ಕಣ್ಣುಗಳಲ್ಲಿ ನೋವಿಲ್ಲದ, ಬಾವಿಲ್ಲದ (ಊತ), ಉರಿಯಲ್ಲದ, ನೀರಿಲ್ಲದ ಸಮಸ್ಯೆಗಳೂ ಇರುತ್ತವೆ. ಆಗಾಗ ತಪಾಸಣೆ ಮಾಡಿಸಿಕೊಳ್ಳುವುದರಿಂದ ಮಾತ್ರ ಪರಿಹಾರ ಸಾಧ್ಯವಿದೆ.
ಕಣ್ಣಿನ ಆರೋಗ್ಯದ ದೃಷ್ಟಿಯಿಂದ, ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಮುಖ್ಯ ಎಂಬ ಮಾತಿಗೆ ಅತೀವ ಮಹತ್ವವಿದೆ. ಕಣ್ಣುಗಳ ಮೇಲೆ ಔಷಧಗಳು ಮತ್ತು ರೋಗದ ಪರಿಣಾಮವನ್ನು ಪರಿಗಣಿಸಿದರೆ, ಪದೇ ಪದೇ ತಪಾಸಣೆಯೇ ಹೆಚ್ಚು ಅನುಕೂಲ.
ತುಂಬಾ ಹೊತ್ತು ಸ್ಕ್ರೀನ್ ನೋಡುವುದರಿಂದ ಕಣ್ಣಿನ ಮಾಂಸಖಂಡದ ಬಳಲಿಕೆ ಮತ್ತು ಒಣಗುವಿಕೆ ಉಂಟಾಗುತ್ತದೆ. ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ಕಂಜೆನಿಟಲ್ ಕ್ಯಾಟ್ ರ‍್ಯಾಕ್ಟ್, ಗ್ಲಾಕೋಮಾ ಮತ್ತು ರೆಟಿನಾ ಅನಾರೋಗ್ಯದ ಪತ್ತೆಗಾಗಿ ನವಜಾತ ಶಿಶುಗಳಿಗೆ ತಪಾಸಣೆ ಮಾಡಬೇಕು. ಶಾಲೆಗೆ ಹೋಗುವ ಮಕ್ಕಳು, ಯುವಕರು ಮತ್ತು ಮಧ್ಯ ವಯಸ್ಕರು ಮತ್ತು ಹಿರಿಯ ನಾಗರಿಕರು ಕೂಡಾ ಆಗಾಗ್ಗೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ಅಗರವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯೆ ಅರ್ಚನಾ ಅವರು.
ಕಣ್ಣಿನ ಮಾಂಸಖಂಡ ಬಳಲಿಕೆ ಮತ್ತು ಒಣಗುವಿಕೆ ತಡೆಯಲು ಕೆಲಸದ ನಡುವೆ ವಿರಾಮ ಮತ್ತು ಸ್ಕ್ರೀನ್ ನೋಡುವ ಸಮಯ ಕಡಿಮೆ ಮಾಡುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. 20-20-20 ನಿಯಮಕ್ಕೆ ಬದ್ಧವಾಗುವಂತೆ ವೃತ್ತಿಪರರಿಗೆ ಸೂಚಿಸಲಾಗುತ್ತದೆ. ಅಂದರೆ, ಪ್ರತಿ 20 ನಿಮಿಷಗಳಿಗೆ ವಿರಾಮ, 20 ಸೆಕೆಂಡುಗಳವರೆಗೆ ಕಣ್ಣು ಮುಚ್ಚುವುದು ಮತ್ತು 20 ಅಡಿ ದೂರದ ವಸ್ತುವಿನ ಮೇಲೆ ಗಮನ ಕೇಂದ್ರೀಕರಿಸುವುದೇ ಈ ನಿಯಮದ ಮಂತ್ರವಾಗಿದೆ.
ಮಕ್ಕಳು ಅತಿಯಾಗಿ ಸ್ಕ್ರೀನ್ ನೋಡುತ್ತಿದ್ದಲ್ಲಿ ವೈದ್ಯರು ಸೂಚಿಸುವ ಕನ್ನಡಕ ಧರಿಸುವುದು ಸೂಕ್ತ. ಪಾಲಕರು ಮಕ್ಕಳು ಹೊರಾಂಗಣ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ನಿಗಾವಹಿಸಬೇಕು. ಕಂಪ್ಯೂಟರ್ ಮೂಲಕವೇ ಕೆಲಸ ನಿರ್ವಹಿಸುವವರು 20–20–20 ನಿಯಮವನ್ನು ತಪ್ಪದೇ ಪರಿಪಾಲಿಸಬೇಕು. ಮಧುಮೇಹ ಮತ್ತು ರಕ್ತದ ಏರೊತ್ತಡ ಇರುವವರು ಕಣ್ಣಿನ ಸಮಗ್ರ ತಪಾಸಣೆಗೆ ಒಳಗಾಗಬೇಕು. ರೆಟಿನಾ ಮತ್ತು ಆಪ್ಟಿಕ್ ನರ್ವ್ ವಿಶ್ಲೇಷಣೆಗೆ ಒತ್ತು ನೀಡಬೇಕು. ಅಲರ್ಜಿಗಳು ಆಗದಂತೆ ನಿಗಾ ವಹಿಸಬೇಕು. ಸನ್‌ಗ್ಲಾಸ್‌ಗಳನ್ನು ಧರಿಸಬೇಕು. ಉಷ್ಣ ತಾಪಮಾನದಲ್ಲಿ, ಕ್ಯಾರ‍್ಯಾಕ್ಟ್ ಮತ್ತು ಸೋಲಾರ್ ರೆಟಿನೋಪತಿ (ರಿಟಿನಾ ಸುಡುವುದು) ಕಾಣಿಸಿಕೊಳ್ಳುವುದನ್ನು ತಡೆಯುವಲ್ಲಿ ಸನ್‌ಗ್ಲಾಸ್‌ಗಳು ಮಹತ್ವದ ಪಾತ್ರ ಬೀರುತ್ತವೆ.
‘ಎಲ್ಲ ವಯಸ್ಸಿನವರಲ್ಲೂ ಆಗಾಗ್ಗೆ ಕಣ್ಣಿನ ತಪಾಸಣೆ ಮಾಡುವುದರಿಂದ ಹಲವು ಕಣ್ಣಿನ ರೋಗಗಳನ್ನು ಪತ್ತೆ ಮಾಡಬಹುದು. ಗ್ಲಾಕೋಮಾ, ಕ್ಯಾಟ್‌ರಾಕ್ಟ್ ಮತ್ತು ರೆಟಿನಾ ಅನಾರೋಗ್ಯಗಳನ್ನು ಸಾಮಾನ್ಯವಾಗಿ ಮೊದಲೇ ಪತ್ತೆ ಮಾಡಬಹುದು. ಆಗಾಗ ನಿಮ್ಮ ಕಣ್ಣುಗಳ ತಪಾಸಣೆ ಮಾಡಿಕೊಳ್ಳುವುದರಿಂದ ಕಣ್ಣಿನ ರಕ್ಷಣೆ ಮಾಡಬಹುದು. ಅಷ್ಟೇ ಅಲ್ಲ, ಆರೋಗ್ಯಕರ ಮತ್ತು ಪ್ರಕಾಶಮಾನ ಸಮಾಜವನ್ನು ರೂಪಿಸುವುದಕ್ಕೆ ನೀವು ಕೊಡುಗೆ ನೀಡಿದಂತಾಗುತ್ತದೆ. ಕಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡಿ, ಸ್ಪಷ್ಟ ದೃಷ್ಟಿ ಮತ್ತು ಸುಧಾರಿತ ಜೀವನ ಮಟ್ಟಕ್ಕೆ ಕಾರಣವಾಗುತ್ತದೆ ಎಂದು ಡಾ. ಅರ್ಚನಾ ಎಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.