ADVERTISEMENT

ಆರೋಗ್ಯ: ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳು ಹೇಗೆ ಬರುತ್ತವೆ? ಪರಿಹಾರ ಏನು?

ಡಾ.ಕಿರಣ್ ವಿ.ಎಸ್ ಅವರ ಲೇಖನ

ಡಾ.ಕಿರಣ್ ವಿ.ಎಸ್.
Published 5 ನವೆಂಬರ್ 2024, 1:20 IST
Last Updated 5 ನವೆಂಬರ್ 2024, 1:20 IST
<div class="paragraphs"><p>ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳು ಹೇಗೆ ಬರುತ್ತವೆ? ಪರಿಹಾರ ಏನು?</p></div>

ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳು ಹೇಗೆ ಬರುತ್ತವೆ? ಪರಿಹಾರ ಏನು?

   

ಪ್ರತಿಯೊಂದು ಋತುವಿನ ಬದಲಾವಣೆಯ ವೇಳೆಯೂ ಕೆಲವು ಆರೋಗ್ಯ ಸಮಸ್ಯೆಗಳು ವಾತಾವರಣದಲ್ಲಿ ಹರಡುತ್ತವೆ. ಈ ಪೈಕಿ ಅಧಿಕವಾಗಿ ಬಾಧಿಸುವುದು ಕೆಮ್ಮು ಮತ್ತು ಗಂಟಲಿನ ಕಿರಿಕಿರಿ. ಬಹುಮಟ್ಟಿಗೆ ತಂತಾನೇ ಗುಣವಾಗುವ ಈ ಸಮಸ್ಯೆಗಳು ಕೆಲವೊಮ್ಮೆ ಸಾಕಷ್ಟು ಕಾಲ ವಿಸ್ತರಿಸಿ, ಕಾಡುತ್ತವೆ. ಮನೆ ಮದ್ದು ಅಂತಿರಲಿ; ವೈದ್ಯರ ಮದ್ದಿಗೂ ಸೊಪ್ಪು ಹಾಕದ ಒಣ ಕೆಮ್ಮು ಮತ್ತು ಗಂಟಲಿನ ಕಿರಿಕಿರಿಯನ್ನು ಸರಿಸುಮಾರು ಎಲ್ಲರೂ ಅನುಭವಿಸಿರುತ್ತಾರೆ.

ಕೆಮ್ಮು ಎನ್ನುವುದು ಮೂಲತಃ ನಮ್ಮ ಗಂಟಲು ಮತ್ತು ಶ್ವಾಸನಾಳಗಳನ್ನು ಕಾಪಾಡಲು ನಿಸರ್ಗ ನೀಡಿರುವ ರಕ್ಷಣಾ ವ್ಯವಸ್ಥೆ. ಶ್ವಾಸನಾಳಗಳಿಗೆ ಅಥವಾ ಶ್ವಾಸಕೋಶಗಳಿಗೆ ಕೆಡುಕು ಮಾಡಬಲ್ಲ ಅಂಶಗಳು ಗಂಟಲನ್ನು ಪ್ರವೇಶಿಸಿದಾಗ, ಅಲ್ಲಿನ ಲೋಳೆ ಪದರದಲ್ಲಿ ಹರಡಿರುವ ನರಗಳು ಅಂತಹ ಅಂಶಗಳನ್ನು ಗ್ರಹಿಸಿ, ಅವು ಮುಂದೆ ಪ್ರವೇಶಿಸದಂತೆ ನಿರ್ಬಂಧಿಸಿ, ನರಮಂಡಲದ ಮೂಲಕ ಸೂಚನೆಗಳನ್ನು ಕಳಿಸಿ, ಅವನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಈ ಸಹಜ ಪ್ರಕ್ರಿಯೆಯೇ ಕೆಮ್ಮು. ಈ ರೀತಿ ಕೆಡಕು ಮಾಡಬಲ್ಲ ಅಂಶ ಸೋಂಕುಕಾರಕ ಹನಿಗಳಾಗಿರಬಹುದು, ಕೇಡು ಮಾಡಬಲ್ಲ ರಾಸಾಯನಿಕವಿರಬಹುದು, ತೀರಾ ಬಿಸಿ ಅಥವಾ ತಣ್ಣಗಿನ ಪೇಯವಾಗಿರಬಹುದು, ಇಲ್ಲವೇ ಧೂಳು ಅಥವಾ ಮಲಿನ ವಸ್ತುವಾಗಿರಬಹುದು. ಅಪಾಯಕಾರಕ ಅಥವಾ ಸಹ್ಯವಾಗದ ಅಂಶಗಳನ್ನು ಗಂಟಲಿನಿಂದ ಹೊರದೂಡುವುದು ಕೆಮ್ಮಿನ ಉದ್ದೇಶ. ನಿಶ್ವಾಸದ ಗಾಳಿ ಶ್ವಾಸಕೋಶಗಳಿಂದ ವೇಗವಾಗಿ ತೂರಿ ಬಂದು, ಗಂಟಲು ಹಿಡಿದಿಟ್ಟಿರುವ ಮಲಿನ ಪದಾರ್ಥಗಳನ್ನು ಶ್ಲೇಷ್ಮದ ಜೊತೆಗೆ ಕೆಮ್ಮಿನ ರೂಪದಲ್ಲಿ ಹೊರಹಾಕುತ್ತದೆ. ತೀವ್ರವಾದ ಕೆಮ್ಮಿನ ವೇಗ ಗಂಟೆಗೆ ಸುಮಾರು 75-80 ಕಿಲೋಮೀಟರ್ ಎಂದು ಅಂದಾಜು, ಆದರೆ, ಹೊರಗಿನ ವಾತಾವರಣಕ್ಕೆ ಬರುತ್ತಲೇ ಕೆಮ್ಮಿನೊಡನೆ ಬರುವ ಹನಿಗಳು ಚದುರಿಹೋಗುವುದರಿಂದ, ಅದು ಕೆಲವೇ ಮೀಟರುಗಳನ್ನು ಕೂಡ ದಾಟಲಾರದು. ವ್ಯಕ್ತಿಯಿಂದ ವ್ಯಕ್ತಿಗೆ ಆರು ಅಡಿಗಳ (ಎರಡು ಮೀಟರ್) ದೂರ ಇದ್ದರೆ ಕೆಮ್ಮಿನ ಹನಿಗಳು ಅವರನ್ನು ತಲುಪುವ ಸಾಧ್ಯತೆ ಕಡಿಮೆ. ಇದನ್ನೇ ಸುರಕ್ಷಿತ ಅಂತರ ಎಂದು ಕೋವಿಡ್-19 ಕಾಲದ ಸೋಂಕಿನ ವೇಳೆ ಎಲ್ಲರಿಗೂ ತಿಳಿಯಹೇಳಲಾಗಿತ್ತು.

ADVERTISEMENT

ಬಹುತೇಕ ಕೆಮ್ಮು ಮತ್ತು ಗಂಟಲು ಬೇನೆಗಳಿಗೆ ನಿರ್ದಿಷ್ಟ ಚಿಕಿತ್ಸೆ ಬೇಕಾಗುವುದಿಲ್ಲ. ಸಾಕಷ್ಟು ಬಿಸಿನೀರನ್ನು ಕುಡಿಯುವುದು, ಉಪ್ಪು ನೀರಿನಲ್ಲಿ ಗಂಟಲನ್ನು ಮುಕ್ಕಳಿಸುವುದು, ಬೆಚ್ಚಗಿನ ದ್ರವಾಹಾರ ಸೇವನೆ, ಮಾತಿನಿಂದ ವಿಶ್ರಾಂತಿ, ಮಾತನಾಡುವಾಗ ದನಿಯನ್ನು ಏರಿಸದಿರುವುದು, ದೀರ್ಘ ಶ್ವಾಸ, ಮೊದಲಾದುವುಗಳು ಸಹಾಯಕ. ಇದನ್ನು ಮೀರಿಯೂ ಕೆಮ್ಮು, ಗಂಟಲಿನ ಕಿರಿಕಿರಿ ಹಾಗೆಯೇ ಉಳಿದರೆ ವೈದ್ಯರನ್ನು ಕಾಣಬೇಕು.

ಧೂಮಪಾನಿಗಳ ಗಂಟಲು ಸಾಮಾನ್ಯ ಜನರಿಗಿಂತ ಒಣದಾಗಿರುತ್ತದೆ. ಇಂತಹವರಲ್ಲಿ ಒಮ್ಮೆ ಆರಂಭವಾದ ಕೆಮ್ಮು ಬಹು ಬೇಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಧೂಮಪಾನಿಗಳು ಈ ಹಂತದಲ್ಲೂ ಎಚ್ಚೆತ್ತುಕೊಳ್ಳದೆ ಹಾಗೆಯೇ ಮುಂದುವರೆದರೆ ಕ್ಯಾನ್ಸರ್’ಗೆ ತಿರುಗಬಹುದು. ಹೀಗಾಗಿ, ಒಮ್ಮೆ ಕೆಮ್ಮು ಬಾಧಿಸಲು ಆರಂಭಿಸಿದರೆ ಅದು “ಧೂಮಪಾನವನ್ನು ತ್ಯಜಿಸಬೇಕಾದ ಸೂಚನೆ” ಎಂದೇ ಧೂಮಪಾನಿಗಳು ಅರಿಯಬೇಕು.

ನಗರ ಪ್ರದೇಶದಲ್ಲಿ ವಾಸಿಸುವ ಬಹುತೇಕ ಜನರು ವಾತಾವರಣದಲ್ಲಿನ ಮಾಲಿನ್ಯಕ್ಕೆ ತುತ್ತಾಗುತ್ತಾರೆ. ಹೀಗಾಗಿ, ಆಗಾಗ ಗಂಟಲು ಸರಿಪಡಿಸಿಕೊಳ್ಳುವಂತೆ ಬರುವ ಕೆಮ್ಮು ಸಹಜ. ಆದರೆ ಕೆಲ ಸಮಯಗಳಲ್ಲಿ ಕೆಮ್ಮು ಹೆಚ್ಚಾಗಿ ಕಾಡಬಹುದು. ಶ್ವಾಸನಾಳದ ಮತ್ತು ಗಂಟಲಿನ ಸೋಂಕು, ಶ್ವಾಸನಾಳಗಳಿಗೆ ಸಂಬಂಧಿಸಿದ ಅಲರ್ಜಿ, ಹೊಗೆ ಹಾಗೂ ಧೂಳುಯುಕ್ತ ಹವೆ, ಶ್ವಾಸಕೋಶಗಳ ಕಾಯಿಲೆ, ಹೃದಯ ವೈಫಲ್ಯ, ಮೂಗಿನ ಹಿಂಬದಿಯಿಂದ ಗಂಟಲಿಗೆ ಸುರಿಯುವ ಸ್ರವಿಕೆಗಳು, ಹೊಟ್ಟೆಯಲ್ಲಿನ ಆಮ್ಲ ಮೇಲಕ್ಕೆ ಚಿಮ್ಮಿ ಗಂಟಲನ್ನು ತಲುಪುವಿಕೆ ಮೊದಲಾದ ಸಂದರ್ಭಗಳಲ್ಲಿ ಕೆಮ್ಮು ಗಂಭೀರ ಸಮಸ್ಯೆಯಾಗಿ ಮಾರ್ಪಡುತ್ತದೆ.

ಹೆಚ್ಚಾಗಿ ಕೆಮ್ಮುತ್ತಾ ಹೋದಂತೆ ಗಂಟಲಿನ ಸೂಕ್ಷ್ಮ ಲೋಳೆಪದರಕ್ಕೆ ಘಾಸಿಯಾಗುತ್ತದೆ. ಪೆಟ್ಟಾದ ಲೋಳೆಪದರದೊಳಗೆ ಸೋಂಕುಕಾರಕ ಪರೋಪಜೀವಿಗಳು ಸುಲಭವಾಗಿ ಪ್ರವೇಶ ಗಿಟ್ಟಿಸುತ್ತವೆ. ಆಗ ಗಂಟಲಿನಲ್ಲಿ ಕೆರೆದಂತೆ ಭಾಸವಾಗುತ್ತದೆ. ಬಿಸಿಯಾದ ಅಥವಾ ಖಾರವಾದ ಪದಾರ್ಥಗಳನ್ನು ಸೇವಿಸಿದಾಗ ಉರಿಯ ಅನುಭವವಾಗಬಹುದು. ಇದು ಮುಂದುವರೆದು, ನುಂಗುವಾಗ ಗಂಟಲಿನಲ್ಲಿ ನೋವಾಗುತ್ತದೆ, ಧ್ವನಿ ಬದಲಾಗುತ್ತದೆ. ಮೂಗು ಸೋರುವಿಕೆ, ಉಸಿರುಗಟ್ಟುವುದು, ಜ್ವರ, ಚಳಿ, ಮೈ-ಕೈ ನೋವುಗಳು ಕಾಣಬಹುದು. ಶರೀರದ ರಕ್ಷಕ ವ್ಯವಸ್ಥೆ ಚೆನ್ನಾಗಿರುವವರಲ್ಲಿ ಈ ಹಂತದಲ್ಲೂ ಸೋಂಕು ತಾನಾಗಿಯೇ ನಿಗ್ರಹವಾಗುತ್ತದೆ. ಆದರೆ ರಕ್ಷಕ ವ್ಯವಸ್ಥೆ ಕ್ಷೀಣವಾಗಿರುವವರಲ್ಲಿ ಈ ಸೋಂಕು ಸಾಕಷ್ಟು ತೊಂದರೆ ನೀಡುತ್ತದೆ.

ಮಧುಮೇಹಿಗಳು, ಸಣ್ಣ ವಯಸ್ಸಿನ ಮಕ್ಕಳು, ಯಾವುದೇ ಕಾರಣಕ್ಕೆ ಸ್ಟೀರಾಯ್ಡ್ ಔಷಧಗಳನ್ನು ಸೇವಿಸುತ್ತಿರುವವರು ಮೊದಲಾದವರಲ್ಲಿ ಗಂಟಲು ಬೇನೆಯನ್ನು ಉಪೇಕ್ಷಿಸುವಂತಿಲ್ಲ. ಅದಕ್ಕೆ ಸಾಧ್ಯವಾದಷ್ಟೂ ಶೀಘ್ರವಾಗಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಆರಂಭಿಸಬೇಕಾಗುತ್ತದೆ.

ಕೆಮ್ಮಿನ ಯಾವ ಹಂತದಲ್ಲಿ ವೈದ್ಯರನ್ನು ಕಾಣಬೇಕು? ತಾತ್ಕಾಲಿಕ ಸಮಸ್ಯೆಯಿಂದ ಆಗುವ ಬಹುತೇಕ ಕೆಮ್ಮಿನ ಪ್ರಸಂಗಗಳನ್ನು ನಮ್ಮ ದೇಹದ ರಕ್ಷಕ ವ್ಯವಸ್ಥೆಯೇ ಸರಿಪಡಿಸುತ್ತದೆ. ಅದರ ಸಾಮರ್ಥ್ಯವನ್ನು ಮೀರಿದ ಬೇನೆಗಳಿಗೆ, ದೀರ್ಘಕಾಲಿಕ ಸಮಸ್ಯೆಗಳಿಂದ ಉಂಟಾಗುವ ಕೆಮ್ಮಿಗೆ ವೈದ್ಯಕೀಯ ಸಲಹೆ ಬೇಕಾಗುತ್ತದೆ. ನಲವತ್ತೆಂಟು ಗಂಟೆಗಳಿಗಿಂತಲೂ ಹೆಚ್ಚಿನ ಕಾಲ ಹೆಚ್ಚುತ್ತಾ ಹೋಗುವ ಗಂಟಲಿನ ಅಸೌಖ್ಯ, ಒಂದೇ ಸಮನೆ ಏರುತ್ತಿರುವ ಜ್ವರ, ಧ್ವನಿಯಲ್ಲಿನ ಬದಲಾವಣೆ, ದ್ರವ ಪದಾರ್ಥಗಳನ್ನು ನುಂಗುವುದೂ ಕಷ್ಟವೆನಿಸುವುದು, ನಿದ್ರಿಸುವಾಗ ಜೊಲ್ಲು ಸೋರುವುದು, ಉಸಿರಾಟದ ಸಮಸ್ಯೆ, ಬಾಯನ್ನು ಅಗಲವಾಗಿ ತೆರೆಯಲು ಹಿಂಸೆಯಾಗುವುದು, ಉಗುಳಿನಲ್ಲಿ ರಕ್ತ ಕಾಣುವುದು, ಮುಖ ಅಥವಾ ಗಂಟಲಿನ ಊತ - ಇಂತಹ ಸಂದರ್ಭಗಳು ಗಂಟಲಿನ ತೀವ್ರ ಸೋಂಕನ್ನು ಸೂಚಿಸುತ್ತವೆ. ಇಂತಹ ಯಾವುದೇ ಸೂಚನೆ ಕಂಡರೂ ತಡ ಮಾಡದೆ ವೈದ್ಯರ ನೆರವನ್ನು ಪಡೆಯಬೇಕು.

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.