ನವದೆಹಲಿ: ಕೋವಿಡ್ ಜಗತ್ತಿನಾದ್ಯಂತ ಜನರಲ್ಲಿ ಆರೋಗ್ಯದ ಕಾಳಜಿ ಮೂಡಿಸಿದೆ. ಭಾರತ ಮೂಲದ ಯೋಗದ ಮಹತ್ವ ಅರಿತಿರುವ ಅನೇಕ ರಾಷ್ಟ್ರಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಯೋಗಾಸನಕ್ಕೆ ಒತ್ತು ನೀಡುತ್ತಿವೆ.
ಪ್ರಸ್ತುತ್ತ ಯೋಗಾಸನಕ್ಕೆ ಜಗತ್ತಿನ ಬಹುತೇಕ ರಾಷ್ಟ್ರಗಳು ಮಾರು ಹೋಗಿವೆ. ಅಲ್ಲಿಯ ಜನರು ಯೋಗದ ಮಹತ್ವ ಮತ್ತು ಆಸನಗಳನ್ನು ತಿಳಿಸಲು ಹೆಚ್ಚು ಉತ್ಸುಕರಾಗಿದ್ದಾರೆ ಎಂದರೆ ತಪ್ಪಲ್ಲ.
ಇದೀಗ ದುಬೈನಲ್ಲಿ ನೆಲೆಸಿರುವ ಭಾರತ ಮೂಲದ ಯೋಗ ಶಿಕ್ಷಕರೊಬ್ಬರು 29 ನಿಮಿಷ 4 ಸೆಕೆಂಡ್‌ವರೆಗೆ ಚೇಳಿನ ಭಂಗಿಯಲ್ಲಿ (ವೃಶ್ಚಿಕಾಸನ) ಆಸನ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. 4 ನಿಮಿಷ 47 ಸೆಕೆಂಡ್‌ವರೆಗೆ ಮಾಡಿದ್ದ ವೃಶ್ಚಿಕಾಸನದ ಹಿಂದಿನ ದಾಖಲೆ ಸರಿಗಟ್ಟಿದ್ದಾರೆ.
21 ವರ್ಷದ ಯಶ್ ಮನ್ಸೂಖ್‌ಭಾಯ್ ಮೊರಾದಿಯಾ ಅವರು ಮಾಡಿರುವ ಯೋಗಾಸನದ ವಿಡಿಯೊವನ್ನು ಗಿನ್ನೆಸ್ ವರ್ಲ್ಡ್ರೆಕಾರ್ಡ್ಸ್ (GWR) ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದೆ.
2001ರಲ್ಲಿ ಜನಿಸಿದ ಮೊರಾದಿಯಾ ಅವರು ತಮ್ಮ ಎಂಟನೇ ವಯಸ್ಸಿನಲ್ಲಿ ಯೋಗ ಮಾಡುವುದನ್ನು ಆರಂಭಿಸಿದ್ದರು. ಗಿನ್ನಿಸ್ ದಾಖಲೆ ಮಾಡುವ ಉದ್ದೇಶದಿಂದ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಅಭ್ಯಾಸ ನಡೆಸಿದ್ದರು ಎಂದು ಗಿನ್ನೆಸ್ ವರ್ಲ್ಡ್ರೆಕಾರ್ಡ್ಸ್ ತಿಳಿಸಿದೆ.
ವೃಶ್ಚಿಕಾಸನ ಎಂದರೇನು?
ವೃಶ್ಚಿಕಾಸನ ಇದೊಂದು ಚೇಳಿನ ಭಂಗಿ ಹಾಗೂ ಸುಧಾರಿತ ಆಸನವಾಗಿದೆ. ತಲೆಯ ಮೇಲ್ಭಾಗದಲ್ಲಿ ಪಾದದ ಅಡಿಭಾಗವನ್ನು ಇರಿಸುವ ಮೂಲಕ ಅಭ್ಯಾಸ ಮಾಡಲಾಗುತ್ತದೆ. ಇದು ಅತ್ಯಂತ ಕಠಿಣ (ಹ್ಯಾಂಡ್ ಬ್ಯಾಲೆನ್ಸ್ ಬ್ಯಾಕ್ ಬೆಂಡಿಂಗ್ ಭಂಗಿ) ಆಸನವಾಗಿದೆ.
ಅಭ್ಯಾಸ ಕ್ರಮ: ಮೊದಲಿಗೆ ತಾಡಾಸನ ಭಂಗಿಯ ಆರಂಭದ ಸ್ಥಿತಿಗೆ ಬನ್ನಿ. ಆಮೇಲೆ ಮುಂದಕ್ಕೆ ಬಾಗಿ ಕೈಗಳನ್ನು ನೆಲದ ಮೇಲೆ ಊರಿ (ಭುಜಗಳ ಸಮಾನಾಂತರವಾಗಿ ಅಂಗೈಗಳನ್ನು ಊರಿ). ಆಮೇಲೆ ಕುತ್ತಿಗೆ, ತಲೆ ಮೇಲೆತ್ತಿ ಉಸಿರನ್ನು ಬಿಡುತ್ತಾ, ಕಾಲುಗಳು ಮತ್ತು ಸೊಂಟದ ಭಾಗವನ್ನು ಮೇಲಕ್ಕೆತ್ತಿ ಕೈಗಳ ಸಹಾಯದಿಂದ ಇಡೀ ದೇಹವನ್ನು ಸಮತೋಲನಗೊಳಿಸಿ ಮಂಡಿಯನ್ನು ಬಾಗಿಸಿ ಬೆನ್ನೆಲುಬು ಮತ್ತು ಎದೆಯನ್ನು ಹಿಗ್ಗಿಸಿ ಪಾದವನ್ನು ಶಿರಸ್ಸಿಗೆ ಸ್ಪರ್ಶಿಸಲು ಪ್ರಯತ್ನಿಸಿ. ತೋಳುಗಳನ್ನು ಮೊಣಕೈಯಿಂದ ಭುಜದವರೆಗೆ ಉದ್ದವಾಗಿ ಇರಿಸಿ. ಇದು ಸಮತೋಲನವನ್ನು ಸುಲಭಗೊಳಿಸುತ್ತದೆ. ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸುತ್ತ ವಿಶ್ರಮಿಸಿರಿ. ನಿಮ್ಮ ತ್ರಾಣಕ್ಕೆ ಅನುಗುಣವಾಗಿ ಈ ಭಂಗಿಯಲ್ಲಿ ಇರಿ.
ಉಪಯೋಗಗಳು: ಚೇಳು ಯೋಗ ಭಂಗಿ ಮುಖಕ್ಕೆ ಕಾಂತಿ, ಸೊಬಗು, ಸೌಮ್ಯತೆ ನೀಡುತ್ತದೆ. ಶ್ವಾಸಕೋಶದ ಭಾಗ, ಕಿಬ್ಬೊಟ್ಟೆಯ ಮಾಂಸಖಂಡಗಳು ಬಲಿಷ್ಠವಾಗುತ್ತವೆ. ಜೀರ್ಣಾಂಗ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ. ಅಭ್ಯಾಸಿಯು ಈ ಭಂಗಿಯಲ್ಲಿ ತನ್ನ ತಲೆಯನ್ನು ತನ್ನ ಪಾದಗಳಿಂದ ಸ್ಪರ್ಶಿಸುವ ಮೂಲಕ ದ್ವೇಷ, ದುರುದ್ದೇಶ, ಅಹಂ, ಅಸೂಯೆ ಇತ್ಯಾದಿಗಳನ್ನು ನಿರ್ಮೂಲನೆ ಮಾಡುತ್ತಾನೆ. ಈ ಭಂಗಿಯು ಮನುಷ್ಯನನ್ನು ಸಭ್ಯನನ್ನಾಗಿ ಮಾಡುತ್ತದೆ.
ವಿಶೇಷ ಸೂಚನೆ: ಈ ಭಂಗಿಯನ್ನು ಅಭ್ಯಾಸ ಮಾಡಿದ ನಂತರ ಬೆನ್ನಿನ ಸೆಳೆತವನ್ನು ಕಡಿಮೆ ಮಾಡಲು ಮುಂದಕ್ಕೆ ಬಾಗುವ (ಪಶ್ಚಿಮೋತ್ತಾಸನ) ಆಸನಗಳನ್ನು ಕಡ್ಡಾಯವಾಗಿ ಅಭ್ಯಾಸ ಮಾಡಬೇಕು. ಅಧಿಕ ರಕ್ತದೊತ್ತಡ, ಹೃದಯ ರೋಗಿಗಳು, ಕಿಬ್ಬೊಟ್ಟೆಯ ಅಸ್ವಸ್ಥತೆಗಳನ್ನು ಹೊಂದಿದ್ದರೆ ಈ ಚೇಳಿನ ಭಂಗಿಯ ಅಭ್ಯಾಸ ಮಾಡುವುದು ಬೇಡ. ಗುರುಮುಖೇನ ಕಲಿತು, ಗೋಡೆಯ ಆಧಾರದಿಂದಲೇ ಅಭ್ಯಾಸ ಮಾಡಿದರೆ ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.