ADVERTISEMENT

ಅತಿ ವ್ಯಾಯಾಮದಿಂದ ಸಂತಾನಹೀನತೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 19:30 IST
Last Updated 20 ಡಿಸೆಂಬರ್ 2019, 19:30 IST
   

ವ್ಯಾಯಾಮ ಮಾಡುವುದು ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿಯೇನೋ ಹೌದು. ಆದರೆ ಇತ್ತೀಚೆಗೆ ಜೀವನಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದು, ನಮ್ಮ ಶರೀರದ ಆರೋಗ್ಯ ಹಾಗೂ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಸಮಯವಿಲ್ಲದೇ ಪರದಾಡುವುದು ನಗರಗಳಲ್ಲಿ ಕಂಡು ಬರುವ ಸಂಗತಿ. ಮನೆಯಲ್ಲೇ ಒಂದಿಷ್ಟು ಸರಳ ವ್ಯಾಯಾಮ ಅಥವಾ ಜಿಮ್‌ನಲ್ಲಿ ಒಂದಿಷ್ಟು ಕಸರತ್ತು ಮಾಡುವುದು ದೈನಂದಿನ ಚಟುವಟಿಕೆಗಳ ಪಟ್ಟಿಯಿಂದ ಮಾಯವಾಗಿಬಿಟ್ಟಿದೆ. ಹಲವು ವರ್ಷಗಳ ಕಾಲ ಚಟುವಟಿಕೆಯಿಲ್ಲದೇ ಜೀವನ ನಡೆಸುವುದರಿಂದ ಗಂಭೀರವಾದ ಆರೋಗ್ಯ ಸಮಸ್ಯೆಗಳು ತಲೆದೋರಬಹುದು. ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಸ್ಥಿತಿಗತಿ ಕೂಡ ಏರುಪೇರಾಗಬಹುದು.

‘ದೇಹಕ್ಕೆ ಪ್ರತಿನಿತ್ಯವೂ ಒಂದಿಷ್ಟು ಪ್ರಮಾಣದ ಚಟುವಟಿಕೆಯ ಅಗತ್ಯವಿದೆ, ಅದು ಯಾವುದೇ ರೂಪದಲ್ಲಿ ಇದ್ದರೂ ಸರಿ. ಇದರಿಂದ ಶರೀರ ಸದೃಢವಾಗುವುದಲ್ಲದೇ, ನಮ್ಮ ಸಾಮರ್ಥ್ಯ ಹಾಗೂ ಕ್ರಿಯಾಶೀಲತೆಯಲ್ಲಿ ಸುಧಾರಣೆ ಕಾಣಿಸುತ್ತದೆ. ಆದರೆ ವ್ಯಾಯಾಮದಿಂದ ಹೇಗೆ ಲಾಭವನ್ನು ಪಡೆಯಬಹುದೋ ಹಾಗೆಯೇ, ಕೆಲವು ನಕಾರಾತ್ಮಕ ಅಂಶಗಳೂ ಇವೆ. ಅಂದರೆ ಅಗತ್ಯಕ್ಕಿಂತ ಅಧಿಕ ವ್ಯಾಯಾಮ ತೊಂದರೆಗೆ ಕಾರಣವಾಗಬಹುದು. ಹೃದಯದ ಸ್ಥಿತಿಯಲ್ಲಿ ಸುಧಾರಣೆ, ಚೆನ್ನಾಗಿ ನಿದ್ದೆ ಬರುವುದು, ಶರೀರದ ಶಕ್ತಿಯಲ್ಲಿ ಹೆಚ್ಚಳ ಮತ್ತು ಆತ್ಮವಿಶ್ವಾಸದಲ್ಲಿ ವೃದ್ಧಿಯಾಗುವುದು ಸಕಾರಾತ್ಮಕ ಅಂಶಗಳು’ ಎನ್ನುತ್ತಾರೆ ಇಂದಿರಾ ಐವಿಎಫ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ಪಾರ್ಥ ಜೋಶಿ.

ವ್ಯಾಯಾಮದಿಂದಾಗುವ ಸಮಸ್ಯೆಗಳು
ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಹೀಗಾಗಿ ದೈಹಿಕ ಚಟುವಟಿಕೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಆದರೆ ಅಗತ್ಯಕ್ಕಿಂತ ಅಧಿಕ ವ್ಯಾಯಾಮ ಮಾಡುವುದರಿಂದ ನಮ್ಮ ಶರೀರದ ಮೇಲೆ ನಕಾರಾತ್ಮಕ ಪರಿಣಾಮಗಳು ಕೂಡ ಉಂಟಾಗಬಹುದು ಎಂಬುದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ. ಮುಖ್ಯವಾಗಿ ನಿಮ್ಮ ಶಕ್ತಿ ಕುಂದಬಹುದು. ಈ ವಿಷಯದಲ್ಲಿ ಪುರುಷರು ಅಥವಾ ಸ್ತ್ರೀಯರು ಎಂಬ ಭೇದವಿಲ್ಲ. ಆದರೆ ವಿಶೇಷವಾಗಿ ಮಹಿಳೆಯರಲ್ಲಿ ಕೆಲವು ಸಮಸ್ಯೆ ತಲೆದೋರುತ್ತದೆ. ಅದಕ್ಕೆ ಅನಿಮಿಯಾ ಅಂದರೆರಜೋರೋಧ ಎಂದು ಹೇಳುತ್ತೇವೆ. ಯಾವುದೇ ಮಹಿಳೆಗೆ ಸತತ ಮೂರು ತಿಂಗಳಿಗಿಂತ ಹೆಚ್ಚು ಕಾಲ ಮುಟ್ಟು ಆಗದೆ ಇದ್ದರೆಈ ಸ್ಥಿತಿ ಉಂಟಾಗುತ್ತದೆ.

ADVERTISEMENT

ಇದಕ್ಕೆ ಕಾರಣಗಳು ಹಲವು. ಶರೀರಕ್ಕೆ ನಿಯಮಿತವಾಗಿ ಶಕ್ತಿಯನ್ನು ಒದಗಿಸುವಂತಹ ಅವಶ್ಯಕ ಕ್ಯಾಲೊರಿಯುಕ್ತ ಆಹಾರ ಸೇವನೆ ಮಾಡದಿದ್ದರೆ; ಜಿಮ್‌ಗೆ ಹೋಗಿ ನಿಯಮಿತವಾಗಿ ವಿಶೇಷ ರೀತಿಯ ವ್ಯಾಯಾಮವನ್ನು3–4 ಆವೃತ್ತಿಯಲ್ಲಿ ಮಾಡಿದರೆ ಈ ಸಮಸ್ಯೆ ತಲೆದೋರಬಹುದು. ಶರೀರದಲ್ಲಿ ಕ್ಯಾಲೊರಿಯ ಕೊರತೆಯು ಅವರ ಫಲವಂತಿಕೆ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ, ಮಹಿಳೆಯರ ಲೈಂಗಿಕಇಚ್ಛೆಯ ಮೇಲೆಯೂ ಪ್ರಭಾವ ಬೀರುತ್ತದೆ. ತೂಕ ಹೆಚ್ಚಿರುವ ಸ್ತ್ರೀಯರು ತಮ್ಮ ತೂಕವನ್ನು ಕಡಿಮೆ ಮಾಡುವುದಕ್ಕಾಗಿ ಕಠಿಣವಾದ ವ್ಯಾಯಾಮವನ್ನು ಪದೇ ಪದೇ ಮಾಡುವುದು ಸಾಮಾನ್ಯ. ಇದರಿಂದ ಅವರ ಶಕ್ತಿಯ ಮೇಲೆ ನಕಾರಾತ್ಮಕ ಪ್ರಭಾವ ಉಂಟಾಗುತ್ತದೆ.

ಋತುಚಕ್ರದಲ್ಲಿ ಏರುಪೇರು
ಬೊಜ್ಜು ಇದ್ದರೆ ಮಹಿಳೆಯರ ಶರೀರದಲ್ಲಿ ಈಸ್ಟ್ರೋಜೆನ್ ಹಾರ್ಮೋನ್‌ನ ಉತ್ಪತ್ತಿ ಹೆಚ್ಚಾಗುತ್ತದೆ. ಇದು ಅಂಡಾಣು ಬೆಳವಣಿಗೆ ಮತ್ತು ಮುಟ್ಟಾಗುವುದರ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಸಂತಾನಹೀನತೆಯ ಅಪಾಯ ಹೆಚ್ಚುತ್ತದೆ. ಕೆಲವು ಸಂದರ್ಭಗಳಲ್ಲಿ ಯುವತಿಯರು ಎಷ್ಟೊಂದು ವ್ಯಾಯಾಮ ಮಾಡುತ್ತಾರೆ ಎಂದರೆ, ಇದು ಅವರಮಾಸಿಕ ಋತುಚಕ್ರದ ಮೇಲೆ ಪ್ರಭಾವ ಬೀರುತ್ತದೆ. ಈಸ್ಟ್ರೋಜೆನ್ ಮಟ್ಟದಲ್ಲಿ ಹೆಚ್ಚು ಬದಲಾವಣೆಯಾದರೆ ನಂತರ ಗರ್ಭಧಾರಣೆಗೂ ಕೂಡ ಕಷ್ಟವಾಗುತ್ತದೆ.

ವೀರ್ಯಾಣು ಸಂಖ್ಯೆಯಲ್ಲಿ ಕುಸಿತ
ಪುರುಷರಲ್ಲಿ ಸಹ ಕಠಿಣ ವ್ಯಾಯಾಮದಿಂದ ಶರೀರದಲ್ಲಿವೀರ್ಯಾಣುಗಳ ಸಂಖ್ಯೆಯಲ್ಲಿ ಕೊರತೆ ಉಂಟಾಗಬಹುದು. ಅದು ನೇರವಾಗಿ ಅವರ ಸಂತಾನ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಕೆಲವರು ತಮ್ಮ ಶರೀರದ ಅಂಗಸೌಷ್ಟವವನ್ನು ಕಾಯ್ದುಕೊಳ್ಳುವುದಕ್ಕಾಗಿ, ದೀರ್ಘಕಾಲದವರೆಗೆ ವ್ಯಾಯಾಮ ಮಾಡುತ್ತಾರೆ. ಸಾಧಾರಣ ವ್ಯಾಯಾಮ ಮಾಡುವವರಿಗಿಂತ ಹೆಚ್ಚು ಸುಸ್ತು ಮಾಡುವಂತಹ ವ್ಯಾಯಾಮ ಮಾಡುವ ಪುರುಷರಲ್ಲಿ, ವೀರ್ಯಾಣುಗಳ ಸಂಖ್ಯೆ ಕಡಿಮೆ ಎನ್ನುತ್ತಾರೆ ತಜ್ಞರು.

ಜೊತೆಗೆ ಹೆಚ್ಚು ಕಾಲ ರೆಸಿಸ್ಟೆನ್ಸ್ ವ್ಯಾಯಾಮ ಮಾಡಿದರೆ ಲಾಭಕ್ಕಿಂತ ಹಾನಿ ಉಂಟಾಗುವುದು ಹೆಚ್ಚು. ಇದರಿಂದ ಶರೀರದಲ್ಲಿ ಟೆಸ್ಟೋಸ್ಟೆರಾನ್ಹಾರ್ಮೋನ್‌ ಉತ್ಪಾದನೆ ಹೆಚ್ಚಾಗುತ್ತದೆ. ಅದು ಪುರುಷರ ಸಂತಾನ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಇರುವಂತ ಹಾರ್ಮೋನ್ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ನಿಮ್ಮ ಸಂಗಾತಿ ಗರ್ಭಧಾರಣೆ ಮಾಡುವುದು ಕಷ್ಟವಾಗಬಹುದು.

ಅತ್ಯಧಿಕ ವ್ಯಾಯಾಮ ಮಾಡುವುದು ಮಾತ್ರವಲ್ಲದೆ ಧೂಮಪಾನ ಮತ್ತು ಮದ್ಯ ಸೇವನೆ ಮಾಡುವ ಅಭ್ಯಾಸದಿಂದ ಪುರುಷರ ಸಂತಾನ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು.

ಸಾಮಾನ್ಯ ವ್ಯಾಯಾಮದ ಜೊತೆ ಪೌಷ್ಟಿಕಾಂಶ ಸೇವನೆ
ವ್ಯಾಯಾಮವನ್ನು ಸಂಪೂರ್ಣ ನಿಲ್ಲಿಸುವುದು ಸಾಧ್ಯವಿಲ್ಲ. ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಏಕೆಂದರೆ ಪ್ರತಿಯೊಬ್ಬರ ಶರೀರವೂ ಬೇರೆಬೇರೆ ರೀತಿಯಲ್ಲಿ ಪ್ರತಿಕ್ರಿಯೆ ತೋರುತ್ತದೆ.ನಿಯಮಿತವಾಗಿ ವ್ಯಾಯಾಮವನ್ನು ಮಾಡಬೇಕು.ಆದರೆ ಅದು ಸಾಮಾನ್ಯ ವಿಧಾನದಿಂದ ಇರಬೇಕು. ಜೊತೆಗೆ, ಒಳ್ಳೆಯ ಆಹಾರ ಸೇವನೆ ಕೂಡ ಅಗತ್ಯ. ನಿಮ್ಮ ಶರೀರಕ್ಕೆ ನಿಯಮಿತವಾಗಿ ಪೌಷ್ಟಿಕಾಂಶ ಮತ್ತು ಕ್ಯಾಲೊರಿಯ ಅಗತ್ಯವಿದೆ. ವ್ಯಾಯಾಮ ಮಾಡುವಂತಹ ಸಂದರ್ಭದಲ್ಲಿ ಬಹಳಷ್ಟು ಕ್ಯಾಲೊರಿ ಕಳೆದುಕೊಳ್ಳುವುದರಿಂದ ಇದು ಅಗತ್ಯ. ನೀವು ಸದಾ ನಿಮ್ಮ ವೀರ್ಯಾಣು ಸಂಖ್ಯೆಯನ್ನು ಪರೀಕ್ಷೆ ಮಾಡಿಸಿಬೇಕು. ಮಹಿಳೆಯರು ತಮ್ಮ ಗರ್ಭಧಾರಣ ಸಾಮರ್ಥ್ಯವನ್ನು ಕೂಡ ಪರೀಕ್ಷೆ ಮಾಡಿಸಿಕೊಳ್ಳಬೇಕು.

(ಲೇಖಕಿ ಗೈನಕಾಲಜಿಸ್ಟ್ ಅಂಡ್ ಐವಿಎಫ್ ಸ್ಪೆಷಲಿಸ್ಟ್, ಇಂದಿರಾ ಐವಿಎಫ್‌ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.