್ತ ಒಯ್ಯುವ ಸಲುವಾಗಿ ಬೇರೆ ಬೇರೆ ಧಮನಿಗಳು ಇರುತ್ತವೆ. ಹೀಗೆ, ಒಂದೇ ಹೃದಯದಲ್ಲಿ ಇದ್ದರೂ, ಅಶುದ್ಧ ಮತ್ತು ಶುದ್ಧ ರಕ್ತಗಳು ಪರಸ್ಪರ ಸಂಪರ್ಕಕ್ಕೆ ಬಾರದಂತೆ ವ್ಯವಸ್ಥೆ ಇರುತ್ತದೆ.
ಅಶುದ್ಧ ಮತ್ತು ಶುದ್ಧ ರಕ್ತಗಳನ್ನು ಪ್ರತ್ಯೇಕಿಸುವ ಗೋಡೆಗಳಲ್ಲಿ ರಂಧ್ರವಿದ್ದರೆ ಎರಡೂ ಬದಿಯ ರಕ್ತ ಒಂದರ ಜತೆಗೊಂದು ಬೆರೆಯುತ್ತದೆ. ಈ ರೀತಿಯ ರಂಧ್ರಗಳು ಜನನದಿಂದಲೇ ಇರುವುದರಿಂದ, ಎಳೆಯ ವಯಸ್ಸಿನಲ್ಲೇ ಪತ್ತೆಯಾಗುತ್ತವೆ. ಹೃದಯದ ನಾಲ್ಕು ಕವಾಟಗಳ ಪೈಕಿ ಯಾವುದೋ ಒಂದು ಕವಾಟದ ರಚನೆಯಲ್ಲಿ ದೋಷವಿದ್ದರೆ, ಅದು ಸರಿಯಾಗಿ ಮುಚ್ಚದೆಯೋ, ತೆರೆಯದೆಯೋ ಇರಬಹುದು. ಆಗಲೂ ರಕ್ತಸಂಚಾರದಲ್ಲಿ ಏರುಪೇರಾಗುತ್ತದೆ. ರಕ್ತವನ್ನು ಒಯ್ಯುವ ರಕ್ತನಾಳಗಳ ರಚನೆಯಲ್ಲಿ ಏನಾದರೂ ಸಮಸ್ಯೆ ಇದ್ದರೂ, ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ಶರೀರಕ್ಕೆ ರಕ್ತವನ್ನು ಪೂರೈಸುವ ಸಂಪೂರ್ಣ ಜವಾಬ್ದಾರಿ ಹೃದಯದ್ದೇ ಆದ್ದರಿಂದ, ಇಡೀ ರಕ್ತಸಂಚಾರ ವ್ಯವಸ್ಥೆಯ ಯಾವುದೇ ಹಂತದಲ್ಲಿ ತೊಂದರೆಯಾದರೂ, ಅದರ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಹೃದಯದ ಮೇಲೆಯೇ ಆಗುತ್ತದೆ.
ಹೃದಯದ ಸಮಸ್ಯೆ ಸಣ್ಣ ಮಟ್ಟದಲ್ಲಿದ್ದರೆ ಶರೀರಕ್ಕೆ ಯಾವುದೇ ಹಾನಿಯಾಗದೇ ಇರಬಹುದು. ಅಂತಹ ಮಕ್ಕಳು ಇತರ ಮಕ್ಕಳಂತೆ ಆರಾಮವಾಗಿ, ಚಟುವಟಿಕೆಯಿಂದಲೇ ಇರುತ್ತಾರೆ. ಬೇರೆ ಯಾವುದೋ ಅನಾರೋಗ್ಯದ ಸಂದರ್ಭದಲ್ಲಿ ಅಂತಹ ಮಕ್ಕಳನ್ನು ವೈದ್ಯರ ಬಳಿ ಒಯ್ದಾಗ, ಅವರ ಹೃದಯವನ್ನು ಪರೀಕ್ಷಿಸುವ ವೈದ್ಯರಿಗೆ ವಿಭಿನ್ನ ಸದ್ದು ಕೇಳುತ್ತದೆ. ಹೃದಯದ ರಂಧ್ರ ಅಥವಾ ದೋಷಪೂರ್ಣ ಕವಾಟದ ಮೂಲಕ ಹರಿಯುವ ರಕ್ತ ಮರ್ಮರ್ ಸದ್ದನ್ನೋ, ಅಥವಾ ಕ್ಲಿಕ್ ಸದ್ದನ್ನೋ ಮಾಡುತ್ತದೆ. ಅನುಭವಿ ವೈದ್ಯರು ಇಂತಹ ಸದ್ದನ್ನು ಖಚಿತವಾಗಿ ಗ್ರಹಿಸಬಲ್ಲರು. ಆದರೆ, ಪ್ರತಿಯೊಂದು ವಿಭಿನ್ನ ಸದ್ದಿಗೂ ಹೃದಯದ ಆಂತರಿಕ ದೋಷವೇ ಕಾರಣ ಎನ್ನಲಾಗದು. ಕೆಲವೊಮ್ಮೆ ಸಾಮಾನ್ಯ ಮಕ್ಕಳಲ್ಲೂ ಮರ್ಮರ್ ಸದ್ದು ಕೇಳಿಸುತ್ತದೆ. ಹೀಗಾಗಿ, ಹೃದಯದ ಸದ್ದು ವಿಭಿನ್ನವಾಗಿದ್ದರೆ, ವೈದ್ಯರು ಮಕ್ಕಳ ಹೃದಯದ ತಪಾಸಣೆ ಮಾಡಿಸುತ್ತಾರೆ.
ಹೃದಯದ ಜನ್ಮಜಾತ ಸಮಸ್ಯೆ ತೀವ್ರವಾಗಿದ್ದರೆ, ಅಂತಹ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ಚರ್ಮ ಮತ್ತು ಲೋಳೆಪದರ ನೀಲಿಗಟ್ಟುವುದು, ಪದೇ ಪದೇ ಕಾಯಿಲೆ ಬೀಳುವುದು, ತೂಕ ಸರಿಯಾಗಿ ಏರದಿರುವುದು, ಹಾಲೂಡಿಸುವಾಗ ಮಗು ವಿಪರೀತ ಬೆವರುವುದು, ಬಿಟ್ಟು ಬಿಟ್ಟು ಹಾಲು ಕುಡಿಯುವುದು, ಸರಿಯಾಗಿ ನಿದ್ರಿಸದಿರುವುದು ಮೊದಲಾದ ಗಂಭೀರ ಸಮಸ್ಯೆಗಳು ಕಾಣುತ್ತವೆ. ಶಿಶುವೈದ್ಯರ ಸಲಹೆ ಪಡೆದು, ಇಂತಹ ಮಕ್ಕಳನ್ನು ಸಾಧ್ಯವಾದಷ್ಟೂ ಬೇಗ ಮಕ್ಕಳ ಹೃದ್ರೋಗತಜ್ಞರಲ್ಲಿ ತಪಾಸಣೆ ಮಾಡಿಸಬೇಕು.
ಮಕ್ಕಳ ಜನ್ಮಜಾತ ಹೃದ್ರೊಗ ಸಮಸ್ಯೆಗಳು ಹಲವಾರು ಬಗೆಯವು. ಸರಳವಾದ ಸಣ್ಣ ರಂಧ್ರದಿಂದ ಹಿಡಿದು, ರಕ್ತನಾಳಗಳ ಅದಲಿ-ಬದಲಿ, ಹೃದಯದ ನಾಲ್ಕು ಕೋಣೆಗಳ ಪೈಕಿ ಒಂದು ಇಡೀ ಕೋಣೆಯೇ ಬೆಳವಣಿಗೆ ಆಗದಿರುವುದು, ಕವಾಟಗಳ ಅನುಪಸ್ಥಿತಿಯಂತಹ ಸಂಕೀರ್ಣ ಸಮಸ್ಯೆಗಳು ಇರುತ್ತವೆ. ಇಂತಹ ಪ್ರತಿಯೊಂದು ಸಮಸ್ಯೆಗೂ ಚಿಕಿತ್ಸೆ ಭಿನ್ನವಾಗಿರುತ್ತದೆ. ‘ಒಂದು ಶಿಶುವಿನ ಹೃದಯದಂತೆ ಮತ್ತೊಂದು ಇರುವುದಿಲ್ಲ’ ಎಂದು ಮಕ್ಕಳ ಹೃದ್ರೋಗತಜ್ಞರು ಅಭಿಪ್ರಾಯ ಪಡುತ್ತಾರೆ.
ಪ್ರಸ್ತುತ ವೈದ್ಯಕೀಯ ವಿಜ್ಞಾನ ಬಹಳ ಪ್ರಗತಿ ಸಾಧಿಸಿದೆ. ಬಹುತೇಕ ಜನ್ಮಜಾತ ಹೃದ್ರೋಗ ಸಮಸ್ಯೆಗಳಿಗೆ ಈಗ ಪ್ರಮಾಣವತ್ತಾದ ಚಿಕಿತ್ಸೆಗಳಿವೆ. ಗರ್ಭಸ್ಥ ಭ್ರೂಣದ ಹಂತದಲ್ಲಿಯೇ ಹೃದ್ರೋಗವನ್ನು ನಿರ್ದಿಷ್ಟವಾಗಿ ಪತ್ತೆ ಮಾಡಬಲ್ಲ ತಂತ್ರಜ್ಞಾನವಿದೆ. ಸರಿಯಾದ ವೇಳೆಗೆ ವೈದ್ಯಕೀಯ ನೆರವು ಪಡೆದರೆ ಯಾವುದೇ ಜನ್ಮಜಾತ ಹೃದ್ರೋಗವನ್ನಾದರೂ ಸುಧಾರಿಸಬಲ್ಲ ಚಿಕಿತ್ಸೆಗಳಿವೆ. ಈಗಷ್ಟೇ ಜನಿಸಿದ ಮಗುವಿನ ಹೃದಯಕ್ಕೂ ಶಸ್ತ್ರಚಿಕಿತ್ಸೆ ಮಾಡಿ, ಸಮಸ್ಯೆಯನ್ನು ನಿಗ್ರಹಿಸಬಲ್ಲ ತೀವ್ರ ನಿಗಾ ಘಟಕಗಳಿವೆ. ಇಂತಹ ಸಂಕೀರ್ಣ ಚಿಕಿತ್ಸೆಯನ್ನು ಸಮರ್ಥವಾಗಿ ಮಾಡಬಲ್ಲ ಹಲವಾರು ಆಸ್ಪತ್ರೆಗಳು ನಮ್ಮ ದೇಶದಲ್ಲಿವೆ. ಒಂದು ಕಾಲದಲ್ಲಿ ಇಡೀ ಕುಟುಂಬವನ್ನು ಭೀತಿಗೆ ದೂಡುತ್ತಿದ್ದ ಮಕ್ಕಳ ಹೃದ್ರೋಗ ಈಗ ಪೋಷಕರಿಗೆ ಆತಂಕದ ವಿಷಯವಾಗಬೇಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.