ADVERTISEMENT

ಕಂಪ್ಯೂಟರ್‌ ನೋಡಿ ತಲೆನೋವು ಬರುತ್ತಿದೆಯೇ? ಇಲ್ಲಿದೆ ವೈದ್ಯರ ಸಲಹೆ

ಡಾ.ಶೀಲಾ ಚಕ್ರವರ್ತಿ
Published 20 ಏಪ್ರಿಲ್ 2022, 9:28 IST
Last Updated 20 ಏಪ್ರಿಲ್ 2022, 9:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರಲ್ಲಿ ತಲೆ ನೋವು ಸಾಮಾನ್ಯವಾಗಿಬಿಟ್ಟಿದೆ. ಬದಲಾದ ಜೀವನ ಕ್ರಮ, ಒತ್ತಡ, ಇತರೆ ಆರೋಗ್ಯ ಸಮಸ್ಯೆಗಳು ಪ್ರಮುಖ ಕಾರಣಗಳಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾರಣಗಳಲ್ಲಿ ಕಂಪ್ಯೂಟರ್‌ ಹಾಗೂ ಮೊಬೈಲ್‌ ಬಳಕೆ ಮುಂಚೂಣಿಗೆ ಬಂದಿದೆ. ಕೋವಿಡ್‌ ಬಳಿಕ ಬಹುತೇಕರು ವರ್ಕ್‌ ಫ್ರಂ ಹೋಮ್‌ ಹಾಗೂ ಮಕ್ಕಳು ಆನ್‌ಲೈನ್‌ ಕ್ಲಾಸಿಗೆ ಅನಿವಾರ್ಯವಾಗಿ ಒಗ್ಗಿಕೊಳ್ಳುವಂತಾಗಿತ್ತು. ಬೆಳಗಿನಿಂದ ರಾತ್ರಿವರೆಗೂ ಕಂಪ್ಯೂಟರ್‌ ಮುಂದೆ ಕುಳಿತುಕೊಳ್ಳುವ ಜನರಲ್ಲಿ ತಲೆನೋವು ಅದರಲ್ಲೂ ಮೈಗ್ರೇನ್‌ ಹೆಚ್ಚಳವಾಗುತ್ತಿರುವ ಬಗ್ಗೆ ಅಧ್ಯಯನಗಳಲ್ಲಿ ಕಂಡು ಬರುತ್ತಿದೆ. ಪ್ರಪಂಚದ ಜನಸಂಖ್ಯೆಯಲ್ಲಿ ಶೇಕಡವಾರು 52ರಷ್ಟು ಜನ ಒಂದಿಲ್ಲೊಂದು ತಲೆ ನೋವನ್ನು ಅನೂಭವಿಸುತ್ತಿದ್ದಾರೆ. ಇದರಲ್ಲಿ ಶೇ. 14 ರಷ್ಟು ಮೈಗ್ರೇನ್ ‌ತಲೆನೋವಾಗಿದೆ. ಸಂಶೋಧನೆ ಪ್ರಕಾರ, ತಲೆನೋವು ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಕಾಣಿಸಿಕೊಳ್ಳಲಿದೆ. ಅದರಲ್ಲೂ 20 ರಿಂದ 65 ವರ್ಷದೊಳಗಿನವರಲ್ಲೇ ಹೆಚ್ಚು ತಲೆನೋವು ಕಾಣಿಸಿಕೊಳ್ಳುತ್ತಿದೆ. ಹಾಗಿದ್ದರೆ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವವರಲ್ಲಿ ತಲೆನೋವು ಕಾಣಿಸಿಕೊಳ್ಳಲು ಕಾರಣವೇನು? ಹಾಗೂ ಇದಕ್ಕೆ ಪರಿಹಾರ ಏನು ಎಂಬುದನ್ನು ಫೊರ್ಟಿಸ್‌ ಆಸ್ಪತ್ರೆಯ ಇಂಟರ್ನಲ್ ಮೆಡಿಸನ್ ನಿರ್ದೇಶಕಿ ಡಾ. ಶೀಲಾ ಚಕ್ರವರ್ತಿ ವಿವರಿಸಿದ್ದಾರೆ.

ಕಂಪ್ಯೂಟರ್‌ ನೋಡುವುದರಿಂದ ತಲೆ ನೋವು ಹೆಚ್ಚಳ: ಕೆಲಸ ಮಾಡುವವರು ಸಾಮಾನ್ಯವಾಗಿ ನಿತ್ಯ 8 ರಿಂದ 9 ಗಂಟೆಗಳ ಕಾಲ ಕಂಪ್ಯೂಟರ್‌ ಮುಂದೆ ಕುಳಿತಿರುತ್ತಾರೆ. ಕೆಲವೊಮ್ಮೆ ಕೆಲಸದ ಮಧ್ಯೆ ಬ್ರೇಕ್‌ ತೆಗೆದುಕೊಂಡರೂ ಆ ವೇಳೆಯೂ ಮೊಬೈಲ್‌ ನೋಡುವ ಮೂಲಕ ಮತ್ತದೇ ತಪ್ಪನ್ನು ಮಾಡುತ್ತಾರೆ. ಇದರಿಂದ ಕಣ್ಣಿಗೆ ಹೆಚ್ಚು ದನಿವಾಗಲಿದೆ. ಕಣ್ಣಿನ ನರಗಳು ನೇರ ಮೆದುಳಿಗೆ ಹೊಂದಿಕೊಂಡಿರುವುದರಿಂದ ತಲೆನೋವಿಗೆ ಇದು ಪ್ರಮುಖ ಕಾರಣವಾಗಲಿದೆ. ನೀವು ಹೆಚ್ಚು ಮೊಬೈಲ್‌ ಹಾಗೂ ಕಂಪ್ಯೂಟರ್‌ ಬಳಕೆ ಇದ್ದರೆ ಈ ತಲೆನೋವು ಮೈಗ್ರೇನ್‌ಗೂ ತಿರುಗುವ ಸಾಧ್ಯತೆ ಹೆಚ್ಚು.

ಮಕ್ಕಳಲ್ಲಿ ಹೆಚ್ಚುತ್ತಿದೆ ಮೈಗ್ರೇನ್‌: ಮತ್ತೊಂದೆಡೆ ಮಕ್ಕಳು ಸಹ ಮೈಗ್ರೇನ್‌ನಂಥ ತಲೆನೋವನ್ನು ಅನುಭವಿಸುವ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣವೆಂದರೆ ಆನ್‌ಲೈನ್‌ ಕ್ಲಾಸ್.‌ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿಯೇ ಓದುವಂತಾಗಿತ್ತು. ಇದರಿಂದ ಶೇ.3೦ರಷ್ಟು ಮಕ್ಕಳು ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಣ್ಣುಗಳ ತುರಿಕೆ, ದೃಷ್ಟಿ ಮಂದವಾಗುವುದು ಮತ್ತು ದೂರದೃಷ್ಟಿಯ ಪ್ರಕರಣಗಳು ಸಹ ಹೆಚ್ಚಳವಾಗಿವೆ. ಇನ್ನೂ ಕೆಲವು ಮಕ್ಕಳಲ್ಲಿ ಅತಿಯಾದ ತಲೆ ನೋವು, ಮೈಗ್ರೇನ್‌ ಸಹ ಕಾಣಿಸಿಕೊಂಡಿರುವುದು ಕಂಡು ಬಂದಿದೆ.

ADVERTISEMENT

ಕಂಪ್ಯೂಟರ್‌ ನೋಡುವವರಲ್ಲಿ ಹೆಚ್ಚುತ್ತಿರುವ ತಲೆ ನೋವಿಗೆ ಶಾಶ್ವತ ಪರಿಹಾರ ಇಲ್ಲದಿದ್ದರೂ ತಲೆ ನೋವನ್ನು ನಿಯಂತ್ರಿಸಲು ಕೆಲ ಸಲಹೆಗಳಿವೆ.

ಆಂಟಿ ರೇಡಿಯೇಷನ್‌ ಕಂಪ್ಯೂಟರ್‌ ಗ್ಲಾಸ್‌ ಕಂಪ್ಯೂಟರ್‌ನಲ್ಲಿ ಹೆಚ್ಚು ಸಮಯ ಕಳೆಯುವವರು ಕಡ್ಡಾಯವಾಗಿ ಆಂಟಿ ರೇಡಿಯೇಷನ್‌ ಕಂಪ್ಯೂಟರ್‌ ಗ್ಲಾಸ್‌ನನ್ನು ವೈದ್ಯರ ಸಲಹೆ ಮೇರೆಗೆ ಪಡೆಯಿರಿ. ಇದರಿಂದ ಕಂಪ್ಯೂಟರ್‌ ಸ್ಕ್ರೀನ್‌ ಮೇಲಿನ ಬ್ರೈಟ್‌ನೆಸ್‌ನಿಂದ ನಿಮ್ಮ ಕಣ್ಣಿಗೆ ಆಗುವ ಹಾನಿಯನ್ನು ತಡೆಯುವ ಜೊತೆಗೆ ತಲೆ ನೋವನ್ನು ನಿಗ್ರಹಿಸಲು ಸಾಧ್ಯವಾಗಲಿದೆ.

30ನಿಮಿಷಗಳಿಗೊಮ್ಮೆ ಬ್ರೇಕ್‌ ತೆಗೆದುಕೊಳ್ಳಿ: 9 ಗಂಟೆಗಳ ನಿರಂತರವಾಗಿ ಕೆಲಸ ಮಾಡುವವರು ಕನಿಷ್ಠ 30 ನಿಮಿಷಗಳಿಗೊಮ್ಮೆ ಬ್ರೇಕ್‌ ತೆಗೆದುಕೊಳ್ಳಬೇಕು. ಕುಳಿತಿರುವ ಜಾಗದಿಂದ ಎದ್ದು ಓಡಾಡುವುದು ಒಳಿತು. ಇದರಿಂದ ದೇಹ ಹಾಗೂ ಕಣ್ಣುಗಳ ಮೇಲಾಗುವ ಒತ್ತಡವನ್ನು ನಿಯಂತ್ರಿಸಬಹುದು.

ಬ್ರೈಟ್‌ನೆಸ್‌ ಬಗ್ಗೆ ಗಮನವಿರಲಿ: ಕೆಲವರು ತಮ್ಮ ಕಂಪ್ಯೂಟರ್‌ ಅಥವಾ ಮೊಬೈಲ್‌ ಸ್ಕ್ರೀನ್‌ನ ಬ್ರೈಟ್‌ನೆಸ್‌ನಲ್ಲಿ ಅನವಶ್ಯಕವಾಗಿ ಹೆಚ್ಚಾಗಿ ಇಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರು ತೀರು ಕಡಿಮೆ ಇಡುತ್ತಾರೆ. ಇದು ಅತ್ಯಂತ ಅಪಾಯಕಾರಿ. ಅತಿ ಹೆಚ್ಚು ಬೆಳಕು ಹಾಗೂ ಕಡಿಮೆ ಬೆಳಕು ಎರಡೂ ಕಣ್ಣಿಗೆ ಒತ್ತಡ ಹಾಕಿದಂತೆ. ಹೀಗಾಗಿ ವಾತಾವರಣಕ್ಕೆ ಅನುಗುಣವಾಗಿ ಸ್ಕ್ರೀನ್‌ ಬ್ರೈಟ್‌ನೆಸ್‌ ಇಟ್ಟುಕೊಳ್ಳುವುದು ಮುಖ್ಯ.

ವಿಶ್ರಾಂತಿ: ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು ಕಣ್ಣೀನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಕಣ್ಣಿಗೆ ದಣಿವಾದರೆ ಅದರಿಂದ ಮೊದಲು ಆಗುವ ತೊಂದರೆಯೇ ತಲೆನೋವು. ಹೀಗಾಗಿ ಕೆಲಸ ಮುಗಿದ ಬಳಿಕ ನೀವು ಮಲಗುವ ಅಥವಾ ವಿಶ್ರಾಂತಿ ಪಡೆಯುವುದನ್ನು ರೂಢಿಸಿಕೊಳ್ಳಿ.

ಮಾತ್ರೆಗಳ ಹವ್ಯಾಸ ಬೇಡ: ಕೆಲವರು ಸಣ್ಣ ತಲೆ ನೋವಿಗೂ ಮಾತ್ರೆಗಳನ್ನು ತೆಗೆದುಕೊಳ್ಳುವ ಹವ್ಯಾಸ ಹೊಂದಿರುತ್ತಾರೆ. ಇದು ಅತ್ಯಂತ ಅಪಾಯಕಾರಿ. ಮಾತ್ರೆ ತೆಗೆದುಕೊಳ್ಳುವುದರಿಂದ ತಲೆ ನೋವು ನಿವಾರಣೆಯಾಗಬಹುದು ಆದರೆ ಅದರಿಂದ ಭವಿಷ್ಯದಲ್ಲಿ ಇದರಿಂದ ಸೈಡ್‌ಎಫೆಕ್ಟ್‌ ಉಂಟಾಗಬಹುದು. ಹೀಗಾಗಿ ಮಾತ್ರೆ ತೆಗೆದುಕೊಳ್ಳುವ ಬದಲು ನಿಮ್ಮ ತಲೆನೋವು ಯಾವ ರೀತಿಯದ್ದು ಎಂಬುದನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಪಡೆಯಿರಿ ಅಥವಾ ಮನೆ ಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಿ.

ವೈದ್ಯರನ್ನು ಭೇಟಿಮಾಡಿ: 72 ಗಂಟೆಗೂ ಮೀರಿದರೂ ನಿಮ್ಮಲ್ಲಿ ತಲೆನೋವು ಹಾಗೇ ಉಳಿದುಕೊಂಡಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಕೂಡಲೇ ವೈದ್ಯರನ್ನು ಭೇಟಿ ಮಾಡಿ ಇದಕ್ಕೆ ಕಾರಣ ಹಾಗೂ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.