ADVERTISEMENT

ಸಹಜ ಸೌಂದರ್ಯಕ್ಕೆ ಸರಳ ಸಾಧನಗಳು

ಡಾ.ವಿಜಯಲಕ್ಷ್ಮಿ ಪಿ.
Published 9 ಮೇ 2022, 19:30 IST
Last Updated 9 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಅಜ್ಜೀ...’ ಅಂತಾ ಕೂಗ್ತಾ ಬಂದ್ಲು ಶ್ವೇತಾ. ಆಜ್ಜೀನ ನೋಡಿ ಪ್ರಶ್ನೆ ಕೇಳಕ್ಕೆ ಪ್ರಾರಂಭ ಮಾಡಿದಳು.

‘ಅಜ್ಜೀ ನಿನ್ನ ಸೌಂದರ್ಯದ ಗುಟ್ಟೇನು? ಚರ್ಮದ ಕಾಂತಿ ಇಷ್ಟು ವರ್ಷ ಆದ್ರೂ ಚೆನ್ನಾಗಿರೋದು ಹೇಗೆ? ದೇವಸ್ಥಾನಕ್ಕೆಲ್ಲಾ ನಡ್ಕೊಂಡೆ ಹೋಗಿ ಬರ್ತೀಯಾ. ಕಾಲುನೋವು, ಗಂಟುನೋವು ಇಲ್ಲವಾ? ಕಣ್ಣಿನಲ್ಲೂ ಹೊಳಪಿದೆ. ಇದು ಹೇಗೆ ಸಾಧ್ಯ? ಮನೆಗೆ ಬಂದವರನ್ನೆಲ್ಲಾ ಉಪಚಾರ ಮಾಡ್ತೀಯ ಬೇಜಾರಾಗಲ್ವಾ ನಿನಗೆ? ಈ ಬಿಸಿಲಲ್ಲೂ ಸುಸ್ತಾಗದೆ ಹೇಗೆ ಕೆಲಸ ಮಾಡ್ತೀಯಾ?’ ಅಂತಾ.

ಒಂದೇ ಉಸಿರಿನಲ್ಲಿ ಕೇಳಿದ ಪ್ರಶ್ನೆಗೆ, ಸ್ವಲ್ಪ ಸುಧಾರಿಸಿಕೋ ಅಂತಾ ಹೇಳಿ ಅಜ್ಜಿ ‘ಈವಾಗ್ಯಾಕೆ ನಿನಗೆ ಈ ಪ್ರಶ್ನೆ ಬಂತು?’ ಅಂತಾ ಕೇಳಿದರು. ಅದಕ್ಕವಳು ‘ಬೇಸಿಗೆಯಲ್ಲಿ ಮೈಯೆಲ್ಲಾ ಉರಿ ಬರತ್ತೆ, ಚಳಿಗಾಲದಲ್ಲಿ ಮೈಯೆಲ್ಲಾ ಒಡೆದು ಒರಟಾಗತ್ತೆ, ಹಾಗೆ ಚಳಿಗಾಲದಲ್ಲಿ ಗಂಟುನೋವು ಬಂದರೆ, ಬೇಸಿಗೆಯಲ್ಲಿ ಬರುವ ನೋವಿನ ಜೊತೆ ಕಟಕಟಾಂತ ಶಬ್ದಾನೂ ಬರತ್ತೆ. ಹಾಗೆ ಬೇಸಿಗೆಯಲ್ಲಿ ಉಷ್ಣ ಆಗಿ ಕಣ್ಣು ಉರಿ ಕೆಂಪಾಗೋದು ಎಲ್ಲಾ ಆಗತ್ತೆ, ತಲೆನೋವು ಬರತ್ತೆ. ಇದನ್ನೆಲ್ಲಾ ಸುಧಾರಿಸಿಕೊಂಡು ನಮ್ಮ ಸೌಂದರ್ಯ ಕಾಪಾಡಿಕೊಳ್ಳೋಕೆ ನಾವು ಏನೇನೋ ಮಾಡ್ಕೋಳ್ತಾನೇ ಇರ್ತೀವಿ, ಆದರೆ ಬ್ಯೂಟಿ ಪಾರ್ಲರ್‌ಗಳು ಇಲ್ಲದಿದ್ದ ಕಾಲದಲ್ಲಿ ನೀವು ಏನು ಮಾಡ್ತಾ ಇದ್ರೀ ಅನ್ನೋ ಕುತೂಹಲ ಅಷ್ಟೇನೆ’ ಅಂದ್ಲು.

ADVERTISEMENT

ಅದಕ್ಕೆ ಅಜ್ಜಿ, ‘ನೋಡಮ್ಮಾ ಇದಕ್ಕೆಲ್ಲಾ ನಮ್ಮ ಕಾಲದ ಶಿಸ್ತಿನ ಜೀವನ, ಶಿಸ್ತಿನ ಆಹಾರಾನೇ ಕಾರಣ. ಮನೆಯವರೆಲ್ಲಾ ಸೂರ್ಯ ಹುಟ್ಟೋದಕ್ಕೆ ಒಂದು ಗಂಟೆ ಮುಂಚೇನೆ ಏಳ್ತಾ ಇದ್ವಿ. ಮನೆ ಗುಡಿಸಿ, ಒರೆಸಿ, ಬಾವಿಯಿಂದ ನೀರು ಸೇದಿ ತುಂಬಿ, ಬಾಗಿಲಿಗೆ ನೀರು ಹಾಕೋದು, ರಂಗೋಲಿ ಹಾಕುವ ಹೊತ್ತಿಗೆ ನಮ್ಮ ದೇಹಕ್ಕೆ ಒಂದಿಷ್ಟು ವ್ಯಾಯಾಮ ಆಗೋದು. ಬೆಳಗಿನ ಜಾವದ ಒಳ್ಳೆ ಗಾಳಿನೂ ಸಿಗೋದು, ನಿಧಾನವಾಗಿ ಎಳೆ ಬಿಸಿಲೂ ಮೈಗೆ ತಾಗೋದು. ಅದೇನೋ ನೀವು ಹೇಳ್ತೀರಲ್ಲಾ ಆಕ್ಸಿಜನ್ನು, ಓಜೋನು, ವಿಟಮಿನ್ನು ಅಂತಾ ಅದೆಲ್ಲಾ ಬೆಳಗ್ಗೆ ಬೇಗ ಎದ್ದು ಸೂರ್ಯನ ಎಳೇ ಬಿಸಿಲಲ್ಲಿ ಕೆಲಸ ಮಾಡೋದ್ರಿಂದಾನೇ ಬರ್ತಾ ಇತ್ತು. ಅನುಕೂಲ ಇದ್ದೋವ್ರು ಮೈಗೆ ದಿನಾ ಎಣ್ಣೆ ಹಚ್ಚಿ ಹದಾ ಬಿಸಿನೀರಿನಿಂದ ಸ್ನಾನ ಮಾಡ್ತಾ ಇದ್ವಿ, ಕಡೇ ಪಕ್ಷ ಶುಕ್ರವಾರ ಮಂಗಳವಾರನಾದ್ರೂ ತಲೆಗೆ, ಮೈಗೆ ಎಲ್ಲಾ ಚೆನ್ನಾಗಿ ಎಣ್ಣೆ ಹಚ್ಚಿ ಸ್ನಾನ ಮಾಡ್ತಾ ಇದ್ವಿ.’

‘ಯಾವ ಎಣ್ಣೆ ಹಚ್ತಾ ಇದ್ರಿ?’

‘ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ ಅಥವಾ ಹರಳೆಣ್ಣೆ. ತುಂಬಾ ಉಷ್ಣ ಆಗಿದ್ರೆ ಹರಳೆಣ್ಣೆನೋ, ಇಪ್ಪೆ ಎಣ್ಣೆನೋ, ಹಚ್ತಾ ಇದ್ವಿ; ಶೀತ ಜಾಸ್ತಿ ಇದ್ರೆ, ವಿಪರೀತ ಸೀನು ಬರ್ತಾ ಇದ್ರೆ, ಎಳ್ಳೆಣ್ಣೆ ಬಿಸಿ ಮಾಡಿ ಅಥವಾ ಸಾಸಿವೆ, ಒಮ, ಜೀರಿಗೆ ಹಾಕಿ ಎಳ್ಳೆಣ್ಣೆ ಒಗ್ಗರಣೆ ಮಾಡಿ, ಹದಾ ಬಿಸಿ ಇರುವಾಗ ತಲೆಗೆ ಹಚ್ಚೆ, ಮುಕ್ಕಾಲು ಗಂಟೆ ನೆನೆದು ಮತ್ತೆ ಸೀಗೆಕಾಯಿಪುಡಿನೋ ಕಡ್ಲೆಹಿಟ್ಟೋ ಹಾಕಿ ಸ್ನಾನ ಮಾಡ್ತಾ ಇದ್ವಿ. ಮೈಗೂ ಸೀಗೆಕಾಯಿಪುಡಿನೇ ಹಚ್ತಾ ಇದ್ದಿದ್ದು. ಶೀತ ಆದಾಗ ಮಾತ್ರಾ ಬಜೆಪುಡಿನೋ, ಅಗರಿನ ಪುಡಿನೋ ಸೇರಿಸಿ ಹಚ್ಚಿದ್ರೆ ಶೀತ ಎಲ್ಲಾ ಕಡಿಮೆ ಅಗ್ತಾ ಇತ್ತು. ತುಂಬಾ ಥಂಡಿ, ಸೀನು ಉರಿಶೀತದ ತರಹ ಆಗಿದ್ರೆ ಎಳ್ಳೆಣ್ಣೆಗೆ ತುಳಸಿ ಹಾಕಿ ಕಾಯಿಸಿ ಹಚ್ಕೋತಾ ಇದ್ವಿ, ಇದರಿಂದ ಬೇಸಿಗೆಯಲ್ಲಿ ಬರೋ ಸೀನು, ತಲೆನೋವು ಎಲ್ಲಾ ಕಡಿಮೆ ಆಗ್ತಾ ಇದ್ವು. ಅಲ್ಲದೆ ಮೈಗೆ ಎಣ್ಣೆ ಹಚ್ಚೋದ್ರಿಂದ ಸಂದುಗಳಲ್ಲಿ ಜಿಡ್ಡಿನಂಶ ಸೇರಿ ಗಂಟುನೋವು ಬರ್ತಾನೇ ಇರಲಿಲ್ಲ. ಆದ್ರೆ ನಮಜ್ಜಿಗೆ ಮಡಿಕೇಲಿ ಇಟ್ಟಿರೋ ಮೊಸರು ಅಂದ್ರೆ ಇಷ್ಟ, ಅದನ್ನ ತಿಂದಾಗಲೆಲ್ಲಾ ಅವರಿಗೆ ಎಲ್ಲಾ ಸಂದುಗಳಲ್ಲು ಮುಖ್ಯವಾಗಿ ಮಂಡಿನಲ್ಲಿ ಊತ ಬಂದು ಬಿಡೋದು. ಅದಕ್ಕೆ ನಮ್ಮ ತಾತಾನೇ ಪಂಡಿತರಲ್ಲಾ! ಅದೇನೋ ಪುಡಿ ಕೊಟ್ಟು ಶುಂಠಿ ಅರೆದು ಹಚ್ತಾ ಇದ್ರು, ಕೆಲವು ಸಲ ಬೆಳ್ಳುಳ್ಳಿನೂ ಸೇರಿಸ್ತಾ ಇದ್ರು, ಒಂದೆರಡು ದಿನದಲ್ಲೇ ಊತ ನೋವು ಎಲ್ಲಾ ಹೊರಟು ಹೋಗ್ತಾ ಇತ್ತು. ಈಗ ಅದಕ್ಕೆಲ್ಲಾ ಎಲ್ಲಿ ಪುರುಸೊತ್ತಿರತ್ತೆ, ಎಲ್ಲಾದಕ್ಕು ಒಂದು ಮಾತ್ರೆ ತೊಗೊಂಡ್ರೆ ಆಯ್ತು.’

‘ಕಣ್ಣುರಿತಿದ್ರೆ, ರೆಪ್ಪೆ ಮೇಲೆ ಹರಳೆಣ್ಣೆನೋ ತುಪ್ಪಾನೋ, ಆಥವಾ ಬೆಣ್ಣೆನೋ ಹಚ್ಚಿದ್ರೆ ಕಡಿಮೆ ಆಗ್ತಾ ಇತ್ತು, ಮತ್ತೆ ನಿತ್ಯ ಕಣ್ಣಿಗೆ ಕಾಡಿಗೆ ಹಚ್ಚುತ್ತಾ ಇದ್ವಿ. ಹೊನಗೊನ್ನೆಸೊಪ್ಪಿನ ರಸದಲ್ಲಿ, ನಂದಿಬಟ್ಟಲು ಹೂವಿನ ರಸದಲ್ಲಿ ಕರಿ ಕಟ್ಟಿಸಿ, ಬೆಣ್ಣೆ, ತುಪ್ಪ ಅಥವಾ ಹೊಂಗೆ ಎಣ್ಣೆ, ಹೊನ್ನೆಣ್ಣೆನಲ್ಲಿ ಕರಿಕಲಸಿ ಹಚ್ತಾ ಇದ್ವಿ. ಇದರಿಂದ ಕಣ್ಣು ಎಷ್ಟು ತಂಪಾಗೋದು ಗೊತ್ತಾ. ಹಾಗೆ ಕಣ್ಣು ನೆವೆ ಆದ್ರೆ ಗುಲಾಬಿನೀರಿನಲ್ಲಿ ಕಣ್ಣು ತೊಳ್ಕೋಬಹುದು ಅಥವಾ ಕೆಮ್ಮಣ್ಣನ್ನ ಹಾಲಿನಲ್ಲಿ ಕಲೆಸಿ ರೆಪ್ಪೆ ಮೇಲೆ ಹಚ್ಚಬಹುದು ಅಂತಾ ನಮ್ಮಮ್ಮ ಹೇಳೋಳು.’

‘ಅಜ್ಜೀ ಕಾಡಿಗೆ ನೀವೇ ಮಾಡ್ತಾ ಇದ್ರಾ?’

‘ಹ್ಞೂ... ಹೌದು. ಚರ್ಮ ಹೇಗೆ ಇಷ್ಟು ಮೃದುವಾಗಿದೆ ಅಂದೆ ಅಲ್ವಾ? ಯಾಕಂದ್ರೆ, ಸೀಗೆಕಾಯಿಯ ಜೊತೆ, ಗಂಧ, ಚಂದನ, ಅರಿಸಿನ, ಕಚೋರ ಇವುಗಳನ್ನೆಲ್ಲಾ ಒಟ್ಟಿಗೆ ಪುಡಿಮಾಡಿ ಮೈಗೆ ತಿಕ್ಕಿ ಸ್ನಾನ ಮಾಡೊದ್ರಿಂದ ಚರ್ಮರೋಗಗಳು ಬರೋಲ್ಲ, ಇರುವ ರೋಗಗಳನ್ನು ಗುಣಮಾಡತ್ತೆ. ಬಿಸಿಲಿಗೆ ಹೋದ್ರೂ ಚರ್ಮ ಕಪ್ಪಾಗೋದೂ ಇಲ್ಲ, ಒಣಗೋದೂ ಇಲ್ಲ. ಮೃದುವಾಗೂ ಇರತ್ತೆ. ಏನೇನೋ ಲೋಶನ್ನೂ ಬೇಕಾಗಿಲ್ಲ.’

‘ನನಗಂತೂ ಈ ಸೆಕೆಗೆ ಫ್ಯಾನ್ ಹಾಕ್ಕೊಂಡ್ರೂ ನಿದ್ದೆ ಬರೋಲ್ಲ ಅಜ್ಜಿ. ನಿಮ್ಮ ಕಾಲದಲ್ಲಿ ಸೆಕೆನೇ ಇರಲಿಲ್ವಾ?’

‘ಇರೋದು, ಇರದೇ ಏನು? ನಿದ್ದೇನೇ ಬರೋಲ್ಲ ಅಂತಾ ಆದಾಗ ಅಂಗಾಲಿಗೆ ತುಪ್ಪ ಹಚ್ಚಿ, ಹದಾ ಬಿಸಿನೀರಿನಲ್ಲಿ ಕಾಲು ಇಟ್ಕೋತಾ ಇದ್ವಿ. ಆಗ ಬೇಗ ನಿದ್ರೆ ಬರೋದು. ಇದನ್ನೆಲ್ಲಾ ಹೇಳಿದ್ರೆ ಯಾರು ನಂಬ್ತಾರೆ?’

ಒಳ್ಳೊಳ್ಳೆ ಟಿಪ್ಸ್ ಕೊಟ್ಟಿದ್ದಕ್ಕೆ ಅಜ್ಜಿಗೆ ಥ್ಯಾಂಕ್ಸ್ ಹೇಳಿ ಖುಷಿಯಿಂದ ಮನೆಗೆ ಹೋದ್ಲು, ಶ್ವೇತಾ.⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.