‘ಜೀವನದಲ್ಲಿ ಇದುವರೆಗೆ ಒಂದು ಮಾತ್ರೆಯನ್ನೂ ನುಂಗಿಲ್ಲ’ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಹಿರಿಯರಿದ್ದರು. ಇಂದಿನ ಕಾಲದಲ್ಲಿ ಈ ಮಾತನ್ನು ಹೇಳಬಲ್ಲವರು ತೀರಾ ವಿರಳ. ಔಷಧಸೇವನೆ ನಮ್ಮ ಆಧುನಿಕ ಜೀವನದ ಭಾಗವೇ ಆಗಿಹೋಗಿದೆ. ದೈನಂದಿನ ಬದುಕಿನಲ್ಲಿ ಶಿಸ್ತಿನ ಅಗತ್ಯವೆಷ್ಟಿದೆಯೋ, ಅದೇ ರೀತಿಯ ಶಿಸ್ತು ಔಷಧಸೇವನೆಯಲ್ಲೂ ಇರುತ್ತದೆ. ತಪ್ಪು ಔಷಧಸೇವನೆಯಿಂದ ಕಾಯಿಲೆ ಹೇಗೆ ಗುಣವಾಗುವುದಿಲ್ಲವೋ, ಅಂತೆಯೇ ಔಷಧವನ್ನು ತಪ್ಪಾಗಿ ಸೇವಿಸಿದರೂ ವ್ಯಾಧಿ ನಿವಾರಣೆ ಆಗುವುದಿಲ್ಲ. ಯಾವುದೇ ಔಷಧ ತೆಗೆದುಕೊಳ್ಳುವಾಗ ಅದರ ಪರಿಣಾಮ ಸರಿಯಾಗಿ ಆಗಬೇಕೆಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.
1. ಔಷಧವನ್ನು ಏಕೆ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿದಿರಬೇಕು. ಬಹಳ ಮಂದಿ ಔಷಧದ ಪರಿಣಾಮಗಳ ಬಗ್ಗೆ ತಪ್ಪು ಕಲ್ಪನೆ ಹೊಂದಿರುತ್ತಾರೆ. ಪ್ರತಿಯೊಂದು ಔಷಧಕ್ಕೂ ಬೇರೆ ರೀತಿಯ ಪರಿಣಾಮಗಳಿವೆ. ಮದ್ದಿನ ಮಿತಿಯನ್ನು ತಿಳಿದಿರಬೇಕು. ಸೋಂಕು ಉಂಟಾದಾಗ ಜ್ವರ ಬಂದಿರುತ್ತದೆ. ಸೋಂಕು ನಿವಾರಕ ಆ್ಯಂಟಿಬಯೊಟಿಕ್ ಔಷಧಗಳು ಜ್ವರವನ್ನು ತಗ್ಗಿಸುವುದಿಲ್ಲ. ಆದರೆ, ಅವುಗಳು ಸೋಂಕನ್ನು ನಿಯಂತ್ರಿಸುತ್ತಿದ್ದಂತೆ ಜ್ವರ ತಾನಾಗಿಯೇ ಕಡಿಮೆಯಾಗುತ್ತದೆ. ಹೀಗಾಗಿ, ಆರಂಭದಲ್ಲಿ ಆ್ಯಂಟಿಬಯೊಟಿಕ್ ಔಷಧಗಳ ಜೊತೆಯಲ್ಲಿ ಜ್ವರವನ್ನು ತಗ್ಗಿಸುವ ಮದ್ದು ಕೂಡ ಬೇಕಾಗುತ್ತದೆ. ಬಹಳ ಮಂದಿ ಆ್ಯಂಟಿಬಯೊಟಿಕ್ ಔಷಧಗಳು ಜ್ವರವನ್ನೂ ತಗ್ಗಿಸುತ್ತವೆ ಎಂದು ಭ್ರಮಿಸುತ್ತಾರೆ.
2. ಯಾವ ಔಷಧವನ್ನು ಯಾವಾಗ ಮತ್ತು ಎಷ್ಟು ಬಾರಿ ಸೇವಿಸಬೇಕು – ಎನ್ನುವುದು ಮುಖ್ಯ. ಮಾತ್ರೆ ಅಥವಾ ಕ್ಯಾಪ್ಸುಲ್ ಮಾದರಿಯ ಔಷಧವನ್ನು ಸೇವಿಸಿದ ನಂತರ ಅದು ಜೀರ್ಣವಾಗಿ ರಕ್ತದೊಳಗೆ ಸೇರುತ್ತದೆ. ಇದಕ್ಕೆ ಸ್ವಲ್ಪ ಕಾಲ ಹಿಡಿಯಬಹುದು. ಅನಂತರ ಅದು ರಕ್ತನಾಳಗಳ ಮೂಲಕ ಶರೀರದ ಎಲ್ಲೆಡೆ ವ್ಯಾಪಿಸುತ್ತದೆ. ಚುಚ್ಚುಮದ್ದಿನ ಮೂಲಕ ನೀಡಿದ ಔಷಧ ಶೀಘ್ರವಾಗಿ ರಕ್ತದೊಳಗೆ ಸೇರುವುದರಿಂದ ಅವುಗಳ ಪರಿಣಾಮ ಶೀಘ್ರವಾಗಿ ಆಗುತ್ತದೆ. ಶರೀರವನ್ನು ಸೇರಿದ ಯಾವುದೇ ಔಷಧವೂ ಬಹುಮಟ್ಟಿಗೆ ಯಕೃತ್ ಮತ್ತು ಮೂತ್ರಪಿಂಡಗಳ ನೆರವಿನಿಂದ ವಿಸರ್ಜಿಸಲ್ಪಡುತ್ತದೆ. ಅಂದರೆ, ರಕ್ತದಲ್ಲಿ ಸೇರುವ ಮತ್ತು ಶರೀರದಿಂದ ಹೊರಹೋಗುವ ಅವಧಿಯ ನಡುವೆ ಮಾತ್ರ ಅದರ ಪರಿಣಾಮ ಉಳಿಯುತ್ತದೆ. ಹೀಗಾಗಿ, ಪ್ರತಿಯೊಂದು ಔಷಧವೂ ಒಂದು ನಿರ್ದಿಷ್ಟ ಕಾಲಾವಧಿಗೆ ಮಾತ್ರ ಕೆಲಸ ಮಾಡುತ್ತದೆ. ಆ ಅವಧಿಯ ನಂತರ ಔಷಧದ ಪರಿಣಾಮ ಇಲ್ಲವಾಗುತ್ತದೆ. ಕೆಲವು ಸೆಕೆಂಡುಗಳ ಕಾಲದಿಂದ ಹಿಡಿದು ದಿನಗಟ್ಟಲೆ ಕೆಲಸ ಮಾಡಬಲ್ಲ ಔಷಧಗಳಿವೆ. ಒಂದು ವೇಳೆ ಔಷಧವೊಂದು 8 ಗಂಟೆಗಳ ಕಾಲ ಕೆಲಸ ಮಾಡಬಲ್ಲದು ಎಂದಾದರೆ, ಅದನ್ನು ದಿನಕ್ಕೆ ಮೂರು ಬಾರಿ ಸೇವಿಸಿದರೆ ಮಾತ್ರ ರಕ್ತದಲ್ಲಿ ಮದ್ದಿನ ಪ್ರಮಾಣ ಪರಿಣಾಮಕಾರಿ ಮಟ್ಟದಲ್ಲಿ ಉಳಿಯಬಲ್ಲದು. ಅದಕ್ಕಿಂತ ಕಡಿಮೆಯಾದರೆ ಅದರ ಪರಿಣಾಮ ಕುಂಠಿತವಾಗುತ್ತದೆ. ಆದ್ದರಿಂದ, ವೈದ್ಯರು ಔಷಧವನ್ನು ದಿನಕ್ಕೆ ಎಷ್ಟು ಬಾರಿ ಸೂಚಿಸುತ್ತಾರೋ ಅಷ್ಟು ಬಾರಿ ಸೇವಿಸಬೇಕು. ಕಡಿಮೆಯಾದರೆ ಪ್ರಯೋಜನವಾಗಲಾರದು.
3. ಕೆಲವು ಕಾಯಿಲೆಗಳಿಗೆ ಚಿಕಿತ್ಸೆಯಿದೆ; ಕೆಲವನ್ನು ನಿಯಂತ್ರಣದಲ್ಲಿ ಇರಿಸಲು ಮಾತ್ರ ಸಾಧ್ಯ. ಉದಾಹರಣೆಗೆ, ಶರೀರದಲ್ಲಿ ಸೋಂಕು ಉಂಟಾದಾಗ ಕೆಲವು ದಿನಗಳ ಕಾಲ ಆ್ಯಂಟಿಬಯೊಟಿಕ್ ಔಷಧಗಳನ್ನು ಸೇವಿಸಿದರೆ ಸೋಂಕುಕಾರಕ ಬ್ಯಾಕ್ಟೀರಿಯಾ ನಿವಾರಣೆಯಾಗಿ, ಮತ್ತಷ್ಟು ಔಷಧದ ಅಗತ್ಯ ಇಲ್ಲವಾಗುತ್ತದೆ. ಆದರೆ ಮಧುಮೇಹದ ಸಂಗತಿ ವಿಭಿನ್ನ. ಶರೀರದಲ್ಲಿ ಸಾಮಾನ್ಯವಾಗಿ ಉತ್ಪತ್ತಿಯಾಗುವ ಇನ್ಸುಲಿನ್ ಎಂಬ ಚೋದಕ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ. ಒಂದು ವೇಳೆ ಈ ಚೋದಕದ ಉತ್ಪಾದನೆ ದೇಹದಲ್ಲಿ ಕಡಿಮೆಯಾದರೆ ರಕ್ತದಲ್ಲಿನ ಸಕ್ಕರೆಯ ಅಂಶದಲ್ಲಿ ಏರಿಕೆಯಾಗುತ್ತದೆ. ಈ ಸ್ಥಿತಿಯನ್ನು ‘ಮಧುಮೇಹ’ ಎನ್ನುತ್ತಾರೆ. ಇದಕ್ಕೆ ಇನ್ಸುಲಿನ್ ಚೋದಕದ ಉತ್ಪಾದನೆಯನ್ನು ಏರಿಸಬಲ್ಲ ಔಷಧ ಸೇವಿಸಬೇಕು; ಇಲ್ಲವೇ ಕೃತಕ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯ. ಇದು ಔಷಧದ ಮೂಲಕ ಗುಣವಾಗಬಲ್ಲ ಸ್ಥಿತಿಯಲ್ಲ. ಆದರೆ, ಜೀವನವಿಡೀ ಸಮಯಾನುಸಾರ ತೆಗೆದುಕೊಳ್ಳುವ ಔಷಧಗಳ ಮೂಲಕ ಇದನ್ನು ನಿಯಂತ್ರಿಸಬಹುದು. ಯಾವ ಪರಿಸ್ಥಿತಿಗೆ ಎಷ್ಟು ಕಾಲದ ಚಿಕಿತ್ಸೆ ಬೇಕಾಗುತ್ತದೆ ಎಂಬುದನ್ನು ವೈದ್ಯರು ಸೂಚಿಸುತ್ತಾರೆ. ಅಂತಹ ಸೂಚನೆಯನ್ನು ಮೀರಿದರೆ ಅಪಾಯವಾಗಬಹುದು.
4. ಸೇವಿಸುವ ಔಷಧಗಳು ಜೀರ್ಣವಾಗಿ ರಕ್ತವನ್ನು ಸೇರುತ್ತವೆ. ಅವು ಎಷ್ಟು ಸಮರ್ಥವಾಗಿ ಜೀರ್ಣವಾಗುತ್ತವೆ ಎನ್ನುವುದರ ಮೇಲೆ ರಕ್ತದಲ್ಲಿ ಅವುಗಳ ಪ್ರಮಾಣ, ದೇಹದೊಳಗೆ ಅವುಗಳ ಪರಿಣಾಮ ನಿರ್ಧಾರವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲವು ಔಷಧಗಳು ಖಾಲಿ ಹೊಟ್ಟೆಯಲ್ಲಿ ಚೆನ್ನಾಗಿ ಅರಗುತ್ತವೆ. ಹಲವು ನಾವು ಸೇವಿಸುವ ಆಹಾರದ ಜೊತೆ ಸೇರಿ ರಕ್ತವನ್ನು ಸೇರುತ್ತವೆ. ಕೆಲವು ಔಷಧಗಳು ನಿರ್ದಿಷ್ಟ ಆಹಾರಗಳ ಜೊತೆಗೆ ಸೇರಿದರೆ ತಮ್ಮ ಪ್ರಭಾವವನ್ನು ಕಳೆದುಕೊಳ್ಳುತ್ತವೆ. ಈ ಎಲ್ಲ ಕಾರಣಗಳಿಂದ ಕೆಲವು ಔಷಧಗಳ ಸೇವನೆಯ ವೇಳೆ ನಿರ್ದಿಷ್ಟ ಪಥ್ಯವನ್ನು ಅನುಸರಿಸಬೇಕು. ಯಾವ ಔಷಧವನ್ನು ಹೇಗೆ ಸೇವಿಸಬೇಕು ಎನ್ನುವುದನ್ನು ವೈದ್ಯರು ಸೂಚಿಸುತ್ತಾರೆ. ಔಷಧದಿಂದ ಒಳ್ಳೆಯ ಪರಿಣಾಮ ಅಪೇಕ್ಷಿಸುವವರು ಈ ಸೂಚನೆಗಳನ್ನು ಪಾಲಿಸಲೇಬೇಕು.
5. ಎರಡು ವಿಭಿನ್ನ ಔಷಧಗಳ ಪರಿಣಾಮಗಳು ಪರಸ್ಪರ ವಿರೋಧಿಯಾಗಿರಬಹುದು. ಅಥವಾ, ಒಂದು ಔಷಧದ ಪರಿಣಾಮಗಳನ್ನು ಮತ್ತೊಂದು ಔಷಧ ಹೆಚ್ಚಾಗಿಸಬಹುದು. ಹೀಗಾಗಿ, ವೈದ್ಯರ ಬಳಿ ಹೋದಾಗ ದಿನವಹಿ ಸೇವಿಸುವ ಅಥವಾ ದೀರ್ಘಕಾಲಿಕವಾಗಿ ಸೇವಿಸುತ್ತಿರುವ ಔಷಧಗಳ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು. ಇದರಿಂದ ಒಂದಕ್ಕೊಂದು ಪೂರಕವಾಗಿರುವ ಔಷಧಗಳನ್ನು ನಿರ್ಧರಿಸುವುದು ಸಾಧ್ಯವಾಗುತ್ತದೆ. ಹೆಚ್ಚು ಔಷಧಗಳನ್ನು ಸೇವಿಸಿದಷ್ಟೂ ಇಂತಹ ಅವಲಂಬಿತ ಪರಿಣಾಮಗಳ ಸಾಧ್ಯತೆ ಹೆಚ್ಚು. ಆದ್ದರಿಂದ ದೀರ್ಘಕಾಲಿಕ ಔಷಧಗಳನ್ನು ತೆಗೆದುಕೊಳ್ಳುವವರು ಆಯಾ ಔಷಧಗಳ ಜೊತೆಯಲ್ಲಿ ಅಪಾಯಕಾರಿಯಾಗಿ ವರ್ತಿಸಬಲ್ಲ ಇತರ ಔಷಧಗಳ ಬಗ್ಗೆ ತಿಳಿದುಕೊಂಡಿರುವುದು ಒಳಿತು. ಯಾವುದೇ ಅನುಮಾನವಿರುವಾಗ ತಮ್ಮ ವೈದ್ಯರ ಜೊತೆಗೆ ಈ ಸಾಧ್ಯತೆಗಳನ್ನು ಚರ್ಚಿಸುವುದು ಸೂಕ್ತ.
6. ಪ್ರತಿಯೊಂದು ಕಾಯಿಲೆಯಂತೆ ಪ್ರತಿಯೊಬ್ಬ ರೋಗಿಯೂ ವಿಭಿನ್ನ. ಯಾವುದೇ ಔಷಧಕ್ಕೆ ಓರ್ವ ವ್ಯಕ್ತಿ ಸ್ಪಂದಿಸುವಂತೆ ಮತ್ತೊಬ್ಬರು ಸ್ಪಂದಿಸಲಾರರು. ಕೆಲವು ಔಷಧಗಳು ಕೆಲವರಲ್ಲಿ ತೀವ್ರವಾದ ಅಡ್ಡಪರಿಣಾಮಗಳನ್ನು ಬೀರಬಲ್ಲವು. ಅಪರೂಪವಾದರೂ, ಪೆನಿಸಿಲಿನ್ ಚುಚ್ಚುಮದ್ದಿನಿಂದ ಮರಣ ಹೊಂದಿದವರಿದ್ದಾರೆ. ಹೀಗಾಗಿ, ಯಾರಿಗೋ, ಯಾವುದೋ ಕಾಯಿಲೆಗೆ ಕೊಟ್ಟ ಚಿಕಿತ್ಸೆಯನ್ನು ಮತ್ತೊಬ್ಬರು ಕಣ್ಣು ಮುಚ್ಚಿ ತೆಗೆದುಕೊಳ್ಳಬಾರದು. ಇದೇ ರೀತಿ, ಹಿಂದೆಂದೋ ಯಾವುದೋ ಜಾಡ್ಯಕ್ಕೆ ಕೊಟ್ಟ ಔಷಧವನ್ನು ಇಂದಿನ ಜಡ್ಡಿಗೆ ಪುನರಾವರ್ತಿಸಬಾರದು. ಇವೆಲ್ಲವೂ ಬಹಳ ಅಪಾಯಕಾರಿ ನಡೆಗಳು. ಯಾವುದೇ ಕಾಯಿಲೆಗೂ ವೈದ್ಯರ ಸಲಹೆ ಪಡೆದು, ಸೂಕ್ತವಾದ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ. ಔಷಧಗಳು ಅಪಾಯಕಾರಿ ರಾಸಾಯನಿಕಗಳು. ಅವುಗಳನ್ನು ಬಹಳ ಮುತುವರ್ಜಿಯಿಂದ ಬಳಸಬೇಕು. ಮದ್ದಿನ ಜೊತೆಗೆ ಬೇಕಾಬಿಟ್ಟಿ ವರ್ತಿಸಿದರೆ, ಅದು ಜೀವಕ್ಕೇ ಎರವಾಗಬಹುದು.
ಇಪ್ಪತ್ತನೆಯ ಶತಮಾನದಲ್ಲಿ ಮನುಷ್ಯನ ಸರಾಸರಿ ಆಯುಸ್ಸು ಗಣನೀಯವಾಗಿ ಬೆಳೆದಿದ್ದರಲ್ಲಿ ಔಷಧಗಳ ಪಾತ್ರ ಮಹತ್ವದ್ದು. ಔಷಧಗಳು ಅತ್ಯಂತ ಹೆಚ್ಚು ಶಿಸ್ತನ್ನು ಬೇಡುವ ಮಿತ್ರರು. ಅವುಗಳನ್ನು ಸುಲಭವಾಗಿ ಪರಿಗಣಿಸಲಾಗದು; ಅವುಗಳ ಜೊತೆಗೆ ಇಷ್ಟ ಬಂದಂತೆ ವ್ಯವಹರಿಸಲಾಗದು. ಪ್ರತಿಯೊಂದು ಮದ್ದಿನ ಗುಣಾವಗುಣಗಳ ಜೊತೆಗೆ ಎಷ್ಟು ಸೂಕ್ತವಾಗಿ ವರ್ತಿಸುತ್ತೇವೋ, ಅದು ನಮ್ಮನ್ನು ಅಷ್ಟೇ ಪರಿಣಾಮಕಾರಿಯಾಗಿ ಕಾಯುತ್ತದೆ; ಹದ ತಪ್ಪಿದರೆ ಅಪಾಯಕಾರಿಯಾಗುತ್ತದೆ.
ಮನೆಯಲ್ಲಿರುವ ಔಷಧಗಳನ್ನು ಸಂರಕ್ಷಿಸುವುದು ಮುಖ್ಯ
ಕೆಲವು ಔಷಧಗಳನ್ನು ಕಡಿಮೆ ತಾಪಮಾನದಲ್ಲಿ ರಕ್ಷಿಸಬೇಕು. ಕೆಲವನ್ನು ಬೆಳಕು ತಾಕದಂತಹ ಬಣ್ಣದ ಗಾಜಿನ ಶೀಷೆಯಲ್ಲಿ ಇಡಬೇಕು. ಅತ್ಯಂತ ಮುಖ್ಯವಾಗಿ, ಮನೆಯಲ್ಲಿನ ಯಾವುದೇ ಔಷಧಗಳನ್ನೂ ಮಕ್ಕಳ ಕೈಗೆ ಸಿಗುವಂತೆ ಇಡಬಾರದು. ಮಕ್ಕಳ ದೇಹ ಚಿಕ್ಕದು. ದೊಡ್ಡವರು ಸಾಮಾನ್ಯವಾಗಿ ಸೇವಿಸುವ ಔಷಧದ ಪ್ರಮಾಣ ಮಕ್ಕಳ ಪಾಲಿಗೆ ಅಪಾಯಕಾರಿಯಾಗುವ ಸಾಧ್ಯತೆಗಳಿವೆ. ಹೀಗೆ ಆಕಸ್ಮಿಕವಾಗಿ ಔಷಧ ಸೇವನೆ ಮಾಡಿದ ಮಕ್ಕಳು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದು ಕಂಡುಬಂದಿದೆ. ಈ ವಿಷಯದಲ್ಲಿ ಕಟ್ಟೆಚ್ಚರ ಇರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.