ಚಂಡಮಾರುತದ ಪ್ರಭಾವದಿಂದಾಗಿ ನಗರದಲ್ಲಿ ಸುರಿದ ಧಾರಾಕಾರ ಮಳೆ ಹಲವು ಬಗೆಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಿದೆ. ಬಿಸಿಲು, ಮಳೆಯ ನಡುವಿನ ಕಣ್ಣಾಮುಚ್ಚಾಲೆಯಾಟ ವೈರಾಣು ಜ್ವರ, ಕೆಮ್ಮು, ನೆಗಡಿಯಂಥ ಸಮಸ್ಯೆಯಿಂದ ಬಳಲುವಂತೆ ಮಾಡಿದೆ. ಆಗಾಗ್ಗೆ ಸುರಿಯುವ ಮಳೆಯ ನಡುವೆ ಶ್ವಾಸಕೋಶಗಳ ಆರೈಕೆ ಮಾಡುವುದು ಹೇಗೆ? ಇಲ್ಲಿದೆ ಒಂದಷ್ಟು ಸಲಹೆ.
ಮಳೆಯು ನಿರಂತರವಾಗಿ ಸುರಿಯುತ್ತಿದ್ದರೆ ಶ್ವಾಸಕೋಶದ ಮೇಲೆ ಪರಿಣಾಮ ಬೀರಬಹುದು. ಅದರಲ್ಲಿಯೂ ಆಸ್ತಮಾ, ಬ್ರಾಂಕೈಟಿಸ್, ಕ್ರಾನಿಕ್ ಅಬ್ಸಕ್ಟಿವ್ ಪಲ್ಮನರಿ ಡಿಸೀಸ್‌ನಂಥ ಸಮಸ್ಯೆ ಹೊಂದಿರುವವರಿಗೆ ತೀವ್ರ ತರದ ಉಸಿರಾಟದ ಸಮಸ್ಯೆಗಳು ಉಂಟಾಗಬಹುದು. ಮಳೆಯ ಜತೆಗೆ ವಾಯುಮಾಲಿನ್ಯ ಮತ್ತು ಧಾನ್ಯಗಳ ಪರಾಗ ಕಣಗಳ ಅಲರ್ಜಿಯಿಂದಲೂ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು. ಮಳೆಯ ಸಮಯದಲ್ಲಿ ಗಾಳಿಯಲ್ಲಿ ತೇವಾಂಶ ಹೆಚ್ಚಿರುತ್ತದೆ. ಇದರಿಂದ ಉಸಿರಾಟದ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ. ವಾತಾವರಣದಲ್ಲಿ ಅತಿಯಾದ ಆರ್ದ್ರತೆಯಿಂದಾಗಿ ಶ್ವಾಸನಾಳಗಳು ಕಿರಿದಾಗುತ್ತವೆ. ಇದರಿಂದ ಸರಾಗವಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಉಬ್ಬಸ, ಕೆಮ್ಮು, ಮೂಗು ಕಟ್ಟಿಕೊಳ್ಳುವುದು, ಮಾಲಿನ್ಯದ ಅಲರ್ಜಿಗಳಿಂದಾಗಿ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಗಾಳಿಯಲ್ಲಿರುವ ಕಣಗಳ ಮೇಲೆ ತೇವ ಸಂಗ್ರಹಗೊಳ್ಳುವುದರಿಂದ ಇದನ್ನು ಉಸಿರಾಡಿದಾಗ ಶ್ವಾಸಕೋಶದ ನಾಳಗಳು ಕಿರಿದಾಗುವ ಸಾಧ್ಯತೆಯೇ ಹೆಚ್ಚು. ಪ್ರತಿ ಬಾರಿ ಮಳೆಯಾದಾಗ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಉಸಿರಾಟದ ಮೇಲೆ ವೈರಾಣುಗಳ ದಾಳಿಯಾಗಬಹುದು. ತೀವ್ರತರದ ತಲೆನೋವು ಉಂಟಾಗಬಹುದು.
ತೇವಾಂಶದ ವಾತಾವರಣದಿಂದಾಗಿ ಸಲ್ಫರ್ ಡೈ ಆಕ್ಸೈಡ್ ಮತ್ತು ನೈಟ್ರೋಜನ್ ಡೈ ಆಕ್ಸೈಡ್‌ನಿಂದ ಉಸಿರಾಟದ ಮೇಲೆ ತೊಂದರೆಯಾಗಬಹುದು. ರೋಗನಿರೋಧಕ ಶಕ್ತಿಯ ಮೇಲೆ ದಾಳಿಯಾಗಬಹುದು. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು ಬಹುಬೇಗನೆ ಶಿಲೀಂಧ್ರ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು.
ಏನು ಮಾಡಬೇಕು?
ಆದಷ್ಟು ಮನೆಯ ವಾತಾವರಣವನ್ನು ಬೆಚ್ಚಗಿಡಲು ಪ್ರಯತ್ನಿಸಿ. ವಿಶೇಷವಾಗಿ ಆಸ್ತಮಾದಂಥ ಸಮಸ್ಯೆ ಹೊಂದಿರುವವರು ಮನೆಯಲ್ಲಿ ಡಿಹ್ಯೂಮಿಡಿಫೈಯರ್‌ಗಳನ್ನು ಬಳಸಿ. ಇದು ಮನೆಯ ಒಳಾಂಗಣ ತೇವಾಂಶವನ್ನು ನಿಯಂತ್ರಿಸುತ್ತದೆ.
ಜನಸಂದಣಿಯಲ್ಲಿರುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ. ಯಾವುದೇ ಉಸಿರಾಟದ ತೊಂದರೆ ಇದ್ದರೆ ವೈದ್ಯರನ್ನು ನೋಡಿ.
ತಣ್ಣನೆಯ ಗಾಳಿಯಿಂದ ಉಸಿರಾಟಕ್ಕೆ ತೊಂದರೆಯಾಗಬಹುದು. ಶ್ವಾಸಕೋಶದ ಸೋಂಕು, ಊರಿಯೂತ ಸಮಸ್ಯೆ ಸಾಮಾನ್ಯವಾಗಿದ್ದರಿಂದ ಆದಷ್ಟು ದೇಹವನ್ನು ಬೆಚ್ಚಗಿಟ್ಟುಕೊಳ್ಳಿ.
ಆಗಾಗ್ಗೆ ಬಿಸಿ ನೀರು ಸೇವನೆ ಮಾಡಿ.
ಈ ಮೊದಲು ಆಸ್ತಮಾ ಹಾಗೂ ಬ್ರಾಂಕೈಟಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರೆ ಅದನ್ನು ಮುಂದುವರಿಸಿ.
ದೇಹದ ತೂಕವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳಿ. ಈರುಳ್ಳಿ, ಬೆಳ್ಳುಳ್ಳಿ, ಅರಿಶಿನದಂಥ ಪದಾರ್ಥಗಳ ಸೇವನೆ ಹೆಚ್ಚಿರಲಿ.
–ಡಾ. ಸಚಿನ್‌ಕುಮಾರ್, ಶ್ವಾಸಕೋಶತಜ್ಞರು, ಸಾಕ್ರಾ ವರ್ಲ್ಡ್ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.