ADVERTISEMENT

ಮಕ್ಕಳನ್ನು ಬೆಳೆಸುವುದು ಎಂದರೆ...

ರಮ್ಯಾ ಶ್ರೀಹರಿ
Published 25 ಸೆಪ್ಟೆಂಬರ್ 2023, 23:50 IST
Last Updated 25 ಸೆಪ್ಟೆಂಬರ್ 2023, 23:50 IST
   

ಪೋಷಕರ ದೃಷ್ಟಿಕೋನ, ಚಿಂತನೆ, ವ್ಯಕ್ತಿತ್ವ ಮಕ್ಕಳ ಬದುಕಿನಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಪೋಷಕತ್ವದ ಬಗೆಗೆ, ಬಾಲ್ಯದ ಬಗೆಗೆ, ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದ ಬಗೆಗೆ ಪೋಷಕರು ತಾಳುವ ನಿಲುವು ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಭಾವ ಬೀರುತ್ತದೆ.

ಮಕ್ಕಳನ್ನು ‘ಬೆಳೆಸುವುದು’ ಎನ್ನುವುದರ ಅರ್ಥವೇನು ಎಂಬ ಪ್ರಶ್ನೆಯನ್ನು ಪೋಷಕರು ಆಗಾಗ ಕೇಳಿಕೊಳ್ಳುತ್ತಿರಬೇಕಾಗುತ್ತದೆ. ಮಕ್ಕಳನ್ನು ‘ಬೆಳೆಸುವುದು’ ಎಂದರೆ ಅವರ ಭವಿಷ್ಯ ರೂಪಿಸುವುದೆಂದೇ? ಅವರು ಜೀವನದಲ್ಲಿ ಯಶಸ್ಸು ಕಾಣಲು ಸಹಕರಿಸುವುದೆಂದೇ? ಅವರು ಬದುಕಿನಲ್ಲಿ ಮುಂದೆ ಏನೋ ಸಾಧಿಸಲು ಬೇಕಾದ ವಿದ್ಯಾಭ್ಯಾಸ ಕೊಡಿಸುವುದೆಂದೇ? ಅವರು ಅರ್ಥಪೂರ್ಣವಾಗಿ, ಸಂತೋಷವಾಗಿ ಬದುಕಲು ಮಾನಸಿಕ, ಭಾವನಾತ್ಮಕ ಬುನಾದಿ ಹಾಕಿಕೊಡುವುದೆಂದೇ? ಪೋಷಕರು ತಾವು ಜೀವನದ ಗುರಿ, ಸಾರ್ಥಕತೆ ಯಾವುದರಲ್ಲಿ ಅಡಗಿದೆ ಎಂದು ತಿಳಿದುಕೊಂಡಿರುತ್ತಾರೋ ಅದರ ಮೇಲೆಯೇ ಅವರು ಮಕ್ಕಳನ್ನು ಬೆಳೆಸುವ ರೀತಿಯೂ ಅವಲಂಬಿತವಾಗಿರುತ್ತದೆ. ಮಕ್ಕಳನ್ನು ‘ಬೆಳೆಸುವುದು’ ಎನ್ನುವುದಕ್ಕೆ ನಾವೇನು ಅರ್ಥ ಕೊಡುತ್ತೇವೆ ಎನ್ನುವುದು ಮಕ್ಕಳ ಜೊತೆಗಿನ ನಮ್ಮ ವರ್ತನೆಯನ್ನು ರೂಪಿಸುತ್ತದೆ.

ಮಕ್ಕಳಿಗೇನೂ ಗೊತ್ತಾಗುವುದಿಲ್ಲ, ಅವರು ಖಾಲಿ ಹಾಳೆಯಿದ್ದಂತೆ, ಅವರನ್ನು ಅವರಷ್ಟಕ್ಕೆ ಬಿಟ್ಟುಬಿಟ್ಟರೆ ತಪ್ಪುಗಳಾಗುವ ಸಾಧ್ಯತೆಯೇ ಹೆಚ್ಚು. ಮುಂದಿನ ಬದುಕಿನಲ್ಲಿ ಅವರು ದಾರಿ ತಪ್ಪದೇ ಇರಬೇಕಾದರೆ ಇಂದಿನಿಂದಲೇ ನಾವು ಅವರನ್ನು ತಿದ್ದುತ್ತಿರಬೇಕು ಎಂದು ನಂಬಿರುವ ಪೋಷಕರು ಮಕ್ಕಳು ಮಾಡುವ ಎಲ್ಲ ಕ್ರಿಯೆ-ಪ್ರತಿಕ್ರಿಯೆಗಳಲ್ಲೂ ಏನಾದರೂ ತಪ್ಪು ಹುಡುಕುತ್ತಾ ಮಕ್ಕಳು ಎಷ್ಟು ಪರಿಪೂರ್ಣರಾಗಿದ್ದರೂ ಸಾಲದು ಎನ್ನುವಂತಹ ಧೋರಣೆ ಹೊಂದಿರುತ್ತಾರೆ. ಅಂತಹ ಪೋಷಕರ ಮಕ್ಕಳು ಮುಂದಿನ ಬದುಕಿನಲ್ಲೂ ಸದಾ ಯಾರನ್ನೋ ಮೆಚ್ಚಿಸಲು ಹೆಣಗಾಡುತ್ತಿರುತ್ತಾರೆ; ತಮ್ಮ ಯಾವ ಕೆಲಸದಿಂದಲೂ ತೃಪ್ತಿಹೊಂದದೆ ಹತಾಶರಾಗುವ ಸಾಧ್ಯತೆಗಳೂ ಇಲ್ಲದಿಲ್ಲ.

ADVERTISEMENT

‘ಮಕ್ಕಳು ಮೂಲತಃ ಸಹಜವಾದ ವಿವೇಕವುಳ್ಳವರು. ಜೀವನಪ್ರೀತಿ, ಪರಿಶುದ್ಧತೆ, ಒಳ್ಳೆಯತನಗಳು ಅವರಿಗೆ ಹುಟ್ಟಿನಿಂದಲೇ ಬಂದಿರುತ್ತವೆ. ಅವರ ಈ ಸಹಜ ಅರಿವು ಮತ್ತು ಪ್ರೀತಿ ಮಸುಕಾಗದಂತೆ ಅದನ್ನು ಉಳಿಸಿ ಬೆಳೆಸುವುದು ಪೋಷಕರಾಗಿ ನಮ್ಮ ಕರ್ತವ್ಯ’ ಎಂದು ತಿಳಿದಿರುವ ಪೋಷಕರು ತಾವು ಅತ್ಯಂತ ಗೌರವಿಸುವ, ಮೆಚ್ಚಿಕೊಳ್ಳುವ, ಅಚ್ಚರಿ, ಕುತೂಹಲಗಳಿಂದ ನೋಡುವ ವ್ಯಕ್ತಿಯೊಂದಿಗೆ ಹೇಗೆ ನಡೆದುಕೊಳ್ಳುತ್ತಾರೋ ಹಾಗೆಯೇ ತಮ್ಮ ಮಕ್ಕಳೊಂದಿಗೂ ವರ್ತಿಸುತ್ತಾರೆ.

ಮಕ್ಕಳ ಸಹಜ ವಿವೇಕದಲ್ಲಿ ನಂಬಿಕೆಯನ್ನಿಟ್ಟು, ಅವರ ಆತ್ಮಗೌರವಕ್ಕೆ, ಆತ್ಮಮೌಲ್ಯಕ್ಕೆ (self–worth) ಘಾಸಿಯಾಗದಂತೆ, ತಂದೆ/ತಾಯಿ ಮತ್ತು ಮಗುವಿನ ನಡುವಿರುವ ಆತ್ಮೀಯ ಬಾಂಧವ್ಯ, ಪ್ರೀತಿಯೇ ಮುಂದಿನ ಅವರ ಬದುಕಿಗೆ ದಾರಿದೀಪವಾಗುವಂತೆ ಮಕ್ಕಳನ್ನು ಬೆಳೆಸುವ ದಿಕ್ಕಿನಲ್ಲಿ ಪೂರಕವಾಗಬಹುದಾದ ಕೆಲವು ವಿಚಾರಗಳು ಹೀಗಿವೆ:

1) ಈಗ ತಂದೆ/ತಾಯಿಯಾಗಿ ಮಕ್ಕಳನ್ನು ಬೆಳೆಸುತ್ತಿರುವ ಪೋಷಕರೂ ಹಿಂದೊಮ್ಮೆ ಮಕ್ಕಳಾಗಿದ್ದರು, ಅವರಿಗೂ ಅವರ ಪೋಷಕರಿಗೂ ಇದ್ದ ಬಾಂಧವ್ಯ ಇಂದು ಅವರು ತಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತಾರೆ ಎನ್ನುವುದನ್ನು ಬಹುಪಾಲು ನಿರ್ಧರಿಸುತ್ತದೆ. ಪೋಷಕತ್ವದ ಬಗ್ಗೆ ನಾವೆಷ್ಟೇ ಪುಸ್ತಕಗಳನ್ನು ಓದಿ, ‘ಹೀಗೆ ಹೀಗೆ ನಡೆದುಕೊಳ್ಳಬೇಕು’ ಎಂದು ಸಂಕಲ್ಪಿಸಿದರೂ ನಮ್ಮ ಪೋಷಕರು ನಮ್ಮನ್ನು ನಡೆಸಿಕೊಂಡ ರೀತಿ ನಾವು ನಮ್ಮ ಮಕ್ಕಳನ್ನು ನೋಡಿಕೊಳ್ಳುವ ರೀತಿಯನ್ನು ಪ್ರಭಾವಿಸುತ್ತದೆ. ಹಾಗಾಗಿ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ನಮ್ಮನ್ನು ಅತಿಯಾಗಿ ಕಂಗೆಡಿಸುತ್ತಿದೆಯಾದರೆ ಅದಕ್ಕೆ ಬಲವಾದ ಕಾರಣಗಳಿರುತ್ತವೆ, ಆಗ ತಜ್ಞರೊಂದಿಗೆ ಸಮಾಲೋಚಿಸುವುದು, ಮನಸ್ಸನ್ನು ಶಾಂತವಾಗಿರಿಸಿಕೊಂಡು ಆಲೋಚಿಸುವುದನ್ನು ಅಭ್ಯಾಸಮಾಡಿಕೊಳ್ಳುವುದು ನಮ್ಮ ಮತ್ತು ನಮ್ಮ ಮಕ್ಕಳ ಭಾವನಾತ್ಮಕ ಆರೋಗ್ಯಕ್ಕೆ ಸಹಕಾರಿ.

2) ಕೆಲವೊಮ್ಮೆ ನಾವೆಷ್ಟೇ ಮಕ್ಕಳ ಮೇಲೆ ಕೂಗಾಡದೆ ಅವರಿಗೆ ಅರ್ಥವಾಗುವಂತೆ ಸಾವಧಾನದಿಂದ ತಿಳಿಹೇಳಬೇಕೆಂದುಕೊಂಡರೂ ನಮ್ಮ ಹಿಡಿತ ತಪ್ಪಿಹೋಗಿ ಪ್ರಚೋದನೆಗೊಳಗಾಗಿ ಕೂಗಾಡುತ್ತೇವೆ. ಆಗ ನೆನಪಿಟ್ಟುಕೊಳ್ಳಬೇಕಾದ, ಮನನ ಮಾಡಬೇಕಾದ ವಿಚಾರವೆಂದರೆ ‘ನಮ್ಮ ಭಾವನೆಗಳಿಗೆ, ವರ್ತನೆಗಳಿಗೆ ನಾವು ಜವಾಬ್ದಾರರೇ ಹೊರತು ನಮ್ಮ ಮಕ್ಕಳಲ್ಲ’. ಮಕ್ಕಳ ಮೇಲೆ ಕೂಗಾಡುವುದು ಭಾವನೆಗಳನ್ನು, ಒಳಗಿನ ತುಮುಲಗಳನ್ನು ನಿರ್ವಹಿಸಲಾರದ ನಮ್ಮ ಅಸಹಾಯಕತೆಯ ಅಭಿವ್ಯಕ್ತಿ. ಮಕ್ಕಳನ್ನು ನಾವೆಷ್ಟೇ ಪ್ರೀತಿಸುತ್ತಿದ್ದರೂ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದರಲ್ಲಿ ಸೋತಾಗ ಆ ಬೇಸರವನ್ನು ಸಿಟ್ಟಿನ ರೂಪದಲ್ಲಿ ತೋರ್ಪಡಿಸಿಕೊಳ್ಳುವುದು ಮಕ್ಕಳ ಮನಸ್ಸಿನಲ್ಲಿ ಸಲ್ಲದ ಗೊಂದಲಗಳನ್ನು ಸೃಷ್ಟಿಸುತ್ತದೆ. ತನ್ನ ತಂದೆ/ತಾಯಿಯ ಬೇಸರ, ಕೋಪಕ್ಕೆ ತಾನೇ ಕಾರಣ ಎಂದುಕೊಳ್ಳುವ ಮಗು ತನಗೆ ಏನು ಬೇಕು-ಬೇಡ ಎನ್ನುವುದನ್ನು ಕಡೆಗಣಿಸಿ ತನ್ನ ತಂದೆ/ತಾಯಿ ಬೇಸರ, ಕೋಪ ಮಾಡಿಕೊಳ್ಳದಂತೆ ಹೇಗೆ ವರ್ತಿಸುವುದು ಎಂದು ಪೋಷಕರ ಭಾವನೆಗಳನ್ನು ತಾನು ನಿರ್ವಹಿಸುವ ಕೆಲಸ ಮಾಡಲು ಹೊರಡುತ್ತದೆ. ಇದು ಖಂಡಿತವಾಗಿಯೂ ಮಗುವಿನ ಮನೋವಿಕಾಸಕ್ಕೆ ಮಾರಕವಾಗುತ್ತದೆ.

ಸಿಟ್ಟಿನಿಂದ ಮಕ್ಕಳನ್ನು ಬೈಯುತ್ತಾ ಅವರನ್ನು ನಿಂದಿಸುವುದು, ಅವಹೇಳನಕಾರಿಯಾದ ಭಾಷೆ ಉಪಯೋಗಿಸುವುದು, ಮಕ್ಕಳ ಮೇಲೆ ಅನುಮಾನ ಪಡುವುದು, ಮಕ್ಕಳ ಭವಿಷ್ಯದ ಬಗೆಗೆ ನಕಾರಾತ್ಮಕವಾದ ಮಾತುಗಳನ್ನಾಡುವುದು, ಮಕ್ಕಳಲ್ಲಿ ತೀವ್ರವಾದ ಮಾನಸಿಕ ಆಘಾತವನ್ನುಂಟುಮಾಡುತ್ತದೆ.

3) ಮಕ್ಕಳು ಸಣ್ಣ ಪುಟ್ಟ ಸುಳ್ಳು ಹೇಳುವುದು, ಪರೀಕ್ಷೆಯಲ್ಲಿ ಅಥವಾ ಆಟದಲ್ಲಿ ಮೋಸಮಾಡುವುದು, ಬೇರೆಯವರಿಗೆ ಅಗೌರವ ತೋರಿಸುವುದು, ತೊಂದರೆ ಕೊಡುವುದು, ದುರಭ್ಯಾಸಗಳನ್ನು ರೂಢಿಸಿಕೊಳ್ಳುವುದು ಮುಂತಾದವು ಮಾಡಿದಾಗ ತಾವು ಕೆಟ್ಟ ಪೋಷಕರು, ತಮ್ಮಲ್ಲೇ ಏನೋ ದೊಡ್ಡ ದೋಷವಿರುವುದರಿಂದಲೇ ತಮ್ಮ ಮಕ್ಕಳು ಹೀಗಾಡುತ್ತಿದ್ದಾರೆ ಎಂಬ ಅವಮಾನ, ದುಃಖದಿಂದ ಆವೇಶಕ್ಕೆ ಒಳಗಾಗಿ ಪೋಷಕರು ಮಕ್ಕಳಿಗೆ ಅತಿಯಾದ ಶಿಕ್ಷೆ ಕೊಡುವ ಮುನ್ನ ಮಕ್ಕಳ ಇಂತಹ ವರ್ತನೆಗೆ ಏನು ಕಾರಣ ಎಂದು ಅರ್ಥಮಾಡಿಕೊಳ್ಳುವ ಮತ್ತು ಈ ಬಿಕ್ಕಟ್ಟಿನ ಮೂಲಕವೂ ತಮ್ಮ ಮತ್ತು ತಮ್ಮ ಮಕ್ಕಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಕೆಲಸ ಮಾಡುವುದು ಒಳ್ಳೆಯದು. ತಮ್ಮನ್ನು ತಾವೇ ಸಮಾಧಾನಗೊಳಿಸಿಕೊಂಡು ನಂತರವಷ್ಟೇ ಮಕ್ಕಳಿಗೆ ‘ಹೀಗೆ ಮಾಡುವುದು ಏಕೆ ತಪ್ಪು, ಹಾಗೆ ಮಾಡದಿರುವುದು ಹೇಗೆ’ ಎಂದು ವಿವರಿಸುತ್ತಾ ನಿಧಾನವಾಗಿ ಮಾತನಾಡಬಹುದು. ಮಕ್ಕಳ ಮನಸ್ಸಿನಲ್ಲಾಗುತ್ತಿರುವ ಕೋಲಾಹಲವನ್ನು ಅರ್ಥಮಾಡಿಕೊಳ್ಳದೇ ಕೇವಲ ಅವರ ವರ್ತನೆ ಬದಲಾಯಿಸಲು ಹೊರಡುವುದು ಅಷ್ಟೇನೂ ಪರಿಣಾಮಕಾರಿಯಲ್ಲ.

4) ಕೆಲವೊಮ್ಮೆ ಎಷ್ಟೇ ಹೇಳಿಕೊಟ್ಟರೂ ಮಕ್ಕಳು ತಮ್ಮ ವರ್ತನೆಗಳನ್ನು ಬದಲಾಯಿಸಿಕೊಳ್ಳುವುದೇ ಇಲ್ಲ. ಉದಾಹರಣೆಗೆ ತನ್ನ ಪುಸ್ತಕ, ಬಟ್ಟೆಗಳನ್ನು ಜೋಡಿಸಿಕೊಳ್ಳುವುದರಲ್ಲಿ ಆಶಿಸ್ತು, ಅತಿಯಾದ ಸ್ಕ್ರೀನ್ ಟೈಮ್, ಹೋಂವರ್ಕ್ ಮಾಡಲು, ಓದಿಕೊಳ್ಳಲು ಸತಾಯಿಸುವುದು, ಹೀಗೆ. ಇಂಥವುಗಳ ಬಗೆಗೆ ಪದೇ ಪದೇ ಹೇಳಬೇಕಾದಾಗ ರೇಜಿಗೆಯಾಗಿ ಮಕ್ಕಳೊಂದಿಗೆ ಒರಟಾಗಿ ನಡೆದುಕೊಳ್ಳುವ ಪ್ರಸಂಗಗಳೂ ಬಂದುಬಿಡುತ್ತವೆ. ಆಗ ಒಂದು ವಿಷಯವನ್ನು ಮನಸ್ಸಿಗೆ ತಂದುಕೊಳ್ಳಬೇಕಾಗುತ್ತದೆ: ಪೋಷಕತ್ವ ಎನ್ನುವುದು ಪ್ರತಿದಿನವೂ, ಪ್ರತಿನಿಮಿಷವೂ ನಿರ್ವಹಿಸಬೇಕಾದ ಜವಾಬ್ದಾರಿ, ಅದನ್ನು ಒಂದು ದಿನದಲ್ಲಿ ಮಾಡಿ ಮುಗಿಸಿ ಕೈತೊಳೆದುಕೊಳ್ಳಲಾಗುವುದಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.