ADVERTISEMENT

ಕ್ಷೇಮ– ಕುಶಲ | ನಕಾರಾತ್ಮಕ ಯೋಚನೆಗಳ ಸುಳಿಯಲ್ಲಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
<div class="paragraphs"><p>ಸಾಂದರ್ಭಿಕ&nbsp; ಚಿತ್ರ&nbsp;</p></div>

ಸಾಂದರ್ಭಿಕ  ಚಿತ್ರ 

   

ಮಕ್ಕಳ ಮನಸ್ಸನ್ನು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿಸುವುದು ಅಷ್ಟು ಸುಲಭದ ಮಾತಲ್ಲ. ಮನೆ ಹಾಗೂ ಸುತ್ತಲಿನ ಪರಿಸರದಲ್ಲಿರುವ ನಕಾರಾತ್ಮಕ ನಡವಳಿಕೆಗಳನ್ನು ಮಗು ಬಹುಬೇಗ ಕಲಿತು ಬಿಡುವ ಸಾಧ್ಯತೆಯೇ ಹೆಚ್ಚು. ಯಾಕೆಂದರೆ ಮಗು ನೋಡಿ ಕಲಿಯುವುದೇ ಹೆಚ್ಚು. 

‘ಇದು ಹೀಗಲ್ಲ, ಇದು ತಪ್ಪು’ ಎಂದು ಹೇಳಿದರೆ ಅರ್ಥ ಮಾಡಿಕೊಳ್ಳುವುದಕ್ಕಿಂತ  ಸರಿಯೋ ತಪ್ಪೋ ಎಂದು ಯೋಚಿಸುವಷ್ಟು ಪ್ರಬುದ್ಧರಲ್ಲದ ಮಕ್ಕಳು ಇತರರ ವರ್ತನೆಗಳನ್ನು ಬಹಳ ಸಲೀಸಾಗಿ ಅನುಕರಿಸುತ್ತವೆ. ಪೋಷಕರಾದವರು ಆಗಾಗ್ಗೆ ತಮ್ಮ ನಡವಳಿಕೆಯನ್ನು ಸ್ವವಿಮರ್ಶೆಗೆ ಒಳಪಡಿಸಿಕೊಳ್ಳುವುದು ಅನಿವಾರ್ಯ. ಕಿರುಚಿ ಮಾತನಾಡುವ, ಸದಾ ಬೈಯುವ ಪೋಷಕರ ನಡವಳಿಕೆಗಳು ಮಕ್ಕಳ ಮೃದು ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಜೊತೆಗೆ ಈ ನಡವಳಿಕೆಯನ್ನೆ ಮಾದರಿಯಾಗಿ ತೆಗೆದುಕೊಳ್ಳುತ್ತಾರೆ.  

ADVERTISEMENT

ಇನ್ನು  ಬಣ್ಣ, ರೂಪ, ಆಕಾರ ಕಾರಣಗಳಿಗಾಗಿ ಮಕ್ಕಳಿಗೆ  ನಾವಿಡುವ  ಅಡ್ಡ ಹೆಸರುಗಳು, ಹೀಗಳೆಯುವಿಕೆ, ತೆಗಳುವಿಕೆಯ ವಾತಾವರಣವು ಅವರೊಳಗೆ ನಕಾರಾತ್ಮಕ ಆಲೋಚನೆಗಳಿಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಪದೇ ಪದೇ ‘ನೀನು ಹೀಗೆ; ಕೋಪಿಷ್ಠ, ಹಠವಾದಿ, ಪುಕ್ಕಲ‘ ಎಂದು ನಾವು ಕೊಡುವ ಹಣೆಪಟ್ಟಿಗಳು ಅವರ ಸುಪ್ತಮನಸ್ಸನ್ನು ಅದೇ ದಿಕ್ಕಿನಲ್ಲಿ ಸಾಗುವಂತೆ ಮಾಡಬಲ್ಲವು.  

ಮಕ್ಕಳು ಪುಟಿದೇಳುವ ಅದಮ್ಯ ಶಕ್ತಿ. ಶಿಸ್ತಿನ ಪಾಠ ಕಲಿಸುವ ನೆಪದಲ್ಲಿ ಅವರ ಮೇಲೆ ಹೇರುವ ನಿಯಮಗಳು ಕೆಲವೊಮ್ಮೆ ಆತ್ಮವಿಶ್ವಾಸವನ್ನು ಕುಗ್ಗಿಸಿ, ಭಯವನ್ನು ತುಂಬಬಲ್ಲವು. ನಕಾರಾತ್ಮಕ ಯೋಚನೆಗಳನ್ನು ತುಂಬಿಕೊಂಡ ಮಕ್ಕಳನ್ನು ಮೊದಲಿಗೆ ಗುರುತಿಸಬೇಕು. 

ಗುರುತಿಸುವುದು ಹೇಗೆ?

 ತನ್ನ ಶಕ್ತಿಯ ಬಗ್ಗೆ ತನಗೆ ಅಪನಂಬಿಕೆ; ಏನೇ ಆಟ ಆಡಲು ಹೇಳಿದರೂ, ಸಣ್ಣ ಕೆಲಸ ಹೇಳಿದರೂ ಅದನ್ನು ಮಾಡಲು ಹಿಂಜರಿಯುವುದು. ಗುಂಪಿನಲ್ಲಿದ್ದಾಗಲೂ ಕ್ರಿಯಾಶೀಲವಾಗಿ ಇರಲು ಇಚ್ಛಿಸದೇ ಇರುವುದು, ಪರಿಪೂರ್ಣತೆಯ ಗೀಳು ಬೆಳೆಸಿಕೊಳ್ಳುವುದು, ಯಾರು ಏನು ಅಂದುಕೊಳ್ಳುತ್ತಾರೋ ಅಂದುಕೊಂಡೇ ಕಾಲಹರಣ ಮಾಡಲು ನೋಡುವುದು ಇವೆಲ್ಲವೂ ನಕಾರಾತ್ಮಕ ಆಲೋಚನೆಯ ಪ್ರಭಾವಕ್ಕೆ ಒಳಗಾದ ಮಕ್ಕಳ ಪ್ರಮುಖ ಲಕ್ಷಣಗಳು. 

ಎಂಥದ್ದೇ ಪರಿಸ್ಥಿತಿಯಲ್ಲಿಯೂ ಅಪಜಯದ ಬಗ್ಗೆಯೇ ಹೆಚ್ಚು ಗಮನವಿಡುವುದು. ಫೇಲಾದರೆ, ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಹೋದರೆ, ಈ ಆಟ ಆಡಲು ಆಗದೇ ಇದ್ದರೆ ಹೀಗೆ ಎಲ್ಲದರಲ್ಲಿಯೂ ಸಂಶಯಾತ್ಮಕ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು ಆಗದೇ ಕೈ ಚೆಲ್ಲುವುದು.  ಫಲಿತಾಂಶ ಏನಾಗುವುದೋ ಎಂದು ಅವಕಾಶಗಳು ಎದುರಾದಾಗೆಲ್ಲ ಕೈಕಟ್ಟಿ ಕುಳಿತುಬಿಡುವ ಮಕ್ಕಳ ಬದುಕನ್ನು ಈ ನಕಾರಾತ್ಮಕ ಆಲೋಚನೆಗಳು ನಿರ್ದೇಶಿಸುತ್ತಿರುತ್ತವೆ.

ಬೇರೆ ಬೇರೆ ಕಾರಣಗಳಿಂದ ನಕಾರಾತ್ಮಕ ಆಲೋಚನೆಗಳನ್ನು ತುಂಬಿಕೊಂಡ ಮಕ್ಕಳನ್ನು ಅದರಿಂದ ಪಾರು ಮಾಡಲು ಪೋಷಕರಾದವರು ಮೊದಲು  ಮನಸ್ಸು ಮಾಡಬೇಕು. ಸೋಮಾರಿ ಎಂದು ಹೀಗಳೆಯದೆ ಯಾವ ಕಾರಣಕ್ಕೆ ಮಗು ಹಿಂಜರಿಯುವ ಸ್ವಭಾವ ಬೆಳೆಸಿಕೊಂಡಿದೆ ಎಂಬುದನ್ನು ಅರಿಯಬೇಕು.

ಸವಾಲುಗಳು ದೊಡ್ಡದಿರಲಿ, ಸಣ್ಣದಿರಲಿ ಅದನ್ನು ಎದುರಿಸುವಂತೆ ಸದಾ ಪ್ರೇರೇಪಿಸಬೇಕು. ತಪ್ಪು ಆದರೆ ಆಗಲಿ. ಸರಿ ಮಾಡಿಕೊಂಡರಾಯ್ತು. ಪ್ರಯತ್ನವೇ ಮಾಡದೇ ಹೋದರೆ ಸಮಯ ವ್ಯರ್ಥವಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಮಕ್ಕಳಿಗೆ ಮನದಟ್ಟು ಮಾಡಬೇಕು. ಪೋಷಕರ ನಡವಳಿಕೆ ಸದಾ ಇದನ್ನೇ ಪುಷ್ಟೀಕರಿಸುವಂತೆ ಇರಲಿ. 

ಮಕ್ಕಳು ಮಾಡುವ ಸಣ್ಣ ಕೆಲಸಕ್ಕೂ ಪ್ರಶಂಸೆ ಸಿಗುವಂತೆ ನೋಡಿಕೊಳ್ಳಿ. ಮಗು ಊಟಕ್ಕೆ ಬಡಿಸುವಾಗ ಅದರ ಕೈಯಿಂದ ನೀರಿನ ಲೋಟವೋ, ಸಾರಿನ ಪಾತ್ರೆಯೋ ಜಾರಿ ಬಿದ್ದರೆ ಜೋರಾಗಿ ಕೂಗದೇ, ಪರವಾಗಿಲ್ಲ, ಇಷ್ಟಾದರೂ ಪ್ರಯತ್ನ ಮಾಡಿದೆಯಲ್ಲ ‘ಜಾಣ, ಜಾಣೆ‘ ಎಂದು ಕೊಂಡಾಡಿ.

ಮೊದಲೇ ಹೇಳಿದಂತೆ ನೋಡಿ ಕಲಿಯುವುದರಿಂದ, ಮಕ್ಕಳಿಗಾಗಿಯಾದರೂ ಪೋಷಕರು ತಮ್ಮ ದುರ್ವತನೆಗಳನ್ನು ಬದಲಿಸಿಕೊಳ್ಳಲು ಕಿಂಚಿತ್ತಾದರೂ ಮನಸ್ಸು ಮಾಡಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.