ಬಂಜೆತನವೆಂಬುದು ಒಂದು ಸ್ಥಿತಿ.ಅದಕ್ಕೆ ಲಿಂಗಭೇದವಿಲ್ಲ. ಬೇರೆ ಬೇರೆ ಸಮಸ್ಯೆಗಳಿಂದ ಬಹಳ ವರ್ಷಗಳ ಪ್ರಯತ್ನದ ನಂತರವೂ ಮಗು ಪಡೆಯಲು ಸಾಧ್ಯವಾಗದೇ ಇದ್ದರೆ ಅದನ್ನು ಬಂಜೆತನ ಎಂದು ಪರಿಗಣಿಸಲಾಗುತ್ತದೆ. ಬಂಜೆತನ ಎದುರಿಸುತ್ತಿರುವವರಿಗೆ ಮಗು ಪಡೆಯಲು ಇಂಟ್ರಾಯುಟರಿನ್ ಇನ್‌ಸೆಮಿನೇಷನ್ (ಐಯುಐ) ವಿಧಾನವೂ ಬಹಳ ಉತ್ತಮ ಆಯ್ಕೆ. ಐವಿಎಫ್ ಹಾಗೂ ಇಂಟ್ರಾ ಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ಐಸಿಎಸ್‌ಐ)ನಂಥ ಪರ್ಯಾಯ ಮಾರ್ಗಗಳ ಜತೆಗೆ ಇದು ಕೂಡ ಉತ್ತಮ ಮಾರ್ಗವಾಗಿದೆ.
ಯಾರಿಗೆ ಸೂಕ್ತ?
ಅಂಡಾಶಯ ಹಾಗೂ ಅಂಡಾಣುಗಳ ಉತ್ಪತ್ತಿ ಸಮರ್ಪಕವಾಗಿದ್ದು, ಮಾಸಿಕ ಋತುಚಕ್ರ, ಫಾಲೋಪಿಯನ್ ಟ್ಯೂಬ್‌ಗಳು ಸಮರ್ಪಕವಾಗಿರಬೇಕು. ಸಮಯಕ್ಕೆ ಸರಿಯಾಗಿ ಲೈಂಗಿಕ ಕ್ರಿಯೆ ನಡೆದಿದ್ದರೂ ಮಗು ಪಡೆಯುವ ಪ್ರಯತ್ನದಲ್ಲಿ ವಿಫಲವಾಗಿರುವವರು ಈ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು.
ವೀರ್ಯದ ಹರಿವಿನ ಅಸಹಜತೆ ಇರುವವರು, ನೈಸರ್ಗಿಕ ಪ್ರಕ್ರಿಯೆಯಲ್ಲಿ ಹಲವು ವರ್ಷಗಳು ಪ್ರಯತ್ನಪಟ್ಟರೂ ಮಕ್ಕಳು ಪಡೆಯಲು ಸಾಧ್ಯವಾಗದೇ ಇರುವವರು ಪ್ರಯತ್ನಿಸಬಹುದು. ಒಂಟಿ ತಾಯಂದಿರು ಮತ್ತೊಂದು ಮಗು ಪಡೆಯಲು ಆಸಕ್ತಿ ಇದ್ದರೆ, ದಾನಿಯ ಸಹಾಯದಿಂದ ವೀರ್ಯ ಪಡೆದು ಪ್ರಯತ್ನಿಸಬಹುದು. ಗರ್ಭಕಂಠದಲ್ಲಿ ಸಮಸ್ಯೆ ಹೊಂದಿರುವವರು, ಕಡಿಮೆ ಪ್ರಮಾಣದ ವೀರ್ಯ ಹೊಂದಿರುವವರು ಅಥವಾ ಗುಣಮಟ್ಟದ ವೀರ್ಯ ಕಡಿಮೆ ಇರುವ ಪುರುಷರು, ಶೀಘ್ರ ಸ್ಖಲನ, ನಿಮಿರುವಿಕೆಯ ಸಮಸ್ಯೆ ಇರುವವರಿಗೆ ಈ ಚಿಕಿತ್ಸೆ ಸೂಕ್ತವಾಗಿದೆ.
ಪ್ರಕ್ರಿಯೆ ಹೇಗೆ?
ಗರ್ಭದೊಳಗೆ ನೇರವಾಗಿ ವೀರ್ಯವನ್ನು ಪೂರೈಸಲಾಗುತ್ತದೆ. ಸಾಮಾನ್ಯವಾಗಿ ಶೇ 5ರಷ್ಟು ವೀರ್ಯವು ಯೋನಿಯಿಂದ ಗರ್ಭಕಂಠದ ಮೂಲಕ ಗರ್ಭಾಶಯದೊಳಗೆ ಸೇರುತ್ತದೆ. ಅಂಡಾಣು ಬಿಡುಗಡೆಯಾದ ಸಂದರ್ಭದಲ್ಲಿ ಗುಣಮಟ್ಟ ಇಲ್ಲದೇ ಇರುವ ವೀರ್ಯವನ್ನು ಬೇರ್ಪಡಿಸಿ, ಉತ್ತಮ ಹರಿವು ಹಾಗೂ ಆರೋಗ್ಯಯುತ ವೀರ್ಯವನ್ನು ಕ್ಯಾತಿಟರ್ ಎಂದು ಕರೆಯಲಾಗುವ ಉದ್ದವಾದ ತೆಳು ಟ್ಯೂಬ್‌ನಲ್ಲಿ ಹಾಕಿ ಅದನ್ನು ನೇರವಾಗಿ ಫಾಲೋಪಿಯನ್ ಟ್ಯೂಬ್‌ಗಳಿಗೆ ಬಿಡಲಾಗುತ್ತದೆ. ಅಂಡಾಣುವಿನೊಂದಿಗೆ ಸಂಯೋಜನೆಗೊಂಡ ವೀರ್ಯವು ಗರ್ಭದಲ್ಲಿ ನೆಲೆನಿಲ್ಲುತ್ತದೆ.
ಮೊದಲಿಗೆ ಸಂತಾನ ಅಪೇಕ್ಷಿಗಳ ರಕ್ತದ ಮಾದರಿಯನ್ನು ಪಡೆಯಲಾಗುತ್ತದೆ. ಹೆಣ್ಣಿನ ಅಂಡೋತ್ಪತ್ತಿ ಹಾಗೂ ಅಂಡಾಶಯದ ಪರೀಕ್ಷೆ ನಡೆಸಲಾಗುತ್ತದೆ. ಗಂಡಿನ ವೀರ್ಯದ ಮಾದರಿ ಪಡೆಯಲಾಗುತ್ತದೆ. ಜತೆಗೆ ಅಲ್ಟ್ರಾಸೌಂಡ್ ಸೇರಿ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹದಿನೈದು ದಿನಗಳವರೆಗೆ ಸಂತಾನೋತ್ಪತ್ತಿಗೆ ಸಂಬಂಧಿಸಿದ ಔಷಧಿಯನ್ನು ನೀಡಲಾಗುತ್ತದೆ.
ಅಂಡಾಶಯದಿಂದ ಅಂಡಾಣುಗಳು ಉತ್ಪತ್ತಿಗೊಂಡು 24ರಿಂದ 36 ಗಂಟೆಯ ಬಳಗೆ ತಾಜಾ ಮತ್ತು ಶಿಥಲೀಕರಣಗೊಂಡ ವೀರ್ಯವನ್ನು ಸಣ್ಣ ಕ್ಯಾತಿಟರ್ ಬಳಸಿ ಗರ್ಭಾಶಯಕ್ಕೆ ಸೇರಿಸಲಾಗುತ್ತದೆ. ಇದಾಗಿ ಎರಡೂ ವಾರಗಳ ನಂತರ ಗರ್ಭಧಾರಣೆಯ ಪರೀಕ್ಷೆಯನ್ನು ಆರಂಭಿಸಲಾಗುತ್ತದೆ.
________________________________
–ಡಾ ಸಂಧ್ಯಾ ಮಿಶ್ರಾ, ಸ್ತ್ರೀರೋಗತಜ್ಞೆ, ಮಿಲನ್ ಫರ್ಟಿಲಿಟಿ ಸೆಂಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.