‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬುದು ಗಾದೆ ಮಾತು. ಪ್ರಕೃತಿದತ್ತವಾಗಿ ಲಭ್ಯವಾಗಿರುವ ನಿದ್ದೆ ಮನುಷ್ಯನನ್ನು ಉತ್ಸಾಹ, ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ದಣಿದ ಮೈ–ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ಆದರೆ ಒತ್ತಡ, ಆತಂಕ, ಖಿನ್ನತೆಗಳಿಂದ ಬಳಲುತ್ತಿರುವ ಬಹುತೇಕರಿಗೆ ನಿದ್ರಾದೇವಿ ಅಷ್ಟು ಸುಲಭವಾಗಿ ಒಲಿದು ಬರುವುದಿಲ್ಲ. ವೇಗದ ಬದುಕು, ಸದಾ ಗ್ಯಾಜೆಟ್ ಲೋಕದ ಬೆಳಕಿನಲ್ಲಿರುವವರಿಗೆ, ಒತ್ತಡದ ಜೀವನ ಶೈಲಿಯಲ್ಲಿರುವವರಲ್ಲಿ ನಿದ್ರಾಹೀನತೆ ಸಾಮಾನ್ಯ ಎನ್ನುತ್ತವೆ ವೈಜ್ಞಾನಿಕ ಅಧ್ಯಯನಗಳು.
ಏನಿದು ನಿದ್ರಾಹೀನತೆ?
ರಾತ್ರಿ ಕಣ್ತುಂಬಾ ನಿದ್ದೆ ಮಾಡಿ, ಬೆಳಿಗ್ಗೆ ಏದ್ದಾಗ ನವಚೈತನ್ಯವಿದ್ದರೆ ಆ ವ್ಯಕ್ತಿ ಆರೋಗ್ಯವಂತ ಎನ್ನುತ್ತದೆ ವಿಜ್ಞಾನ. ಆದರೆ, ಶೇ 20ರಿಂದ 30ರಷ್ಟು ಜನರಿಗೆ ನಿದ್ದೆ ಅಷ್ಟು ಸುಲಭವಾಗಿ ಬರುವುದಿಲ್ಲ.
ವಾರದಲ್ಲಿ ಕನಿಷ್ಠ ಮೂರು ಬಾರಿ ನಿದ್ದೆ ವಂಚಿತರಾದರೆ, ನಿದ್ದೆ ಬಂದರೂ ತಡವಾಗಿ ಬರುವುದು, ಮಲಗಿದಾಕ್ಷಣ ನಿದ್ರಾದೇವಿ ಆವರಿಸದಿದ್ದರೆ, ಆವರಿಸಿದರೂ ಪದೇ ಪದೇ ಎಚ್ಚರವಾಗುತ್ತಿದ್ದರೆ ಅದನ್ನು ನಿದ್ರಾಹೀನತೆಯ ಲಕ್ಷಣ ಎನ್ನುತ್ತಾರೆ ನಿಮ್ಹಾನ್ಸ್‌ನ ‘ಸ್ಲೀಪ್ ಕ್ಲಿನಿಕ್’ನ ವೈದ್ಯ ಡಾ.ಡಿ.ವಿ. ಶೇಷಗಿರಿ.
ನಿದ್ರಾಹೀನತೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಇನ್‌ಸೊಮ್ನಿಯಾ (Insomnia) ಎನ್ನುತ್ತಾರೆ. ಒತ್ತಡದಿಂದ ಬಳಲುವ ವ್ಯಕ್ತಿ, ಜೀವನದಲ್ಲಿ ಒಮ್ಮೆಯಾದರೂ ನಿದ್ರಾಹೀನತೆಯ ಸ್ಥಿತಿಯನ್ನು ಅನುಭವಿಸುತ್ತಾನೆ. ನಿದ್ರಾಹೀನತೆಯು ಕೆಲವರಲ್ಲಿ ತಾತ್ಕಾಲಿಕವಾಗಿದ್ದರೆ, ಕೆಲವರಿಗೆ ದೀರ್ಘಕಾಲದ ತನಕ ಇರಬಹುದು. ಅಂತೆಯೇ ನಿದ್ರಾಹೀನತೆಗೆ ಸಂಬಂಧಿಸಿದಂತೆ ಸುಮಾರು 80 ರೀತಿಯ ಸ್ಥಿತಿಗಳನ್ನು ನಿಮ್ಹಾನ್ಸ್‌ನ ಅಧ್ಯಯನವೊಂದರಲ್ಲಿ ಕಂಡುಕೊಳ್ಳಲಾಗಿದೆ.
ಕಾರಣಗಳೇನು?
ಜೈವಿಕ, ಮಾನಸಿಕ ಹಾಗೂ ಸಾಮಾಜಿಕ ಅಂಶಗಳು ನಿದ್ರಾಹೀನತೆಗೆ ಕಾರಣವಾಗಬಲ್ಲವು. ಸಾಮಾನ್ಯವಾಗಿ ಒತ್ತಡದಿಂದ (stress) ಬಳಲುತ್ತಿರುವವರಲ್ಲಿ ನಿದ್ರಾಹೀನತೆ ಉಂಟಾಗುತ್ತದೆ. ಮತ್ತೆ ಕೆಲವರು ಖಿನ್ನತೆ, ಆತಂಕದ ಮನಸ್ಥಿತಿ ಹೊಂದಿದ್ದರೆ, ಇನ್ನು ಕೆಲವರಿಗೆ ವೈದ್ಯಕೀಯ ಕಾರಣಕ್ಕಾಗಿ ಅಂದರೆ ಮಲಗಿದಾಗ ಕಾಲುಗಳಲ್ಲಿ ತೀವ್ರ ನೋವು ಇದ್ದಲ್ಲಿ ಅಂಥವರಲ್ಲಿ ನಿದ್ರಾಹೀನತೆ ಇರುತ್ತದೆ ಎನ್ನುತ್ತಾರೆ ಡಾ.ಶೇಷಗಿರಿ.
ನಿತ್ಯದ ದಿನಚರಿ, ಜೀವನಶೈಲಿ ನಿದ್ದೆಯ ಮೇಲೆ ಪ್ರಭಾವ ಬೀರಬಲ್ಲದು. ಹೇಗೆಂದರೆ ನಿತ್ಯವೂ ಒಂದೇ ಸಮಯಕ್ಕೆ ಮಲಗಿ, ಏಳುವ ದಿನಚರಿ ಇದ್ದರೆ ದೇಹ ಮತ್ತು ಮಿದುಳು ಅದಕ್ಕೆ ಹೊಂದಿಕೊಂಡಿರುತ್ತದೆ. ಆಗ ನಿತ್ಯವೂ ನಿಗದಿತ ಸಮಯಕ್ಕೇ ಮಲಗಿ, ಎಚ್ಚರವಾಗುತ್ತದೆ. ಆದರೆ, ಕೆಲವರಲ್ಲಿ ಈ ದಿನಚರಿ ಸರಿಯಾಗಿರುವುದಿಲ್ಲ ಅಂದರೆ ಯಾವಾಗಲೋ ಮಲಗುವುದು, ಯಾವಾಗಲೋ ಏಳುವುದು ಆಗುತ್ತಿರುತ್ತದೆ. ಹೀಗೆ ನಿಗದಿತ ದಿನಚರಿ ಪಾಲನೆಯಾಗದಿದ್ದಾಗ ಮಿದುಳಿಗೆ ಗೊಂದಲವಾಗಿ ನಿದ್ದೆಯಲ್ಲಿ ಏರುಪೇರು ಉಂಟಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಸ್ಕ್ರೀನ್ ಅವಧಿಯು ನಿದ್ದೆಯ ಮೇಲೆ ಪರಿಣಾಮ ಬೀರುತ್ತಿದೆ. ರಾತ್ರಿ ಹೊತ್ತು ಮೊಬೈಲ್, ಟಿ.ವಿ, ಕಂಪ್ಯೂಟರ್ ವೀಕ್ಷಣೆಯು ಮಿದುಳಿನ ಮೇಲೆ ಪರಿಣಾಮ ಬೀರಿ ಎಚ್ಚರವಿರುವಂತೆ ಮಾಡುತ್ತದೆ. ಆಗ ಮಿದುಳು ಬಲವಂತವಾಗಿ ರಾತ್ರಿಯನ್ನೇ ಹಗಲಿನ ಸ್ಥಿತಿಗೆ ತನ್ನನ್ನು ಹೊಂದಿಸಿಕೊಳ್ಳಲು ಯತ್ನಿಸುತ್ತದೆ. ಕೆಲವರಿಗೆ ರಾತ್ರಿ ಸ್ವಲ್ಪ ಒಂದೆರಡು ತಾಸು ಮಲಗಿ, ಮತ್ತೆ ಹಗಲಿನಲ್ಲೂ ಕೆಲಕಾಲ ಮಲಗುವ ಅಭ್ಯಾಸವಿರುತ್ತದೆ. ಸಾಮಾನ್ಯವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಈ ರೀತಿಯ ದಿನಚರಿ ಇರುತ್ತದೆ. ಹಗಲಿನಲ್ಲಿ ಮತ್ತೆ ಮಲಗುವ ಅಭ್ಯಾಸವಿದ್ದವರು ದೀರ್ಘಕಾಲದಲ್ಲಿ ನಿದ್ರಾಹೀನತೆ ಮತ್ತು ಇತರ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವ್ಯಕ್ತಿಯೊಬ್ಬ ಸಾಮಾನ್ಯವಾಗಿ ಏಳರಿಂದ ಎಂಟು ತಾಸು ನಿದ್ದೆ ಮಾಡಬೇಕು. ಕೆಲವರು ಇದಕ್ಕಿಂತ ಕಡಿಮೆ ಅವಧಿಯ ಅಂದರೆ ಐದು ತಾಸು ನಿದ್ದೆ ಮಾಡಿಯೂ ಲವಲವಿಕೆಯಿಂದ ಇರಬಲ್ಲರು. ಇಂಥವರನ್ನು ಶಾರ್ಟ್ ಸ್ಲೀಪರ್ಸ್ ಎನ್ನುತ್ತಾರೆ. ಅವರಿಗೆ ಏಳೆಂಟು ತಾಸಿನ ನಿದ್ದೆಯ ಅವಶ್ಯಕತೆ ಇರುವುದಿಲ್ಲ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ನಿದ್ರಾಹೀನತೆಯ ಸಮಸ್ಯೆಗಳು ಹೆಚ್ಚು. ಮನೆಗೆಲಸ, ಕುಟುಂಬ ಹಾಗೂ ಉದ್ಯೋಗ ಹೀಗೆ ಹಲವು ಜವಾಬ್ದಾರಿಗಳು ಇರುವುದರಿಂದ ಮಹಿಳೆಯರು ಒತ್ತಡಕ್ಕೀಡಾಗುತ್ತಾರೆ. ಕೆಲಸದ ಹೊರೆ ಹೆಚ್ಚಿದ್ದಷ್ಟೂ ಮಹಿಳೆಯ ನಿದ್ರೆಯ ಅವಧಿ ಕಡಿಮೆಯಾಗುವ ಸಂಭವವಿರುತ್ತದೆ ಎನ್ನುತ್ತಾರೆ ಡಾ.ಶೇಷಗಿರಿ.
ನಿದ್ರಾಹೀನತೆಯ ಅಡ್ಡಪರಿಣಾಮಗಳು
* ಆಯಾಸ, ಭಾವನೆಗಳಲ್ಲಿ ಏರುಪೇರು (ಮೂಡ್ ಸ್ವಿಂಗ್), ಮಾನಸಿಕವಾಗಿ ಕಿರಿಕಿರಿ ಅಥವಾ ಕೋಪ.
* ಹಗಲು ಹೊತ್ತಿನಲ್ಲಿ ನಿದ್ರೆಯ ಮಂಪರು ಕವಿದಿರುವಿಕೆ, ನಿದ್ದೆಯ ಬಗ್ಗೆ ಆತಂಕ, ಏಕಾಗ್ರತೆಯ ಕೊರತೆ, ಸ್ಮರಣಶಕ್ತಿ ಕುಂಠಿತ, ಶಾಲಾ–ಕಾಲೇಜು ಅಥವಾ ಉದ್ಯೋಗದ ಸ್ಥಳದಲ್ಲಿ ಕಡಿಮೆ ದಕ್ಷತೆ, ತಲೆನೋವು, ಒತ್ತಡ, ಹೊಟ್ಟೆಯ ಆರೋಗ್ಯದಲ್ಲಿ ಏರುಪೇರು, ವಾಹನ ಚಲಾಯಿಸುವಾಗ ಅಪಘಾತ ಸಂಭವಿಸುವ ಸಾಧ್ಯತೆ, ತೀವ್ರ ನಿದ್ರಾಹೀನತೆಯಿಂದ ದೈಹಿಕ ಆರೋಗ್ಯದ ಮೇಲೆ ಪರಿಣಾಮ, ಅಜೀರ್ಣ, ಹೃದ್ರೋಗ ಸಂಬಂಧಿ ಕಾಯಿಲೆ, ಪಾರ್ಶ್ವವಾಯು.
ಪರಿಹಾರಗಳು
* ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು.
* ಮಲಗುವ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
* ಮಲಗುವ ಹಾಸಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ಆ ಸ್ಥಳವನ್ನು ಮಲಗಲು ಮಾತ್ರ ಬಳಸುವುದು.
* ಮಲಗುವ ಒಂದು ತಾಸಿಗೂ ಮೊಬೈಲ್, ಟಿ.ವಿ, ಕಂಪ್ಯೂಟರ್ ಗ್ಯಾಜೆಟ್‌ಗಳ ವೀಕ್ಷಣೆ ಮಾಡದಿರುವುದು.
* ಮಲಗುವ ಹೊತ್ತಿನಲ್ಲಿ ಯಾವುದೇ ಯೋಚನೆ/ಚಿಂತೆ ಮಾಡದಿರುವುದು. ದೇಹವನ್ನು ರಿಲ್ಯಾಕ್ಸ್ ಆಗಿಟ್ಟುಕೊಳ್ಳುವುದು.
* ಸಂಜೆಯ ನಂತರ ಕಾಫಿ, ಟೀ ಪಾನೀಯಗಳನ್ನು ಸೇವಿಸದಿರುವುದು.
* ನಿತ್ಯವೂ ಸ್ವಲ್ಪವಾದರೂ ದೈಹಿಕ ಚಟುವಟಿಕೆಗಳನ್ನು ಮಾಡುವುದು. ಆದರೆ, ಮಲಗುವ ಮುನ್ನ ದೈಹಿಕ ಚಟುವಟಿಕೆ ನಡೆಸಬಾರದು.
* ನಿತ್ಯವೂ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು.
* ಮಲಗುವ ಸಮಯದಲ್ಲಿ ಹೆಚ್ಚು ಆಹಾರ ಸೇವಿಸದಿರುವುದು, ಮಸಾಲೆ ಪದಾರ್ಥಗಳನ್ನು ಸೇವಿಸದಿರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.