* 32ರ ಯುವಕ. ಹೆಂಡತಿಯ ವಯಸ್ಸು 22. ಅವಳು ನನ್ನ ಅಕ್ಕನ ಮಗಳು. ಚಿಕ್ಕವಯಸ್ಸಿನಲ್ಲಿ ಹಿರಿಯರು ಮದುವೆ ಮಾಡಿದ್ದು. ಈಗ ನನಗೆ ಅವಳ ಮೇಲೆ ಲೈಂಗಿಕ ಆಸಕ್ತಿ ಬರುತ್ತಿಲ್ಲ. ಇದರಿಂದ ಚಿಂತೆ ಹೆಚ್ಚಾಗಿ ರಕ್ತದೊತ್ತಡ ಏರುಪೇರಾಗಿ ಮಾನಸಿಕವಾಗಿ ನೊಂದಿದ್ದೇನೆ. ಇದಕ್ಕೆ ಪರಿಹಾರವೇನು.
-ಮುತ್ತುರಾಮನ್, ಊರಿನ ಹೆಸರಿಲ್ಲ.
ಪರಿಚಿತರು, ನೆಂಟರಲ್ಲಿ ಮದುವೆ ಮಾಡಿಸಿದರೆ ಕುಟುಂಬದ ಸಂಬಂಧಗಳು ಚೆನ್ನಾಗಿರುತ್ತವೆ ಎನ್ನುವುದು ಹಿರಿಯರ ನಂಬಿಕೆ. ಆದರೆ ನಿಮ್ಮಿಬ್ಬರ ಮನಃಸ್ಥಿತಿಯನ್ನು ತಿಳಿಯದೆ ಒತ್ತಾಯದ ಮದುವೆ ಮಾಡಿಸುವುದರ ಮೂಲಕ ನಿಮಗೆ ಅನ್ಯಾಯವನ್ನು ಮಾಡುತ್ತಿದ್ದೇವೆ ಎನ್ನುವ ಅರಿವು ಅವರಿಗೆ ಇರುವುದಿಲ್ಲ. ಸದ್ಯದ ಸಮಸ್ಯೆ ಇಬ್ಬರಿಗೂ ಸೇರಿದ್ದಾಗಿರುವುದರಿಂದ ಪತ್ನಿಯ ಜೊತೆ ನಿಮ್ಮ ಕಷ್ಟ, ನೋವು, ಹಿಂಜರಿಕೆಗಳನ್ನು ಮುಕ್ತವಾಗಿ ಹೇಳಿಕೊಳ್ಳಿ. ಇಬ್ಬರ ಒಪ್ಪಿಗೆಯಿದ್ದರೆ ದಾಂಪತ್ಯಚಿಕಿತ್ಸಕರ ಸಹಾಯ ಪಡೆಯಬಹುದು ಅಥವಾ ಇಬ್ಬರೂ ಒಪ್ಪಿಗೆಯಿಂದ ವಿಚ್ಛೇದನದ ಕುರಿತಾಗಿ ಯೋಚಿಸಬಹುದು. ವಿಚ್ಛೇದನ ಇಬ್ಬರ ನಿರ್ಧಾರವಾದಾಗ ವಿರೋಧ, ಒತ್ತಡಗಳಿದ್ದರೂ ನಿಧಾನವಾಗಿ ಹಿರಿಯರು ಒಪ್ಪಿಕೊಳ್ಳಲೇಬೇಕಾಗುತ್ತದೆ.
* ಮೂರು ವರ್ಷದಿಂದ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೆ. ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದೆವು. 2 ವರ್ಷಕ್ಕೆಂದು ಹೊರಗಡೆ ಹೋಗಿದ್ದವನು ನನ್ನನ್ನು ಬಿಟ್ಟು ಇರಲಾಗುವುದಿಲ್ಲವೆಂದು ಒಂದು ವರ್ಷಕ್ಕೇ ಹಿಂತಿರುಗಿದ್ದ. ಮನೆಯಲ್ಲಿ ನಮ್ಮಿಬ್ಬರ ಪ್ರೇಮದ ಬಗೆಗೆ ಹೇಳಿದ್ದ. ಆದರೆ ಈಗ ಜಾತಿ, ದೇವರು ಎಂದು ಹೇಳಿ ನನ್ನನ್ನು ದೂರ ಮಾಡುತ್ತಿದ್ದಾನೆ. ‘ನನ್ನನ್ನು ಮರೆತುಬಿಡು’ ಎನ್ನುತ್ತಿದ್ದಾನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ.
-ಅಂಜಲಿ, ಊರಿನ ಹೆಸರಿಲ್ಲ.
ನಿಮ್ಮ ಪ್ರೇಮ ಪ್ರಾಮಾಣಿಕವಾಗಿತ್ತು ಮತ್ತು ಮನಃಪೂರ್ವಕವಾಗಿತ್ತು. ಈಗ ಹುಡುಗ ಹಿಂದೆ ಸರಿದಿರುವುದರಿಂದ ಮೋಸಹೋದ ಅನುಭವವಾಗುತ್ತಿರಬೇಕಲ್ಲವೇ? ಅವನಿಗಾಗಿ ನಿಮ್ಮ ಅಮೂಲ್ಯವಾದ ಭಾವನೆಗಳನ್ನು ಹಾಗೂ ಜೀವನದ ಸಮಯವನ್ನು ಕಳೆದುಕೊಂಡ ನೋವು ಕಾಡುತ್ತಿರಬೇಕಲ್ಲವೇ? ಇದು ಸ್ವಲ್ಪಕಾಲ ನಿಮ್ಮನ್ನು ಬಾಧಿಸುವುದು ಸಹಜ. ಆದರೆ ಹುಡುಗನ ನಿರ್ಧಾರ ನಿಮ್ಮ ಹಿಡಿತದಲ್ಲಿ ಇರುವುದು ಸಾಧ್ಯವೇ? ನಂಬಿಕೆಗೆ ಅರ್ಹನಲ್ಲ ಎಂದು ಅವನೇ ತೋರಿಸಿದ್ದಾನಲ್ಲವೇ? ಒತ್ತಾಯದಿಂದ ಮದುವೆಯಾಗಿ ಜೀವನಪರ್ಯಂತ ಬೇಡದ ಸಂಬಂಧದಲ್ಲಿರುವುದು ಅಥವಾ ತಾತ್ಕಾಲಿಕವಾಗಿ ನೋವನ್ನು ಅನುಭವಿಸಿದರೂ ದೀರ್ಘಕಾಲ ಮುದನೀಡಬಲ್ಲ ಸಂಬಂಧವನ್ನು ನಿಧಾನವಾಗಿ ಹುಡುಕುವುದು- ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು? ಉತ್ತರ ಸ್ಪಷ್ಟವಾಗಿದೆಯಲ್ಲವೇ? ಒಂದು ವೃತ್ತಿ, ಆರ್ಥಿಕ ಸ್ವಾತಂತ್ರ, ಹವ್ಯಾಸಗಳು, ಸ್ನೇಹಿತರು ಮುಂತಾದವುಗಳ ಮೂಲಕ ನಿಮ್ಮ ಸ್ವಂತಿಕೆಯನ್ನು ಕಂಡುಕೊಳ್ಳಿ. ಜಾತಿ– ಕುಲಗಳ ನಿರ್ಬಂಧವನ್ನು ಮೀರಿ ನಿಮ್ಮತ್ತ ಆಕರ್ಷಿತನಾಗುವವನು ಹುಡುಕಿ ಬರುತ್ತಾನೆ.
* 58ರ ಪುರುಷ. ಸಕ್ಕರೆ ಕಾಯಿಲೆಯಿದೆ. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯಿದೆ. ನಿಮಿರುವಿಕೆ ಜಾಸ್ತಿ ಹೊತ್ತು ಇರುವುದಿಲ್ಲ. ಶೀಘ್ರಸ್ಖಲನವಾಗುತ್ತದೆ. ಪರಿಹಾರವೇನು?
-ವೆಂಕಟೇಶ, ಊರಿನ ಹೆಸರಿಲ್ಲ.
ನಿಮ್ಮ ಇಳಿವಯಸ್ಸಿನ ಲೈಂಗಿಕ ಆಸಕ್ತಿ ಸಹಜವಾದದ್ದು. ದೀರ್ಘಕಾಲದ ಸಕ್ಕರೆ ಕಾಯಿಲೆ ನಿಮಿರು ದೌರ್ಬಲ್ಯದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದರ ಕುರಿತಾಗಿ ನಿಮ್ಮ ವೈದ್ಯರಲ್ಲಿ ಚರ್ಚೆಮಾಡಿ. ಇಳಿವಯಸ್ಸಿಗೆ ಜಾರುತ್ತಾ ಬಂದಂತೆ ದೇಹದಲ್ಲಿ ಹಾರ್ಮೋನ್‌ಗಳ ಸೃಜನೆ ಕಡಿಮೆಯಾಗುವುದರಿಂದ ನಿಮಿರುವಿಕೆ ನಿಧಾನವಾಗುತ್ತದೆ. ಆಗ ನಿಮ್ಮನ್ನು ಆಕರ್ಷಿಸುವ ನೀವು ಇಷ್ಟಪಡುವ ಪತ್ನಿಯ ಜೊತೆ ಹೆಚ್ಚುಹೆಚ್ಚು ಸಮಯವನ್ನು ಕಳೆಯುವುದು ಸಾಧ್ಯವಾದರೆ ದೇಹ ಸೂಕ್ತವಾಗಿ ಪ್ರತಿಕ್ರಿಯೆ ತೋರಿಸುತ್ತದೆ. ನಿಮ್ಮ ಲೈಂಗಿಕತೆಯ ಆಸಕ್ತಿ, ಕನಸುಗಳು, ನಿರೀಕ್ಷೆ ಎಲ್ಲವನ್ನೂ ಪತ್ನಿಯ ಜೊತೆ ಮುಕ್ತವಾಗಿ ಮಾತನಾಡಲು ಸಾಧ್ಯವೇ? ಸಾಧ್ಯವಾಗದಿದ್ದರೆ ನಿಮ್ಮಿಬ್ಬರ ನಡುವಿನ ಅನ್ಯೋನ್ಯತೆಯನ್ನು ಪರೀಕ್ಷೆಗೆ ಒಡ್ಡಬೇಕಾಗುತ್ತದೆ. ಅದಕ್ಕೆ ಸಿದ್ಧರಿದ್ದೀರಾ? ಅಗತ್ಯವಿದ್ದರೆ ಲೈಂಗಿಕ ಮನೋಚಿಕಿತ್ಸಕರನ್ನು ಭೇಟಿಯಾಗಿ.
* 26ರ ಯುವಕ. ಕೆಲವು ತಿಂಗಳ ಹಿಂದೆ ದ್ವಿಚಕ್ರವಾಹನದಲ್ಲಿ ಹೋಗುವಾಗ ಲಘು ಅಪಘಾತವಾಯಿತು. ಅಂದಿನಿಂದ ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿದ್ದೇನೆ. ಸಾವಿನ ಭಯ ಪ್ರತಿಕ್ಷಣವೂ ಕಾಡುತ್ತಿದೆ. ಮನೋವೈದ್ಯರ ಮಾತ್ರೆಗಳು ನನ್ನನ್ನು ಚಟುವಟಿಕೆಯಿಂದ ಇರದಂತೆ ಮಾಡುತ್ತಿವೆ. ಸಹಾಯ ಮಾಡಿ.
ಪ್ರಶಾಂತ್, ಊರಿನ ಹೆಸರಿಲ್ಲ.
ತೀವ್ರವಾದ ಪ್ಯಾನಿಕ್ ಅಟ್ಯಾಕ್‌ಗೆ ತಕ್ಷಣ ಮನೋವೈದ್ಯರ ಮಾತ್ರೆಗಳ ಅಗತ್ಯವಿದ್ದರೂ ಅವುಗಳ ಮೇಲೆ ನಿರಂತರ ಅವಲಂಬನೆ ಆರೋಗ್ಯಕರವಲ್ಲ. ತಕ್ಷಣದ ಭಯವನ್ನು ಹಿಡಿತಕ್ಕೆ ತರಲು ಆಗಾಗ ಅಂದರೆ ದಿನಕ್ಕೆ ಹತ್ತಾರು ಬಾರಿ ದೀರ್ಘವಾಗಿ ಉಸಿರಾಡುತ್ತಾ ನಿಮ್ಮ ದೇಹದ ಒಂದೊಂದೇ ಅಂಗಗಳನ್ನು ಗಮನಿಸುವ ಅಭ್ಯಾಸ ಮಾಡಿಕೊಳ್ಳಿ. ಭಯದ ಸೂಚನೆಗಳನ್ನು ತೋರಿಸುತ್ತಿರುವ ದೇಹದ ಭಾಗಗಳನ್ನು ಸುಮ್ಮನೆ ಗಮನಿಸುತ್ತಾ ಸಾಧ್ಯವಾದಷ್ಟು ಹೊತ್ತು ಕಳೆಯಿರಿ. ನಿಧಾನವಾಗಿ ಭಯ ಹಿಡಿತಕ್ಕೆ ಬರುತ್ತದೆ. ಅಪಘಾತದಿಂದ ಮೂಡಿದ ಸಾವಿನ ಭಯ ನಿಮ್ಮನ್ನು ಕಾಡಿಸುತ್ತದೆ ಎಂದು ಮೇಲುನೋಟಕ್ಕೆ ಅನ್ನಿಸುವುದು ಸಹಜ. ಆದರೆ ಭಯದ ಬೇರುಗಳು ನಿಮ್ಮ ಬಾಲ್ಯದ ಅನುಭವಗಳಲ್ಲಿರುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು ಮನೋಚಿಕಿತ್ಸಕರ ಸಹಾಯದ ಅಗತ್ಯವಿದೆ.
* 28ರ ಯುವಕ. ಭವಿಷ್ಯದ ಬಗೆಗೆ ಚಿಂತೆ ಉಂಟಾಗಿ ನೆಮ್ಮದಿಯೇ ಇಲ್ಲದಂತಾಗಿದೆ. ಏನಾದರೂ ಕೆಲಸ ಆರಂಭಿಸುವ ಮುನ್ನ ಅನೇಕ ಆಲೋಚನೆಗಳಿಂದ ನಿಂತುಬಿಡುತ್ತದೆ. ಲೈಂಗಿಕ ಆಸಕ್ತಿ ಹೆಚ್ಚಾಗುತ್ತಿದೆ. ಹೇಗಾದರೂ ಪ್ರಯತ್ನಿಸೋಣ ಎಂದರೆ ತೊಂದರೆಗೆ ಸಿಕ್ಕಿಹಾಕಿಕೊಳ್ಳುವ ಭಯ. ಪರಿಹಾರ ತಿಳಿಸಿ.
ಹೆಸರು, ಊರು ತಿಳಿಸಿಲ್ಲ.
ಪತ್ರದ ಧಾಟಿಯನ್ನು ನೋಡಿದರೆ ನಿಮ್ಮ ಸದ್ಯದ ಜೀವನ, ಭವಿಷ್ಯದ ಆಯ್ಕೆಗಳ ಬಗೆಗೆ ಬಹಳ ಅಸ್ಪಷ್ಟತೆ ಇರುವಂತೆ ಕಾಣಿಸುತ್ತಿದೆ. ಭವಿಷ್ಯದ ಕುರಿತಾದ ಆತಂಕ ಮಾನವ ಸಹಜ. ಇಂತಹ ಆತಂಕಗಳು ನಿಮ್ಮ ಕುರಿತು ನಿಮ್ಮ ಮನಸ್ಸಿನಲ್ಲೇ ಇರುವ ಹಿಂಜರಿಕೆಗಳನ್ನು ಸೂಚಿಸುತ್ತದೆ. ಇವುಗಳನ್ನು ಅರ್ಥಮಾಡಿಕೊಂಡು ನಿಭಾಯಿಸುವುದನ್ನು ಕಲಿಯಬೇಕು. ಇಂತಹ ಹಿಂಜರಿಕೆ, ಕೀಳರಿಮೆಗಳನ್ನು ಮರೆಯಲು ಯತ್ನಿಸಿ ಲೈಂಗಿಕತೆಯಲ್ಲಿ ಸಮಾಧಾನ ಕಂಡುಕೊಳ್ಳಲು ಪ್ರಯತ್ನಿಸುವುದು ಮನಸ್ಸಿನ ಸಹಜ ರಕ್ಷಣಾತಂತ್ರ. ತಜ್ಞ ಮನೋಚಿಕಿತ್ಸಕರ ಸಹಾಯವನ್ನು ಪಡೆದರೆ ನಿಧಾನವಾಗಿ ನೆಮ್ಮದಿಯನ್ನು ಕಂಡುಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.