ಪಾರ್ಶ್ವವಾಯು ಸಮಸ್ಯೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾವಿಗೀಡಾಗುತ್ತಿದ್ದಾರೆ. ಇದರ ಲಕ್ಷಣಗಳ ಬಗ್ಗೆ ಅರಿತುಕೊಂಡು ಮುನ್ನೆಚ್ಚರಿಕೆ ವಹಿಸಿದರೆ ಆರೋಗ್ಯಕರ ಜೀವನ ನಡೆಸಬಹುದು.
***
ಪಾರ್ಶ್ವವಾಯು ಅಥವಾ ಲಕ್ವ ವಿಶ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸಾವಿಗೆ ಕಾರಣವಾಗುತ್ತಿರುವ ಸಮಸ್ಯೆಗಳಲ್ಲಿ ಒಂದು ಎನ್ನಬಹುದು. ನಮ್ಮ ದೇಶವೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಈ ಸಮಸ್ಯೆ ತಲಾ ಒಂದು ಲಕ್ಷ ಮಂದಿಯಲ್ಲಿ 44.29 ರಿಂದ 559ಕ್ಕೆ ಹೆಚ್ಚಳಗೊಂಡಿದೆ. ಅಲ್ಲದೇ ಪ್ರತಿ ವರ್ಷ ಒಂದು ಲಕ್ಷ ಜನರ ಜೀವ ಹಾನಿಗೂ ಕಾರಣವಾಗಿದೆ.
ಪಾರ್ಶ್ವವಾಯು ಸಂಭವಿಸಿದಾಗ, ಮೆದುಳಿಗೆ ಅಗತ್ಯವಾದ ರಕ್ತ ಪೂರೈಕೆ ನಿಲ್ಲುತ್ತದೆ. ಇದರಿಂದ ಮೆದುಳಿಗೆ ಹಾನಿಯಾಗಿ ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗಬಹುದು. ಇದರ ಮಾರಕ ಪರಿಣಾಮಗಳನ್ನು ತಪ್ಪಿಸಲು,ಪಾರ್ಶ್ವವಾಯು ಸಾಧ್ಯತೆಯನ್ನು ಸುಲಭವಾಗಿ ಗುರುತಿಸಬಹುದಾದ ವಿಧಾನಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ಪಾರ್ಶ್ವವಾಯು ಯಾವಾಗ ಬೇಕಾದರೂ ಸಂಭವಿಸಬಹುದು.ಪಾರ್ಶ್ವವಾಯುವಿನಿಂದ ಆಗುವ ಅಪಾಯ ಮತ್ತು ಹಾನಿಯನ್ನು ಕಡಿಮೆ ಮಾಡಲು ಇದರ ಬಗ್ಗೆ ಅರಿಯುವುದು ಮತ್ತು ಮೊದಲೇ ತಡೆಗಟ್ಟುವುದು ಉತ್ತಮ ಮಾರ್ಗ. ಪಾರ್ಶ್ವವಾಯುವಿನ ಸಾಮಾನ್ಯ ಲಕ್ಷಣಗಳನ್ನು ಪರೀಕ್ಷಿಸಲು ಈ ‘ಫಾಸ್ಟ್’ ಪರೀಕ್ಷೆಯು ಸಹಾಯಕ.
ಎಫ್: ಮುಖದಲ್ಲಿ ಆಯಾಸ
ಎ: ತೋಳು ದುರ್ಬಲಗೊಳಿಸುವಿಕೆ
ಎಸ್: ಮಾತು ತೊದಲಿಸುವುದು
ಟಿ: ಸಮಯ
ಪಾರ್ಶ್ವವಾಯು ಸಮಸ್ಯೆಯನ್ನು ಗುರುತಿಸುವುದು ಸರಳ. ನಗುತ್ತಿರುವಾಗ ಮುಖದ ಒಂದು ಭಾಗವು ಓರೆಯಾಗುವುದನ್ನು ಗಮನಿಸಿದರೆ ಈ ಚಿಹ್ನೆಗಳನ್ನು ಸುಲಭವಾಗಿ ಗುರುತಿಸಬಹುದು. ನೀವು ಎರಡೂ ಕೈಗಳನ್ನು ಮೇಲಕ್ಕೆತ್ತಿದಾಗ, ಒಂದು ಕೈ ತಾನಾಗಿಯೇ ಕೆಳಕ್ಕೆ ಜಾರಿದರೆ ಇದು ಪಾರ್ಶ್ವವಾಯು ಅಪಾಯದ ಬಗ್ಗೆ ತಪಾಸಣೆ ಮಾಡಿಕೊಳ್ಳಲು ಸೂಕ್ತ ಸಮಯ ಎನ್ನಬಹುದು. ನೀವು ಮಾತನಾಡುವಾಗ ತೊದಲಿದ ಅನುಭವವಾದರೆ ಅಥವಾ ವ್ಯತ್ಯಾಸವಾಗಿದೆ ಎಂದು ಭಾವನೆ ಮೂಡಿದರೆ ಅದು ಮುಂಬರುವ ಲಕ್ವ ದಾಳಿಯ ಬಗ್ಗೆ ಸುಳಿವು ನೀಡುತ್ತಿದೆ ಎಂದೇ ಅರ್ಥ. ಪಾರ್ಶ್ವವಾಯು ಚಿಕಿತ್ಸೆಯಲ್ಲಿ ಸಮಯವು ಪ್ರಮುಖ ಪಾತ್ರ ವಹಿಸುತ್ತದೆ. ಮೇಲಿನ ಯಾವುದೇ ರೋಗಲಕ್ಷಣಗಳನ್ನು ನೀವು ಎದುರಿಸುತ್ತಿದ್ದರೆ, ವಿಳಂಬ ಮಾಡಬಾರದು ಮತ್ತು ತಕ್ಷಣ ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು ಅಥವಾ ನಿಮ್ಮ ಹತ್ತಿರದ ಪಾರ್ಶ್ವವಾಯುವಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗೆ ಧಾವಿಸಬೇಕು. ನಿಮಗೆ ಅಗತ್ಯವಿರುವ ಮೂಲ ಪ್ರಥಮ ಚಿಕಿತ್ಸೆಯನ್ನು ಆದಷ್ಟು ಬೇಗ ಪಡೆಯಬೇಕಾದ ಅಗತ್ಯ ಇರುವುದರಿಂದ ಪ್ರಯಾಣಕ್ಕೆ ಆ್ಯಂಬುಲೆನ್ಸ್ ಪಡೆಯುವುದು ಸೂಕ್ತ.
ಪಾರ್ಶ್ವವಾಯು ಸಂಭವಿಸಿದ ಸಮಯದಲ್ಲಿ, ತಕ್ಷಣದ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ತುರ್ತು ಮೂಲಸೌಕರ್ಯ ಹೊಂದಿರುವ ಆಸ್ಪತ್ರೆಗಳಿಗೆ ಸಾಧ್ಯವಾದಷ್ಟು ಬೇಗ ಮತ್ತು ಸುವರ್ಣ ಕಾಲಾವಧಿಯೊಳಗೆ (0 ರಿಂದ 3 /4.5 ಗಂಟೆಗಳವರೆಗೆ) ತಲುಪುವುದು ಅತ್ಯಗತ್ಯ.
ಪಾರ್ಶ್ವವಾಯುವಿಗೆ ಕಾರಣಗಳು
ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಹೆಚ್ಚಿನ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟ, ಸೋಂಕುಗಳು ಅಥವಾ ರುಮಟಾಯ್ಡ್ ಸಂಧಿವಾತ ಮತ್ತು ಧೂಮಪಾನದಂತಹ ಉರಿಯೂತವನ್ನು ಉಂಟುಮಾಡುವ ಅಂಶಗಳು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ವಯಸ್ಸು ಮತ್ತು ಲಿಂಗ ಕೂಡ ನಿರ್ಣಾಯಕ ಪಾತ್ರ ವಹಿಸುತ್ತದೆ. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚು ಮತ್ತು ವಯಸ್ಕರಲ್ಲಿ ವಯಸ್ಸಾದಂತೆ ಅಪಾಯ ಹೆಚ್ಚಾಗುತ್ತದೆ. ಕಿರಿಯ ವಯಸ್ಸಿನಲ್ಲಿ ಪುರುಷರು ಈ ತೊಂದರೆಗೆ ಹೆಚ್ಚು ಒಳಗಾಗುತ್ತಾರೆ. ಗರ್ಭ ನಿರೋಧಕ ಮಾತ್ರೆಗಳು ಅಥವಾ ಹಾರ್ಮೋನ್ ಬದಲಿ ಚಿಕಿತ್ಸೆಯನ್ನು ಬಳಸುವ ಮಹಿಳೆಯರಿಗೆ ಇದರ ಅಪಾಯ ಹೆಚ್ಚು. ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯಾದ ಕೂಡಲೇ ಮಹಿಳೆಯರು ಪಾರ್ಶ್ವವಾಯುವಿನಿಂದ ಬಳಲುವ ಸಾಧ್ಯತೆಯೂ ಇದೆ.
ಇದನ್ನು ತಡೆಗಟ್ಟುವಲ್ಲಿ ಜೀವನಶೈಲಿ ಮಾರ್ಪಾಡು ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಆಹಾರವನ್ನು ಸೇವಿಸುವುದು, ಒತ್ತಡ ನಿರ್ವಹಣೆ, ನಿಯಮಿತ ವ್ಯಾಯಾಮ, ಧೂಮಪಾನವನ್ನು ತ್ಯಜಿಸುವುದು ಮತ್ತು ಅತಿಯಾದ ಆಲ್ಕೊಹಾಲ್ ಸೇವನೆಯನ್ನು ತಪ್ಪಿಸುವುದು ಇದನ್ನು ತಡೆಯುವ ಕೆಲವು ವಿಧಾನಗಳು.
ಗಮನಿಸಬೇಕಾದ ಲಕ್ಷಣಗಳು
• ನಿಮ್ಮ ಮುಖ, ತೋಳು ಅಥವಾ ಕಾಲಿನಲ್ಲಿ ಮರಗಟ್ಟುವಿಕೆ ಅಥವಾ ದೌರ್ಬಲ್ಯ, ವಿಶೇಷವಾಗಿ ಒಂದು ಬದಿಯಲ್ಲಿ
• ಇತರರ ಮಾತನ್ನು ಅರ್ಥಮಾಡಿಕೊಳ್ಳುವಲ್ಲಿ ಗೊಂದಲ ಅಥವಾ ತೊಂದರೆ
• ಮಾತನಾಡುವ ತೊಂದರೆ
• ಒಂದು ಅಥವಾ ಎರಡೂ ಕಣ್ಣುಗಳಿಂದ ನೋಡುವುದರಲ್ಲಿ ತೊಂದರೆ
• ವಾಕಿಂಗ್ ಮಾಡಲು ಅಥವಾ ಸಮತೋಲನ ಮಾಡಲು ತೊಂದರೆಗಳು
• ತಲೆ ತಿರುಗುವಿಕೆ
• ಯಾವುದೇ ಕಾರಣವಿಲ್ಲದೆ ಬರುವ ತೀವ್ರ ತಲೆನೋವು
ಒಂದು ವೇಳೆ ನೀವು ಮೇಲಿನ ರೋಗಲಕ್ಷಣಗಳನ್ನು ಹೊಂದಿದ್ದರೆ, ನಿಮಗೆ ಪಾರ್ಶ್ವವಾಯು ಇದೆಯೇ ಎಂದು ನಿಮಗೆ ಖಾತ್ರಿಯಿಲ್ಲದಿದ್ದರೂ ವೈದ್ಯರೊಂದಿಗೆ ಸಂಪರ್ಕ ಸಾಧಿಸುವುದು ಉತ್ತಮ ಮಾರ್ಗ.
(ಲೇಖಕ: ನಿರ್ದೇಶಕ, ನ್ಯೂರೋ ಸೈನ್ಸ್, ಸಕ್ರ ವರ್ಲ್ಡ್ ಆಸ್ಪತ್ರೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.