–ಡಾ. ಕಿರಣ್ ವಿ. ಎಸ್.
ಬಾಲ್ಯದಲ್ಲಿ ‘ಒಂದೂರಲ್ಲಿ ಒಬ್ಬ ರಾಜ’ ಎನ್ನುವ ಮಾತು ಕಿವಿಗೆ ಬಿದ್ದ ಕೂಡಲೇ ಮಾಡುವುದೆಲ್ಲವನ್ನೂ ಬಿಟ್ಟು ಅದನ್ನು ಹೇಳುವವರ ಹಿಂದೆ ಹೋಗುವ ತವಕವಿತ್ತು. ಕೆಲವು ಬಾರಿಯಂತೂ ಈ ಮುನ್ನ ಕೇಳಿದ್ದ ಕಥೆಗಳನ್ನೇ ದುಂಬಾಲು ಬಿದ್ದು ಮತ್ತೆ ಮತ್ತೆ ಕೇಳುವ ಮನಸ್ಸಿತ್ತು. ಕಥೆಗಳ ಸೊಬಗೇ ಅಂತಹದ್ದು. ಅದನ್ನು ರಸವತ್ತಾಗಿ ನಿರೂಪಿಸುವವರು ದೊರೆತರಂತೂ ಸ್ವರ್ಗಕ್ಕೆ ಮೂರೇ ಗೇಣು! ಕಥೆ ಕೇಳುವಷ್ಟು ಹೊತ್ತೂ ನಾವು ನಾವಲ್ಲ. ನಮ್ಮ ಇಹವನ್ನು ಒಂದು ಬೇರೆಯೇ ಮಾಯಾಲೋಕಕ್ಕೆ ಒಯ್ಯುವ ಸಾಮರ್ಥ್ಯ ಇರುವುದು ಕಥೆಗಳ ನಿರೂಪಣೆಯ ಪ್ರಕ್ರಿಯೆಗೆ.
ಕಥೆ ಹೇಳುವುದು ವಿಶಿಷ್ಟ ಕಲೆಗಾರಿಕೆ. ಮಾತಿನ ಏರಿಳಿತಗಳ ಜೊತೆಗೆ ಆಂಗಿಕಭಾವಗಳನ್ನು ಕೂಡಿಸಿ ಕಥೆಯ ಅಂಶಗಳನ್ನು ಚಿತ್ರವತ್ತಾಗಿ ನಿರೂಪಿಸುತ್ತಾ ಕೇಳುಗರಲ್ಲಿ ಊಹಾಲೋಕವನ್ನು ಸೃಜಿಸಬಲ್ಲ ಶಕ್ತಿ ಇರುವುದು ಕಥನಕ್ಕೆ. ನಮ್ಮ ಬುದ್ಧಿಗೆ ಸರಕು ಒದಗುವುದು ಐದು ಇಂದ್ರಿಯಗಳಿಂದ. ಕಥೆ ಕೇಳುವ ಪ್ರಕ್ರಿಯೆಯಲ್ಲಿ ಕಿವಿಯ ಪಾತ್ರ ಹಿರಿದು. ನಿರೂಪಕರು ಕಥನದ ವೇಳೆ ತಮ್ಮ ದೇಹಭಾಷೆಯನ್ನೂ ಮೇಳೈಸುತ್ತಿದ್ದರೆ ಕೇಳುಗರ ಕಣ್ಣಿಗೂ ಮಾಹಿತಿ ಒದಗುತ್ತದೆ. ಮಕ್ಕಳು ಕಥೆಗಳನ್ನು ಕೇಳುವಾಗ ಮತ್ತು ಕಾಮಿಕ್ಸ್ ನಂತಹ ಸಚಿತ್ರ ಕಥಾಪುಸ್ತಕಗಳನ್ನು ಓದುವಾಗ ಅವರ ಮೆದುಳಿನಲ್ಲಿ ಆಗುವ ಬದಲಾವಣೆಗಳನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಎರಡೂ ಸಂದರ್ಭಗಳಲ್ಲಿ ಮೊದಲನೆಯ ಬಾರಿ ಮೆದುಳು ಸಮಾನವಾಗಿ ಜಾಗೃತವಾಗುತ್ತವೆ. ಕಲ್ಪನೆಗಳಿಗೆ ಕಾರಣವಾಗುವ ಮೆದುಳಿನ ಮುಂಭಾಗದಲ್ಲಿ ರಕ್ತಸಂಚಾರ ಸರಿಸುಮಾರು ಒಂದೇ ಪ್ರಮಾಣದಲ್ಲಿ ಹೆಚ್ಚುತ್ತದೆ. ಅದೇ ಕಾಮಿಕ್ಸ್ ಕಥೆಯನ್ನು ಮತ್ತೊಮ್ಮೆ ಓದಿದಾಗ ರಕ್ತಸಂಚಾರ ಅಷ್ಟಾಗಿ ಏರುವುದಿಲ್ಲ. ಅಂದರೆ, ಈ ಪುನರಾವರ್ತಿತ ಪ್ರಸಂಗಕ್ಕೆ ಮೆದುಳು ಹೆಚ್ಚೇನೂ ಸ್ಪಂದಿಸುವುದಿಲ್ಲ; ‘ಇದು ಈಗಾಗಲೇ ಆಗಿದೆಯಲ್ಲ; ಮತ್ತೆ ಏನಿದೆ’ ಎನುವ ರೀತಿ ವರ್ತಿಸುತ್ತದೆ. ಆದರೆ ಕೇಳಿದ ಕಥೆಯನ್ನು ಮತ್ತೊಮ್ಮೆ ಆಲಿಸುವಾಗಲೂ ಮೆದುಳಿಗೆ ಮೊದಲ ಬಾರಿ ಆದ ಅನುಭವವೇ ಆಗುವಂತೆ ರಕ್ತಸಂಚಾರದಲ್ಲಿ ಏರಿಕೆ ಆಗುತ್ತದೆ. ಅಂದರೆ ಕಥೆ ಕೇಳುವ ಅನುಭವ ಪ್ರತಿ ಬಾರಿಯೂ ನವನವೀನ. ಅದಕ್ಕೇ ಮಕ್ಕಳು ಹಿರಿಯರನ್ನು ‘ಆ ಮಂಗನ ಕಥೆ ಹೇಳು; ಈ ಮೊಲದ ಕಥೆ ಹೇಳು’ ಎಂದು ಪದೇ ಪದೇ ಬೇಡಿಕೊಳ್ಳುತ್ತಾರೆ.
ಪರಿಣಾಮಕಾರಿಯಾಗಿ ಕಥೆಯನ್ನು ಹೇಳುವ ಲಾಭವನ್ನು ಪ್ರತಿಯೊಂದು ನಾಗರಿಕತೆಯೂ ಅನಾದಿಕಾಲದಿಂದ ಕಂಡುಕೊಂಡಿದೆ. ನಮ್ಮ ದೇಶದ ಪಂಚತಂತ್ರ, ಹಿತೋಪದೇಶ; ಗ್ರೀಕರ ಈಸೋಪನ ಕಥೆಗಳು; ಯುರೋಪಿನ ಆಂಡರ್‌ಸನ್ ಅವರ ಕಾಲ್ಪನಿಕಗಳು ಮೊದಲಾಗಿ ಕಥನ ಇತಿಹಾಸವಿಲ್ಲದ ದೇಶವೇ ಇಲ್ಲ. ಕಥೆಯನ್ನು ಹೇಳುವುದರಿಂದ ಮತ್ತು ಕೇಳುವುದರಿಂದ ಬಹಳಷ್ಟು ಲಾಭಗಳಿವೆ. ಕಥೆಗಳು ಮಕ್ಕಳ ಊಹಾಶಕ್ತಿಯನ್ನು ಹೆಚ್ಚಿಸುತ್ತವೆ. ಭವಿಷ್ಯದಲ್ಲಿ ತಾವು ಎದುರಿಸಬೇಕಾದ ಸವಾಲಿನ ಸಂದರ್ಭಗಳನ್ನು ಊಹಿಸಿಕೊಂಡು, ತಯಾರಿ ಮಾಡಿಕೊಳ್ಳಬಲ್ಲವರು ಹೆಚ್ಚು ಸಫಲರಾಗುತ್ತಾರೆ ಎಂದು ವಿಜ್ಞಾನ ಹೇಳುತ್ತದೆ. ಅದರ ಬೇರುಗಳು ಅವರು ಬಾಲ್ಯದಲ್ಲಿ ಕೇಳುವ ಕಥೆಗಳಲ್ಲಿವೆ. ಹಿರಿಯರಿಂದ ಕಥೆಗಳಿಗೆ ಪರಿಚಿತರಾಗುವ ಮಕ್ಕಳಿಗೆ ತಮ್ಮ ಇತಿಹಾಸ, ಸಂಸ್ಕೃತಿಗಳ ಪರಿಚಯ ಚೆನ್ನಾಗಿ ಆಗುತ್ತದೆ. ಅವರ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ.
ಕಥೆಗಳು ಮಕ್ಕಳಿಗೆ ಆಲಿಸುವ ತಾಳ್ಮೆಯನ್ನು ನೀಡುತ್ತವೆ. ಕಥನಗಳನ್ನು ಪುನಃ ಕೇಳುವ ಮಕ್ಕಳು ಕೂಡ ತಮಗೆ ಇದು ತಿಳಿದಿದೆ ಎಂದು ಮಧ್ಯೆ ಬಾಯಿ ಹಾಕುವುದಿಲ್ಲ. ಬದಲಿಗೆ ಹೆಚ್ಚು ಆಸಕ್ತಿಯಿಂದ ವಿವರಗಳನ್ನು ಆಲಿಸುತ್ತಾರೆ. ಪ್ರಸ್ತುತ ಜೀವನದಲ್ಲಿ ಆಲಿಸುವ ಗುಣ ಬಹಳ ಮುಖ್ಯ. ‘ಆಸಕ್ತಿಯಿಂದ ಕೇಳಿಸಿಕೊಳ್ಳುವವರು ಗೆಲ್ಲುವುದು ಹೆಚ್ಚು’ ಎಂದು ಮಾನವಸಂಪನ್ಮೂಲದ ಕಾರ್ಪೊರೆಟ್ ಪ್ರಭೃ ತಿಗಳೂ ಹೇಳುತ್ತಾರೆ. ಕಥನಗಳು ಮಕ್ಕಳ ಶಬ್ದಶಕ್ತಿಯನ್ನು ಹೆಚ್ಚಿಸುತ್ತವೆ; ಹೆಚ್ಚು ಪದಗಳು ಅವರಿಗೆ ಪರಿಚಿತವಾಗುವುದಷ್ಟೇ ಅಲ್ಲದೆ, ಅವನ್ನು ಎಂತಹ ಸಂದರ್ಭಗಳಲ್ಲಿ ಬಳಸಬೇಕೆನ್ನುವ ಪರಿಜ್ಞಾನವೂ ಬೆಳೆಯುತ್ತದೆ. ಒಳ್ಳೆಯ ಭಾಷೆಯನ್ನು, ಪರಿಣಾಮಕಾರಿಯಾದ ಪದಗಳನ್ನು ಮಾತು-ಬರಹಗಳಲ್ಲಿ ಬಳಸಬಲ್ಲವರು ಸಾಮಾಜಿಕ ಏಣಿಯನ್ನು ಬಹಳ ಬೇಗ ಏರಬಲ್ಲರು. ಅಂತಹವರ ಬಗ್ಗೆ ಎಲ್ಲರಿಗೂ ಅಭಿಮಾನ; ಅವರು ಎಲ್ಲರಿಗೂ ಬೇಕು. ಕಥೆಗಳನ್ನು ಅನುಭವಿಸುವ ಮಕ್ಕಳ ಸಹಾನುಭೂತಿ ವೃದ್ಧಿಸುತ್ತದೆ. ಅವರು ಇತರರ ಜೊತೆಗೆ ಭಾವನಾತ್ಮಕವಾಗಿ ಗುರುತಿಸಿಕೊಳ್ಳಬಲ್ಲರು. ಮಾನವ ಸಂಪನ್ಮೂಲಗಳ ಅಗತ್ಯ ತೀವ್ರವಾಗಿರುವ ಇಂದಿನ ದಿನಗಳಲ್ಲಿ ಇಂತಹ ವ್ಯಕ್ತಿಗಳು ಯಾವುದೇ ಉದ್ಯಮಕ್ಕೂ ಬಹಳ ಅಗತ್ಯವಾಗಿ ಬೇಕಾಗುತ್ತಾರೆ.
ಇಂದಿನ ದಿನಗಳಲ್ಲಿ ಮಕ್ಕಳು ಪರದೆಗಳಿಗೆ ಅಂಟಿಕೊಳ್ಳುವ ಅಪಾಯ ಹೆಚ್ಚಾಗಿದೆ. ದೂರದರ್ಶನದ ಪರದೆ, ಲ್ಯಾಪ್'ಟಾಪ್ ಪರದೆ, ಮೊಬೈಲ್ ಫೋನಿನ ಪರದೆ, ಕಂಪ್ಯೂಟರಿನ ಪರದೆ - ಹೀಗೆ ವಿವಿಧ ಪರದೆಗಳನ್ನು ದಿನದ ಹಲವಾರು ಗಂಟೆಗಳ ಕಾಲ ಏಕಾಂಗಿಯಾಗಿ ವೀಕ್ಷಿಸುತ್ತಾರೆ. ಅವರ ಶಾಲೆಯ ಪ್ರಾಜೆಕ್ಟುಗಳಿಂದ ಹಿಡಿದು, ಸ್ನೇಹಿತರ ಒಡನಾಟ ಹಾಗೂ ಮನೋರಂಜನೆಯವರೆಗೆ ಪರದೆಗಳೇ ಆಧಾರ. ಇದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ಅನೇಕಾನೇಕ ಅಧ್ಯಯನಗಳು ನಡೆದಿವೆ. ಇದು ಬೆಳೆದು ಅವಲಂಬನೆಯೆಂಬ ಮನೋವ್ಯಾಧಿಯ ಹಂತ ತಲುಪಿ, ಮಕ್ಕಳು ಪರದೆಗಳ ದಾಸ್ಯದಿಂದ ಹೊರಬರಲು ಮನೋವೈದ್ಯರ ಸಹಾಯ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಥೆಗಳನ್ನು ಹೇಳುವುದು ಬಹಳ ಸಹಕಾರಿ. ಪರದೆಗಳು ನೀಡದ ಶಕ್ತ ಅನುಭವವನ್ನು ಸಮರ್ಥ ಕಥನಕಾರರು ನೀಡಬಲ್ಲರು. ಆದರೆ, ಕುಟುಂಬಗಳಲ್ಲಿ ಈ ಕಲೆಗಾರಿಕೆ ಕ್ರಮೇಣ ನಶಿಸುತ್ತಿರುವುದು ನಮಗೆ ಎಚ್ಚರಿಕೆಯ ಗಂಟೆಯಾಗಬೇಕು.
ಕಥೆಗಳನ್ನು ಕೇಳುವುದಷ್ಟೇ ಅಲ್ಲ; ಕಥೆಗಳನ್ನು ಹೇಳುವ ಕಲೆಯೂ ಮಕ್ಕಳಲ್ಲಿ ಬೆಳೆಯಬೇಕು. ತಾನು ಹಲವು ಬಾರಿ ಕೇಳಿರುವ ಕಥೆಯನ್ನು ಇತರರಿಗೆ ಹೇಳುವಾಗ ಮಕ್ಕಳ ಕಲ್ಪನೆಯ ಸಾಮರ್ಥ್ಯ ಜಾಗೃತವಾಗುತ್ತದೆ. ನೆನಪಿನ ಶಕ್ತಿ ಬೆಳೆಯುತ್ತದೆ. ಮಾಹಿತಿಯನ್ನು ವ್ಯವಸ್ಥಿತವಾಗಿ ಪ್ರಸ್ತುತ ಪಡಿಸುವ ರೂಢಿಯಾಗುತ್ತದೆ. ಕಥೆಯೊಳಗೆ ತನಗೆ ಇಷ್ಟವಾಗದ ಅಂಶಗಳನ್ನು ಕಡಿತಗೊಳಿಸಿ, ತನಗೆ ನೆಚ್ಚುವ ವಿವರಗಳನ್ನು ಸೇರಿಸುವ ಯುಕ್ತಾಯುಕ್ತ ವಿವೇಚನೆ ಆರಂಭವಾಗುತ್ತದೆ. ಸಣ್ಣ ವಯಸ್ಸಿನಿಂದ ಕಥೆಗಳನ್ನು ಹೇಳುವ ಅಭ್ಯಾಸ ಮಾಡಿಕೊಂಡ ಮಕ್ಕಳಿಗೆ ಸಭಾಕಂಪನ ಕಾಡುವುದು ಕಡಿಮೆ. ಅಗತ್ಯ ವಿವರಗಳನ್ನು ನಿರ್ದಿಷ್ಟ ಕ್ರಮದಲ್ಲಿ ಸ್ಪಷ್ಟವಾಗಿ ಹೇಳಬಲ್ಲವರು ತಮ್ಮ ವೃತ್ತಿ-ಪ್ರವೃತ್ತಿಗಳಲ್ಲಿ ಒಳ್ಳೆಯ ಪ್ರಗತಿ ಸಾಧಿಸಬಲ್ಲರು.
ಮಕ್ಕಳಿಗೆ ಚೆನ್ನಾದ ಕಥೆಗಳನ್ನು ಕೇಳಿಸುವ, ಅವರಿಂದ ಹೇಳಿಸುವ ಪ್ರಕ್ರಿಯೆಯನ್ನು ಆರಂಭಿಸಿ ಮುಂದುವರೆಸಲು ‘ಇಂದಿನ ದಿನವೇ ಶುಭದಿನವು’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.