ADVERTISEMENT

ಆರೋಗ್ಯ | ಹೃದಯಕ್ಕೂ ಮಿದುಳಿಗೂ ನಂಟು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 23:30 IST
Last Updated 4 ಅಕ್ಟೋಬರ್ 2024, 23:30 IST
   

ಹೃದ್ರೋಗಕ್ಕೂ ಮಿದುಳಿನ ಆರೋಗ್ಯಕ್ಕೂ ಗಾಢವಾದ ಸಂಬಂಧವಿದೆ. ‌ಐದು ಮಂದಿ ಹೃದ್ರೋಗಿಗಳಲ್ಲಿ ಒಬ್ಬರಿಗಾದರೂ ಮಿದುಳಿನ ಸಮಸ್ಯೆ ಉಂಟು ಮಾಡುವಲ್ಲಿ ಹೃದ್ರೋಗವೂ ಕಾರಣವಾಗುತ್ತದೆ. ಹೃದ್ರೋಗದಿಂದ ದೇಹದಲ್ಲಿ ರಕ್ತದ ಹರಿವಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದರಿಂದ ಮಿದುಳಿಗೆ ಅಗತ್ಯವಾದ ಆಮ್ಲಜನಕ ಪೂರೈಕೆಯಾಗದೆ ಪೋಷಕಾಂಶಗಳು ಸಿಗುವುದಿಲ್ಲ. ಇದರಿಂದ ಹಲವು ಬಗೆಯ ಮಿದುಳಿಗೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಎರಡರಿಂದ ಮೂರು ಪಟ್ಟು ಹೆಚ್ಚಿರುತ್ತದೆ.

ದೀರ್ಘಕಾಲದ ಅಧಿಕ ರಕ್ತದ ಒತ್ತಡವು ಸಣ್ಣ ಮಿದುಳಿನ ನಾಳಗಳನ್ನು ಹಾನಿಗೊಳಿಸುವ ಅಪಾಯ ಹೆಚ್ಚು. ಇದು ಪಾರ್ಶ್ವವಾಯುವಿನ ತೊಂದರೆಗೂ ಕಾರಣವಾಗುತ್ತದೆ. ಇದು ಕ್ರಮೇಣ ನೆನಪಿನ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ, ಮಿದುಳಿನ ಕಾರ್ಯವೈಖರಿಯನ್ನು ದುರ್ಬಲಗೊಳಿಸುತ್ತದೆ. ಬುದ್ಧಿಮಾಂದ್ಯ ವ್ಯಕ್ತಿಗಳಲ್ಲಿ ಶೇ 50ರಷ್ಟು ಮಂದಿ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಾರೆ. ಹೃದಯಬಡಿತದಲ್ಲಿ ಉಂಟಾಗುವ ಏರಿಳಿತದಿಂದ (AFib) ಮಿದುಳಿಗೆ ಸಮರ್ಪಕವಾಗಿ ರಕ್ತ ಪೂರೈಕೆಯಾಗುವುದಿಲ್ಲ. ಇದರಿಂದ ನೆನಪಿನ ಶಕ್ತಿ ಕ್ಷೀಣಿಸುತ್ತದೆ. ಕೆಲಸಗಳಲ್ಲಿ ಪದೇ ಪದೇ ಗೊಂದಲ ಮತ್ತು ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಜತೆಗೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದು ಎಂಬಾಲಿಕ್ ಪಾರ್ಶ್ವವಾಯುಗಳಿಗೆ ಕಾರಣವಾಗಬಹುದು.ಮಾತು, ಸ್ಮರಣೆ, ಕೌಶಲಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಂಥ ಸಮಸ್ಯೆಯಿಂದ ಬಳಲುವ ಶೇ 37ರಷ್ಟು ವ್ಯಕ್ತಿಗಳು ಬೌದ್ಧಿಕ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಕಷ್ಟಪಡುತ್ತಾರೆ.

ಹೃದಯ ಶಸ್ತ್ರಚಿಕಿತ್ಸೆ ನಂತರ ಮಿದುಳಿನಲ್ಲಿ ಉರಿಯೂತ ಮತ್ತು ಮಿದುಳಿನ ಕಾರ್ಯವಿಧಾನದಲ್ಲಿ ಸಮಸ್ಯೆ ಉಂಟಾಗಬಹುದು. ಶೇ 30ರಿಂದ 50ರಷ್ಟು ಮಂದಿ ಬೌದ್ಧಿಕ ಚಟುವಟಿಕೆಗಳಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮೆಟೊಪ್ರೊರೊಲ್‌ನಂತಹ ಬೀಟಾ-ಬ್ಲಾಕರ್‌ಗಳಂತಹ ಕೆಲವು ಹೃದ್ರೋಗ ಔಷಧಿಗಳು ಬೌದ್ಧಿಕ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ವ್ಯಕ್ತಿಗಳಲ್ಲಿ ಆಯಾಸ, ನೆನಪಿನ ಶಕ್ತಿ ಕ್ಷೀಣಗೊಳ್ಳುವಂಥ ಸಮಸ್ಯೆಗಳು ಎದುರಾಗಬಹುದು. ಇದು ಮಿದುಳಿನ ಅಂಗಾಂಶವನ್ನು ಹಾನಿಗೊಳಿಸುತ್ತದೆ. ಆಲ್ಜೈಮರ್‌ನಂಥ ಅಪಾಯವನ್ನು ಹೆಚ್ಚಿಸುತ್ತದೆ.

ADVERTISEMENT

ಹೃದ್ರೋಗವು ಮಿದುಳಿನ ನ್ಯಾಟ್ರಿಯುರೆಟಿಕ್ ಪೆಪ್ಟೈಡ್‌ನಂಥ (BNP) ನ್ಯೂರೋಹಾರ್ಮೋನ್‌ಗಳ ವಿನ್ಯಾಸವನ್ನು ಬದಲಾಯಿಸಬಹುದು, ಇದರ ಪ್ರಮಾಣ ಅಧಿಕಗೊಳ್ಳುವುದು ಹೃದಯಾಘಾತದ ಸಂದರ್ಭದಲ್ಲಿ. ಹೃದ್ರೋಗಿಗಳಲ್ಲಿ ಖಿನ್ನತೆಯು ಕಾಣಿಸಿಕೊಳ್ಳಬಹುದು. ಜತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಬ್ಬಿನಾಂಶದ ಸಮಸ್ಯೆಗಳು ಹೆಚ್ಚಳಗೊಳ್ಳಬಹುದು.

ನಿಗದಿತ ಸಮಯಕ್ಕೆ ನಿಯಮಿತವಾಗಿ ವೈದ್ಯರ ಶಿಫಾರಸ್ಸಿನ ಮೇರೆಗೆ ವ್ಯಾಯಾಮ ಮಾಡುವುದರಿಂದ ಸಮತೋಲಿತ ಆಹಾರವನ್ನು ಸೇವನೆ ಮಾಡುವುದರಿಂದ ಹೃದ್ರೋಗ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಜತೆಗೆ ಹೃದಯ ಪುನಶ್ಚೇತನ ಕೇಂದ್ರಗಳ(ಕಾರ್ಡಿಯಕ್‌ ರಿಹ್ಯಾಬಿಟೇಷನ್‌) ನೆರವು ಪಡೆಯಬಹುದು.

ಏನಿದು ಹೃದಯ ಪುನಶ್ಚೇತನ?

ಹೃದಯ ಪುನಶ್ಚೇತನ ಕೇಂದ್ರಗಳಲ್ಲಿಯೂ ಹೃದಯದ ಆರೈಕೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಇದು ನಗರದ ಬಹುತೇಕ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ. ಇಂಥ ಕೇಂದ್ರಗಳ ನೆರವು ಪಡೆದು ಹೃದ್ರೋಗಿಗಳು ಎಂದಿನಂತೆ ಜೀವನ ನಡೆಸಬಹುದು. ನುರಿತ ಹೃದ್ರೋಗ ತಜ್ಞರು, ನರ್ಸ್‌, ಫಿಸಿಯೋಥೆರಪಿಸ್ಟ್‌, ಆಹಾರತಜ್ಞರ ಒಂದು ತಂಡವಿರುತ್ತದೆ. ಪ್ರತಿ ಹೃದ್ರೋಗಿಯ ಬೇಕು ಬೇಡಗಳನ್ನು ಗಮನಿಸಿ, ಅದಕ್ಕೆ ತಕ್ಕನಾದ ಚಿಕಿತ್ಸೆ ನೀಡಲಾಗುತ್ತದೆ.

ಯಾರಿಗೆಲ್ಲ ಪುನಶ್ಚೇತನ?

ಹೃದಯಾಘಾತ, ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ, ಹೃದಯದ ಕಾರ್ಯಚಟುವಟಿಕೆಗಳಲ್ಲಿ ವೈಫಲ್ಯ ಅನುಭವಿಸುತ್ತಿರುವವರು, ಆ್ಯಂಜಿನಾ, ಸ್ಟೆಂಟ್‌ ಅಥವಾ ಆ್ಯಂಜಿಯೊಪ್ಲಾಸ್ಟಿ , ಬೈಪಾಸ್‌, ಹೃದಯ ಮತ್ತು ಶ್ವಾಸಕೋಶ ಅಂಗಾಂಗ ಕಸಿ ಮಾಡಿಸಿಕೊಂಡವರು ಈ ಪುನಃಶ್ಚೇತನ ಕೇಂದ್ರಗಳ ನೆರವು ಪಡೆಯಬಹುದು.

ವ್ಯಾಯಾಮ: ಏರೋಬಿಕ್‌ ವ್ಯಾಯಾಮ, ನಡಿಗೆ ಹೀಗೆ ಹೃದಯಕ್ಕೆ ಹಗುರವೆನಿಸುವ ವ್ಯಾಯಾಮಗಳನ್ನು ಮಾಡಿಸಲಾಗುತ್ತದೆ. ಮಾಂಸಖಂಡಗಳ ಬಲಿಷ್ಠಗೊಳ್ಳಲು ಸಮಾಪ್ರಮಾಣದಲ್ಲಿ ಭಾರ ಎತ್ತುವ ವ್ಯಾಯಾಮವನ್ನು ಮಾಡಿಸಲಾಗುತ್ತದೆ.

ಮಾಹಿತಿ: ಆರೋಗ್ಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಕುರಿತು, ತಿನ್ನುವ ಆಹಾರ ಹೇಗಿರಬೇಕು, ಔಷಧಿಯನ್ನು ಕ್ರಮವಾಗಿ ತೆಗೆದುಕೊಳ್ಳುವ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಕೌನ್ಸೆಲಿಂಗ್‌: ಒತ್ತಡದ ಜೀವನ ನಡೆಸುತ್ತಿದ್ದರೆ, ಒತ್ತಡದಿಂದ ಹೊರಬರುವ ಬಗೆ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ರೀತಿ ಹಾಗೂ ಧೂಮಪಾನದಂಥ ಚಟಗಳಿಂದ ಹೊರಬರಲು ಕೌನ್ಸೆಲಿಂಗ್ ನೀಡಲಾಗುತ್ತದೆ.

______________________________

–ಡಾ.ಶ್ರೀಕಾಂತ ಶೆಟ್ಟಿ, ಹೃದ್ರೋಗಜ್ಞರು, ಸಾಕ್ರಾ ವರ್ಲ್ಡ್‌ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.