ADVERTISEMENT

ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..

ಕ್ರೋಧಿಯ ರವಿ ಕಿರಣಗಳು ದಿನೇ ದಿನೇ ಪ್ರಖರವಾಗುತ್ತಿವೆ. ಬೇಸಿಗೆಯಲ್ಲಿ ಕಾಯಿಲೆಗಳ ತಡೆ ಮತ್ತು ರಸಾದಿ ಧಾತುಗಳ ಮರುಪೂರಣದ, ಎಂದರೆ ‘ರೀಹೈಡ್ರೇಷನ್’ ಹಾದಿಗಳಿಲ್ಲಿವೆ

ಡಾ.ಸತ್ಯನಾರಾಯಣ ಭಟ್ಟ ಪಿ
Published 6 ಮೇ 2024, 16:25 IST
Last Updated 6 ಮೇ 2024, 16:25 IST
<div class="paragraphs"><p>ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..</p></div>

ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..

   

ಕ್ರೋಧಿಯ ರವಿ ಕಿರಣಗಳು ದಿನೇ ದಿನೇ ಪ್ರಖರವಾಗುತ್ತಿವೆ. ಬೇಸಿಗೆಯಲ್ಲಿ ಕಾಯಿಲೆಗಳ ತಡೆ ಮತ್ತು ರಸಾದಿ ಧಾತುಗಳ ಮರುಪೂರಣದ, ಎಂದರೆ ‘ರೀಹೈಡ್ರೇಷನ್’ ಹಾದಿಗಳಿಲ್ಲಿವೆ


* ಬೆಲ್ಲಪಾನಕ: ಕಾಳು ಮೆಣಸುಪುಡಿಯ ಪ್ರಮಾಣಕ್ಕೆ ಅನುಗುಣವಾಗಿ ಶುದ್ಧ ನೀರಿಗೆ ಬೆರಸಿರಿ. ರಾಸಾಯನಿಕ ರಹಿತ ಬೆಲ್ಲವನ್ನು ಕೂಡಿಸಿರಿ. ಶುಧ್ಧ ನೀರು ಪ್ರಮಾಣಕ್ಕನುಗುಣ ಸೇರಿಸಿ. ಜಾತ್ರೆಯ ಜನ ಸಂದಣಿಯಿರಲಿ. ಮನೆ ಬಳಕೆಯ ಮಂದಿಗಾಗಲಿ. ಕಡಿಮೆ ಖರ್ಚಿನ ದಿನದಿನದ ಪಾನಕ ಸಿಧ್ಧ. ಕಫದ ಕಾಯಿಲೆ, ಗ್ಯಾಸ್ಟ್ರಿಕ್ ಸಂಗಡ ದಣಿವಡಗಿಸುವ ದ್ರವಾಹಾರ ಸಿಧ್ಧ.

ADVERTISEMENT


* ಶುಂಠಿ, ಲಿಂಬೆ ಸಹಿತ ಇಕ್ಷು ರಸ: ಕಬ್ಬಿ ಹಾಲು ತಾಜಾ ಇರಲಿ. ತಕ್ಷಣ ಎನರ್ಜಿ. ಮೂತ್ರಪ್ರವೃತ್ತಿ ಸರಾಗ.


* ಖರ್ಜೂರಾದಿ ಮಂಥ: ಖರ್ಜೂರ, ದಾಳಿಂಬೆ, ಒಣದ್ರಾಕ್ಷಿ, ಹಳೆಹುಣಿಸೆ, ಹಸಿ ನೆಲ್ಲಿಕಾಯಿ ಮಿಶ್ರಣದ ದ್ರವಾಹಾರ. ಮಿಕ್ಸಿಗೆ ಹಾಕಿ ಸಿಧ್ಧಮಾಡಿ ಕುಡಿಯಿರಿ. ಎಲ್ಲ ಸಿಗದಾದರೆ ಒಂದೊಂದನ್ನೂ ಬಳಸಲು ಶಕ್ಯ. ಎಳೆಗೂಸಿನಿಂದ ವೃದ್ಧರಿಗೂ ಅತ್ಯಂತ ಚೇತೋಹಾರಿ.


* ತಿಲಜೀವನ: ಕರಿ ಎಳ್ಳು ಹಾಲೊಡನೆ ಬೀಸಿದ ಜ್ಯೂಸ್ ಉತ್ತಮ ಶಕ್ತಿದಾಯಕ. ಎಳ್ಳಿನ ಕಷಾಯ ಸಹ ಇಂತಹದೇ ದ್ರವಾಹಾರ. ತಣಿದ ಕಷಾಯಕ್ಕೆ ಬೆಲ್ಲ ಅಥವಾ ಜೇನು ಬೆರಸಿ.


* ತೆಂಗಿನ ಕಾಯಿ ಹಾಲು: ತಾಜಾ ಕಾಯಿ ತಿರುಳಿ ರುಬ್ಬಿಕೊಳ್ಳಿರಿ. ಹಾಲು ಹಿಂಡಿಕೊಳ್ಳಿರಿ. ಕುಡಿಯಲು ಬಹಳ ಸ್ವಾದಿಷ್ಟ. ಮಕ್ಕಳಿಗೆ, ಹಿರಿಯರಿಗೆ ಮಲಪ್ರವೃತ್ತಿ ಸರಾಗ.


* ಎಳನೀರು: ಬೇಸಿಗೆಯಲ್ಲಿ ಅತ್ಯಂತ ತುಟ್ಟಿಯಾಗುವ ತಾಜಾ ಎಳನೀರು ಅಮೃತೋಪಮ. ಜೇನುಗೂಡಿಸಿ ಕುಡಿದರೆ ಅನುಪಮ ಆರೋಗ್ಯ. ಎಲ್ಲಾ ವಯಸ್ಸಿನವರಿಗೆ ಒಗ್ಗುವಂಥದ್ದು.


* ಆಮ್ರ ರಸಾಲ: ಹಣ್ಣುಗಳ ರಾಜ ಮಾವು. ಹೃದಯದ ಟಾನಿಕ್ ಪಟ್ಟಿಯಲ್ಲಿ ದಾಳಿಂಬೆ, ಮುರುಗಲ, ಅಂಬಟೆ, ದಾಳಿಂಬೆ, ವಾಟೆ ಹುಳಿ, ಕೌಳಿ ಹಣ್ಣು, ದ್ರಾಕ್ಷಿ ಹಣ್ಣು ಮುಂತಾದ ಹತ್ತು ಹಣ್ಣುಗಳಿವೆ. ಮೊದಲನೆಯ ಆಯ್ಕೆ ಮಾವು. ಮಾವಿನ ಕಾಯಿಯ ಬೇಯಿಸಿದ ಜ್ಯೂಸ್ ಅಪ್ಪೆ ಹುಳಿ ಹೆಸರಿನದು. ಹಣ್ಣಿನ ರಸಕ್ಕೆ ‘ರಸಾಲ’ ಎಂಬರು. ಪಟ್ಟಿಯ ಉಳಿದ ಹಣ್ಣುಗಳೂ ಅಂತಹದೇ ಉಪಕಾರಿ ಗುಣದವು. ಹೃದಯದ ಕಾಯಿಲೆ ತಡೆಯುವ ಶಕ್ತಿ ಇವಕ್ಕಿವೆ.


* ಸೊಗದೆ ಷರಬತ್: ನಾಮದ ಬೇರು, ನನ್ನಾರಿ, ನಾಮಸೊಗದೆ ಎಂಬ ಹೆಸರಿನ ಅತಿ ಪರಿಮಳದ ಬೇರು ಬಳ್ಳಿ ತಿಳಿಯರಿ. ಇದು ಕಾಡಿನ ಮೂಲದ್ದು. ಇದರ ಕಷಾಯ, ಸಕ್ಕರೆ ಪಾಕದಲ್ಲಿ ಬೆರಸಿದ ದ್ರವ ಅಂಗಡಿಗಳಲ್ಲಿ ಲಭ್ಯ. ಎಂತಹದೇ ಉಷ್ಣ, ಉರಿಮೂತ್ರವಿರಲಿ, ಚರ್ಮದ ಗಾದರಿ, ಕೆರೆತಗಳಿರಲಿ. ಬೇಸಿಗೆಯುದ್ದಕ್ಕೆ ಕುಡಿಯಲು ಅನುಪಮ ದ್ರವಾಹಾರ.


* ಮಾದೀಫಲ ರಸಾಯನ: ಬರೋಬ್ಬರಿ ಕಿಲೋ ತೂಗಬಲ್ಲ ದೊಡ್ಡ ನಿಂಬೆ ಇದು. ಮೂಲವ್ಯಾಧಿಯ ಉಪಟಳ ಬೇಸಿಗೆಯಲ್ಲಿ ಹೆಚ್ಚು. ಗ್ಯಾಸ್ಟ್ರಿಕ್ ಎಂಬ ಶ್ರೀಸಾಮಾನ್ಯರ ಪೆಡಂಭೂತ ವಾಸ್ತವವಾಗಿ ಮೂಲವ್ಯಾಧಿಯ ಮೊದಲ ಲಕ್ಷಣ. ಇಂತಹ ಹಣ್ಣಿನ ತಾಜಾ ಪಾನಕ ತಯಾರಿಸಲಾದೀತು. ನಿತ್ಯ ಸೇವನೆಗೆ ಅರ್ಹ. ನಿಂಬೆ ಷರಬತ್ ರೂಪದಲ್ಲಿ ಮಾಡಿಕೊಳ್ಳಿರಿ. ನಿತ್ಯ ಕುಡಿಯಿರಿ.


* ಹೆಸರು ಪಾನಕ: ನೆನೆ ಹಾಕಿದ ಹಸಿರು ಹೆಸರು ಕಾಳುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿರಿ. ತಾಜಾ ಪಾನಕ ಅತಿಶಯ ಗುಣಕಾರಿ. 


* ಉದ್ದಿನ ಪಾನಕ: ಶ್ರಮದ ಕೆಲಸ ಮಾಡುವ ಮಂದಿಗೆ ಇದು ಅತ್ಯಂತ ಅವಶ್ಯ. ಬೆಲ್ಲಗೂಡಿಸಿ ನೆನೆದ ಉದ್ದು ಬೀಸಿ ಸಿಧ್ಧಗೊಳಿಸಿದ ಉದ್ದಿನ ಪಾನಕ ಕುಡಿದರೆ ದೇಹಕ್ಕೆ ಬಲ ಮತ್ತು ಪುಷ್ಟಿ.


* ಸಂಬಾರ ಸೌತೆಯ ಪಾನಕ: ಕರಬೂಜ, ಕಲ್ಲಂಗಡಿ ಪಾನಕ ನಿಮಗೆ ತೀಳಿದಿದೆ. ಕರಾವಳಿ ಮಂದಿಗೆ ಪರಿಚಿತವಾದ ಹಣ್ಣು ಸಂಬಾರ್ ಸೌತೆಯ ಪಾನಕ ಗೊತ್ತೇ? ಬೀಜ, ಸಿಪ್ಪೆ ಸುಲಿದ ಹಣ್ಣು ಸೌತೆ ಕಾಯಿ ಕತ್ತರಿಸಿ ಹೋಳಾಗಿಸಿರಿ. ಅಥವಾ ತುರಿಮಣೆಯಲ್ಲಿ ತುರಿಯಿರಿ. ರುಚಿಗೆ ತಕ್ಕ ಬೆಲ್ಲ ಹಾಕಿರಿ. ಎನರ್ಜಿ ಡ್ರಿಂಕ್ ಸಿಧ್ಧ.


* ಬೇಲದ ಹಣ್ಣು, ಕಾಶಿ ಬಿಲ್ಪತ್ರೆ ಹಣ್ಣು ಷರಬತ್: ಬೇಲ ಮತ್ತು ಬಿಲ್ವಗಳನ್ನು ಬಳಸಿ ಸಿದ್ಧಪಡಿಸುವ ತಾಜಾ ಷರಬತ್ತನ್ನು ಸರ್ವ ರೋಗಸಂಜೀವಿನಿ ಎಂದು ಕರೆದರೆ ಅಚ್ಚರಿಯಿಲ್ಲ.


* ಸತ್ತೂ: ಒಂದು ಲೋಟ ನೀರಿಗೆ ಒಂದೇ ಚಮಚೆ ಕಡಲೆ ಹಿಟ್ಟು. ಉಪ್ಪು, ಸಕ್ಕರೆ ಕೂಡಿಸಿ ಕಡೆಗೋಲಿನಿಂದ ಮಥಿಸಿರಿ. ಲೋಟ ತುಂಬ ಕುಡಿದರೆ ಹೊಟ್ಟೆ ತುಂಬುತ್ತದೆ. ಕಡಲೆಧಾನ್ಯಕ್ಕೆ ವಿಷಹರ ಗುಣ ಇದೆ. ಬೇಸಿಗೆಯ ವಿಷ(ಟಾಕ್ಸಿನ್) ಕಳೆಯಲು ಕಡಲೆ ಹಿಟ್ಟಿನ ಪಾನಕ, ಕೋಸಂಬರಿ ಬಳಸಲು ಮರೆಯದಿರಿ.


* ಕೊತ್ತಂಬರಿ ಕಷಾಯ: ಇನಿತು ಹಾಲಿಗೆ ನೀರು ಬೆರಸಿರಿ. ದನಿಯಾ ಪುಡಿಗೂಡಿಸಿ ಕುದಿಸಿದ ಪಾನೀಯಕ್ಕೆ ಕಲ್ಲುಸಕ್ಕರೆ, ಬೆಲ್ಲಗೂಡಿಸಿ ಹದ ಬಿಸಿ ಕುಡಿದರೆ ದಾಹ, ನೀರಡಿಕೆ ಇಂಗೀತು. ಸಾರ್ವಕಾಲಿಕ ಬಳಕೆಗೆ ಯೋಗ್ಯವಾದ ಬಿಸಿ ಪಾನೀಯ.

*****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.