ADVERTISEMENT

ಏನಾದ್ರೂ ಕೇಳ್ಬೋದು: ಕಾಮದ ಆಕರ್ಷಣೆ ನಿಭಾಯಿಸಲು ಕಲಿಸುವವರು ಯಾರು?

ನಡಹಳ್ಳಿ ವಂಸತ್‌
Published 6 ಫೆಬ್ರುವರಿ 2021, 1:44 IST
Last Updated 6 ಫೆಬ್ರುವರಿ 2021, 1:44 IST
ನಡಹಳ್ಳಿ ವಸಂತ್
ನಡಹಳ್ಳಿ ವಸಂತ್   

* ಇತ್ತೀಚಿನ ದಿನಗಳಲ್ಲಿ ಶಾಲೆಯಿಂದ ಕಾಲೇಜಿನ ಮೆಟ್ಟಿಲೇರುವ ವಿದ್ಯಾರ್ಥಿಗಳು ಕಾಮವೆಂಬ ಕುದುರೆಯನ್ನೇರಿ ಅಭ್ಯಾಸದ ಹಾದಿ ತೊರೆದು ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ತರಹದ ತಪ್ಪು ಹಾದಿಯನ್ನು ತೊರೆಯಲು ಏನಾದರೂ ಸಲಹೆ ನೀಡುವಿರಾ?

- ಬಸವರಾಜ್‌, ಗೋಕಾಕ

ನಿಮ್ಮ ಕಾಳಜಿ ಪ್ರಾಮಾಣಿಕವಾದದ್ದು ಮತ್ತು ಮೌಲಿಕವಾದದ್ದು. ಯಾರಿಗೂ ಸಲಹೆ ನೀಡದೆ ನಿಮ್ಮಂತಹ ಪ್ರಜ್ಞಾವಂತರ ಮುಂದೆ ಕೆಲವು ವಿಚಾರಗಳನ್ನು ಇಡುತ್ತೇನೆ.

ADVERTISEMENT

ಸಮಾಜ, ಸಂಸ್ಕೃತಿ, ಧರ್ಮಗಳೆಲ್ಲಾ ಪ್ರಕೃತಿಯ ನಂತರ ಹುಟ್ಟಿದ ಕಲ್ಪನೆಗಳಾದ್ದರಿಂದ ಪ್ರಕೃತಿ ನಿಯಮ
ಗಳಿಗೆ ಒಳಪಡಲೇಬೇಕಲ್ಲವೇ? ಪ್ರಕೃತಿ ಪ್ರಾಣಿ ಪ್ರಪಂಚಕ್ಕೆಲ್ಲಾ ಸಮಾನವಾದ ನಿಯಮಗಳನ್ನು ಮಾಡಿದೆ. ದೇಹದಲ್ಲಿ ಪ್ರೌಢವಾದ ಪ್ರಾಣಿಗಳು ವಂಶಾಭಿವೃದ್ಧಿಯಲ್ಲಿ ಮುಕ್ತವಾಗಿ ಒಳಗೊಳ್ಳುತ್ತವೆ. ಮಾನವ ಗಂಡು– ಹೆಣ್ಣುಗಳಿಗೆ ಸುಮಾರು 15-16 ವರ್ಷಗಳಾದಾಗ ಪ್ರಕೃತಿ ಹಾರ್ಮೋನ್‌ಗಳ ಮೂಲಕ ವಂಶಾಭಿವೃದ್ಧಿಗಾಗಿ ದೇಹ ಮತ್ತು ಮನಸ್ಸನ್ನು ಪ್ರಚೋದಿಸುತ್ತದೆ. ಪ್ರಾಣಿಪ್ರಪಂಚದಲ್ಲಿ ಇರದ ನಿರ್ಬಂಧಗಳನ್ನು ಕೇವಲ ಮನುಷ್ಯರ ಮೇಲೆ ಹೇರುವುದನ್ನು ಪ್ರಕೃತಿ ಒಪ್ಪಲು ಸಾಧ್ಯವೇ? ಅದಕ್ಕಾಗಿಯೇ ನೂರಾರು ವರ್ಷಗಳ ಹಿಂದೆ ಮಕ್ಕಳು ಪ್ರೌಢರಾದ ಕೂಡಲೇ ಮದುವೆ ಮಾಡಲಾಗುತ್ತಿತ್ತು. ಇವತ್ತಿನ ಸಾಮಾಜಿಕ, ಆರ್ಥಿಕ ಸಂದರ್ಭಗಳಲ್ಲಿ ಇದು ಸಾಧ್ಯವಿಲ್ಲ ಎನ್ನುವುದು ನಿಮ್ಮ ತರ್ಕವಾದರೆ ಅದು ಸರಿಯೇ. ಆದರೆ ಪ್ರಕೃತಿ ಹೇರುವ ಕಾಮದ ಆಕರ್ಷಣೆಯನ್ನು ಮದುವೆಯಾಗುವವರೆಗೆ ನಿಭಾಯಿಸುವುದನ್ನು ಮಕ್ಕಳಿಗೆ ಕಲಿಸುವವರು ಯಾರು ಮತ್ತು ಹೇಗೆ? ಹೀಗೆ ಮಕ್ಕಳನ್ನು ಆರೋಗ್ಯಕರ ಲೈಂಗಿಕ ಜೀವನಕ್ಕೆ ಸಿದ್ಧಪಡಿಸಬೇಕಾಗಿರುವುದು ಪೋಷಕರ, ಧಾರ್ಮಿಕ ಮುಖಂಡರ, ಸರ್ಕಾರಗಳ ಒಟ್ಟಾರೆ ಸಮಾಜದ ಜವಾಬ್ದಾರಿಯಲ್ಲವೇ? ನಮ್ಮ ಮಕ್ಕಳಿಗೆ ಏನನ್ನೂ ಕಲಿಸದೆ ಎಲ್ಲಾ ತಪ್ಪುಗಳಿಗೆ ಮಾತ್ರ ಅವರನ್ನು ಹೇಗೆ ಹೊಣೆಗಾರರನ್ನಾಗಿ ಮಾಡಬಹುದು? ಇವತ್ತಿನ ಮಕ್ಕಳು ತಪ್ಪಿತಸ್ಥರಲ್ಲ. ಇವತ್ತು ಶಾಲಾಪಠ್ಯಗಳ ಮೂಲಕ ಕೊಡುತ್ತಿರುವುದು ಕೇವಲ ಸಂತಾನಕ್ರಿಯೆಯ ಶಿಕ್ಷಣ. ಮಾನವನ ಲೈಂಗಿಕತೆಗೆ ವಂಶಾಭಿವೃದ್ಧಿಯಿಂದ ಹೊರತಾದ ಹತ್ತುಹಲವು ಮುಖಗಳಿವೆ. ಯುವಜನತೆಗೆ ಬೇಕಾಗಿರುವುದು ನೀತಿ– ನಿಯಮ ಮತ್ತು ಶಿಸ್ತುಗಳ ಬೋಧನೆಯಲ್ಲ. ಬದಲಾಗಿ ಪ್ರೀತಿಯಿಂದ, ಸಹೃದಯತೆಯಿಂದ ಕೊಡಬಹುದಾದ ಸಂಪೂರ್ಣ ಲೈಂಗಿಕತೆಯ ಶಿಕ್ಷಣ.

***

* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದೇನೆ. ಓದಿರುವುದನ್ನು ನೆನಪಿನಲ್ಲಿ ಉಳಿಸಿಕೊಳ್ಳುವುದು ಹೇಗೆ?

- ಗಣೇಶ್‌, ಊರಿನ ಹೆಸರಿಲ್ಲ.

ನೆನಪು ಎನ್ನುವುದು ನಮ್ಮೆಲ್ಲರ ಆಯ್ಕೆ. ನಮ್ಮ ಮೆದುಳು ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತದೆಯೋ ಅದನ್ನು ಸಹಜವಾಗಿ ನೆನಪಿನಲ್ಲಿ ಉಳಿಸಿಕೊಳ್ಳುತ್ತದೆ. ಓದುತ್ತಿರುವ ವಿಷಯದಲ್ಲಿ ಆಳವಾದ ಆಸಕ್ತಿಯನ್ನು ಬೆಳೆಸಿಕೊಂಡರೆ ಮರೆಯುವ ಸಾಧ್ಯತೆಗಳಿರುವುದಿಲ್ಲ. ಪರೀಕ್ಷೆಯಷ್ಟೇ ಓದಿನ ಗುರಿಯಾದಾಗ ನೆನಪಿನಲ್ಲಿ ಉಳಿಸಲು ಶ್ರಮಪಡಬೇಕಾಗುತ್ತದೆ.

***

* ಎಂ.ಕಾಂ. ವಿದ್ಯಾರ್ಥಿ. ನನ್ನ ಅಥವಾ ಆಪ್ತರ ಬಗೆಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದರೆ ತುಂಬಾ ಕೋಪ ಬಂದು ಏನು ಮಾಡುತ್ತೀನಿ ಎಂದೇ ತಿಳಿಯುವುದಿಲ್ಲ. ನಂತರ ನನ್ನದೇ ತಪ್ಪು ಎನ್ನಿಸುತ್ತದೆ. ಎಲ್ಲಾ ಸಂಬಂಧಗಳು ನನ್ನಿಂದ ದೂರ ಸರಿದಿರುವುದರಿಂದ ಬೇಸರವಾಗುತ್ತದೆ. ಕೋಪವನ್ನು ಹಿಡಿತದಲ್ಲಿಡುವುದು ಹೇಗೆ?

- ಹೆಸರು, ಊರು ಇಲ್ಲ.

ಕೋಪ ಬಂದ ಕೂಡಲೆ ಮೆದುಳು ಅಪಾಯವನ್ನು ಗ್ರಹಿಸಿ ಆಕ್ರಮಣಕಾರೀ ಪ್ರವೃತ್ತಿಗೆ ಬೇಕಾದ ಹಾರ್ಮೋನ್‌ಗಳನ್ನು ಸೃಜಿಸುವ ವ್ಯವಸ್ಥೆ ಮಾಡುತ್ತದೆ. ಹಾಗಾಗಿ ಮಾತು, ನಡತೆಗಳು ಹದತಪ್ಪುವುದು ಪ್ರಾಣಿಸಹಜ ಕ್ರಿಯೆ. ಕೋಪ ಬಂದ ಕೂಡಲೇ ಏನಾದರೂ ಪ್ರತಿಕ್ರಿಯೆ ತೋರಿಸುವ ಮೊದಲು ದೀರ್ಘವಾಗಿ ಉಸಿರಾಡುತ್ತಾ ಎದೆಬಡಿತವನ್ನು ಹಿಡಿತಕ್ಕೆ ತಂದು ದೇಹವನ್ನು ಶಾಂತಗೊಳಿಸಿ. ನಂತರ ಹೇಗೆ ಉತ್ತರಿಸಬೇಕು ಎಂದು ನಿಧಾನವಾಗಿ ಯೋಚಿಸಿ.

ಇತರರಿಂದ ಬರುವ ಅಭಿಪ್ರಾಯಗಳನ್ನು ನೀವು ಹೇಗೆ ಗ್ರಹಿಸುತ್ತೀರಿ? ಅವಮಾನಕರ ಟೀಕೆಯೇಂದೇ? ನಿಮ್ಮನ್ನು ಕೀಳಾಗಿಸುವ ಪ್ರಯತ್ನವೆಂದೇ? ನಿಮ್ಮ ಕೋಪದಿಂದ ಅವರ ಅಭಿಪ್ರಾಯವನ್ನು ಬದಲಿಸಲು ಸಾಧ್ಯವೇ? ಭಿನ್ನಾಭಿಪ್ರಾಯಗಳಿದ್ದಲ್ಲಿ ಸ್ನೇಹ, ಸಂಬಂಧ ಸಾಧ್ಯವಿಲ್ಲ ಎನ್ನುವ ತಿಳಿವಳಿಕೆ ಬಾಲ್ಯದಲ್ಲಿ ನಿಮ್ಮೊಳಗೆ ಹೇಗೆ ಮೂಡಿತು? ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ನಿಮ್ಮೊಳಗೇ ಹುಡುಕಿದಾಗ ಕೋಪದ ಮೂಲವು ತಿಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.