ADVERTISEMENT

ಶೀತಕಾಲ; ಮಕ್ಕಳ ಆರೋಗ್ಯ ರಕ್ಷಣೆ ಹೇಗೆ?

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 3:30 IST
Last Updated 3 ಡಿಸೆಂಬರ್ 2022, 3:30 IST
   

ಚಳಿಗಾಲ ಬಂದ ತಕ್ಷಣ ಮಕ್ಕಳಲ್ಲಿ ಕಫ, ಕೆಮ್ಮು ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಶುಷ್ಕ ವಾತಾವರಣಕ್ಕೆ ಹೊಂದಿಕೊಂಡಿರುವ ಮಕ್ಕಳು, ತಾಪಮಾನದಲ್ಲಿ ಕುಸಿತ ಕಂಡಾಗ ಆರೋಗ್ಯ ಏರುಪೇರಾಗುವುದು ಸಹಜ.ನಾನು ಮಕ್ಕಳ ಆರೋಗ್ಯವನ್ನು ನಾಲ್ಕು ಭಾಗವಾಗಿ ಪರಿವರ್ತಿಸಿದ್ದು, ಪ್ರತಿ ವಯಸ್ಸಿಗೂ ಅದರದೇ ಆದ ಮುಂಜಾಗ್ರತಾ ಕ್ರಮಗಳು ಅಗತ್ಯ’ ಎಂಬುದು ಕಲಬುರ್ಗಿಯ ಮಕ್ಕಳ ತಜ್ಞೆಡಾ. ಅರುಂಧತಿ ಪಾಟೀಲ್ ಅಭಿಮತ.

ಹಾಗಾದರೆ ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ರಕ್ಷಣೆ ಹೇಗೆ ? ಇಲ್ಲಿದೆ ವೈದ್ಯರು ನೀಡುವ ನಾಲ್ಕು ಸಲಹೆಗಳು

* ಮೊದಲನೆಯದ್ದು: ನವಜಾತ ಶಿಶುಗಳನ್ನು ಆದಷ್ಟು ಬೆಚ್ಚಗೆ ಇಡಬೇಕು. ಮುಖ್ಯವಾಗಿ ಶಿಶುಗಳ ತಲೆಗೆ ಶೀತಗಾಳಿ, ಎ.ಸಿ, ತಣ್ಣೀರು ತಗಲದಂತೆ ನೋಡಿಕೊಳ್ಳಬೇಕು. ಮೈಗೆ ಎಣ್ಣೆ ಹಚ್ಚಿ, ಬಿಸಿನೀರಿನಿಂದ ಸ್ನಾನ ಮಾಡಿಸುವ ರೂಢಿ ಒಳ್ಳೆಯದು. ಹೆಚ್ಚು ಚಳಿ ಉಂಟಾದರೆ ಬಿಸಿಯಾದ ಬಾಟಲಿಯನ್ನು ಬಟ್ಟೆಯಲ್ಲಿ ಸುತ್ತಿ ಮಗುವಿಗೆ ಹಿತಕರವಾಗುವಂಥ ಶಾಖ ನೀಡಬೇಕು. ಮೇಲಾಗಿ, ಬಾಣಂತಿ ಕೂಡ ಇದರಲ್ಲಿ ಎಚ್ಚರಿಕೆ ವಹಿಸಬೇಕು.

ADVERTISEMENT

* ಎರಡನೆಯದ್ದು: ಒಂದರಿಂದ ಐದು ವರ್ಷದೊಳಗಿನ ಮಕ್ಕಳು ಹೊರಗೆ ಹೆಚ್ಚು ಓಡಾಡದಂತೆ ಗಮನಿಸಬೇಕು. ಉಲ್ಲನ್‌ ಬಟ್ಟೆಗಳನ್ನು ಹಾಕಿ ದೇಹವನ್ನು ಆದಷ್ಟು ಬೆಚ್ಚಗೆ ಇಡಿ. ಜ್ವರ ಕಂಡುಬಂದರೆ ಮಾತ್ರ ತೆಳುವಾದ ಬಟ್ಟೆ ಹಾಕಿ, ಗಾಳಿಯಾಡುವಂತೆ ಮಾಡಿ. ‘ಫ್ಲೂ’ ಅಂಟಿಕೊಂಡರೆ ವೈದ್ಯರನ್ನು ಸಂಪರ್ಕಿಸಿ. ಮನೆಯಲ್ಲಿಯೇ ಕಫ ನಿವಾರಕ ಔಷಧಿ ಇದೆ ಹಾಕುವುದು, ಮಾತ್ರೆ ನುಂಗಿಸುವುದು ಬೇಡ. ಈ ಔಷಧವನ್ನು ಮಗುವಿನ ಆರೋ‌ಗ್ಯ ಸ್ಥಿತಿ ನೋಡಿ ಕೊಡಬೇಕಾಗುತ್ತದೆ. ತಾವೇ ವೈದ್ಯರು ಎಂಬಂತೆ ಏನೆಲ್ಲ ಔಷಧಿ ಹಾಕುವವರೂ ಇದ್ದಾರೆ. ಇದರಿಂದ ಆರೋಗ್ಯ ಕೆಡುವ ಜತೆಗೆ, ರೋಗನಿರೋಧಕ ಶಕ್ತಿಯೂ ಕ್ಷೀಣಿಸುತ್ತದೆ. ಹಾಗಾಗಿ, ಸ್ವಯಂ ಉಪಚಾರ ಮಾಡಿ ಮಗುವಿಗೆ ಹಿಂಸೆ ಕೊಡಬೇಡಿ.

* ಮೂರನೆಯದ್ದು: ಶೀತಗಾಳಿ ಹೆಚ್ಚಾದಂತೆ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಇದು ಚರ್ಮತುರಿಕೆ, ಅಲರ್ಜಿ, ಚರ್ಮರೋಗಗಳಿಗೂ ಕಾರಣವಾಗಬಹುದು. ಮಕ್ಕಳಲ್ಲಿ ಹೆಚ್ಚಾಗಿ ಅಲರ್ಜಿ ಕಂಡುಬರುತ್ತದೆ. ಹೆಚ್ಚು ನೀರು ಕುಡಿಯುವುದೇ ಇದಕ್ಕೆ ಮುಂಜಾಗ್ರತಾ ಕ್ರಮ. ಮಕ್ಕಳು ಆಟದಲ್ಲಿ ಮೈಮರೆತರೂ ಅವರಿಗೆ ನೀರು ಕುಡಿಸುವುದನ್ನು ಮರೆಯಬೇಡಿ.

* ನಾಲ್ಕನೆಯದ್ದು: ರೋಗ ನಿರೋಧಕ ಶಕ್ತಿ ಕಡಿಮೆ ಇರುವ, ಅಪೌಷ್ಟಿಕತೆಯಿಂದ ಬಳಲುವ ಅಥವಾ ಅಸ್ತಮಾದಂಥ ರೋಗಗಳು ಇರುವ ಮಕ್ಕಳ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಚಳಿಯಿಂದ ದೇಹವು ಸುಕ್ಕುಗಟ್ಟುವುದರಿಂದ ಅಸ್ತಮಾ ಇದ್ದ ಮಕ್ಕಳು ತೀವ್ರ ಉಸಿರಾಟದ ತೊಂದರೆ ಎದುರಿಸುತ್ತಾರೆ. ಅಪೌಷ್ಟಿಕೆತೆಯಿಂದ ಬಳಲುವ ಮಕ್ಕಳು ಸಣ್ಣಪುಟ್ಟ ಕಾರಣಕ್ಕೂ ಕಾಯಿಲೆ ಬೀಳುತ್ತಾರೆ. ಹಾಗಾಗಿ, ಅವರನ್ನು ಹೆಚ್ಚು ಬೆಚ್ಚಗೆ ಇಡಿ, ಬೆಚ್ಚನೆಯ ಊಟ, ಬಿಸಿನೀರು ಕೊಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.