ಮಕ್ಕಳು 2 ಗಂಟೆಗಿಂತ ಹೆಚ್ಚು ಸ್ಮಾರ್ಟ್ ಫೋನ್ ಬಳಕೆ ಮಾಡಿದರೆ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ತಿನ್ನುವ ಚಟ ಹೆಚ್ಚಾಗುತ್ತದೆ ಮತ್ತು ತಾಜಾ ಹಣ್ಣು, ತರಕಾರಿಗಳನ್ನು ಕಡಿಮೆ ಸೇವಿಸುತ್ತಾರೆ. ಮೂರು ಗಂಟೆಗೂ ಹೆಚ್ಚು ಸ್ಮಾರ್ಟ್ ಫೋನ್ ಬಳಕೆ ಮಾಡಿದರೆ ದೇಹದ ತೂಕ ಹೆಚ್ಚುತ್ತದೆ ಅಥವಾ ಬೊಜ್ಜಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.
ದೇಹದ ಆರೋಗ್ಯವನ್ನು ಮತ್ತು ಆಹಾರಕ್ರಮದ ಮೇಲಿನ ಋಣಾತ್ಮಕ ಪರಿಣಾಮ ಬೀರದಂತೆ ತಡಗಟ್ಟಲು ಇರುವ ಸರಳ ದಾರಿಯೆಂದರೆ ಸ್ಮಾರ್ಟ್ ಫೋನ್ ಬಳಕೆಯನ್ನು ಕಡಿಮೆ ಮಾಡುವುದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ದಕ್ಷಿಣ ಕೊರಿಯಾದ ಯುತ್ ರಿಸ್ಕ್ ಬಿಹೇವಿಯರ್ ವೆಬ್-ಬೇಸ್ಡ್ ಸರ್ವೇ ಸುಮಾರು 53,000 ಅಪ್ರಾಪ್ತ ಮಕ್ಕಳನ್ನು ಅಧ್ಯಯನಕ್ಕೆ ಬಳಸಿಕೊಂಡಿತ್ತು. ಇವರಲ್ಲಿ 2 ಗಂಟೆಗಿಂತ ಹೆಚ್ಚು ಸ್ಮಾರ್ಟ್ ಫೋನ್ ಉಪಯೋಗಿಸುವ ಮಕ್ಕಳು ತಾಜಾ ಹಣ್ಣುಗಳು ಮತ್ತು ತರಕಾರಿಗಳಿಗಿಂತ ಹೆಚ್ಚಾಗಿ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ತಿನ್ನುತ್ತಿರುವುದು ಕಂಡು ಬಂದಿದೆ.
ಜೊತೆಗೆ ದಿನದಲ್ಲಿ ಮೂರು ಗಂಟೆಗಿಂತ ಹೆಚ್ಚು ಸ್ಮಾರ್ಟ್ ಫೋನ್ ಬಳಕೆ ಮಾಡುವ ಮಕ್ಕಳಲ್ಲಿ ತೂಕ ಹೆಚ್ಚಿರುವುದು ತಿಳಿದು ಬಂದಿದೆ.
ಸ್ಮಾರ್ಟ್ ಫೋನ್ ಬಳಕೆ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಅಸ್ವಾಭಾವಿಕವೇನಲ್ಲ. ಮಕ್ಕಳು ಕ್ರೀಡೆ ಅಥವಾ ಇತರ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಮಯವನ್ನು ಸ್ಮಾರ್ಟ್ ಫೋನ್ ಕಿತ್ತುಕೊಳ್ಳುತ್ತಿದೆ. ಹಾಗಾಗಿ ಸಹಜವಾಗೇ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಾಣಿಸುತ್ತಿದೆ ಎಂದು ಅಮೆರಿಕದ ತಜ್ಞ ವೈದ್ಯೆ ಡಾ. ರೇಖಾ ಬಿ. ಕುಮಾರ್ ತಿಳಿಸಿದ್ದಾರೆ.
ಅಧ್ಯಯನದ ಇತರ ಅಂಶಗಳು
- ದಿನದಲ್ಲಿ 5 ಗಂಟೆಗಿಂತ ಹೆಚ್ಚು ಸ್ಮಾರ್ಟ್ ಫೋನ್ ಬಳಕೆ ಮಾಡಿದರೆ ಖರಿದ ಕುರುಕುಲು ತಿಂಡಿಗಳನ್ನು ತಿನ್ನಲು ಮತ್ತು ಬಾಟಲ್ ಜ್ಯೂಸ್‌ಗಳನ್ನು ಕುಡಿಯಲು ಹೆಚ್ಚಾಗಿ ಬಯಸುತ್ತಾರೆ. 2 ಗಂಟೆ ಸ್ಮಾರ್ಟ್ ಫೋನ್ ಬಳಸುವವರಿಗಿಂತ ಈ ಪ್ರಮಾಣ ಹೆಚ್ಚಿರುತ್ತದೆ.
- ಚಾಟಿಂಗ್ ಆ್ಯಪ್, ಮೆಸೆಂಜರ್, ಪ್ಲೇಯಿಂಗ್ ಗೇಮ್ಸ್, ವಿಡಿಯೊ, ಮ್ಯೂಸಿಕ್, ಸಾಮಾಜಿಕ ತಾಣಗಳ ಬಳಕೆಯಲ್ಲಿ ಮಕ್ಕಳು ಹೆಚ್ಚು ಸಮಯ ವ್ಯಯಿಸುತ್ತಿರುವುದು ಅಧ್ಯಯನದಿಂದ ತಿಳಿದು ಬಂದಿದೆ.
- ಗೇಮ್ ಆಡಲು, ವಿಡಿಯೊ ನೋಡಲು, ಮ್ಯೂಸಿಕ್ ಕೇಳಲು ಅಥವಾ ವೆಬ್‌ಟೂನ್‌ಗಳನ್ನು ಓದಲು ಅಥವಾ ವೆಬ್ ನೋವೆಲ್ಸ್ ಓದಲು ಸ್ಮಾರ್ಟ್ ಫೋನ್ ಬಳಕೆ ಮಾಡುವ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗಿ ಕಂಡುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.