ADVERTISEMENT

ಎದೆಯುರಿಗೆ ಅವಕಾಶ ಕೊಡದಿರಿ

ಡಾ.ವಿನಯ ಶ್ರೀನಿವಾಸ್
Published 6 ಸೆಪ್ಟೆಂಬರ್ 2021, 19:30 IST
Last Updated 6 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಮ್ಮೆಲ್ಲರನ್ನೂ ಒಮ್ಮೆಯಾದರೂ ಕಾಡಿರಬಹುದಾದಂತಹ ಸಮಸ್ಯೆಯೆಂದರೆ ಎದೆಯುರಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ. ಕೆಲವರನ್ನು ಇದು ಮೇಲಿಂದ ಮೇಲೆ ಕಾಡಿದರೆ, ಇನ್ನು ಕೆಲವರನ್ನು ಯಾವಾಗಲಾದರೊಮ್ಮೆ ಕಾಡುತ್ತದೆ. ಕೆಲವರಲ್ಲಂತೂ ಆಹಾರಕ್ರಮದಲ್ಲಿ ಸ್ವಲ್ಪವೇ ವ್ಯತ್ಯಾಸವಾದರೂ ತುಸು ಹೊತ್ತಿನಲ್ಲೇ ಎದೆಯುರಿಯ ಸಮಸ್ಯೆ ಬಾಧಿಸಲು ಶುರು ಮಾಡುತ್ತದೆ.

ಜಠರದ ಒಳಪದರಗಳಲ್ಲಿ ಉರಿಯೂತವೇ ಈ ಸಮಸ್ಯೆಗೆ ಮೂಲಕಾರಣ. ಸಾಮಾನ್ಯವಾಗಿ ಜಠರವು ಆಹಾರಚೀಲದಂತೆ ಕೆಲಸ ಮಾಡುವುದರ ಜೊತೆಯಲ್ಲಿಯೇ ಜೀರ್ಣಕ್ರಿಯೆಗೂ ಸಹಕರಿಸುತ್ತದೆ. ಜಠರದ ಒಳಪದರಗಳ ಜೀವಕೋಶಗಳು ಹೈಡ್ರೋಕ್ಲೋರಿಕ್ ಆಮ್ಲ ಹಾಗೂ ಪೆಪ್ಸಿನ್ ಎಂಬ ಕಿಣ್ವವನ್ನೂ ಉತ್ಪಾದಿಸುತ್ತವೆ. ಪೆಪ್ಸಿನ್ ಆಹಾರದಲ್ಲಿನ ಪ್ರೊಟೀನ್‌ಗಳನ್ನು ವಿಭಜನೆ ಮಾಡುವಲ್ಲಿ ಸಹಕರಿಸುತ್ತದೆ. ಆದರೆ, ಹೈಡ್ರೋಕ್ಲೊರಿಕ್ ಆಮ್ಲವು ಜಠರದ ಒಳಪದರಗಳ ಮೇಲೆ ಮತ್ತೊಂದು ಪದರವಾಗಿ ನಿಂತು, ಜಠರದ ಜೀವಕೋಶಗಳನ್ನು ರಕ್ಷಿಸುತ್ತದೆ. ಈ ಜೀವಕೋಶಗಳ ಉತ್ಪಾದನಾ ಕಾರ್ಯವೈಖರಿಯಲ್ಲಿ ವ್ಯತ್ಯಾಸವಾದಾಗ ಜಠರದ ಉರಿಯೂತ ಉಂಟಾಗುತ್ತದೆ.

ಕಾರಣಗಳೇನು?

ADVERTISEMENT

ದೋಷಪೂರಿತ ಆಹಾರಪದ್ಧತಿ: ಅತಿಯಾದ ಹುಳಿ, ಖಾರ ಮತ್ತು ಮಸಾಲೆಯುಕ್ತ ಆಹಾರದ ಸೇವನೆ. ಅತಿಯಾದ ಕಾಫಿ, ಟೀ ಸೇವನೆ.
ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯಲ್ಲಿನ ದೋಷ. ಕೆಲವರಲ್ಲಿ ರೋಗನಿರೋಧಕ ವ್ಯವಸ್ಥೆಯೇ ಜಠರದ ಜೀವಕೋಶಗಳನ್ನು ನಾಶ ಮಾಡುವ ವಸ್ತುಗಳನ್ನು ಉತ್ಪಾದಿಸುತ್ತದೆ.

ದೋಷಪೂರಿತ ಜೀವನಶೈಲಿ: ಜಡ ಜೀವನಶೈಲಿ. ಅತಿಯಾದ ಮದ್ಯಸೇವನೆ. ಅತಿಯಾದ ಧೂಮಪಾನ.

ಸೋಂಕು: ಹೆಲಿಕೋ ಬ್ಯಾಕ್ಟರ್ ಪೈಲೋರಿ, ಸಾಲ್‍ಮೊನೆಲ್ಲಾ ಮುಂತಾದ ಸೂಕ್ಷ್ಮಾಣು, ಕೆಲವು ವೈರಾಣುಗಳು ಕಾರಣವಾಗಬಹುದು.

ಅಪೌಷ್ಟಿಕತೆ: ಆಹಾರದಲ್ಲಿ ಪ್ರೊಟೀನ್‌ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳ ಕೊರತೆ.

ಕೆಲವು ಔಷಧಗಳ ಸೇವನೆ: ಆ್ಯಸ್ಪಿರಿನ್, ಐಬುಪ್ರೋಫಿನ್ ಮುಂತಾದುವು

ಕೆಲವು ರಾಸಾಯನಿಕಗಳು: ಶಕ್ತಿಯುತವಾದ ಆಮ್ಲಗಳು, ವಿಕಿರಣಗಳು. ಅತಿ ತಂಪಾದ ವಸ್ತುಗಳು.

ಗರ್ಭಿಣಿಯರಲ್ಲಿ ಹಾರ್ಮೋನ್‌ಗಳ ವ್ಯತ್ಯಾಸದ ಪರಿಣಾಮ.

ಒತ್ತಡಯುತ ಜೀವನ: ಯಾವುದೇ ಬಗೆಯ ಮಾನಸಿಕ / ದೈಹಿಕ ಆಘಾತ ಮತ್ತು ಒತ್ತಡ. ವ್ಯಕ್ತಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾದಾಗ. ಶರೀರಕ್ಕೆ ಸುಟ್ಟ ಗಾಯಗಳಾದಾಗ.

ಸಲಹೆ–ಸೂಚನೆಗಳು

ಅವಸರದಲ್ಲಿ ಆಹಾರಸೇವನೆ ಬೇಡ, ಆಹಾರವನ್ನು ಸರಿಯಾಗಿ ಅಗಿದು ತಿನ್ನಿರಿ.

ಅತಿಯಾದ ಕಾಫಿ, ಟೀ, ಇಂಗಾಲಯುಕ್ತ ತಂಪು ಪಾನೀಯಗಳ ಸೇವನೆ ಬೇಡ.

ಮದ್ಯಪಾನ ಹಾಗೂ ಧೂಮಪಾನಿಗಳಾಗಿದ್ದರೆ, ಅದನ್ನು ನಿಲ್ಲಿಸಿ.

ಆಹಾರದಲ್ಲಿ ಅತಿಯಾದ ಉಪ್ಪಿನಂಶವಿರುವ, ಕೊಬ್ಬಿನಂಶವಿರುವ, ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ, ಹುರಿದ ಪದಾರ್ಥಗಳ ಸೇವನೆ ಬೇಡ. ಬದಲಾಗಿ ಹಣ್ಣು, ತರಕಾರಿ, ಧಾನ್ಯ ಮತ್ತು ಬೇಳೆಕಾಳುಗಳಂತಹ ಹೆಚ್ಚು ನಾರಿನಾಂಶವಿರುವ ಪದಾರ್ಥಗಳನ್ನು ಸೇವಿಸಿ.

ದೀರ್ಘಾವಧಿಯವರೆಗೆ ಹಸಿವಿನಿಂದ ಬಳಲದಿರಿ. ದಿನವೂ ನಿಗದಿತ ಸಮಯಕ್ಕೆ ಸರಿಯಾಗಿ ಆಹಾರಸೇವನೆಯ ಅಭ್ಯಾಸವನ್ನು ರೂಢಿಸಿಕೊಳ್ಳಿರಿ.

ದಿನವೂ 6-8 ತಾಸುಗಳ ನಿದ್ರೆಯನ್ನು ತಪ್ಪಿಸಬೇಡಿ.

ವೈದ್ಯರ ಸಲಹೆಯಿಲ್ಲದೆ, ಯಾವುದೇ ಮಾತ್ರೆ ಅಥವಾ ಔಷಧವನ್ನು ಸೇವಿಸಬೇಡಿ.

ದಿನವೂ 3ರಿಂದ 4 ಲೀಟರ್‌ಗಳಷ್ಟು ನೀರನ್ನು ತಪ್ಪದೆ ಕುಡಿಯಿರಿ.

ವ್ಯಾಯಾಮದ ಅಭ್ಯಾಸವಿರಲಿ. ಯೋಗಾಭ್ಯಾಸದ ಜಠರ ಪರಿವರ್ತನಾಸನ, ವಜ್ರಾಸನ, ಅರ್ಧ ಮತ್ಸ್ಯೇಂದ್ರಾಸನ ಮತ್ತು ಪವನಮುಕ್ತಾಸನದಂತಹ ಆಸನಗಳು ಈ ಸಮಸ್ಯೆಗೆ ರಾಮಬಾಣ.

ಹೆಚ್ಚಿನ ಸಂದರ್ಭಗಳಲ್ಲಿ ಜೀವನಶೈಲಿ ಮತ್ತು ಆಹಾರಶೈಲಿಯಲ್ಲಿನ ಬದಲಾವಣೆಯೇ ಎದೆಯುರಿ ಸಮಸ್ಯೆಯನ್ನು ಶಮನಗೊಳಿಸಲು ಸಹಕಾರಿಯಾಗಬಲ್ಲದು. ಊಟವಾದ ಬಳಿಕ ತುಸುವೇ ಜೀರಿಗೆ ಅಥವಾ ಅಜವಾನದ ಬಳಕೆ ಎದೆಯುರಿಯನ್ನು ನಿಯಂತ್ರಿಸಲು ಸುಲಭೋಪಾಯ. ಒಂದು ಲೋಟ ನೀರಿನಲ್ಲಿ ಒಂದೆರಡು ಪುದಿನ ಎಲೆ ಮತ್ತು ಚೂರು ಶುಂಠಿಯನ್ನು ಕುದಿಸಿದ ನೀರನ್ನು ಕುಡಿಯುವುದು ಎದೆಯುರಿಯನ್ನು ಸ್ವಲ್ಪ ಮಟ್ಟಿಗೆ ಶಮನ ಮಾಡಬಲ್ಲದು.

ನೆನಪಿಡಿ: ಎದೆಯುರಿಯ ಜೊತೆಯಲ್ಲಿ ವ್ಯಕ್ತಿ ಬೆವರುತ್ತಿದ್ದರೆ, ಉಸಿರಾಡಲು ತೊಂದರೆ ಪಡುತ್ತಿದ್ದರೆ, ಎಡತೋಳು-ಬೆನ್ನಿನವರೆಗೆ ನೋವು ಕಾಣಿಸುತ್ತಿದೆಯೆಂದರೆ ಅಥವಾ ನೋವು ಹೆಚ್ಚುತ್ತಾ ಹೋದರೆ ಅದು ಹೃದಯಾಘಾತದ ಲಕ್ಷಣವಿದ್ದರೂ ಇರಬಹುದು. ಅಂಥ ಸಮಯದಲ್ಲಿ ತಡ ಮಾಡದೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.

ಕೆಲವು ಗುಣಲಕ್ಷಣಗಳು

ಮೇಲುಹೊಟ್ಟೆಯಲ್ಲಿ ಹಾಗೂ ಎದೆಯ ಭಾಗದಲ್ಲಿ ನೋವು/ಉರಿ, ಅಜೀರ್ಣ, ಹೊಟ್ಟೆ ಉಬ್ಬರಿಸಿದಂತಾಗುವುದು, ವಾಕರಿಕೆ, ವಾಂತಿ, ತೇಗು ಬರುವುದು, ಹಸಿವಾಗದಿರುವುದು, ಶರೀರದ ತೂಕ ಕಡಿಮೆಯಾಗುವುದು – ಇವೇ ಮುಂತಾದುವು ಜಠರದ ಉರಿಯೂತದ ಲಕ್ಷಣಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.