* ನನಗೆ ನನ್ನ ದೌರ್ಬಲ್ಯಗಳು ಯಾವುವು ಎಂದು ಗೊತ್ತು. ಅದನ್ನು ಹೇಗೆ ಪರಿಹರಿಸಬೇಕೆಂದು ಸಹ ಗೊತ್ತು. ಆದರೆ ಅದನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲವೇಕೆ? ಈ ಗೊಂದಲಕ್ಕೆ ಮಾರ್ಗದರ್ಶನ ನೀಡಿ.
–ಹೆಸರು ಊರು ತಿಳಿಸಿಲ್ಲ.
ನಿಮ್ಮನ್ನು ಮತ್ತು ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಬೇಕಾದ ಸ್ಪಷ್ಟ ವಿವರಗಳು ಪತ್ರದಲ್ಲಿಲ್ಲ. ದೌರ್ಬಲ್ಯಗಳೆಂದು ಹೇಳಿರುವ ಪ್ರವೃತ್ತಿಗಳ ಕುರಿತು ಮಾತನಾಡಲು ಬಹಳ ಹಿಂಜರಿಕೆಯಾಗುತ್ತಿರಬೇಕಲ್ಲವೇ? ಮಾನವನ ಮಿದುಳು ನರಮಂಡಲಗಳು ಹಂಚಿಕೊಂಡು ಬದುಕುವುದಕ್ಕಾಗಿಯೇ ಸೃಷ್ಟಿಯಾಗಿವೆ. ದೌರ್ಬಲ್ಯಗಳ ಕುರಿತು ಯಾರಲ್ಲಿಯೂ ಮುಕ್ತವಾಗಿ ಹಂಚಿಕೊಳ್ಳುವುದನ್ನು ತಡೆಯುವ ಹಿಂಜರಿಕೆಯೇ ಪರಿಹಾರಗಳನ್ನು ಹುಡುಕುವುದಕ್ಕೂ ಅಡ್ಡಬರುತ್ತಿದೆ. ತಿಳಿದಿರುವುದನ್ನು ಮಾಡಲಾಗದಿರುವುದು ನಮ್ಮೆಲ್ಲರ ಸಮಸ್ಯೆ. ಇದಕ್ಕೆ ಪರಿಹಾರ ಹುಡುಕಲು ನಮ್ಮ ಮಿದುಳಿನ ರಚನೆಯ ಕುರಿತು ಸ್ವಲ್ಪ ತಿಳಿದುಕೊಳ್ಳುವ ಅಗತ್ಯವಿದೆ.
ದೌರ್ಬಲ್ಯಗಳಿಗೆ ಪರಿಹಾರಗಳು ನಿಮಗೆ ಗೊತ್ತಿರುವುದು ನಿಜ. ಆದರೆ ದೌರ್ಬಲ್ಯಗಳ ಹುಟ್ಟಿನ ಮೂಲ ನಿಮಗೆ ಗೊತ್ತಿರಲಾರದು. ಈ ಕ್ಷಣಕ್ಕೆ ನಮ್ಮ ತರ್ಕಕ್ಕೆ ಸಿಗುವ ಅಂಶಗಳು ಮುಮ್ಮೆದುಳಿನಲ್ಲಿ ಇರುತ್ತವೆ. ಮಾನವರ ವೈಶಿಷ್ಯವಾಗಿರುವ ಈ ಮುಮ್ಮೆದುಳು ಒಟ್ಟು ಮಿದುಳಿನ ಸುಮಾರು ಶೇ 25 ಭಾಗ ಮಾತ್ರ. ಉಳಿದ ಶೇ 75 ಭಾಗ ಮಿದುಳಿನಲ್ಲಿ ಬಾಲ್ಯದಿಂದ ನಾವು ಎದುರಿಸಿರುವ ಸಂದರ್ಭಗಳಿಂದ ಮೂಡಿದ ಅನುಭವಗಳ ದಾಖಲೆ ಇರುತ್ತದೆ. ಆಗಿನ ಎಲ್ಲಾ ಘಟನೆಗಳು ಈ ಕ್ಷಣಕ್ಕೆ ನೆನಪಾಗದಿದ್ದರೂ ಅವುಗಳಿಗೆ ಸಂಬಂಧಿಸಿದ ಅನುಭವಗಳು ನಮಗೆ ಪ್ರೇರಕ ಶಕ್ತಿಗಳಾಗಿರುತ್ತವೆ. ಇವುಗಳನ್ನು ಅಂತರ್ಗದ ನೆನಪುಗಳು (Implicit Memory) ಎನ್ನಲಾಗುತ್ತದೆ. ಇಂತಹ ಅನುಭವಗಳ ಆಧಾರದ ಮೇಲೆ ನಾವು ಹೊರಜಗತ್ತನ್ನು ನೋಡುತ್ತಾ ಸಂಬಂಧಗಳನ್ನು ಕಟ್ಟಿಕೊಳ್ಳುತ್ತಾ ಬದುಕನ್ನು ರೂಪಿಸಿಕೊಳ್ಳುತ್ತಾ ಹೋಗುತ್ತೇವೆ. ತಕ್ಷಣಕ್ಕೆ ನೆನಪಿಗೆ ಬರದ ಈ ಅನುಭವಗಳ ಹಿನ್ನೆಲೆ ನಮ್ಮ ಮುಮ್ಮೆದುಳಿನ ಹಿಡಿತದಲ್ಲಿ ಇರುವುದಿಲ್ಲ. ಹಾಗಾಗಿ ದೌರ್ಬಲ್ಯಗಳ ಹಿಂದಿರುವ ಪ್ರೇರಕ ಶಕ್ತಿಗಳೇನು ಎಂದು ನಮ್ಮ ಅರಿವಿಗೆ ಬರುವುದಿಲ್ಲ.
ಅದನ್ನು ತಿಳಿದುಕೊಂಡಾಗ ಮಾತ್ರ ಅವುಗಳನ್ನು ಮೀರುವುದು ಸುಲಭವಾಗುತ್ತದೆ. ಉದಾಹರಣೆಗೆ ಬೇಸರ ವೈಫಲ್ಯ ಒತ್ತಡ ಮುಂತಾದವುಗಳನ್ನು ಎದುರಿಸಲು ಸಾಧ್ಯವಾಗದಿದ್ದಾಗ ನಷೆಯ ವಸ್ತುಗಳ ಮೂಲಕ ಅವುಗಳನ್ನು ಮರೆಯಲು ಪ್ರಯತ್ನಿಸಬಹುದು. ತಾತ್ಕಾಲಿಕವಾಗಿ ಸಮಾಧಾನ ನೀಡುವ ನಷೆಯ ವಸ್ತುಗಳು ನಮ್ಮನ್ನು ಸಮಾಜದಿಂದ ದೂರತಳ್ಳುತ್ತದೆ. ಕೇವಲ ಧೃಢ ನಿರ್ಧಾರದಿಂದ ಇಂಥ ವ್ಯಸನಗಳಿಂದ ಹೊರಬರುವುದು ಸಾಧ್ಯವಿಲ್ಲ. ಬದುಕಿನ ವಾಸ್ತವಗಳನ್ನು ಎದುರಿಸುವುದನ್ನು ಕಲಿಯಬೇಕಾಗುತ್ತದೆ. ಇದಕ್ಕಾಗಿ ತಜ್ಞ ಮನೋಚಿಕಿತ್ಸಕರ ಸಹಾಯದ ಅಗತ್ಯವಿರುತ್ತದೆ. ಅಂತವರ ಸೇವೆ ಲಭ್ಯವಿದ್ದರೆ ಬಳಸಿಕೊಳ್ಳಿ.
*ನನ್ನ ಮಗ ಶಾಲೆಗೆ ಹೋಗುವುದಕ್ಕೆ ಹಿಂಜರಿಯುತ್ತಾನೆ ಮತ್ತು ದಿನ ಅಳುತ್ತಾನೆ. ತನಗೆ ಸರಿ ಹೋಗುವುದಿಲ್ಲ ಎಂದು ಹೇಳುತ್ತಾನೆ. ಅವನ ಬಗೆಗಿನ ಚಿಂತೆಯಿಂದ ಬಹಳ ಬೇಸರದಲ್ಲಿದ್ದೇವೆ. ಅವನನ್ನು ಶಾಲೆಗೆ ಕಳಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಿ.
–ಹೆಸರು ಊರು ತಿಳಿಸಿಲ್ಲ.
ಮಕ್ಕಳ ಶಾಲಾಭಯದ ಕುರಿತು ಆಗಸ್ಟ್ 19ರ ಸಂಚಿಕೆಯಲ್ಲಿ ದೀರ್ಘವಾಗಿ ಬರೆಯಲಾಗಿದೆ. 2ನೇ ಸೆಪ್ಟೆಂಬರ್‌ರಂದು ಮಕ್ಕಳೊಡನೆ ಸುಮಧುರ ಬಾಂಧವ್ಯ ರೂಪಿಸಿಕೊಳ್ಳುವ ಕುರಿತು ಬರೆಯಲಾಗಿದೆ. ದಯವಿಟ್ಟು ಇವುಗಳನ್ನು ಗಮನಿಸಿ. ಮಕ್ಕಳಿಗೆ ಶಾಲೆಯ ವಾತಾವರಣದಲ್ಲಿ ಸುರಕ್ಷಿತ ಭಾವ ಮೂಡದಿದ್ದಾಗ ಅವರು ಶಾಲೆಗೆ ಹೋಗಲು ಸಿದ್ಧರಾಗುವುದಿಲ್ಲ. ತಮ್ಮ ಭಯ ಹಿಂಜರಿಕೆಗಳನ್ನು ಅರ್ಥಮಾಡಿಕೊಂಡು ಭಾಷೆಯ ಮೂಲಕ ವ್ಯಕ್ತಪಡಿಸಲು ಬೇಕಾದ ಮಿದುಳಿನ ಭಾಗಗಳು ಮಕ್ಕಳಲ್ಲಿ ಬೆಳೆದಿರುವುದಿಲ್ಲ. ಹಾಗಾಗಿ ಶಾಲೆಗೆ ಹೋಗುವುದನ್ನು ವಿರೋಧಿಸಲು ಮಕ್ಕಳ ಇತರ ವರ್ತನೆಗಳಾದ ಅಳು, ಹಟಮಾರಿತನ, ಸಿಟ್ಟು ಮುಂತಾದವುಗಳನ್ನು ತೋರಿಸುತ್ತಾರೆ.
ಮಕ್ಕಳಿಗೆ ಶಾಲೆಯ ವಾತಾವರಣ ಏಕೆ ಸುರಕ್ಷಿತ ಅನ್ನಿಸುತ್ತಿಲ್ಲ ಎನ್ನುವುದನ್ನು ತಿಳಿಯುವ ಅಗತ್ಯವಿರುತ್ತದೆ. ಪೋಷಕರು ಮಕ್ಕಳೊಡನೆ ಹೇಗೆ ಮಾತನಾಡಬಹುದು ಎಂದು ಹಿಂದೆ ತಿಳಿಸಲಾಗಿದೆ. ನಿಮಗೆ ಕಷ್ಟವೆನ್ನಿಸಿದರೆ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.