ತುಟಿ, ವಸಡು, ಹಲ್ಲುಗಳು, ನಾಲಿಗೆಯ ಮೇಲ್ಮೈ-ಕೆಳಮೈ, ಬಾಯಿಯ ಗಟ್ಟಿ-ಮೆದು ಮೇಲ್ಛಾವಣಿ (ಕಠಿಣ-ಮೃದುತಾಲು ಪ್ರದೇಶ), ಕಿರುನಾಲಿಗೆ ಮತ್ತು ಅದರ ಎರಡು ಬದಿಗಳು - ಇವು ಬಾಯಿಯ ಭಾಗಗಳು. ಬಾಯಿಯೆಂದರೆ ಬರೀ ಬಾಯಲ್ಲ, ಇಡೀ ಜೀರ್ಣಾಂಗವ್ಯೂಹ, ವಿಸರ್ಜನಾಂಗ, ರಕ್ತಪರಿಚಲನೆ, ರಸ-ರಕ್ತ-ಮಾಂಸ-ಮೇದಸ್ಸು-ಮೂಳೆ-ಮಜ್ಜೆಧಾತುಗಳ ಆರೋಗ್ಯದರ್ಶಿ.
ಮೂತ್ರ-ಮಲವಿಸರ್ಜನೆ
ಬಾಯಿಯಿಂದ ತೊಡಗಿ ಗುದದವರೆಗೆ ಜೀರ್ಣಕ್ರಿಯೆ-ವಿಸರ್ಜನೆಯು ಜರುಗುತ್ತದೆ. ಮುಂಜಾನೆ ಘನ-ದ್ರವಾಹಾರವನ್ನು ಸೇವಿಸುವ ಮುನ್ನ ಕರುಳು ಖಾಲಿಯಾಗಲೇ ಬೇಕು. ಆಗಲೇ ಹಸಿವು-ಬಾಯಾರಿಕೆ ನಿಚ್ಚಳವಾಗಿ ಕಾಣಿಸುತ್ತದೆ. ಇದರಿಂದ ಬಾಯಿಯು ಇಡೀ ದಿನ ಗಂಧಮುಕ್ತವಾಗಿ ತಾಜಾತನವನ್ನು ಅನುಭವಿಸಲು ಸಾಧ್ಯ. ಹೊಟ್ಟೆಯುಬ್ಬರ, ಮಲಬದ್ಧತೆ, ಮೂತ್ರದ ತೊಂದರೆಗಳಲ್ಲಿ, ಜೀರ್ಣಾಂಗವ್ಯೂಹವು ವಿವಿಧ ಬಗೆಯ ದುರ್ಗಂಧವನ್ನು ಬಾಯಿಯ ಮೂಲಕ ಹೊರಸೂಸುತ್ತದೆ. ನಾಲಿಗೆಯ ಮೇಲೆ ಬಿಳಿ-ಹಳದಿ ಹಾಸು ಕಂಡುಬರುತ್ತದೆ. ಆಹಾರವು ಕರುಳಿನಲ್ಲಿ ಜೀರ್ಣವಾಗದೆ ಅಮ್ಲತೆಗೆ ಒಳಪಡುತ್ತಿದೆ, ಕೊಳೆಯುತ್ತಿದೆ, ಅಜೀರ್ಣವಾಗಿದೆ ಎಂದರ್ಥ. ತಿಳಿಗುಲಾಬಿ ಬಣ್ಣದ ಸ್ವಚ್ಛನಾಲಿಗೆಯು ಜೀರ್ಣಕ್ರಿಯೆ ಸರಿಯಾಗಿದ್ದಾಗ ಕಾಣಿಸುತ್ತದೆ.
ಹಲ್ಲುಜ್ಜುವುದು
ಮುಂಜಾನೆ ಎದ್ದ ಕೂಡಲೇ ಮಲಶೌಚದ ನಂತರ, ಒಗರು-ಕಹಿ-ಖಾರರುಚಿಯ ದಂತಮಂಜನದ ಪುಡಿಯಿಂದ ಅಥವಾ ಕಹಿಬೇವು/ಕರಿಬೇವು/ಮಾವು/ಹೊಂಗೆ ಮೊದಲಾದ ಹಸಿಮರದ ಕಡ್ಡಿಯನ್ನು ಅಗೆದು ಬ್ರಷ್‌ನಂತೆ ಮಾಡಿಕೊಂಡು ಅಥವಾ ಮೃದುಪ್ಲಾಸ್ಟಿಕ್-ಎಳೆಯ ಬ್ರಷ್‌ನಿಂದ ಒಂದೊಂದೇ ಹಲ್ಲನ್ನು ಉಜ್ಜುವುದು ಸೂಕ್ತ. ಒಗರು-ಕಹಿ-ಖಾರರುಚಿಯ ದಂತಮಂಜನದಿಂದ ದೃಢದಂತ, ಲಾಲಾರಸದ ಉತ್ತೇಜನ, ಗಂಟಲು-ಬಾಯಿಯೊಳಗಿನ ಲೋಳೆಯು ಚೊಕ್ಕಗೊಂಡು ಹಸಿವೆ-ಬಾಯಿರುಚಿಯು ಸ್ಪಷ್ಟವಾಗುವುದು. ಸಿಹಿಯಾದ, ಜೆಲ್, ನೊರೆಬರುವ ಪೇಸ್ಟಿನಿಂದ ಹಲ್ಲುಜ್ಜುವುದರಿಂದ ಹಲ್ಲುಗಳು ದೃಢವಾಗುವುದಿಲ್ಲ, ಬಾಯಿ-ನಾಲಿಗೆ-ಗಂಟಲು-ತಲೆಭಾಗದ ಮಲರೂಪದ ಕಫವೂ ನಿವಾರಣೆಯಾಗುವುದಿಲ್ಲ- ಇದು ಗಮನಾರ್ಹ. ಪ್ರತಿ ಆಹಾರಸೇವನೆಯ ನಂತರ ಹಲ್ಲುಸಂಧಿಯಲ್ಲಿ ಸಿಲುಕಿದ ಆಹಾರಕಣಗಳನ್ನು ತೆಗೆದು, ಉಜ್ಜುವುದು ಉತ್ತಮ.
ವಸಡುಗಳ ಬಲಕ್ಕಾಗಿ
ಹಲ್ಲುಜ್ಜಿದ ನಂತರ, ಜೇನುತುಪ್ಪ ಅಥವಾ ಜೇನು ಬೆರೆಸಿದ ತ್ರಿಫಲಾಪುಡಿಯನ್ನು ವಸುಡಗಳ ಮೇಲೆ ಮೃದುವಾಗಿ ಮಸಾಜ್ ಮಾಡಿಕೊಳ್ಳುವ ಅಭ್ಯಾಸದಿಂದ ಗಟ್ಟಿಯಾಗುತ್ತದೆ. ಬಾಯಿಹುಣ್ಣು, ರಕ್ತಸ್ರಾವ, ಕೀವುಗಳನ್ನು ನಿವಾರಿಸಬಹುದು. ನಸುಗೆಂಪು, ಹೊಳೆಯುವ ಗಟ್ಟಿವಸಡುಗಳೇ ಆಕರ್ಷಕ. ಹಲ್ಲುಗಳನ್ನು ಹಿಡಿದಿಟ್ಟು ಆಹಾರವನ್ನು ಅಗೆಯುವಾಗ, ಬಿಸಿ-ತಣ್ಣಗಿನ ಸೇವನೆಯನ್ನು ಸಹ್ಯಗೊಳಿಸುವಲ್ಲಿ ವಸಡಿನ ಪಾತ್ರವಿದೆ.
ನಾಲಿಗೆಯ ಸ್ವಚ್ಛತೆ
ಘಾಸಿಯಾಗದಂತೆ ನಾಲಿಗೆಯ ಮೇಲಿನ ಪಸೆಯನ್ನು ಕೆರೆದು ತೆಗೆಯಲು ಲೋಹ/ ಪ್ಲಾಸ್ಟಿಕ್‌ನ ಟಂಗ್-ಕ್ಲೀನರ್ ಬಳಸಬಹುದು. ಇದು ಮುಂಜಾನೆಯೊಮ್ಮೆ ಮಾಡಿದರೆ ಸಾಕು. ಸ್ವಚ್ಛಗೊಳಿಸಿದ ನಂತರವೂ ನಾಲಿಗೆಯ ಮೇಲೆ ಮತ್ತೆ ಪದರಗಟ್ಟುತ್ತಿದೆ ಅಂದರೆ, ಜೀರ್ಣಕ್ರಿಯೆ-ವಿಸರ್ಜನೆಯಲ್ಲಿ ತೊಂದರೆಯಿದೆ ಎಂದೇ ತಿಳಿಯಬೇಕು. ಜ್ವರ-ವಾಂತಿಯಲ್ಲಿ, ಗರ್ಭಿಣಿಯರಿಗೆ, ಮುಖಕ್ಕೆ ಲಕ್ವಾ ಹೊಡೆದವರಿಗೆ ಹಲ್ಲು-ನಾಲಿಗೆಯನ್ನು ತಿಕ್ಕುವುದು ತೊಂದರೆದಾಯಕ. ಇವರು ಬೆರಳುಗಳಿಂದ ಚೊಕ್ಕಗೊಳಿಸಿಕೊಂಡರೆ ಸಾಕು.
ಬಾಯಿಮುಕ್ಕಳಿಸುವುದು
ಬೇಸಿಗೆಯಲ್ಲಿ ತಣ್ಣೀರಿನಿಂದ, ಶೀತ-ಮಳೆಗಾಲದಲ್ಲಿ ಬೆಚ್ಚಗಿನ ನೀರಿನಿಂದ ಮುಕ್ಕಳಿಸುವುದು ಉಪಯುಕ್ತ. ಮುಂಜಾನೆ ಹಲ್ಲುಜ್ಜಿದ ನಂತರ, ಆಹಾರಸೇವನೆಯ ನಂತರ, ಆಚೆಯಿಂದ ಮನೆಗೆ ಮರಳಿದ ಕೂಡಲೆ, ಬಿಸಿಲಿನಿಂದ ಬಾಯಿ ಒಣಗಿದ್ದಾಗಲೂ ಇದನ್ನು ಮಾಡುವುದು ಅಗತ್ಯ. ಬಾಯಿಮುಕ್ಕಳಿಸುವುದರಿಂದ ತಾಜಾ ಉಸಿರು, ಬಾಯಿ-ಗಂಟಲಿನ ತೇವ-ತಾಪಮಾನ, ಹಲ್ಲು-ವಸಡು-ನಾಲಿಗೆ-ಗಂಟಲಿನಲ್ಲಿ ಸಿಲುಕಿದ ಆಹಾರಕಣಗಳಿಂದ ಮುಕ್ತಿ ದೊರಕುತ್ತದೆ. ಲಾಲಾಸ್ರಾವ ಸರಿದೂಗಿಸಲು ಉಪಕಾರಿ. ಆಹಾರ ಸೇವಿಸುವಾಗ ರುಚಿ ಹೆಚ್ಚುತ್ತದೆ.
ಮುಂಜಾನೆ/ ಖಾಲಿಹೊಟ್ಟೆಯಲ್ಲಿ ಎರಡು-ಮೂರು ಚಮಚ ಬೆಚ್ಚಗಿನ ಎಳ್ಳೆಣ್ಣೆ/ ಕಡಲೆಕಾಯಿಎಣ್ಣೆ/ ಕೊಬ್ಬರಿಎಣ್ಣೆ/ ತುಪ್ಪವನ್ನು ಬಾಯಿಯೊಳಗೆ ತುಂಬಿಕೊಂಡು ಎಂಜಲು ತುಂಬಿಬರುವವರೆಗೂ, ಸುಮಾರು ಎರಡು-ಮೂರು ನಿಮಿಷಗಳಷ್ಟು ಇಟ್ಟುಕೊಳ್ಳುವುದು ಅಥವಾ ಬಾಯಿಮುಕ್ಕಳಿಸಿ ಉಗುಳುವುದರಿಂದ ತುಟಿಗಳು ಮೃದುವಾಗಿ, ತಿಳಿಗೆಂಪಿನಿಂದ ತುಂಬಿಕೊಂಡಿರುತ್ತದೆ. ಚಳಿಗೆ ತುಟಿಬಿರಿಯದೆ ನುಣುಪಾಗಿರುತ್ತದೆ. ಸ್ವರವು ಮೃದುವಾಗಿ ಸುಮಧುರಕಂಠಕ್ಕೆ ಸಹಾಯವಾಗುತ್ತದೆ. ಈ ಅಭ್ಯಾಸವು ಹಲ್ಲುನೋವು ನಿವಾರಕ. ಹುಳುಕುಹಲ್ಲನ್ನು ತಡೆಯಬಹುದು. ಹಲ್ಲುಗಳು ಮಜ್ಜೆ-ಮೂಳೆಯ ಆರೋಗ್ಯಸೂಚಿ. ಒರಟುಮೂಳೆಗಳಿಂದ ಹಲ್ಲು ಕೂಡ ಪುಡಿಪುಡಿಯಾಗುವುದು, ಇದನ್ನು ತಡೆಯಬಹುದು. ಹಲ್ಲುಸಡಿಲಗೊಂಡು ಅಲುಗುವುದು ಸರಿಯಾಗುತ್ತದೆ. ವಸಡು, ಮಾಂಸಧಾತುವಿನ ಆರೋಗ್ಯದರ್ಪಣ. ವಸಡು-ಹಲ್ಲುಗಳ ದೃಢತೆಗೆ ಈ ದಿನಚರಿ ಸಹಾಯಕ.
ಬಾಯಿಮುಕ್ಕಳಿಸುವುದರಿಂದ ಜೀರ್ಣಕ್ರಿಯೆಯು ಉತ್ತೇಜನಗೊಂಡು, ಚುರುಕುಗೊಳ್ಳುತ್ತದೆ. ಇದರಿಂದ ಬಾಯಿಯ, ಉಸಿರಿನ ದುರ್ನಾತವನ್ನು ದೂರವಿಡಬಹುದು.
ಮೂಗಿಗೆ-ಕಿವಿಗೆ-ತಲೆಗೆ ಆರೈಕೆ
ಐದಾರು ಹನಿಗಳಷ್ಟು ಬೆಚ್ಚಗಿನ ಎಣ್ಣೆಯ ಹನಿಗಳನ್ನು ಮೂಗಿಗೆ-ಕಿವಿಗೆ ತುಂಬುವ ದಿನಚರಿ ಹಲ್ಲು-ವಸಡುಗಳ ರಕ್ಷಕ. ಮುಂಜಾನೆ ಹಲ್ಲುಜ್ಜಿದ ನಂತರ/ ಖಾಲಿಹೊಟ್ಟೆಯಲ್ಲಿ/ ಘನ-ದ್ರವಾಹಾರ ಸೇವಿಸುವ ಮೊದಲೇ ಇದನ್ನು ಮಾಡಬೇಕು. ಸದೃಢದಂತ, ಮಾಂಸಲವಸಡು ದೊರೆಯುತ್ತದೆ. ಮೃದು-ನಸುಗೆಂಪು ತುಟಿ, ಸ್ಚಚ್ಛಕಂಠದ ಲಾಭ. ತಲೆಯ ಚರ್ಮಕ್ಕೆ, ವಿಶೇಷವಾಗಿ ನೆತ್ತಿಗೆ ನಿತ್ಯವೂ ಎಣ್ಣೆಯನ್ನು ಹಾಕುವುದು ದಂತಗಳ ದೃಢಕರ. ಈ ಅಭ್ಯಾಸಗಳು ಹಲ್ಲು ನೋವುನಿವಾರಕ.
ಆಹಾರ-ಪಾನಕ್ರಮ
ಮೂರು ಹೊತ್ತು ಮಾತ್ರ ಘನ-ದ್ರವಾಹಾರಸೇವನೆ ಮಾಡುವುದರಿಂದ ಜೀರ್ಣಕ್ರಿಯೆಗೆ ಸಾಕಷ್ಟು ಸಮಯಾವಕಾಶ ದೊರಕುವುದರಿಂದ ಅಜೀರ್ಣಕ್ಕೆ ಅವಕಾಶವಿಲ್ಲದಂತಾಗುತ್ತದೆ. ಪದೇಪದೇ ತಿನ್ನುವುದರಿಂದ ಅಜೀರ್ಣ, ಇದರಿಂದ ಹಲ್ಲುಹುಳುಕು, ಉಸಿರಿನ-ಬಾಯಿಯ ದುರ್ಗಂಧ, ಅರುಚಿ, ಕಿರುನಾಲಿಗೆಯ ಊತ, ಗಂಟಲಿನ ಕಫ, ಮೂಳೆ-ಮಜ್ಜೆ-ಮಾಂಸಗಳ ಅವರೋಧಾತ್ಮಕ ತೊಂದರೆಗಳಿಂದ ಹಲ್ಲು-ವಸಡುರೋಗ-ಬಾಯಿಹುಣ್ಣು ಕಾಡುತ್ತದೆ.
ಹಸಿಈರುಳ್ಳಿ/ಬೆಳ್ಳುಳ್ಳಿಯಂತಹ ಗಂಧಕಪ್ರಧಾನ ಆಹಾರದಿಂದ ಬಾಯಿಯ ವಾಸನೆ ಅಸಹನೀಯವಾಗುತ್ತದೆ. ಎಣ್ಣೆ/ತುಪ್ಪದಲ್ಲಿ ಹುರಿದು/ಬೇಯಿಸಿ ಮಿತವಾಗಿ ಸೇವಿಸುವುದು ಕ್ಷೇಮ.
ಬಾಯಾರಿಕೆಗೂ/ದೇಹದ ಅಗತ್ಯಕ್ಕೂ ಮೀರಿ ದ್ರವ/ನೀರಿನ ಸೇವನೆ ರಕ್ತ-ಮಾಂಸ-ಮೂಳೆ-ಮಜ್ಜೆಗಳ ಅನಾರೋಗ್ಯಕ್ಕೆ ಕಾರಣ. ಆಹಾರದೊಂದಿಗೆ ಜೀರ್ಣಕ್ರಿಯೆಗೆ ಸಾಕಾಗುವಷ್ಟು/ಬಾಯಾರುವಷ್ಟು ನೀರನ್ನು ಗುರುತಿಸಿಕೊಂಡು ವ್ಯಕ್ತಿಗತವಾಗಿ ಸೇವಿಸುವುದು ಉತ್ತಮ ದಿನಚರಿ.
ಕಾರ್ಬೋನೇಟೆಡ್-ಡ್ರಿಂಕ್ಸ್/ಸೋಡಾ/ಕ್ಷಾರೀಯಪಾನೀಯ/ಹುಳಿಹಣ್ಣಿನ ರಸಗಳ ಸೇವನೆಯ ಅಭ್ಯಾಸದಿಂದ ಮೂಳೆ-ಹಲ್ಲುಗಳ ಸವಕಳಿ/ದುರ್ಬಲತೆ ಉಂಟಾಗುತ್ತದೆ. ಇವುಗಳ ಅಭ್ಯಾಸ ಹಿತಕರವಲ್ಲ.
ಸಕಾಲನಿದ್ರೆ ಸಕಲರೋಗಕ್ಕೂ ಸುರಕ್ಷೆ
ವಾತ-ಮೂತ್ರ-ಮಲಗಳ ಸುಸೂತ್ರವಿಸರ್ಜನೆಗೆ ಅನುವಾಗುವಂತೆ ರಾತ್ರಿಯೂಟ ಎಂಟರೊಳಗೆ/ಬೇಗನೇ ಮುಗಿಸಿ ಹತ್ತು-ಹತ್ತೂವರೆಗೆ ನಿದ್ರೆ, ಮುಂಜಾನೆ ಎಚ್ಚರಾದ ಕೂಡಲೆ ಏಳುವ ಅಭ್ಯಾಸ ಅಗತ್ಯವಾಗಿರುತ್ತದೆ. ಈ ಅಭ್ಯಾಸವು ಜೀರ್ಣ-ವಿಸರ್ಜನಾಂಗಗಳ ಸಹಜಕ್ರಿಯೆಗೆ ಸಹಾಯಕ.
ತಾಜಾ ಉಸಿರು, ಸ್ವಚ್ಛಬಾಯಿ, ಹೊಳೆವ-ದೃಢಹಲ್ಲು, ಮೃದು-ಕೆಂಪುತುಟಿಗಳು ನಿಜಕ್ಕೂ ಆರೋಗ್ಯಸೂಚಕ.
–ಡಾ.ಪಲ್ಲವಿ ಹೆಗಡೆ
(ಲೇಖಕಿ: ಆಯುರ್ವೇದವೈದ್ಯೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.