ಪ್ರತಿದಿನ ಜಾಗಿಂಗ್ ಮಾಡುವವರಿಗೆ ಅದರ ಖುಷಿ ಅನುಭವಿಸಿ ಗೊತ್ತು. ಈ ಖುಷಿಯನ್ನು ನಿರೂಪಿಸುವ ಅಧ್ಯಯನವೊಂದು ಇದೀಗ ಬೆಳಕಿಗೆ ಬಂದಿದೆ. ಪ್ರತಿದಿನ ಜಾಗ್ ಮಾಡುವವರಲ್ಲಿ ಆತ್ಮವಿಶ್ವಾಸವೂ ಹೆಚ್ಚು ಇರುತ್ತದೆ ಎನ್ನುವುದು ಈ ಅಧ್ಯಯನದ ಸಾರ.
ಜಾಗಿಂಗ್ ಮಾಡುವ 8157 ಮಂದಿಯನ್ನು ಸ್ಕಾಟ್‌ಲೆಂಡ್‌ನ ಗ್ಲಾಸ್ಕೊ ಕೆಲೆಡೋನಿಯನ್ ವಿವಿಯ ಸಂಶೋಧಕರು ಸಂದರ್ಶಿಸಿದರು. ಈ ಪೈಕಿ ಶೇ 89ರಷ್ಟು ಜನರು ಜಾಗಿಂಗ್‌ನಿಂದ ಖುಷಿ ಸಿಗುತ್ತೆ. ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತೆ, ಉತ್ಸಾಹ ಹೆಚ್ಚಾಗುತ್ತೆ ಎಂದು ಪ್ರತಿಕ್ರಿಯಿಸಿದರು.
ಮನುಷ್ಯನ ಖುಷಿಯ ಅಳತೆಗೋಲು ಎನಿಸಿರುವ ಆಕ್ಸ್‌ಫರ್ಡ್ ಹ್ಯಾಪಿನೆಸ್ ಸ್ಕೇಲ್‌ನಲ್ಲಿ ಜಾಗಿಂಗ್ ಮಾಡುವವರು 4.4 ಅಂಕ ಗಳಿಸಿದ್ದರು. 4 ಅಂಕ ಗಳಿಸಿದವರು ಖುಷಿಯಾಗಿದ್ದಾರೆ ಎಂದು ಅರ್ಥ. ಈ ಮಾನದಂಡದಿಂದ ನೋಡಿದರೆ ಜಾಗಿಂಗ್ ಮಾಡುವವರ ಖುಷಿ ಸಾಮಾನ್ಯಕ್ಕಿಂತ ಹೆಚ್ಚು.
ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ರೀಡರ್ ಆಗಿರುವ ಡಾ.ಎಮ್ಯುನ್ಯುಯಲ್ ಜಾಗಿಂಗ್‌ನ ಲಾಭಗಳನ್ನು ವಿವರಿಸುವುದು ಹೀಗೆ. ‘ಓಡುವುದರಿಂದ ಮನಸಿಗೆ ಏನನ್ನೋ ಸಾಧಿಸಿದೆ ಎನ್ನುವ ಖುಷಿ ಸಿಗುತ್ತದೆ. ಆರೋಗ್ಯ ಚೆನ್ನಾಗಿದೆ ಎಂಬ ಭಾವ ಮನಸ್ಸನ್ನು ತುಂಬಿಕೊಂಡು ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ’.
ಅಮೆರಿಕದ ಜರ್ನಲ್ ಆಫ್ ಸೈಕಿಯಾಟ್ರಿಯಲ್ಲಿ ಪ್ರಕಟವಾಗಿರುವ ಲೇಖನವೊಂದು ‘ದೈಹಿಕ ಚಟುವಟಿಕೆಗಳು ಹೆಚ್ಚಾದಂತೆ ಖಿನ್ನತೆ ಕಡಿಮೆಯಾಗುತ್ತದೆ’ ಎಂದು ನಿರೂಪಿಸಿದೆ. v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.