ಇಂದು ‘ವಿಶ್ವ ಅಲ್ಝೆಮರ್ಸ್ ಜಾಗೃತಿ ದಿನ’. ಅಲ್ಝೆಮರ್ಸ್ ಎಂಬುದು ಹಿರಿಯರಲ್ಲಿ ಕಾಣಿಸಿಕೊಳ್ಳುವ ಮರೆವಿನ ಕಾಯಿಲೆ. ಇಂಥವರು ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗಿದ್ದು, ಸೋಂಕು ತಗಲದಂತೆ ಯಾವ ರೀತಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ವಿವರಗಳು ಇಲ್ಲಿವೆ.
ಕೋವಿಡ್–19 ಪಿಡುಗಿನ ಈ ಸಂದರ್ಭದಲ್ಲಿ ವಿವಿಧ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹಾಗೂ ಇತರರನ್ನು ಬದುಕಿಸುವ ಕುರಿತಂತೆ ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ಇತರರು ಆಗಾಗ ನೆನಪು ಮಾಡುತ್ತಲೇ ಇದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಮಾಡಿರುವ ಶಿಫಾರಸುಗಳಾದ ಆಗಾಗ ಕೈ ತೊಳೆಯುವುದು, ಮುಖಗವಸು ಧರಿಸುವುದು, ದೈಹಿಕ ಅಂತರ ಕಾಪಾಡುವುದರ ಮೂಲಕ ಕಾಯಿಲೆ ಬರದಂತೆ ತಡೆಯಬಹುದು. ಹಿರಿಯರಲ್ಲಿ ಮರೆವಿನ ಕಾಯಿಲೆಯಾದ ಅಲ್ಝೆಮರ್ಸ್ ಬರದಂತೆ ತಡೆಗಟ್ಟುವುದಂತೂ ಸಾಧ್ಯವಿಲ್ಲ, ಆದರೆ ಅವರ ಜೀವಕ್ಕೆ ಅಪಾಯವನ್ನುಂಟು ಮಾಡಬಹುದಾದ ಇತರ ಸೋಂಕುಗಳಿಂದ ರಕ್ಷಿಸಲು ಸಾಧ್ಯ.
ಅಲ್ಝೆಮರ್ಸ್ ವಿನಾಶಕಾರಿ ಮೆದುಳಿನ ಕಾಯಿಲೆ. ಅದು ವ್ಯಕ್ತಿಯ ನೆನಪಿನ ಶಕ್ತಿಯನ್ನೇ ಹಾಳು ಮಾಡುವುದಲ್ಲದೇ, ಮೆದುಳಿನ ಕಲಿಕಾ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಮೂಲಕ ವ್ಯಕ್ತಿಯನ್ನು ದುರ್ಬಲನನ್ನಾಗಿ ಮಾಡಿಬಿಡುತ್ತದೆ. ಮನುಷ್ಯನ ಸರಾಸರಿ ವಯಸ್ಸು 80 ವರ್ಷಗಳಿಗೆ ಏರಿದ್ದು, ಈ ಕಾಯಿಲೆಯ ಪ್ರಕರಣಗಳ ಸಂಖ್ಯೆ ಕೂಡ ಏರಲು ಒಂದು ಕಾರಣ ಎನ್ನಬಹುದು. ನೆನಪಿನ ಶಕ್ತಿ ಇಲ್ಲದಿರುವುದರಿಂದ ವ್ಯಕ್ತಿ ತನ್ನನ್ನು ತಾನೇ ಗುರುತಿಸಲು ವಿಫಲನಾಗುತ್ತಾನೆ. ದಿನ ನಿತ್ಯದ ಕೆಲಸಗಳನ್ನು ಕೂಡ ಮಾಡಲು ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಅಂಥವರನ್ನು ನೋಡಿಕೊಳ್ಳುವುದು ಕುಟುಂಬದ ಇತರ ಸದಸ್ಯರಿಗೆ ಕಷ್ಟವಾಗುತ್ತದೆ. ಪೀಡಿತರಿಗೆ ತಮ್ಮ ಪ್ರೀತಿಪಾತ್ರರನ್ನು ಗುರುತಿಸುವುದೂ ಕಷ್ಟವಾಗಿ ಕುಟುಂಬದ ಸದಸ್ಯರಿಗೂ ಇದು ನೋವಿನ ಅನುಭವ ಕೊಡಬಹುದು.
ಈ ಕೋವಿಡ್–19 ಸಂದರ್ಭದಲ್ಲಿ ಸೋಂಕು ಉಂಟಾಗಲು ಅಲ್ಝೆಮರ್ಸ್ ಒಂದು ಕಾರಣವಲ್ಲ, ಆದರೆ ಈ ದೌರ್ಬಲ್ಯದಿಂದ ಸೋಂಕು ತಗಲಬಹುದಾದ ಸಾಧ್ಯತೆ ಹೆಚ್ಚು. ಇದಕ್ಕೆ ಕಾರಣ ಸೋಂಕಿನಿಂದ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಅಂಥವರಿಗೆ ಸಾಮರ್ಥ್ಯವಿರುವುದಿಲ್ಲ ಹಾಗೂ ಅದರ ಅಪಾಯದ ಅರಿವೂ ಅವರಿಗೆ ಆಗುವುದಿಲ್ಲ. ಯಾವುದೇ ಸಮಸ್ಯೆಯಿಲ್ಲದ, ಒಳ್ಳೆಯ ಸ್ಮರಣ ಶಕ್ತಿ ಇರುವಂಥವರೂ ಕೂಡ ಕೆಲವೊಮ್ಮೆ ಕೈಗಳ ಶುಚಿ ಕಾಪಾಡಿಕೊಳ್ಳಲು, ಕೆಮ್ಮುವಾಗ ಮುಖ ಮುಚ್ಚಿಕೊಳ್ಳಲು ಮರೆಯುತ್ತಾರೆ. ಹೀಗಿರುವಾಗ ಸ್ಮರಣ ಶಕ್ತಿ ಇಲ್ಲದ ಹಿರಿಯ ಜೀವಕ್ಕೆ ಸೋಂಕಿನ ವಿರುದ್ಧ ಎಚ್ಚರಿಕೆ ವಹಿಸುವುದು ಹೇಗೆ ಸಾಧ್ಯ?
ಸಲಹೆಗಳು
* ಈ ಸಂದರ್ಭದಲ್ಲಿ ಅಲ್ಝೆಮರ್ಸ್ ಇರುವವರಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಅನಗತ್ಯವಾಗಿ ಪ್ರಯಾಣ ಮಾಡಲು ಬಿಡಬಾರದು. ಪದೇ ಪದೇ ಯಾರನ್ನೂ ಭೇಟಿ ಮಾಡದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಕೆಲವರಿಗೆ ಸೋಂಕಿದ್ದರೂ ಯಾವುದೇ ಲಕ್ಷಣಗಳು ಇಲ್ಲದಿರಬಹುದು.
*ಅಲ್ಝೆಮರ್ಸ್ ಇರುವವರನ್ನು ನೋಡಿಕೊಳ್ಳುವವರು– ಕುಟುಂಬದ ಸದಸ್ಯರಿರಬಹುದು ಅಥವಾ ಇಂಥವರನ್ನು ನೋಡಿಕೊಳ್ಳುವ ಸಂಸ್ಥೆಗಳ ಉದ್ಯೋಗಿಗಳಿರಬಹುದು, ತಮ್ಮ ಆರೋಗ್ಯದ ಬಗ್ಗೆ ಹೆಚ್ಚುವರಿ ಕಾಳಜಿ ವಹಿಸಬೇಕು. ಹಾಸಿಗೆ ಮತ್ತು ಪಾತ್ರೆಗಳನ್ನು ಆಗಾಗ ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಬೇಕು.
*ಅವರನ್ನು ನೋಡಿಕೊಳ್ಳುವವರು ಆಗಾಗ ಸ್ಯಾನಿಟೈಸ್ ಮಾಡಿಕೊಳ್ಳಬೇಕು ಹಾಗೂ ಹಿರಿಯರಿಗೂ ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆದುಕೊಳ್ಳುವಂತೆ ಹೇಳಬೇಕು.
*ಕೋವಿಡ್ ಆಸ್ಪತ್ರೆಗೆ ಅನಗತ್ಯ ಹೋಗುವುದನ್ನು ಬಿಟ್ಟು, ಟೆಲಿ ಅಥವ ವಿಡಿಯೊ ಮೂಲಕ ವೈದ್ಯರನ್ನು ಸಂಪರ್ಕಿಸಬೇಕು.
*ಅಲ್ಝೆಮರ್ಸ್ ಇರುವವರಿಗೆ ಇತರ ಕಾಯಿಲೆಗಳಿದ್ದರೆ ಅದರ ಮೇಲೆ ನಿಗಾ ಇಡಬೇಕು. ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟರಾಲ್ ಇದ್ದರೆ ಆಗಾಗ ತಪಾಸಣೆ ಮಾಡಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಕೋವಿಡ್ ತಡೆಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಇದ್ದರೆ ಸೂಕ್ತ.
ಇಂದು ‘ವಿಶ್ವ ಅಲ್ಝೆಮರ್ಸ್ ಜಾಗೃತಿ ದಿನ’.
ಅಲ್ಝೆಮರ್ಸ್ ಎಂಬುದು ಹಿರಿಯರಲ್ಲಿ ಕಾಣಿಸಿಕೊಳ್ಳುವ ಮರೆವಿನ ಕಾಯಿಲೆ. ಇಂಥವರು ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗಿದ್ದು, ಸೋಂಕು ತಗಲದಂತೆ ಯಾವ ರೀತಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ವಿವರಗಳು ಇಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.