ADVERTISEMENT

ಕಾಡುವ ಕಾಮವನ್ನು ನಿಭಾಯಿಸುವುದು ಹೇಗೆ?

ನಡಹಳ್ಳಿ ವಂಸತ್‌
Published 19 ಮಾರ್ಚ್ 2021, 19:30 IST
Last Updated 19 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

* ಓದುವಾಗ ಕಾಮದ ಬಗ್ಗೆ ಯೋಚನೆ ಬಂದು ಏಕಾಗ್ರತೆ ಸಾಧ್ಯವಾಗುವುದಿಲ್ಲ. ಪರೀಕ್ಷೆಯ ಸಮಯದಲ್ಲಿ ಸುಂದರವಾದ ಹುಡುಗಿಯರನ್ನು ನೋಡಿದರೆ ಓದಲು ಮನಸ್ಸಾಗುವುದಿಲ್ಲ. ಪರಿಹಾರವೇನು?

ಅಜಿತ್‌, ಊರಿನ ಹೆಸರಿಲ್ಲ.

ಉತ್ತರ: ಕಾಮದ ಆಕರ್ಷಣೆ ವಯೋಸಹಜವಾದದ್ದು. ಆದರೆ ಕಾಮ ಯಾರನ್ನಾದರೂ ದಿನದ 24 ಗಂಟೆಯೂ ಸೆಳೆಯುವುದು ಸಾಧ್ಯವಿಲ್ಲ. ಓದುವ ವಿಷಯ ನಿಮಗೆ ಆಕರ್ಷಕ ಎನ್ನಿಸದಿದ್ದಾಗ ಕಾಮದ ಪ್ರಭಾವ ಹೆಚ್ಚಾಗುತ್ತದೆ. ನಿಮ್ಮ ಹಿಂಜರಿಕೆ, ಅಸ್ಪಷ್ಟತೆ, ಅನಿಶ್ಚಿತ ಸ್ಥಿತಿ, ಕೀಳರಿಮೆ ಮುಂತಾದವುಗಳು ಕೊಡುವ ನೋವನ್ನು, ಆತಂಕವನ್ನು ಕಾಮದ ಆಕರ್ಷಣೆಯಲ್ಲಿ ಮರೆಯಲು ಪ್ರಯತ್ನಿಸುತ್ತಿರಬಹುದೇ? ಕಾಮದ ಆಕರ್ಷಣೆಯನ್ನು ಒಪ್ಪಿಕೊಳ್ಳುತ್ತಲೇ, ಆನಂದಿಸುತ್ತಲೇ ಓದುವ ವಿಷಯಗಳನ್ನು ಆಸಕ್ತಿದಾಯಕವಾಗಿ ಮಾಡಿಕೊಳ್ಳುವುದು ಹೇಗೆ ಯೋಚಿಸಿ.

ADVERTISEMENT

* 23ರ ಯುವಕ. ಅತಿಯಾದ ಹಸ್ತಮೈಥುನದಿಂದ ಎಡಭಾಗದ ವೆರಿಕೋಸೀಲ್‌ ಆಗಿದೆ. ಶಸ್ತ್ರಚಿಕಿತ್ಸೆಯಲ್ಲಿ ರಕ್ತನಾಳವನ್ನು ಕತ್ತರಿಸುತ್ತಾರೆ ಎಂದು ಕೇಳಿದ್ದೇನೆ. ಆಹಾರದ ನಿಯಂತ್ರಣದಿಂದ ಇದನ್ನು ಸರಿಪಡಿಸಬಹುದೇ? ನನಗೆ ಕಾಮದಲ್ಲಿ ಆಸಕ್ತಿಯಿದೆ. ವೆರಿಕೋಸೀಲ್‌ನಿಂದಾಗಿ ಬೇಸರವಾಗಿದೆ. ಪರಿಹಾರವೇನು?
–ಜಾಕ್‌, ಊರಿನ ಹೆಸರಿಲ್ಲ.

ಉತ್ತರ: ವೆರಿಕೋಸೀಲ್‌ಗೆ ಸ್ಪಷ್ಟವಾದ ಕಾರಣಗಳೇನು ಎನ್ನುವುದು ವೈಜ್ಞಾನಿಕವಾಗಿ ತಿಳಿದಿಲ್ಲ. ಹಸ್ತಮೈಥುನದಿಂದ ಈ ತೊಂದರೆಯಾಗುತ್ತದೆ ಎನ್ನುವುದು ತಪ್ಪುಕಲ್ಪನೆ. 10-15 ಪ್ರತಿಶತ ಯುವಕರಲ್ಲಿ ಕಾಣಿಸಿಕೊಳ್ಳುವ ಇದು ನೀವು ತಿಳಿದುಕೊಂಡಷ್ಟು ಅಪಾಯಕಾರಿಯಲ್ಲ. ನೋವು ಹೆಚ್ಚಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ. ಶಸ್ತ್ರಚಿಕಿತ್ಸೆಯಿಂದ ಲೈಂಗಿಕ ಜೀವನಕ್ಕೆ ತೊಂದರೆಯಿಲ್ಲ. ಕೆಲವೊಮ್ಮೆ ವೀರ್ಯಾಣುಗಳ ಸಂಖ್ಯೆಯು ಕಡಿಮೆಯಾಗುವುದರಿಂದ ಮಕ್ಕಳಾಗುವುದಕ್ಕೆ ಕಷ್ಟವಾಗಬಹುದು. ಇದಕ್ಕೆ ಸಾಕಷ್ಟು ಪರಿಹಾರಗಳಿವೆ. ಸೂಕ್ತ ಸಂದರ್ಭದಲ್ಲಿ ಅವುಗಳನ್ನು ಹುಡುಕಬಹುದು. ಸಧ್ಯಕ್ಕೆ ಉದ್ಯೋಗ, ವೃತ್ತಿಗಳಿಂದ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಗಮನಹರಿಸಿ.

* 27ರ ಯುವಕ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಪ್ರೀತಿಸುತ್ತಿದ್ದ ಹುಡುಗಿ ಬೇರೆಯವರೊಂದಿಗೆ ಮದುವೆಯಾದಳು. ಅವಳೊಡನೆ ಒಮ್ಮೆ ದೈಹಿಕ ಸಂಪರ್ಕವಾಗಿತ್ತು. ಈಗ ಅವಳನ್ನು ನೆನಪಿಸಿಕೊಂಡು ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದು ತಪ್ಪು ಎಂದು ತಿಳಿದಿದ್ದರೂ ನಿಯಂತ್ರಿಸಲಾಗುತ್ತಿಲ್ಲ. ಇದರಿಂದ ಓದಿಗೆ ತೊಂದರೆಯಾಗುತ್ತಿದೆ. ಸಲಹೆ ನೀಡಿ.

ಭಾಸ್ಕರ, ಊರಿನ ಹೆಸರಿಲ್ಲ.

ಉತ್ತರ: ಹಸ್ತಮೈಥುನಕ್ಕೆ ಲೈಂಗಿಕ ಕಲ್ಪನೆಯೊಂದರ ಅಗತ್ಯವಿದೆಯಲ್ಲವೇ? ಸಧ್ಯಕ್ಕೆ ನಿಮ್ಮ ಹಳೆಯ ನೆನಪನ್ನು ಅದಕ್ಕೆ ಬಳಸುತ್ತಿದ್ದೀರಿ. ಅವಳಿಗೆ ಮದುವೆಯಾಗಿರುವುದರಿಂದ ಕಲ್ಪನೆ ವಾಸ್ತವವಾಗುವುದು ಸಾಧ್ಯವಿಲ್ಲವೆಂಬ ನೋವಿನಿಂದ ಮತ್ತು ಮದುವೆಯಾದವಳನ್ನು ಕಲ್ಪಿಸಿಕೊಳ್ಳುವ ಪಾಪಪ್ರಜ್ಞೆಯಿಂದ ನರಳುತ್ತಿದ್ದೀರಿ. ನೆನಪನ್ನು ಬಲವಂತವಾಗಿ ಹೊರತಳ್ಳಲು ಹೋದಷ್ಟೂ ಪಾಪಪ್ರಜ್ಞೆ ಹೆಚ್ಚುತ್ತದೆ. ಕಲ್ಪನೆಯನ್ನು ಸಹಜವಾಗಿ ಒಪ್ಪಿಕೊಂಡು ಬಲವಂತವಾಗಿ ಹೊರತಳ್ಳುವ ಪ್ರಯತ್ನ ನಿಲ್ಲಿಸಿ. ವಾಸ್ತವಾಗಲು ಸಾಧ್ಯವಾಗದ ಕನಸುಗಳನ್ನು ಮನಸ್ಸು ನಿಧಾನವಾಗಿ ತಾನಾಗಿಯೇ ಹೊರತಳ್ಳುತ್ತದೆ. ಒತ್ತಡ ಹೇರಿದಷ್ಟೂ ಹಳೆಯದರ ಕಡೆಗೆ ಸೆಳೆಯಲ್ಪಡುವುದು ನಮ್ಮೆಲ್ಲರ ಸಹಜ ಗುಣ.

* ಯುವಕರು ದಿನನಿತ್ಯ ಹಸ್ತಮೈಥುನ ಮಾಡುವುದರಿಂದ ಆಗುವ ತೊಂದರೆಗಳೇನು ಮತ್ತು ಆರೋಗ್ಯಕರ ಲಾಭಗಳೇನು? ಅಹಾರ ಕ್ರಮ ಹೇಗಿರಬೇಕು? ಸವಿಸ್ತಾರವಾಗಿ ತಿಳಿಸಿ.

ರವಿಕುಮಾರ್‌, ಊರಿನ ಹೆಸರಿಲ್ಲ.

ಉತ್ತರ: ಮದುವೆಯಾದ ಮೇಲೆ ದಿನನಿತ್ಯ ಸಂಗಾತಿಯೊಡನೆ ಸುಖಿಸುವುದರಿಂದ ಆಗುವ ತೊಂದರೆಗಳೇನು ಮತ್ತು ಅನುಕೂಲಗಳೇನು? ಅಹಾರ ಕ್ರಮ ಹೇಗಿರಬೇಕು? ಈ ಪ್ರಶ್ನೆಗಳಿಗೆ ಏನು ಉತ್ತರ ಕೊಡುತ್ತೀರಿ? ಸಂಗಾತಿಯ ಜೊತೆ ಇರುವುದಿಲ್ಲ ಎನ್ನುವ ಮಾನಸಿಕ ಅಗತ್ಯವನ್ನು ಹೊರತಾಗಿಸಿದರೆ ದೈಹಿಕವಾಗಿ ಸಂಭೋಗಕ್ಕೂ ಹಸ್ತಮೈಥುನಕ್ಕೂ ಹೆಚ್ಚಿನ ವ್ಯತ್ಯಾಸಗಳೇನಿಲ್ಲ. ಕೇವಲ ಮಾನವರಷ್ಟೇ ಅಲ್ಲ, ಸಾಕಷ್ಟು ಸಸ್ತನಿಗಳಲ್ಲಿಯೂ (ಉದಾ; ನಾಯಿ ಬೆಕ್ಕು) ಕೂಡ ಹಸ್ತಮೈಥುನದಂತಹ ಪ್ರವೃತ್ತಿಯು ಕಂಡುಬರುತ್ತದೆ. ನೈರ್ಮಲ್ಯವನ್ನು, ಖಾಸಗಿತನವನ್ನು ಕಾಪಾಡಿಕೊಂಡು ಲೈಂಗಿಕ ಅಂಗಾಂಗಗಳಿಗೆ ಹಾನಿಯಾಗದಂತೆ ಎಚ್ಚರವಹಿಸಿದರೆ ಸಾಕು

* 25ರ ಯುವಕ. 21 ವರ್ಷದ ಹುಡುಗಿಯನ್ನು 2 ವರ್ಷದಿಂದ ಪ್ರೀತಿಸುತ್ತಿದ್ದೇನೆ. ಹುಡುಗಿಯ ಮನೆಯಲ್ಲಿ ಬೇರೆ ಹುಡುಗನನ್ನು ಹುಡುಕುತ್ತಿದ್ದಾರೆ. ಮನೆಯವರ ಒತ್ತಡಕ್ಕೆ ಒಳಗಾಗಿ ಅವಳು ದೂರವಾಗಿದ್ದಾಳೆ. ಅವಳನ್ನು ಮರೆಯಲಾಗುತ್ತಿಲ್ಲ. ಏನು ಮಾಡಲಿ?

ಮಹೇಶ್‌, ಊರಿನ ಹೆಸರಿಲ್ಲ.

ಉತ್ತರ: ನಿಮಗೆ ಹಿತವೆನ್ನಿಸುವವರ ಜೊತೆಯನ್ನು ಕಳೆದುಕೊಂಡಾಗ ನೋವಾಗುವುದು ಸಹಜ. ನೀವು ಕಳೆದುಕೊಂಡಿದ್ದು ಗಟ್ಟಿಯಾಗಿ ಬಹಳ ಕಾಲ ಉಳಿಯುವ ಪ್ರೀತಿಯಾಗಿತ್ತೆ? ಮನೆಯವರ ಒತ್ತಡಕ್ಕೆ ಒಳಗಾಗಿ ದೂರವಾದವಳು ನಿಮ್ಮನ್ನು ಪ್ರೀತಿಸುತ್ತಿದ್ದಳೇ? ಅಥವಾ ಅದು ಕೇವಲ ಹದಿವಯಸ್ಸಿನಲ್ಲಿ ಮೂಡಿದ ಆಕರ್ಷಣೆಯಾಗಿತ್ತೇ? ಆಕರ್ಷಣೆಯಿಂದಲೇ ಪ್ರೀತಿಯ ಆರಂಭವಾದರೂ ಅದೇ ಪ್ರೀತಿಯಲ್ಲ. ನೀವು ಕಳೆದುಕೊಂಡಿರುವುದು ಪ್ರೀತಿಯಾಗಿರಲೇ ಇಲ್ಲ. ಹಾಗಾಗಿ ತಾತ್ಕಾಲಿಕವಾದ ಮಾನಸಿಕ ನೋವನ್ನು ಒಪ್ಪಿಕೊಳ್ಳಿ. ನಿಮ್ಮ ಉದ್ಯೋಗ, ದುಡಿಮೆಗಳ ಕಡೆ ಹೆಚ್ಚು ಗಮನ ಹರಿಸಿ. ನಿಮ್ಮನ್ನು ಇಷ್ಟಪಡುವವರು ಮುಂದೆ ಸಿಗಲೇಬೇಲ್ಲವೇ?

* 27ರ ಯುವಕ. ಜಿಮ್‌ನಿಂದ ಸಧೃಢ ದೇಹ ಬೆಳೆಸಿದ್ದೆ. 22ನೇ ವಯಸ್ಸಿನಲ್ಲಿ ವಿವಾಹಿತೆಯೊಂದಿಗೆ ದೈಹಿಕ ಸಂಪರ್ಕ ಮಾಡಿದೆ. ಇದು ತಪ್ಪು ಎಂದು ತಿಳಿದು ನಿಲ್ಲಿಸಿದೆ. ನಂತರ ಜಿಮ್‌ ನಿಲ್ಲಿಸಿದ್ದರಿಂದ ತೂಕ ಕಳೆದುಕೊಂಡೆ. ಆಗ ಸ್ನೇಹಿತರ ಏಡ್ಸ್‌ ರೋಗಿಯ ತರಹ ಇದ್ದೀಯಾ ಎಂದು ಅಣಕಿಸಿದ್ದರಿಂದ ಭಯವಾಗಿ ಹೆಚ್‌ಐವಿ ಪರೀಕ್ಷೆ ಮಾಡಿಸಿದೆ. ನೆಗೆಟಿವ್‌ ಬಂದಿತು. ಬುದ್ಧಿಮಾಂದ್ಯರು, ಮನೋರೋಗಿಗಳನ್ನು ನೋಡಿದರೆ ನಾನು ಹಾಗೆಯೇ ಆಗಬಹುದೆಂಬ ಭಯ. ಎರಡು ವರ್ಷಗಳ ನಂತರ ಮತ್ತೆ ಹೆಚ್‌ಐವಿ ನೆಗೆಟಿವ್‌ ಬಂದಿದೆ. ಷಂಡತನದ ಭಯದಿಂದ ಮಾಡಿಸಿದ ವೀರ್ಯ ಪರೀಕ್ಷೆಯಲ್ಲಿಯೂ ಎಲ್ಲವೂ ಸರಿಯಾಗಿದೆ. ಈಗ ಹುಚ್ಚು ಹಿಡಿದಿದೆ ಎನ್ನಿಸುತ್ತದೆ, ಆತ್ಮಹತ್ಯೆಯ ಯೋಚನೆಗಳು ಬರುತ್ತಿವೆ. ಮನೋವೈದ್ಯರಿಂದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೂ ಅಡ್ಡಪರಿಣಾಮಗಳ ಭಯ. ಮನೆಯಲ್ಲಿ ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ. ಈ ಮನಸ್ಥಿತಿಯಲ್ಲಿ ಕಷ್ಟ ಎನ್ನಿಸುತ್ತಿದೆ. ಓದಿನಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ನಕಾರಾತ್ಮಕ ಯೋಚನೆಗಳು ಬರುತ್ತಿವೆ. ನನ್ನ ಸಮಸ್ಯೆಗೆ ವೈಜ್ಞಾನಿಕ ಕಾರಣ ಮತ್ತು ಪರಿಹಾರ ತಿಳಿಸಿ.

ಸೋಮಶೇಖರ್‌, ಊರಿನ ಹೆಸರಿಲ್ಲ.

ಉತ್ತರ: ವಿವಾಹಿತೆಯೊಂದಿಗೆ ಒಮ್ಮೆ ಸಂಪರ್ಕ ಮಾಡಿದ್ದು ತಪ್ಪೆಂದು ತಿಳಿದು ತಕ್ಷಣ ನಿಲ್ಲಿಸಿದ್ದು ನಿಮ್ಮೊಳಗಿನ ಗಟ್ಟಿತನದ ಸೂಚನೆಯಲ್ಲವೇ? ಅದನ್ನೇಕೆ ನೀವು ಗುರುತಿಸುತ್ತಿಲ್ಲ? ಹೀಗೆ ನಿಮ್ಮೊಳಗೆ ಅಡಗಿರುವ ಶಕ್ತಿಯನ್ನು ಗುರುತಿಸದೆ ಅಗತ್ಯವಿಲ್ಲದ ಅನುಮಾನ, ಆತಂಕಗಳನ್ನು ಆಹ್ವಾನಿಸಿಕೊಂಡಿದ್ದೀರಿ. ಇವೆಲ್ಲವೂ ಮಾನಸಿಕ ಕಾಯಿಲೆಗಳಲ್ಲ. ಹಾಗಿದ್ದಾಗ ಮಾತ್ರೆಗಳು ಹೇಗೆ ಸಹಾಯ ಮಾಡುತ್ತವೆ? ನಿಮಗೆ ಬೇಕಾಗಿರುವುದು ಮನೋಚಿಕಿತ್ಸೆ. ಸಧ್ಯಕ್ಕೆ ಮದುವೆಯ ಯೋಚನೆಯನ್ನು ಮುಂದೂಡಿ ಮಾತ್ರೆಗಳಿಲ್ಲದೆ ಮಾನಸಿಕ ಸಮತೋಲನವನ್ನು ಪಡೆಯುವ ದಾರಿ ಹುಡುಕಿ. ಮಾತ್ರೆಗಳನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬಂದಂತೆ ಅವುಗಳ ಅಡ್ಡಪರಿಣಾಮಗಳಿಂದಲೂ ಹೊರಬರುತ್ತೀರಿ.

* 21ರ ಯುವಕ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಓದುವ ಹವ್ಯಾಸ ಮತ್ತು ಹಂಬಲವಿದೆ. 8-10 ಗಂಟೆಗಳ ಕಾಲ ಅಧ್ಯಯನ ಮಾಡಿದ ನಂತರ ಏಕಾಗ್ರತೆ ಕಡಿಮೆಯಾಗುತ್ತದೆ. ಪರಿಹಾರವೇನು?

ಆದರ್ಶ, ಬೆಳಗಾವಿ ಜಿಲ್ಲೆ.

ಉತ್ತರ: 8-10 ಗಂಟೆಗಳ ಅಧ್ಯಯನ ಮಾಡುತ್ತಿರುವುದು ಒಂದು ಉತ್ತಮ ಸಾಧನೆಯೇ ಅಲ್ಲವೇ? ಅದನ್ನೇಕೆ ನೀವು ಗುರುತಿಸುತ್ತಿಲ್ಲ? ಮೆದುಳಿಗೂ ದೇಹದಂತೆ ಮಿತವಾದ ಶಕ್ತಿಯಿದೆ. ಅವಿರತವಾಗಿ ದುಡಿಸಿದರೆ ದೇಹದಂತೆ ಅದೂ ಕುಸಿಯುತ್ತದೆ. ಓದುವ ಸಮಯ ಹೆಚ್ಚು ಮಾಡುವುದಕ್ಕಿಂತ ಓದಿರುವುದನ್ನು ಸಮಗ್ರವಾಗಿ ಗ್ರಹಿಸುವುದು ಹೇಗೆ ಎನ್ನುವುದರ ಕುರಿತು ಯೋಚಿಸಬಹುದಲ್ಲವೇ? ಹೀಗೆ ಪುನರಾವರ್ತನೆಯನ್ನು ತಪ್ಪಿಸಿದಾಗ ಸಾಕಷ್ಟು ಸಮಯದ ಉಳಿತಾಯವಾಗುವುದಲ್ಲದೇ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಏಕಾಗ್ರತೆ ಕಡಿಮೆಯಾಗುತ್ತಿದೆ ಎನ್ನಿಸಿದಾಗ 5-10 ನಿಮಿಷಗಳ ವಿರಾಮ ಪಡೆದು ದೀರ್ಘವಾಗಿ ಉಸಿರಾಡುತ್ತಾ ನಿಮ್ಮ ದೇಹದ ಒಂದೊಂದೇ ಅಂಗಾಂಗಗಳನ್ನು ಗಮನಿಸುತ್ತಾ ಬನ್ನಿ. ದೇಹ ಸಮಸ್ಥಿತಿಗೆ ಬಂದಾಗ ಮನಸ್ಸು ಪುನಶ್ಚೇತನಗೊಳ್ಳುತ್ತದೆ.

ಏನಾದ್ರೂ ಕೇಳ್ಬೋದು

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ. bhoomika@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.