ತಲೆ ಇದ್ದವರೆಲ್ಲಾ ಜೀವನದಲ್ಲಿ ಒಮ್ಮೆಯಾದರೂ ಅನುಭವಿಸಿಯೇ ಇರುವ ನೋವಿದು. ಸುಮಾರು ನೂರೈವತ್ತು ಬಗೆಯ ತಲೆನೋವುಗಳು ಕಾಡುತ್ತವೆ ಎಂದು ಒಂದು ಲೆಕ್ಕ. ಇದೊಂದು ರೋಗವೂ ಹೌದು, ಅಥವಾ ಮತ್ತೆ ಯಾವುದೋ ಬೇರೆ ರೋಗದ ಲಕ್ಷಣವೂ ಆಗಿರಬಹುದು. ಆದ್ದರಿಂದ ಎಲ್ಲಾ ಸಮಯವೂ ತಲೆನೋಯುತ್ತಿದೆ ಎಂದಾಗೆಲ್ಲಾ ನಿರ್ಲಕ್ಷಿಸುವುದು ಸರಿಯಲ್ಲ. ಆದ್ದರಿಂದ ಎರಡು ರೀತಿಯ ತಲೆನೋವು ಕಾಡುತ್ತದೆ ಎನ್ನಬಹುದು.
ತಲೆನೋವು ಯಾವುದೇ ಆಗಿದ್ದರೂ ಕಾರಣಗಳು ಪರಿಹಾರಕ್ಕೆ ಬೇಕೇ ಬೇಕು.
ಉತ್ತಮೋತ್ತಮ ಬೀಜವನ್ನು ಬರಡುಭೂಮಿಯಲ್ಲಿ ಬಿತ್ತಿದರೆ ಬೆಳೆಯ ಕನಸನ್ನೂ ಕಾಣಬಾರದು ಅಲ್ಲವೇ? ರೋಗಕಾರಣವೇ ಬೀಜ, ಸದೃಢ-ಶುದ್ಧಶರೀರವೇ ರೋಗ ಬೆಳೆಯದಿರುವ ಬರಡುಭೂಮಿ. ಸೃಷ್ಟಿಯಲ್ಲಿರುವ ಎಲ್ಲಾ ತನಗೆ ಯೋಗ್ಯವೇ? ಆರೋಗ್ಯವೇ ಎಂದು ವಿವೇಚನೆ ಮಾಡುವಷ್ಟು ಬುದ್ಧಿನೆಟ್ಟಗಿಲ್ಲವೆಂದಾದರೆ ಅದೂ ನಮ್ಮದೇ ತಪ್ಪು! ಬುದ್ಧಿ ನೆಟ್ಟಗಿದ್ದು, ಮನಸ್ಸು ಗಟ್ಟಿಯಿರದಿದ್ದರೆ ಆಚರಣೆ ಸಾಧ್ಯವಿಲ್ಲ. ಬುದ್ಧಿ-ಮನಸ್ಸು ಸರಿಯಿದ್ದರೂ ಹಿಂದಿನ ಘಟನೆಗಳು/ ಬೇರೆಯವರ ಅನುಭವಗಳು ಸಂದರ್ಭದಲ್ಲಿ ಮರೆತರೆ ಕೂಡ ನಮ್ಮದೇ ತಪ್ಪಲ್ಲವೇ? ಸ್ವತಃ ಯಾವುದೇ ವಸ್ತು/ ವಿಷಯ/ ವ್ಯಕ್ತಿ ನಮ್ಮ ಬದುಕಿಗೆ ಬಾರದು (ನಾವು ಎಡೆ ಮಾಡಿಕೊಡದ ಹೊರತು). ಆದ್ದರಿಂದ ರೋಗಗಳ ಬೀಜ ಮೊಳೆಯದಂತೆ ಬರಡಾಗಿಸಿಕೊಳ್ಳೋಣ! ಏಕೆಂದರೆ, ನಮ್ಮ ತಲೆ ‘ಹೆಡ್ ಆಫೀಸ್’.
ವಿದ್ಯುಚ್ಛಕ್ತಿ ನಮ್ಮ-ನಿಮ್ಮ ಮನೆಗಳಲ್ಲಿ ಬಾರದೇ ಇದ್ದರೂ ತೊಂದರೆ ಅಷ್ಟಿಲ್ಲ. ಉತ್ಪತ್ತಿ ಮಾಡುವ ಕಾರ್ಯಾಗಾರದಲ್ಲಿ ತಡೆಯಾದರೆ ದೇಶದ ಗತಿ?! ಹಾಗೆಯೇ ತಲೆ. ಶರೀರದ ‘ಉತ್ತಮಾಂಗ’ವೆಂದೇ ಕರೆಯಲ್ಪಡುತ್ತದೆ ಶಿರಸ್ಸು. ತಲೆಯು ಜ್ಞಾನೇಂದ್ರಿಯಗಳ ಅಧಿಷ್ಠಾನಗಳಿಗೆ ಆಶ್ರಯ, ಶರೀರದ ಊರ್ಧ್ವಭಾಗ, ಮೂವತ್ತೇಳು ಮರ್ಮಗಳನ್ನೊಳಗೊಂಡ ಶಿರಸ್ಸು, ಸ್ವತಃ ಮೂರು ಜೀವಸ್ಥಾನ(ತ್ರಿಮರ್ಮ)ಗಳಲ್ಲಿ ಒಂದು, ಪ್ರಾಣವಾಯುವಿನ ಹರಿವಿನ ಮಾರ್ಗ, ಇಂದ್ರಿಯಗಳ ಪೋಷಣೆ, ರಕ್ಷಣೆ ಮಾಡುವ ಅಂಶ ಅಂದರೆ ‘ತರ್ಪಕ ಕಫ’ದ ಸ್ಥಾನ. ಆದ್ದರಿಂದ ಶರೀರದ ಇತರ ಭಾಗಗಳಲ್ಲಿ ಆಗುವ ತೊಂದರೆಗಿಂತ ತಲೆಗೆ ಆಗುವ ಅಪಘಾತ/ ರೋಗ ಜೀವನವನ್ನು ಬರ್ಬರವಾಗಿಸುತ್ತದೆ.
ತಲೆನೋವು (ಶಿರಸ್ಸನ್ನು ಆಶ್ರಯಿಸಿ ಬರುವ ರೋಗಗಳು) - ಸ್ವರೂಪ ಹೇಗಿದ್ದರೂ ಅವುಗಳ ಬೀಜ, ಅಂದರೆ ಕಾರಣಗಳನ್ನು ಹುಡುಕುವುದಾದರೆ ಹೀಗಿತ್ತವೆ:
* ನಮ್ಮ ಶರೀರದ ಹದಿಮೂರು ಸ್ವಾಭಾವಿಕ ಕೆರೆಗಳು (ಅಂದರೆ: ಮಲ, ಮೂತ್ರ, ಅಧೋವಾತ (ಹೂಸು), ತೇಗು, ಸೀನು, ಆಕಳಿಕೆ, ಕೆಮ್ಮು, ಹಸಿವು, ಬಾಯಾರಿಕೆ, ನಿದ್ರೆ, ಕಣ್ಣೀರು, ಶುಕ್ರವೇಗ, ಏದುಸಿರು) ಇವುಗಳನ್ನು ಸಕಾಲದಲ್ಲಿ ಗಮನಿಸದಿರುವುದು, ಅನುಸರಿಸದಿರುವುದು.
* ಹಗಲು ನಿದ್ದೆ ಮಾಡುವುದು.
* ರಾತ್ರಿ ನಿದ್ರೆಗೆಡುವುದು.
* ಅತಿಯಾಗಿ ನಿದ್ರೆ ಮಾಡುವುದು.
* ಕ್ರಮ ತಪ್ಪಿದ ಮದ್ಯಪಾನ.
* ಸತತವಾಗಿ ಮಾತು, ಹರಟೆ, ಜೋರಾಗಿ, ದೊಡ್ಡ ಧ್ವನಿಯಲ್ಲಿ ಕಿರುಚುವುದು, ಮಾತನಾಡುವುದು.
* ಅತಿಯಾಗಿ ಮೈಥುನ ಮಾಡುವುದು.
* ಇಬ್ಬನಿ ವಾತಾವರಣದಲ್ಲಿ ಬಹಳ ಹೊತ್ತು ಇರುವುದು.
* ಬಿರುಸು ಗಾಳಿಗೆ ತಲೆ/ಮೈ ಒಡ್ಡುವುದು.
* ಧೂಳು, ಹೊಗೆ, ಮಂಜು, ಬಿಸಿಲುಗಳಲ್ಲಿ ಬಹಳ ಹೊತ್ತು ಇರುವುದು.
* ಎದುರು ಬೀಸುವ ಗಾಳಿಗೆ ಮೈಯೊಡ್ಡುವುದು, ಮುಖವನ್ನು ಒಡ್ಡುವುದು.
* ಜಲಕ್ರೀಡೆ - ನೀರಿನಲ್ಲಿ ಆಟ/ ಈಜು ಇತ್ಯಾದಿ; ನೀರಿನಲ್ಲಿ ಬಹಳ ಹೊತ್ತು ಇರುವುದು.
* ಅಭ್ಯಾಸವಿರದ/ ತೀಕ್ಷ್ಣ ಹೇಸಿಗೆಯಾಗುವಂತಹ ವಾಸನೆಯ ಸೇವನೆಯಿಂದ.
* ಅತಿಯಾಗಿ (ಬಾಯಾರಿಕೆ ಇಲ್ಲದಿದ್ದರೂ) ಲೀಟರ್ ಗಟ್ಟಲೆ ಒಳ್ಳೆಯದೆಂದು ನೀರು ಕುಡಿಯುವುದು.
* ಅತಿಯಾದ ಜೀರ್ಣಕ್ಕೆ ಜಡವಾದ, ಹುಳಿಹುಳಿಯಾದ, ಹೆಚ್ಚು ಹಸಿಸೊಪ್ಪು ಪ್ರಧಾನವಾದ ಆಹಾರಸೇವನೆ.
* ತಲೆಗೆ ಅತಿಯಾದ ಶಾಖ ಕೊಡುವುದು, ಬೆವರು ತರಿಸುವುದು. ಬಿಸಿ ಬಿಸಿ ನೀರಿನಿಂದ ತಲೆಸ್ನಾನ ಮಾಡುವುದು.
* ಬೇರೆ ಹೊಸ ಪ್ರದೇಶದ, ಅಭ್ಯಾಸವಿಲ್ಲದ ಸ್ಥಳ, ವಾತಾವರಣ ವ್ಯತ್ಯಾಸದಿಂದ.
* ಮೋಡ ಕವಿದ ವಾತಾವರಣದಲ್ಲಿ.
* ಅತಿಯಾಗಿ ಅಳುವುದು.
* ಕಣ್ಣೀರು ತಡೆಯುವುದರಿಂದ.
* ಮಾನಸಿಕ ಚಿಂತೆ, ಕೊರಗುವುದು, ದುಃಖದಿಂದ.
*ಆಳವಾದ ಸ್ಥಳವನ್ನು ಸತತವಾಗಿ ದಿಟ್ಟಿಸಿ ನೋಡುವುದರಿಂದ.
*ಕ್ರಿಮಿಗಳ ಉತ್ಪತ್ತಿಯಿಂದ.
*ಬಿಸಿಲು, ಗಾಳಿ, ಮಳೆಗಳಂತಹ ವಾತಾವರಣದ ವ್ಯತ್ಯಾಸದಲ್ಲಿ ತಲೆಗೆ ರಕ್ಷಣೆಗಾಗಿ ಟೋಪಿ/ ಪೇಟ/ ಛತ್ರಿ ಧರಿಸದಿರುವುದು.
*ಶರೀರವನ್ನು, ತಲೆಯನ್ನು ‘ಶೋಧನೆ’ ಮಾಡದಿರುವುದು.
* ತಲೆಗೆ ಅಥವಾ ನೆತ್ತಿಗೆ ಎಣ್ಣೆ ಹಚ್ಚುವ ಅಭ್ಯಾಸವಿಲ್ಲದಿರುವುದು.
* ತಲೆಗೆ ಪೆಟ್ಟು ಬೀಳುವುದು.
ತಲೆನೋವಿನ ಸಮಸ್ಯೆಗಳನ್ನು ತಡೆಯಲು
ಮಾಡಬೇಕಾದ ನಿತ್ಯಕರ್ಮಗಳನ್ನು ದಿನಚರಿಯಲ್ಲಿ ಮಾಡುವುದು. ಉದಾಹರಣೆಗೆ: ತಲೆಗೆ ಎಣ್ಣೆ ಹಾಕುವುದು, ಹಸಿವು ಬಾಯಾರಿಕೆ ಗಮನಿಸಿ ಸೇವಿಸಿವುದು, ರಾತ್ರಿ ಬೇಗ ಮಲಗಿ, ಮುಂಜಾನೆ ಏಳುವುದು, ಹಗಲುನಿದ್ರೆ ಮಾಡದೆ ಚಟುವಟಿಕೆಯಿಂದ ಇರುವುದು, ಅತಿಯಾಗಿ ಯಾವ ಕೆಲಸವನ್ನೂ ಆಯಾಸವಾಗುವಷ್ಟು ಮಾಡದಿರುವುದು.
* ಮಾಡಬಾರದ್ದನ್ನು ಮಾಡದಿರುವುದು ರೋಗಗಳಿಂದ ನಮ್ಮನ್ನು ದೂರ ಕೊಂಡೊಯ್ಯುತ್ತದೆ. ಅಂದರೆ, ಶಾರೀರಿಕ ಕರೆಗಳನ್ನು ಗೌರವಿಸಿ, ಅವುಗಳು ಸಕಾಲದಲ್ಲಿ ಬರುವಂತೆ, ಬಂದಾಗ ಗಮನಿಸುವ ಅಭ್ಯಾಸ.
* ಹಾಗಾಗಬೇಕಾದರೆ, ಸಕಾಲದಲ್ಲಿ ಹಿತಮಿತವಾದ ಆಹಾರ, ನಿದ್ರಾ ವ್ಯವಹಾರವಿರಲಿ.
* ಜೊತೆಗೆ, ನಿತ್ಯವೂ ತಲೆಗೆ, ಕಿವಿಗೆ, ಮೂಗಿಗೆ, ಶರೀರಕ್ಕೆ ಎಣ್ಣೆ ಹಾಕುವ/ ಹಚ್ಚುವ ಅಭ್ಯಾಸ.
*ಮುಖ್ಯವಾಗಿ, ರಾತ್ರಿ ಆಹಾರ – ಪಾನವು ಸೂರ್ಯಕಂತುವ ಮುನ್ನ ಅಥವಾ ನಂತರ ಎರಡು ತಾಸಿನೊಳಗೆ ಮುಗಿಯಲಿ.
ಕೆಲವು ಪರಿಹಾರಗಳು
* ಅತಿಯಾಗಿ ಆಹಾರ ಸೇವಿಸಿ ಅಥವಾ ಅಜೀರ್ಣವಾಗಿದ್ದಾಗ ತಲೆನೋವು ಬಂದಿದ್ದರೆ, ಆಹಾರ ಜೀರ್ಣವಾಗುವಂತೆ ಹಸಿ ಅಥವಾ ಒಣಶುಂಠಿಯ ತುಂಡೊಂದನ್ನು ನೀರಿನಲ್ಲಿ ಕುದಿಸಿ ಆರಿಸಿದ ನೀರನ್ನು ಗುಟುಕು ಗುಟುಕು ಕುಡಿಯುವುದು ಉತ್ತಮ. ಶುಂಠಿಯೊಂದಿಗೆ ಸೈಂಧವ ಉಪ್ಪು ಚಿಟಿಕೆಯಷ್ಟು ಸೇರಿಸಿ ಬಾಯಿಗೆ ಹಾಕಿಕೊಂಡು ಚಪ್ಪರಿಸುವುದು ಜೀರ್ಣಕ್ರಿಯೆಗೆ ಸಹಕಾರಿ. ಹೀಗೆ ಮಾಡಿದರೆ, ತಲೆನೋವು ಸಾಮಾನ್ಯವಾಗಿ ಹತ್ತು-ಹದಿನೈದು ನಿಮಿಷಗಳಲ್ಲಿ ಇಳಿಯುತ್ತದೆ. ಹೀಗೆ ಮಾಡಿಯೂ ಕಡಿಮೆ ಆಗದಿದ್ದಾಗ ಮುಂದಿನ ಆಹಾರವನ್ನು ತ್ಯಜಿಸಿ, ಖಾಲಿಹೊಟ್ಟೆಯಲ್ಲಿ ಸಹಜವಾಗಿಯೇ ಆಹಾರವು ಜೀರ್ಣವಾಗಲು ಬಿಡುವುದು ಉತ್ತಮ.
* ತಲೆಭಾರದ ನೋವಿದ್ದರೆ ಹಸಿಶುಂಠಿಯನ್ನು ಹಾಲಿನಲ್ಲಿ ತೇಯ್ದು, ಅಥವಾ ಒಣಶುಂಠಿ ಪುಡಿಯನ್ನು ಹಾಲಿನಲ್ಲಿ ಸೇರಿಸಿ ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಈ ಬಿಸಿಲೇಪವನ್ನು ಹಣೆಗೆ ಹಚ್ಚಿ ಅರ್ಧ ಗಂಟೆ ಕಾಯಬಹುದು. ಆಗಲೂ ತಲೆನೋವು ಕಡಿಮೆ ಆಗದಿದ್ದರೆ ವೈದ್ಯರ ನೆರವನ್ನು ಪಡೆಯುವುದು.
* ಯಾವುದೇ ತಲೆನೋವು ಸತತವಾಗಿ, ಪದೇ ಪದೇ ಕಾಡುತ್ತಿದ್ದರೆ ನೋವು ನಿವಾರಕಗಳನ್ನು ಬಳಸುತ್ತಾ ಮುಂದೂಡುವುದು ಸರಿಯಲ್ಲ. ಮತ್ತೊಂದು ಗಂಭೀರ ಸಮಸ್ಯೆಯೇ ಸೂಚಕವೂ ಆಗಿರಬಹುದು. ವೈದ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.