ADVERTISEMENT

ಆರೋಗ್ಯ: ಕೊಲೆಸ್ಟ್ರಾಲ್‌ ಕ್ರೈಮ್‌ ಸ್ಟೋರಿ

ಕೆ.ಸಿ.ರಘು
Published 8 ನವೆಂಬರ್ 2021, 19:30 IST
Last Updated 8 ನವೆಂಬರ್ 2021, 19:30 IST
   

ಕೊಲೆ ನಡೆದ ಜಾಗದಲ್ಲಿ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು ಮಿಸ್ಟರ್ ಕೊಲೆಸ್ಟ್ರಾಲ್.‌ ಇನ್ನೂ ನಿಖರವಾಗಿ ಹೇಳಬೇಕೆಂದರೆ ಮಿಸ್ಟರ್‌ ಎಲ್‌ಡಿಎಲ್‌ ಕೊಲೆಸ್ಟ್ರಾಲ್.‌

ಈ ಸ್ಪಷ್ಟನೆ ಏಕೆಂದರೆ ಕೊಲೆಸ್ಟ್ರಾಲ್‌ ಕುಟುಂಬದಲ್ಲಿ ಎಚ್‌ಡಿಎಲ್‌ ಮತ್ತು ವಿಎಲ್‌ಡಿಎಲ್‌ ಎಂಬ ಅಣ್ಣತಮ್ಮಂದಿರೂ ಇದ್ದಾರೆ. ಕೊಲೆಯನ್ನು ಹೃದಯಸ್ಪಂದನವನ್ನು ಹಿಸುಕಿ ಬಡಿತವನ್ನೇ ನಿಲ್ಲಿಸಿ ಮಾಡಲಾಗಿತ್ತು. ಕೊಲೆಯಾದ ಸ್ಥಳದಲ್ಲಿ ಸಿಕ್ಕಿದ್ದಾನೆಂಬ ಒಂದೇ ಕಾರಣಕ್ಕೆ ಎಲ್‌ಡಿಎಲ್‌ ಕೊಲೆಸ್ರ್ಟಾಲೇ ಕೊಲೆ ಮಾಡಿದ್ದೆಂದು ಹೇಳುವುದಾದರೂ ಹೇಗೆ? ಅಥವಾ ಆತನ ಮೂಲಕ ಈ ದುಶ್ಕೃತ್ಯವನ್ನು ಮಾಡಿಸಲಾಗಿದೆಯೇ? ಆತ ನಿಜವಾಗಿಯೂ ಆಕಸ್ಮಿಕವಾಗಿ ಅಲ್ಲಿ ಕಂಡುಬಂದದ್ದೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಕ್ರೈಮ್‌ ಥ್ರಿಲ್ಲರ್‌ ಮಾದರಿಯಲ್ಲಿಯೇ ಹೊಳೆಯುವುದು ಸಹಜ.

ಕಾನೂನಿನಲ್ಲಿಯೂ ಒಂದು ಮಾತಿದೆ. ಸಾವಿರ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಕೂಡದು ಎಂದು. ಹಾಗೆಯೇ ಕಾನೂನುಗಳೆಲ್ಲವೂ ನ್ಯಾಯಕ್ಕೆ ಅಂಟಿಕೊಂಡಿವೆ ಎನ್ನುವುದೂ ತಪ್ಪೇ. ಇಲ್ಲಿ ನಡೆದಿರುವ ಅಪರಾಧವನ್ನು ವಿಶ್ಲೇಶಿಸುತ್ತಾ ಹೋದಾಗ ಸ್ಪೆಷಲ್‌ ಇನ್‌ವೆಸ್ಟಿಗೇಷನ್‌ ಟೀಮಿಗೆ ಕಾಣುವ ಕೆಲವು ವಿಚಾರಗಳು. ಎಲ್‌ಡಿಎಲ್‌ ಕೊಲೆಸ್ಟ್ರಾಲ್‌ ಜೊತೆಗೆ ಅವರ ದೊಡ್ಡಣ್ಣ ಸಾಧು–ಸಂತ ಎಚ್‌ಡಿಎಲ್‌ ಕೊಲೆಸ್ಟ್ರಾಲ್‌ ಏನಾದರೂ ಇದ್ದಿದ್ದರೆ ಎಲ್‌ಡಿಎಲ್‌ ಅನ್ನು ಈ ಕೆಲಸಕ್ಕೆ ಇಳಿಯಲು ಬಿಡುತ್ತಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅವನಿಗೆ ಬುದ್ಧಿಯನ್ನು ಹೇಳಿ ಕೈಹಿಡಿದು ಸುರಕ್ಷಿತ ಸ್ಥಳಕ್ಕೆ ತಂದು ಕೂರಿಸುತ್ತಿದ್ದ. ಎಚ್‌ಡಿಎಲ್‌ ಅನ್ನು ಅಲ್ಲಿಲ್ಲದಂತೆ ಮಾಡಿ ಕುಗ್ಗಿಸಿ ಮತ್ತು ಕುಂದಿಸಿದ್ದು ಟ್ರೈಗ್ಲಿಸರೈಡ್ಸ್‌ ಎಂಬ ಇನ್ನೊಬ್ಬ ದಾಯಾದಿ. ಆ ದಾಯಾದಿಯ ಹುಟ್ಟು ಈ ಕೊಲೆಸ್ಟ್ರಾಲ್‌ ಕೊಬ್ಬಿನ ಕುಟುಂಬದ ಸದಸ್ಯರೇ ಅಲ್ಲದ M/s ಸ್ಟಾರ್ಚ್‌‌ ಅಂಡ್‌ ಶುಗರ್‌ ಫ್ಯಾಮಿಲಿ. ಆದರೆ ಈ ಕುಟುಂಬವನ್ನು ಕಟಕಟೆಯಲ್ಲಿ ನಿಲ್ಲಿಸುವುದಿಲ್ಲ. ಇದೇ ಸ್ಟಾರ್ಚ್‌ ಅಂಡ್‌ ಶುಗರ್‌ ಕುಟುಂಬ ಇನ್ಸುಲಿನ್‌ಗೆ ಹೆಂಡ ಕುಡಿಸಿ ಅಡ್ಡಾದಿಡ್ಡಿ ಬೀದಿರಂಪ ಮಾಡಿಸಿದ್ದರಿಂದ ಕೊಲೆಸ್ಟ್ರಾಲ್‌ ಈ ಕೆಲಸ ಮಾಡುವಂತಾಯಿತು ಎಂಬ ವಿಷಯವೂ ತಿಳಿದುಬರುತ್ತದೆ. ಜೊತೆಗೆ ಹೃದಯ ಮತ್ತು ದೇಹ ತನ್ನನ್ನು ತಾನು ರಕ್ಷಿಸಿಕೊಳ್ಳುವ ರಕ್ಷಣಾ ಕಾರ್ಯತಂತ್ರದಲ್ಲಿ ಆನುವಂಶಿಕವಾಗಿ ದೋಷಯುಕ್ತವಾದ್ದರಿಂದ ಕೊಲೆಸ್ಟ್ರಾಲನ್ನು ಕಂಟ್ರೋಲ್ ಮಾಡಲಾಗದೆ‌ ತನ್ನ ಮೇಲೆ ತಾನೇ ಅನಾಹುತವನ್ನು ಎಳೆದುಕೊಂಡಿತೋ? ಮನೆಯ ಬೀಗಹಾಕದೆ ಹೃದಯದ ಕನ್ನಕ್ಕೆ ತಾನೇ ಎಡೆಮಾಡಿ ಕೊಟ್ಟ ತನ್ನ ಆಂತರ್ಯದ ದೋಷವನ್ನು ಪರಿಗಣಿಸದಿರುವುದು ಸರಿಯೇ?

ADVERTISEMENT

ಕಾನೂನಿನಲ್ಲಿಯೂ ಯಾವುದೋ ಅಮಲಿನ ಉತ್ತೇಜನದಿಂದ ನಡೆದ ಅಪರಾಧಕ್ಕೆ ಸ್ಪಲ್ಪ ವಿನಾಯಿತಿಯುಂಟು. ಈ ಕೊಲೆಸ್ಟ್ರಾಲ್‌ನ ಗುಣವೈಷಮ್ಯಕ್ಕೆ ಸೂರ್ಯನಮಸ್ಕಾರ ಉತ್ತಮವಾದ ಯೋಗ ಪರಿಹಾರ ಎನ್ನುವುದು ಸತ್ಯ. ಈ ಕೊಲೆಸ್ಟ್ರಾಲ್‌ನ ಕೆಟ್ಟಗುಣವನ್ನು ಮಿಸ್ಟರ್‌ ವಿಟಮಿನ್‌ ಡಿ ಆಗಿ ಪರಿವರ್ತಿಸಿ ಒಳ್ಳೆಯ ಕೆಲಸಕ್ಕೆ ಹಚ್ಚುವ ಕೆಲಸ ಮಾಡುವುದು ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿದಾಗ. ಇದರೊಳಗೆ ಇನ್ನೊಂದು ಗುಮಾನಿ ಏನೆಂದರೆ ಇದೇ ಕೊಬ್ಬಿನ ಕುಟುಂಬದ ಸ್ಯಾಚುರೇಟ್‌ ಮತ್ತು ಲಿನೋಲಿಯೇಟ್‌ ಎಂಬ ಸದಸ್ಯರ ಪಾತ್ರವನ್ನೂ ಅಲ್ಲಗಳೆಯುವಂತಿಲ್ಲ ಎನ್ನುವುದು. ಸ್ಯಾಚುರೇಟ್‌ ಕೊಬ್ಬು ಹೆಚ್ಚಾದಂತೆಲ್ಲಾ ಎಲ್‌ಡಿಎಲ್‌ನ ದಮನಕಾರೀ ಗುಣ ಹೆಚ್ಚಾಗಿ ದೊಡ್ಡಣ್ಣ ಎ ಚ್‌ಡಿಎಲ್‌ನ ಸಾಧುಗುಣ ಸಂಕಟ ಪಡುವಂತಾಗುತ್ತದೆ. ಹಾಗೆಯೇ ಲಿನೋಲಿಯೇಟ್‌ (ಎನ್-6) ಹೃದಯದಲ್ಲಿ ಗಲಾಟೆ ಎಬ್ಬಿಸಿ ಕೊಲೆಸ್ಟ್ರಾಲ್‌ ಅನ್ನು ಪ್ರಚೋದಿಸಿ ಕೊಲೆಗೆ ಪ್ರೇರೇಪಿಸಿದ ಎನ್ನುವ ಮಾಹಿತಿಯೂ ಇದೆ. ವಿಜ್ಞಾನದ ಪರಿಭಾಷೆಯಲ್ಲಿ ಇದನ್ನು ಪ್ಲೇಟ್‌ಲೆಟ್‌ ಅಗ್ರಿಗೇಟರ್‌ ಎಂದು ಘೋಷಿಸಲಾಗಿದೆ. ಇತ್ತೀಚೆಗೆ ಇವರ ಜನಸಂಖ್ಯೆ ಮತ್ತು ಹಾವಳಿ ಹೆಚ್ಚಾಗಿದೆ ಎಂದು ಕಂಡುಬಂದಿದೆ. ಜೊತೆಗೆ ಮಾಫಿಯಾದಿಂದಲೇ ಮಾರುಕಟ್ಟೆಗೆ ಬಂದಿರುವ ಮಿಸ್ಟರ್‌ ವನಸ್ಪತಿಯ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಇದೇ ಕುಟುಂಬದ ಇನ್ನೊಬ್ಬ ಸದಸ್ಯ ಮಿಸ್ಟರ್‌ ಲಿನೋಲೆನೆಟ್‌ (ಎನ್-3)‌ ಸಂಖ್ಯೆ ಮತ್ತು ಸಾಂದ್ರತೆ ಕಡಿಮೆಯಾಗಿರುವುದರಿಂದ ಎಲ್‌ಡಿಎಲ್‌ ಕೆಟ್ಟಕೆಲಸಕ್ಕೆ ಇಳಿಯಲು ಕಾರಣವಾಯಿತು. ಒಳ್ಳೆಯವರು ಒಂದಷ್ಟು ಸಂಖ್ಯೆಯಲ್ಲಿ ಇದ್ದರೆ ಅಂದರೆ ಕ್ರಿಟಿಕಲ್‌ ಮಾಸ್‌ ಎನ್ನುತ್ತಾರಲ್ಲಾ ಹಾಗೆ ಕೆಟ್ಟದ್ದು ನಡೆಯಲು ಅವಕಾಶಗಳು ಕಡಿಮೆಯಾಗುತ್ತಿದ್ದವು.

ಈ ನಡುವೆ ಈ ಕೊಲೆಸ್ಟ್ರಾಲ್‌ ಅನ್ನು ಒಂಟಿಯಾಗಿ ಬಿಡದೆ ಸದೃಢ ಮತ್ತು ಬಲಿಷ್ಠ ನಾರಿನೊಂದಿಗೆ (ಫೈಬರ್)‌ ಕಟ್ಟಿಹಾಕಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ ಎನ್ನುವುದು ಫೊರೆನ್ಸಿಕ್‌ ಆಡಿಟ್‌ ಮೂಲಕ ತಿಳಿದಿದೆ.

ಕೊಲೆಯ ಹಣೆಪಟ್ಟಿಕಟ್ಟುವುದು ಸುಲಭ. ಇದು ದೈತ್ಯಲಾಭ ಪಡೆದುಕೊಳ್ಳುವ ಮಿಸ್ಟರ್‌ ಫಾರ್ಮಾ ಕುಟುಂಬದ ಕೈಚಳಕ ಎನ್ನುವ ಮಾತೂ ಕೇಳಿಬರುತ್ತಿದೆ. ಶರ್ಲಾಕ್‌ ಹೋಮ್ಸ್‌ ‘Nothing is more misleading than obvious’ ಎಂದಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.