ADVERTISEMENT

ಚರ್ಮದ ಆರೈಕೆ ಹೀಗಿರಲಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 23:40 IST
Last Updated 27 ಸೆಪ್ಟೆಂಬರ್ 2024, 23:40 IST
<div class="paragraphs"><p>ಚರ್ಮದ ಆರೈಕೆ </p></div>

ಚರ್ಮದ ಆರೈಕೆ

   

ಚರ್ಮದ ಕಾಂತಿಯು ದೇಹವು ಆರೋಗ್ಯವಾಗಿರುವುದನ್ನು ಸದಾ ಖಾತ್ರಿಪಡಿಸುತ್ತದೆ. ನಳನಳಿಸುವ ಚರ್ಮ ಸಹಆರೋಗ್ಯವಂತ  ಲಕ್ಷಣಗಳಲ್ಲಿ ಒಂದು. ವ್ಯಕ್ತಿಯಿಂದ ವ್ಯಕ್ತಿಗೆ ಚರ್ಮದ ವಿನ್ಯಾಸ, ಬಣ್ಣಗಳೆಲ್ಲವೂ ವಿಭಿನ್ನವಾಗಿರುವುದರಿಂದ ಒಬ್ಬೊಬ್ಬರ ಚರ್ಮ ಒಂದೊಂದು ರೀತಿಯಲ್ಲಿ ರೂಪುಗೊಂಡಿರುತ್ತದೆ.

ಚರ್ಮಕ್ಕೆ ಯಾವುದೇ ರೀತಿಯ ಮದ್ದು ಹಚ್ಚುವ ಮುನ್ನ, ಅದರ ಗುಣಲಕ್ಷಣಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು. ಕಾಸ್ಮೆಟಿಕ್ಸ್‌ ಬಳಸುವ ಮುನ್ನ ನಮ್ಮ ಚರ್ಮದ ಬಗೆ ಎಂಥದ್ದು, ಯಾವುದು ಸೂಕ್ತ ಎಂಬುದನ್ನು ಮೊದಲು ಪರೀಕ್ಷೆ ನಡೆಸಿ ಮುಂದುವರಿಯಬೇಕು. ಇಲ್ಲವಾದರೆ ಚರ್ಮಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.

ADVERTISEMENT

ಚರ್ಮಗಳಲ್ಲಿ ಜಿಡ್ಡಿನ ಚರ್ಮ, ಒಣ ಚರ್ಮ, ಸೂಕ್ಷ್ಮ ಚರ್ಮ, ಸಾಮಾನ್ಯ ಚರ್ಮ ಎಂದು ವಿಂಗಡಿಸಿಕೊಳ್ಳಬಹುದು. ಆಯಾ ಚರ್ಮಕ್ಕೆ ಹೊಂದಿಕೆಯಾಗುವಂತೆ ಆರೈಕೆ ಮಾಡುವುದರಿಂದ ಅದಕ್ಕೆ ಸಂಬಂಧಪಟ್ಟ ಕ್ರೀಂಗಳನ್ನು ಹಚ್ಚುವುದರಿಂದ ಚರ್ಮ ನೈಸರ್ಗಿಕ ಆರೋಗ್ಯದಿಂದ ಇರುವಂತೆ ಮಾಡಬಹುದು.

ಜಿಡ್ಡಿನ ಚರ್ಮ:  ಮೇದೋಗ್ರಂಥಿಗಳು ಹೆಚ್ಚಾಗಿ ಸ್ರವಿಸುವುದರಿಂದ ಸದಾ ಜಿಡ್ಡಿನಿಂದ ಕೂಡಿರುತ್ತದೆ. ಮೇಲ್ನೋಟಕ್ಕೆ ಹೊಳಪಿನಂತೆ ಕಂಡರೂ, ಅತಿಯಾದ ಮೊಡವೆ ಹಾಗೂ ಕಲೆಗಳಾಗುವ ಸಾಧ್ಯತೆ ಇರುತ್ತದೆ. ಚರ್ಮದಲ್ಲಿರುವ ಜಿಡ್ಡಿನ ಅಂಶವನ್ನು ಸಮರ್ಪಕವಾಗಿ ನಿರ್ವಹಿಸಲು ಹಾಗೂ ನೈಸರ್ಗಿಕವಾಗಿ ತೇವಾಂಶವನ್ನು ರಕ್ಷಿಸಬೇಕು. ಜೆಲ್‌ ಆಧಾರಿತ ಅಥವಾ ಫೋಮಿಂಗ್‌ ಕ್ಲೆನ್ಸರ್‌ ಅನ್ನು ದಿನಕ್ಕೆ ಎರಡು ಬಾರಿ ಬಳಸಬೇಕು. ಇದರಿಂದ ಹೆಚ್ಚುವರಿ ತೈಲ ಹಾಗೂ ಕಲ್ಮಶಗಳು ಹೊರಹೋಗುತ್ತವೆ. ಚರ್ಮದಲ್ಲಿ ಜಿಡ್ಡಿನಂಶ ಹೆಚ್ಚಾಗಿ ರಂಧ್ರಗಳು ಮುಚ್ಚಿ ಹೋಗಿರುತ್ತವೆ. ಕ್ಲೆನ್ಸರ್‌ ಬಳಸುವುದರಿಂದ ರಂಧ್ರಗಳು ತೆರೆದುಕೊಳ್ಳಲು ಸಹಾಯವಾಗುತ್ತದೆ. ಇನ್ನು ಜಿಡ್ಡಿನಿಂದಾಗಿ ಅತಿಯಾದ ಮೊಡವೆ ಉಂಟಾಗಬಹುದು. ಇದನ್ನು ತಪ್ಪಿಸಲು ವಾರಕ್ಕೆ ಎರಡರಿಂದ ಮೂರು ಬಾರಿ ಎಕ್ಸ್‌ಫೋಲಿಯೇಟ್‌ ಬಳಸಿ. ಚರ್ಮದ ಸೂಕ್ಷ್ಮರಂಧ್ರಗಳು ಸದಾ ತೇವಾಂಶದಿಂದ ಕೂಡಿರಲು ಎಣ್ಣೆಮುಕ್ತ ಮಾಯಿಶ್ಚರೈಸರ್‌ ಅನ್ನು ತಪ್ಪದೇ ಬಳಸಿ. ಎಕ್ಸ್‌ಫೋಲಿಯೇಟ್‌ ಉತ್ಪನ್ನವು ಸತ್ತ ಚರ್ಮದ ಕೋಶಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ, ಹೊಸ ಚರ್ಮ ರೂಪುಗೊಳ್ಳಲು ಸಹಕರಿಸುತ್ತದೆ. 

ಒಣ ಚರ್ಮ: ಒಣ ಚರ್ಮವು ಬಿಗಿಯಾಗಿದ್ದು, ಒರಟಾಗಿರುತ್ತದೆ. ಇಂಥ ಚರ್ಮಕ್ಕೆ ಕಾಳಜಿ ಮಾಡಲು ಹೆಚ್ಚಾಗಿ ಮಾಯಿಶ್ಚರೈಸರ್‌ನ ಅಗತ್ಯವಿರುತ್ತದೆ. ಚರ್ಮದಲ್ಲಿ ಇರುವ ಕಡಿಮೆ ಪ್ರಮಾಣದ ಜಿಡ್ಡಿನಂಶವನ್ನು ನೈಸರ್ಗಿಕವಾಗಿ ಸಂರಕ್ಷಿಸಲು ಹೈಡ್ರೇಟಿಂಗ್‌ ಕ್ಲೆನ್ಸರ್‌ ಅನ್ನು ಬಳಸಿ. ಜಿಡ್ಡಿನಂಶ ಅತಿ ಕಡಿಮೆ ಇರುವುದರಿಂದ ಚರ್ಮದ ಕೋಶಗಳು ಆಗಾಗ್ಗೆ ನಶಿಸಿ, ಮರು ಉತ್ಪತ್ತಿಯಾಗುತ್ತವೆ. ಹಾಗಾಗಿ ವಾರಕ್ಕೆ ಎರಡು ಬಾರಿ ಎಕ್ಸ್‌ಫೋಲಿಯೇಟ್‌ ಬಳಸಿ.

ಸದಾ ನೈಸರ್ಗಿಕ ಜನಿಡ್ಡಿನಂಶವನ್ನು ಉಳಿಸಲು ಕೆನೆಯುಕ್ತ ಮಾಯಿಶ್ಚರೈಸರ್‌ ಅನ್ನು ಬಳಸಿ. ಎಸ್‌ಪಿಎಫ್‌ 30 ಅಥವಾ ಹೆಚ್ಚಿನ ಹೈಡ್ರೇಟಿಂಗ್‌ ಸನ್‌ಸ್ಕ್ರೀನ್‌ ಬಳಸಿ.  ಮನೆಯಿಂದ ಹೊರಗೆ ಹೋಗುವಾಗ ನೇರಳಾತೀತ ಕಿರಣಗಳಿಂದ ರಕ್ಷಣೆ ಪಡೆಯಲು ಎಣ್ಣೆಮುಕ್ತ ಸನ್‌ಸ್ಕ್ರೀನ್‌ ಬಳಸಿ. ಜಿಡ್ಡಿನ ಚರ್ಮದಲ್ಲಿ ಊರಿಯೂತವಿದ್ದರೆ ಅಲೋವೆರಾ ಅಂಶಗಳಿರುವ ಕ್ರೀಂಗಳನ್ನು ಬಳಸಬಹುದು. ‌

ಕೆಲವೊಮ್ಮೆ ಮುಖವು ಜಿಡ್ಡಿನಂಶ ಇರುವ ಚರ್ಮವಾಗಿದ್ದರೆ, ಕೈಕಾಲುಗಳು ಒಣಚರ್ಮವನ್ನು ಹೊಂದಿರುತ್ತದೆ. ಇದನ್ನು ಸಮತೋಲನಗೊಳಿಸಲು ಮುಖಕ್ಕೆ ಸೌಮ್ಯವಾದ ಕೆನ್ಸರ್‌ ಬಳಸಿ. ಶುಷ್ಕ ಚರ್ಮಕ್ಕೆ ಜಿಡ್ಡುಯುಕ್ತ ಸನ್‌ಸ್ಕ್ರೀನ್‌ ಅಥವಾ ಮಾಯಿಶ್ಚರೈಸರ್‌ ಬಳಸಿ.

ಸೂಕ್ಷ್ಮ ಚರ್ಮ: ಸೂಕ್ತ ಚರ್ಮವು  ಯಾವುದೇ ಉತ್ಪನ್ನಗಳನ್ನು ಬಳಸಿದರೆ  ಬಹುಬೇಗ ಪ್ರತಿಕ್ರಿಯಿಸುತ್ತದೆ. ಸಾಧ್ಯವಾದಷ್ಟು ಸುಗಂಧ ಮುಕ್ತ ಹೈಪೋಲಾರ್ಜನಿಕ್‌ ಕ್ಲೆನ್ಸರ್ ಬಳಸಿ. ಎಕ್ಸ್‌ಫೋಲಿಯೇಟ್‌ ಬಳಸದೆ ಇರುವುದೇ ಸೂಕ್ತ. ಹಿತವಾದ ಮಾಯಿಶ್ಚರೈಸರ್ ಬಳಸಿ, ಚರ್ಮ ಕೆಂಪಗಾಗುವುದು, ಉರಿಯನ್ನು ತಡೆಯಲು ಖನಿಜಾಧಾರಿತ ಸನ್‌ಸ್ಕ್ರೀನ್‌ ಬಳಸಿ.

 ಸಾಮಾನ್ಯ ಚರ್ಮ: ಸಾಮಾನ್ಯ ಚರ್ಮವು ಜಿಡ್ಡಿನ ವಿಷಯದಲ್ಲಿ ಸಮತೋಲನವನ್ನು ಕಾಯ್ದುಕೊಂಡಿರುತ್ತದೆ. ಆದರೆ, ಅದರ ಆರೋಗ್ಯಕ್ಕೆ ನಿಯಮಿತ ಆರೈಕೆಯ ಅಗತ್ಯವಿರುತ್ತದೆ. ವಾರಕ್ಕೆ ಎರಡು ಬಾರಿ ಎಫೋಲಿಯೇಟ್ ಮಾಡಿ. ಲಘು ಮಾಯಿಶ್ಚರೈಸರ್‌ ಬಳಸಿ.

ಚರ್ಮದ ಆರೈಕೆಯಲ್ಲಿ ಆಹಾರ


ಆರೋಗ್ಯಕರ ಚರ್ಮಕ್ಕಾಗಿ ಸಮತೋಲಿತ ಹಾಗೂ ಪೋಷಕಾಂಶವುಳ್ಳ ಆಹಾರವನ್ನು ನಿತ್ಯ ನಿಯಮಿತವಾಗಿ ಸೇವಿಸುವುದನ್ನು ಮರೆಯಬಾರದು. ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ. ಚರ್ಮ ಮಾಯಿಶ್ಚರೈಸರ್‌ ಆಗಿರಲು ಆರೋಗ್ಯಕರ ಕೊಬ್ಬನ್ನು ಸೇವಿಸುವುದರ ಜತೆಗೆ ಹೆಚ್ಚಿನ ನೀರು ಹಾಗೂ ನಾರಿನಂಶ ಇರುವ ಆಹಾರವನ್ನು ಸೇವಿಸಿ. ಸಂಸ್ಕರಿಸಿದ ಸಕ್ಕರೆಯಂಶ, ಕೆಫಿನ್‌ಗಳಿಂದ ದೂರವಿರಿ. ನಿತ್ಯ ಎಂಟು ಗಂಟೆಗಳ ಕಾಲ ನಿದ್ರೆ ಮಾಡಿ. ಮಿದುಳು ಹಾಗೂ ಚರ್ಮ ಆರೋಗ್ಯದಿಂದ ಇರಲು ಐದು ಗಂಟೆಗಳ ಗಾಢ ನಿದ್ರೆಯನ್ನು ಅನುಭವಿಸಿ.

ಪೂರಕ ಆಹಾರಗಳು

  • ಚರ್ಮದ ಕಾಂತಿಗೆ ಹೆಚ್ಚಾಗಿ ಸಿಟ್ರಸ್‌ ಅಂಶಗಳಿರುವ ಹಣ್ಣುಗಳನ್ನು ಯಥೇಚ್ಛವಾಗಿ ಬಳಸಿ. ಹಸಿ ತರಕಾರಿಗಳ, ಮೊಳಕೆ ಬರಿಸಿದ ಧಾನ್ಯಗಳ ಸೇವನೆಯೂ ಉತ್ತಮ.

  • ತೆಂಗಿನ ಕಾಯಿ ಹಾಗೂ ತೆಂಗಿನ ಹಾಲು ಚರ್ಮಕ್ಕೆ ವರದಾನ. ಆಗಾಗ್ಗೆ ಎಳನೀರಿನ ಸೇವನೆಯಿಂದಲೂ ಚರ್ಮ ತೇವಯುಕ್ತವಾಗಿರುವಂತೆ ಮಾಡಲು ಸಾಧ್ಯ. ಹಸಿ ತೆಂಗಿನಕಾಯಿ ಹಾಗೂ ಕೊಬ್ಬರಿಗೆ ಆಹಾರದಲ್ಲಿ ಆದ್ಯತೆ ಸಿಗಲಿ.

  • ಮೃದುವಾದ ಚರ್ಮಕ್ಕಾಗಿ ಅವಕಾಡೊ ಬಳಸಿ. ಆರೋಗ್ಯಕರ ಕೊಬ್ಬಿನಾಮ್ಲಗಳ ಜತೆಯಲ್ಲಿ ಇ–ವಿಟಮಿನ್‌ ಅಧಿಕವಾಗಿರುತ್ತದೆ. ಇದು ಚರ್ಮ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲ ಬಗೆಯ ಚರ್ಮವನ್ನು ಹೊಂದಿರುವವರು ಈ ಆಹಾರವನ್ನು ಸೇವಿಸಬಹುದು.

  • ಆಹಾರದಲ್ಲಿ ಶುದ್ಧ ತೆಂಗಿನೆಣ್ಣೆಯ ಬಳಕೆಗೆ ಮಹತ್ವ ನೀಡಿ. ಶುದ್ಧ ತೆಂಗಿನೆಣ್ಣೆಯು ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕುತ್ತದೆ. ಸೂಕ್ಷ್ಮಚರ್ಮ ಹೊಂದಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

  • ಮಾಂಸಾಹಾರ ಸೇವನೆ ಮಾಡುವವರಿಗೆ ಮೀನು ಉತ್ತಮ ಆಯ್ಕೆ. ಸಾಲ್ಮನ್‌ ಮೀನುಗಳಲ್ಲಿ ಊರಿಯೂತ ನಿವಾರಕ ಗುಣ ಇದೆ. ಮೀನಿನ ಎಣ್ಣೆಯನ್ನು ಬಳಸಿ ಮಾಡಿದ ಖಾದ್ಯಗಳಿಂದ ನೈಸರ್ಗಿಕ ಹೊಳಪು ಪಡೆಯಬಹುದು.

  • ವಾಲ್ನಟ್ಸ್‌ನ ಬೀಜಗಳಲ್ಲಿ ಮೊನೊಸಾಚುರೆಟೆಡ್‌ ಕೊಬ್ಬಿನಾಮ್ಲ ಇರುವುದರಿಂದ ಚರ್ಮ ಬಿಗಿಯಾಗಿರಲು ಸಹಾಯ ಮಾಡುತ್ತದೆ. ಹಸಿ ತರಕಾರಿ, ಸೊಪ್ಪು, ಕ್ಯಾರೆಟ್, ಬಿಟರೂಟ್‌ನ ಸೇವೆನೆಯಿಂದಲೂ ಚರ್ಮದ ಆರೈಕೆ ತನ್ನಿಂತಾನೆ ಆಗುತ್ತದೆ.

ಲೇಖಕರು: ಚರ್ಮರೋಗತಜ್ಞೆ, ಸಾಕ್ರಾ ವರ್ಲ್ಡ್‌ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.