ADVERTISEMENT

2025ರ ವೇಳೆಗೆ ಶ್ವಾಸಕೋಶದ ಕ್ಯಾನ್ಸರ್ 7 ಪಟ್ಟು ಹೆಚ್ಚಳ ಸಾಧ್ಯತೆ: ಅಧ್ಯಯನ

ಕಲ್ಯಾಣ್‌ ರೇ
Published 24 ಜುಲೈ 2022, 2:15 IST
Last Updated 24 ಜುಲೈ 2022, 2:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದಶಕದ ಹಿಂದಿನ ಸ್ಥಿತಿಗೆ ಹೋಲಿಸಿದರೆ ದೇಶದಲ್ಲಿ 2025ರ ವೇಳೆಗೆ ಶ್ವಾಸಕೋಶದ ಕ್ಯಾನ್ಸರ್ ಏಳು ಪಟ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌) ಅಧ್ಯಯನ ವರದಿ ತಿಳಿಸಿದೆ.

ಅಂತಹ ರೋಗಿಗಳನ್ನು ಗುರುತಿಸಲು ಜನಸಂಖ್ಯೆಯ ಮಟ್ಟದ ಸ್ಕ್ರೀನಿಂಗ್ ಉಪಕರಣದ ಕೊರತೆ ಕಾಡುತ್ತಿರುವ ಬಗ್ಗೆ ಐಸಿಎಂಆರ್ ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಟ್ಟ ಪರಿಸ್ಥಿತಿಯೆಂದರೆ, ದೇಹದ ಇತರ ಭಾಗಗಳಿಗೂ ಹರಡಿದ ಬಳಿಕವಷ್ಟೇ ಶೇ 45ರಷ್ಟು ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಲ್ಲಿ ಕಾಯಿಲೆ ಪತ್ತೆಯಾಗುತ್ತಿದೆ ಎಂದು ಹೇಳಿದ್ದಾರೆ.

ಪಾಶ್ಚಿಮಾತ್ಯ ಜನಸಂಖ್ಯೆಗೆ ಹೋಲಿಸಿದಾಗ ಭಾರತೀಯರಲ್ಲಿ ಒಂದು ದಶಕಕ್ಕೂ ಮುನ್ನ ಅಂದರೆ ಸಾಮಾನ್ಯವಾಗಿ 55 ವಯಸ್ಸಿನ ಅಸುಪಾಸಿನಲ್ಲಿ ರೋಗನಿರ್ಣಯವಾಗುತ್ತದೆ.

ಶೇ 75ರಷ್ಟು ಪ್ರಕರಣಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಎರಡನೇ ಹಾಗೂ ಮೂರನೇ ಹಂತದಲ್ಲಿ ಗುರುತಿಸಲಾಗುತ್ತಿದೆ. ಇದರಿಂದ ಬದುಕುಳಿಯುವ ಸಾಧ್ಯತೆ ಕಡಿಮೆಯಾಗಿದ್ದು, ಸಾವಿನ ಪ್ರಮಾಣ ಜಾಸ್ತಿಯಾಗಿದೆ ಎಂದು ಐಸಿಎಂಆರ್‌ ಬೆಂಗಳೂರಿನ ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರಶಾಂತ್ ಮಾಥುರ್ ಹೇಳಿದ್ದಾರೆ.

ಜನಸಂಖ್ಯೆ ಆಧಾರಿತ 28 ಮತ್ತು ಆಸ್ಪತ್ರೆ ಆಧಾರಿತ 58 ಕ್ಯಾನ್ಸರ್ ರಿಜಿಸ್ಟ್ರಿಗಳಿಂದ ಡೇಟಾವನ್ನು ಸಂಗ್ರಹಿಸಲಾಗಿದೆ. 2012ರಿಂದ 2016ರ ನಡುವೆ 22,645 ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ಪತ್ತೆಯಾಗಿದೆ.

ಅಧ್ಯಯನ ಪ್ರಕಾರ, ಈ ಸಂಖ್ಯೆಯು 2025ರ ವೇಳೆಗೆ 1.61 ಲಕ್ಷಕ್ಕೆ ಏರಿಕೆಯಾಗಲಿದೆ. ಈ ಮೂಲಕ ಏಳು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ತಡವಾಗಿ ರೋಗ ಬೆಳಕಿಗೆ ಬರುತ್ತಿರುವುದು ಕಳವಳಕಾರಿವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.