ADVERTISEMENT

Heart Diseases: ಹೃದಯ ವೈಫಲ್ಯದ ಮುನ್ಸೂಚನೆ ಏನು?

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2024, 8:48 IST
Last Updated 11 ಅಕ್ಟೋಬರ್ 2024, 8:48 IST
<div class="paragraphs"><p>ಹೃದಯ ವೈಫಲ್ಯ</p></div>

ಹೃದಯ ವೈಫಲ್ಯ

   

– ಐಸ್ಟಾಕ್ ಚಿತ್ರ

ಪ್ರಪಂಚದಾದ್ಯಂತ ದೀರ್ಘಕಾಲೀನ ಹೃದಯ ವೈಫಲ್ಯವು ಲಕ್ಷಾಂತರ ಜನರ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತಿದೆ. ಇದರ ರೋಗಲಕ್ಷಣಗಳ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಳ್ಳಲು ಜನರು ಇನ್ನೂ ಹೆಣಗಾಡುತ್ತಿದ್ದಾರೆ. ಹೃದಯವು ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿರುವ ಸಂದರ್ಭದಲ್ಲಿ ಈ ಹೃದಯ ವೈಫಲ್ಯ ಸಂಭವಿಸುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಾಗಿಸುವ ರಕ್ತವು ದೇಹದ ಎಲ್ಲಾ ಭಾಗಗಳನ್ನು ತಲುಪಲು ಸಾಧ್ಯವಾಗುವುದಿಲ್ಲ ಮತ್ತು ಇದು ಶ್ವಾಶಕೋಶಗಳು ಹಾಗೂ ದೇಹದ ಇತರ ಭಾಗಗಳಲ್ಲಿ ದ್ರವದ ಸಂಗ್ರಹಕ್ಕೆ ಕಾರಣವಾಗುತ್ತದೆ. ಇದರಿಂದ ಮನುಷ್ಯನಲ್ಲಿ ಆಯಾಸ, ಉಸಿರಾಟದ ತೊಂದರೆ, ನಿರಂತರ ಕೆಮ್ಮು ಮತ್ತು ಕೀಲುಗಳಲ್ಲಿ ಊತದಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಚಿಕಿತ್ಸೆ, ಉತ್ತಮ ಪೋಷಣೆ ಮತ್ತು ದೈಹಿಕ ಚಟುವಟಿಕೆಯು ಸಹಕಾರಿಯಾಗಲಿದೆ.

ADVERTISEMENT

ಪ್ರಮಾಣಿತ ಚಿಕಿತ್ಸೆಯನ್ನು ನೀಡಿದ್ದಾಗ್ಯೂ, ಈ ದೀರ್ಘಕಾಲೀನ ಹೃದಯ ವೈಫಲ್ಯವು ಕಾಲಾನಂತರದಲ್ಲಿ ಉಲ್ಬಣವಾಗುವ, ರೋಗಲಕ್ಷಣಗಳ ಪ್ರಮಾಣ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯನ್ನು ಹದಗೆಡುತ್ತಿರುವ ಹೃದಯ ವೈಫಲ್ಯ ಎಂದು ಕರೆಯಲಾಗುತ್ತದೆ. ಈ ಪರಿಸ್ಥಿತಿಯು ಪ್ರತಿ 6 ರಲ್ಲಿ 1 ದೀರ್ಘಕಾಲೀನ ಹೃದಯ ವೈಫಲ್ಯದ ರೋಗಿಗಳ ಮೇಲೆ ಬೀರುತ್ತದೆ. ಹದಗೆಡುತ್ತಿರುವ ಹೃದಯ ವೈಫಲ್ಯವು ದೀರ್ಘಕಾಲೀನ ಹೃದಯ ವೈಫಲ್ಯವು ಹೆಚ್ಚಾಗುತ್ತಿದೆ ಮತ್ತು ಹೃದಯದ ಕಾರ್ಯನಿರ್ವಹಣೆಯ ಸಾಮರ್ಥ್ಯವು ಕ್ಷೀಣಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಹದಗೆಡುತ್ತಿರುವ ಹೃದಯ ವೈಫಲ್ಯದ ಆರಂಭಿಕ ಚಿಹ್ನೆಗಳು ಅಥವಾ ಲಕ್ಷಣಗಳನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಇಂತಹ ಪರಿಸ್ಥಿತಿಗಳ ಬಗ್ಗೆ ಅವರು ಜಾಗರೂಕರಾಗಿರಬೇಕು ಮತ್ತು ಸಮಯಕ್ಕೆ ಸರಿಯಾಗಿ ತಮ್ಮ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯವಾಗಿದೆ.

  ಹೃದಯ ವೈಫಲ್ಯದ ಚಿಹ್ನೆಗಳನ್ನು ಗುರುತಿಸುವುದು

ಕೆಲವು ಗುಣಲಕ್ಷಣಗಳು ಇಂತಿವೆ:

ಇದ್ದಕ್ಕಿದ್ದಂತೆ ತೂಕ ಹೆಚ್ಚಾಗುವುದು- ಸಾಮಾನ್ಯವಾಗಿ ಒಂದೇ ದಿನದಲ್ಲಿ 1 ರಿಂದ 1.3 ಕೆಜಿಗಿಂತ ಹೆಚ್ಚು ಅಥವಾ ವಾರದಲ್ಲಿ 2 ಕೆಜಿಗಿಂತ ಹೆಚ್ಚು ಆಗುವುದು ಮುನ್ನೆಚ್ಚರಿಕೆಯ ಸಂಕೇತವಾಗಿದೆ. ಇದು ಸಾಮಾನ್ಯವಾಗಿ ದ್ರವದ ಪ್ರಮಾಣವನ್ನು ಹೆಚ್ಚು ಮಾಡುತ್ತದೆ. ಅಲ್ಲದೇ, ಇದು ಹೃದಯವು ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡದೇ ಇರುವಾಗ ಸಂಭವಿಸುತ್ತದೆ, ದೇಹದಲ್ಲಿ ದ್ರವದ ಪ್ರಮಾಣ ಸಂಗ್ರಹಗೊಳ್ಳಲು ಕಾರಣವಾಗುತ್ತದೆ.


ಉಸಿರಾಟದ ತೊಂದರೆ ಹೆಚ್ಚಳ- ವಿಶೇಷವಾಗಿ ಸಾಮಾನ್ಯ ಚಟುವಟಿಕೆಗಳಲ್ಲಿ ಅಥವಾ ಮಲಗಿರುವ ಸಂದರ್ಭದಲ್ಲಿ ಉಸಿರಾಡಲು ಹೆಚ್ಚು ಕಷ್ಟವಾಗಿದ್ದರೆ, ಶ್ವಾಸಕೋಶದಲ್ಲಿ ದ್ರವದ ಪ್ರಮಾಣ ಹೆಚ್ಚು ಸಂಗ್ರಹವಾಗುತ್ತಿದೆ ಎಂಬುದನ್ನು ಮನಗಾಣಬೇಕು. ಇದು ಶ್ವಾಸಕೋಶಗಳಿಗೆ ರಕ್ತವನ್ನು ಶುದ್ಧೀಕರಿಸಲು ಕಷ್ಟವಾಗುತ್ತದೆ. ಇದು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ.


ಕಾಲು, ಕೀಲುಗಳು ಅಥವಾ ಹೊಟ್ಟೆಯಲ್ಲಿ ಊತ: ದ್ರವದ ಪ್ರಮಾಣ ಹೆಚ್ಚಾಗುತ್ತಿದ್ದಂತೆ, ಊತ- ಎಡಿಮಾ ಎಂದು ಕರೆಯಲಾಗುವ ನಿರ್ದಿಷ್ಟ ಕೆಳ ತುದಿಗಳಲ್ಲಿ ಸಂಭವಿಸುವ ಸಾಧ್ಯತೆಗಳಿವೆ. ಈ ಊತವು ಹೊಟ್ಟೆಯವರೆಗೂ ವಿಸ್ತರಣೆಯಾಗಬಹುದು. ಇದು ದೇಹದ ದ್ರವದ ಸಮತೋಲನವನ್ನು ಕಾಪಾಡಿಕೊಳ್ಳಲು ಹೃದಯ ಕಷ್ಟಪಡುತ್ತಿದೆ ಎಂಬುದನ್ನು ಸೂಚಿಸುತ್ತದೆ.


ನಿರಂತರ ಕೆಮ್ಮು ಅಥವಾ ಉಬ್ಬಸ-ವಿಶೇಷವಾಗಿ ಅಂಗಾತ ಮಲಗಿದ ಸಂದರ್ಭದ ದೀರ್ಘಕಾಲದಿಂದ ಕೆಮ್ಮು ಅಥವಾ ಉಬ್ಬಸ ಕಂಡುಬಂದಲ್ಲಿ ಶ್ವಾಸಕೋಶದಲ್ಲಿ ದ್ರವ ತುಂಬಿದೆ ಎಂಬುದನ್ನು ಭಾವಿಸಬೇಕು. ಇದು ಉಸಿರಾಡಲು ಕಷ್ಟಕರವಾಗಿರುತ್ತದೆ ಮತ್ತು ಅಹಿತಕರವಾಗಿರುತ್ತದೆ.


ಆಯಾಸ ಮತ್ತು ವ್ಯಾಯಾಮದ ಬಗ್ಗೆ ಆಲಸ್ಯ ಉಂಟಾಗುವುದು- ಹದಗೆಡುವ ಹೃದಯ ವೈಫಲ್ಯವು ತೀವ್ರ ಆಯಾಸಕ್ಕೆ ಕಾರಣವಾಗುತ್ತದೆ. ಸರಳವಾದ ಚಟುವಟಿಕೆಗಳನ್ನು ನಡೆಸಿದಾಗಲೂ ದಣಿದಂತೆ ಮಾಡುತ್ತದೆ. ದೇಹದ ಬೇಡಿಕೆಗಳನ್ನು ಪೂರೈಸಲು ಹೃದಯವು ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿಗೆ ತಲುಪುತ್ತದೆ. ಇದು ದೇಹದ ಶಕ್ತಿಯ ಮಟ್ಟವನ್ನು ಕುಸಿಯುವಂತೆ ಮಾಡುತ್ತದೆ.


ಹೆಚ್ಚಿದ ಹೃದಯ ಬಡಿತ- ಹೃದಯ ಬಡಿತವು ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿದ್ದರೆ ಅದಕ್ಕೆ ಸರಿಸಮಾನವಾಗಿ ಹೃದಯವು ಹೆಚ್ಚು ಕ್ರಿಯಾಶೀಲವಾಗಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಇದು ಪರಿಸ್ಥಿತಿಯು ಹದಗೆಡುತ್ತಾ ಹೋಗುವುದರ ಸಂಕೇತವಾಗಿರುತ್ತದೆ.
ಏನು ಮಾಡಬೇಕು?

ದೀರ್ಘಕಾಲದ ಹೃದಯ ವೈಫಲ್ಯಕ್ಕೆ ಪ್ರಮಾಣಿತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಹೊರತಾಗಿಯೂ ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯವಾಗಿದೆ. ಹದಗೆಡುತ್ತಿರುವ ಹೃದಯ ವೈಫಲ್ಯಕ್ಕೆ ಇಂಟ್ರಾವೆನಸ್ ಥೆರಪಿ ಅಥವಾ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುತ್ತದೆ. ಆದರೆ, ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡುವುದರಿಂದ ಪ್ರಕರಣದ ಗಂಭೀರತೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ, ಆಸ್ಪತ್ರೆಗೆ ದಾಖಲಾಗುವ ಅಥವಾ ಪದೇಪದೆ ಆಸ್ಪತ್ರೆಗೆ ಹೋಗುವ ಸಂದರ್ಭಗಳನ್ನು ಕಡಿಮೆ ಮಾಡುತ್ತದೆ. ಇದೇ ವೇಳೆ, ರೋಗ ಉಲ್ಬಣವಾಗುವುದನ್ನು ತಡೆಗಟ್ಟುವ ಸುಧಾರಿತ ಚಿಕಿತ್ಸೆಗಳೂ ಲಭ್ಯವಿವೆ. ದೀರ್ಘ ಕಾಲದ ಹೃದಯಾಘಾತದಿಂದ ಬಳಲುತ್ತಿರುವವರಿಗೆ ಹದಗೆಡುತ್ತಿರುವ ಹೃದಯಾಘಾತವನ್ನು ಮೊದಲೇ ಪತ್ತೆ ಮಾಡಲು ತಜ್ಞ ವೈದ್ಯರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದು, ಅವರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ.

ಹೃದಯ ವೈಫಲ್ಯವು ದೀರ್ಘಕಾಲೀನವಾದ ಸ್ಥಿತಿಯಲ್ಲಿದ್ದರೂ ಅದು ಯಾವಾಗ ಉಲ್ಬಣವಾಗುತ್ತದೆ ಎಂಬುದನ್ನು ಗುರುತಿಸುವುದು ಅತಿ ಮುಖ್ಯ. ಈ ಬಗ್ಗೆ ಹೆಚ್ಚಿನ ತಿಳುವಳಿಕೆ ಮತ್ತು ಪೂರ್ವಭಾವಿ ತಿಳಿದುಕೊಳ್ಳುವ ಮೂಲಕ ರೋಗಿಗಳು ತಮ್ಮ ಹೃದಯದ ಆರೋಗ್ಯದ ಮೇಲೆ ಹಿಡಿತ ಸಾಧಿಸಬಹುದಾಗಿದೆ. ಅವರು ತಮ್ಮ ಜೀವನದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಮರ್ಪಕವಾದ ಆರೈಕೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.