ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಅತಿದೊಡ್ಡ ಭಯವೆಂದರೆ ಹೃದಯಾಘಾತ. ಇಳಿವಯಸ್ಸಿನಲ್ಲಿ ಕಾಣಿಸುತ್ತಿದ್ದ ಹೃದಯಾಘಾತ ಈಗ ಯುವಜನತೆಯಲ್ಲಿ ಸಾಮಾನ್ಯ ಕಾಯಿಲೆ ಎಂಬಂತಾಗಿದೆ.
ದೈಹಿಕವಾಗಿ ಸದೃಢವಾಗಿದ್ದ ಯುವಕರೂ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಸಾಮಾನ್ಯವಾಗತೊಡಗಿದೆ. ಇದಕ್ಕೆ ನಿದರ್ಶನವೆಂಬಂತೆ ನಟರಾದ ಪುನೀತ್ ರಾಜ್‌ಕುಮಾರ್, ಚಿರಂಜೀವಿ ಸರ್ಜಾ, ನೆನ್ನೆಯಷ್ಟೇ ಮೃತಪಟ್ಟ ವಿಜಯ ರಾಘವೇಂದ್ರ ಅವರ ಮಡದಿ ಸ್ಪಂದನಾ ಅವರೂ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಷ್ಟಕ್ಕೂ ಈ ಯುವಜನತೆಯನ್ನು ಕಾಡುತ್ತಿರುವ ಹೃದಯಾಘಾತಕ್ಕೆ ಕಾರಣವೇನು? ಯಾರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಾಡುತ್ತಿದೆ? ಇದಕ್ಕೆ ಪರಿಹಾರವೇನು? ಎಂಬುದಕ್ಕೆ ಒಂದಷ್ಟು ಮಾಹಿತಿ ಇಲ್ಲಿದೆ.
25ರಿಂದ 45 ವರ್ಷ ಒಳಗಿನವರಲ್ಲಿ ಕಳೆದ 5 ವರ್ಷದಿಂದ ಹೃದಯಾಘಾತ ಪ್ರಮಾಣ ಹೆಚ್ಚಳವಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ...
ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್. ಜತೆಗೆ ಬದಲಾದ ಜೀವನಶೈಲಿ ಹಾಗೂ ಧೂಮಪಾನ, ತಂಬಾಕು ಸೇವನೆ, ಮಾದಕ ವ್ಯಸನದಂತ ದುಶ್ಚಟಗಳಿಂದಲೂ ಈ ಸಮಸ್ಯೆ ಹೆಚ್ಚುತ್ತಿದೆ.
ಇಂದಿನ ಯುವಜನತೆ ಕೆಟ್ಟ ಅಭ್ಯಾಸಗಳಿಗೆ ಬೇಗನೆ ಆಕರ್ಷಿತರಾಗುತ್ತಾ ಅದರ ದಾಸರಾಗುತ್ತಿದ್ದಾರೆ
ಮಲಗುವ ಹಾಗೂ ಏಳುವ ಸಮಯದಲ್ಲಿ ಸಮಯ ಪಾಲನೆ ಇಲ್ಲದಿರುವುದು
ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆಗಳೇ ಇಲ್ಲದಿರುವುದು
ಜಂಕ್ ಫುಡ್ ಸೇವನೆಯಿಂದಾಗಿ ಹಠಾತ್ ಹೃದಯಾಘಾತ ಒಳಗಾಗುವ ಸಾಧ್ಯತೆ ಹೆಚ್ಚು.
ದೈಹಿಕವಾಗಿ ಫಿಟ್ ಆಗಿದ್ದರೂ ಹೃದಯಾಘಾತ ಕಾಣಿಸಿಕೊಳ್ಳಲು ಕಾರಣವೇನು?
ಸುಂದರ ದೇಹ ಹೊಂದಲು ಹಾಗೂ ಮಾಂಸಖಂಡಗಳನ್ನು ಹುರಿಗೊಳಿಸಲು ಜಿಮ್ ಅಥವಾ ಕೆಲವು ಸಂಸ್ಥೆಗಳು ನೀಡುವ ಅವೈಜ್ಞಾನಿಕ ಪ್ರೊಟೀನ್ ಸಪ್ಲಿಮೆಂಟ್‌ಗಳೂ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
ಹೀಗಾಗಿ ದೇಹದಾರ್ಢ್ಯ ಅಥವಾ ವ್ಯಾಯಾಮಕ್ಕಾಗಿ ಯಾವುದೇ ಪ್ರೋಟಿನ್ ತೆಗೆದುಕೊಳ್ಳುವವರು ವೈದ್ಯರ ಅಥವಾ ಆಹಾರ ತಜ್ಞರನ್ನು ಭೇಟಿ ಮಾಡಿ, ಅವರ ಸಲಹೆ ಮೇರೆಗೆ ತೆಗೆದುಕೊಳ್ಳುವುದು ಒಳ್ಳೆಯದು.
ಇನ್ನೂ ಬಹುತೇಕ ಪ್ರಕರಣಗಳಲ್ಲಿ ಅನುವಂಶಿಕವಾಗಿಯೂ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಕುಟುಂಬದಲ್ಲಿ ಯಾರಿಗೇ ಹೃದಯಾಘಾತದ ಇತಿಹಾಸವಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. 25 ವರ್ಷ ಮೇಲಿನವರು ಪ್ರತಿ ವರ್ಷ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಹೃದಯಾಘಾತ ಆಗುವ ಸಾಧ್ಯತೆಯನ್ನು ಕಡಿಮೆ ಮಾಡಲಿದೆ.
ಕೈಗಳ ತೋಳುಗಳಲ್ಲಿ, ಭುಜದ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಹೃದಯಾಘಾತದ ಪ್ರಮುಖ ಲಕ್ಷಣಗಳು. ಅದರಲ್ಲೂ ಕೈಗಳ ತೋಳುಗಳಲ್ಲಿ ಕಂಡು ಬರುವ ನೋವು ನಿಧಾನಕ್ಕೆ ದೇಹದ ಇತರ ಕಡೆಗೆ ವ್ಯಾಪಿಸಿದರೆ, ಎಚ್ಚರ ವಹಿಸಬೇಕು. ಇಂಥ ಸಂದರ್ಭದಲ್ಲಿ ಕೂಡಲೇ ವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡರೆ ಉತ್ತಮ.
ಹೃದಯಾಘಾತ ಸಂಭವ ಕಡಿಮೆ ಮಾಡಲು ಯುವಕರು ಅನುಸರಿಸಬೇಕಾದ ಕ್ರಮಗಳು ಏನು?
ಸಾಮಾನ್ಯವಾಗಿ ಯುವಕರು ತಮ್ಮ ಜೀವನ ಶೈಲಿ ಹಾಗೂ ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ದೇಹದಲ್ಲಿ ಹೆಚ್ಚಿನ ಕೊಬ್ಬಿನಂಶ ಹೃದಯಕ್ಕೆ ಅಪಾಯ. ಸ್ಥೂಲಕಾಯ, ಮಧುಮೇಹ ಹಾಗೂ ರಕ್ತದೊತ್ತಡ ಹೆಚ್ಚಿಸುವ ಆಹಾರದ ಮೇಲೆ ನಿಯಂತ್ರಣವಿರಲಿ.
ದೈಹಿಕ ಚಟುವಟಿಕೆಯೂ ಅತಿ ಮುಖ್ಯ.
ಅವರವರ ಆರೋಗ್ಯಕ್ಕೆ ಅನುಗುಣವಾಗಿ ವ್ಯಾಯಾಮ ಮಾಡುವುದು ಸೂಕ್ತ.
ವೈದ್ಯರ ಸಲಹೆ ಮೇರೆಗೆ ವ್ಯಾಯಾಮ ಆಯ್ದುಕೊಳ್ಳಿ. ಇಲ್ಲವೇ ಕೆಲವು ಅತಿರೇಕದ ವ್ಯಾಯಾಮ ಹೃದಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು.
ಧೂಮಪಾನ ಹಾಗೂ ಮದ್ಯ ಸೇವನೆ ಮೇಲೆ ಸಂಪೂರ್ಣ ನಿಯಂತ್ರಣವಿರಲಿ.
ಹೊಗೆ ತುಂಬಿರುವ ಜಾಗದಲ್ಲಿ ಓಡಾಟ ಕಡಿಮೆ ಮಾಡುವುದು ಉತ್ತಮ.
ಆರೋಗ್ಯಕರ ಜೀವನ ಶೈಲಿಯಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ವರ್ಷಕ್ಕೊಮ್ಮೆ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.
ಇತ್ತೀಚಿನ ದಿನಗಳಲ್ಲಿ ಜಿಮ್ ಹೋಗುವುದೇ ಒಂದು ಫ್ಯಾಷನ್ ಆಗಿದೆ. ದೈಹಿಕ ವ್ಯಾಯಾಮ ಹೆಚ್ಚು ಮುಖ್ಯ, ಆದರೆ, ಅದು ನಮಗೆ ಮುಳುವಾಗದಂತಿದ್ದರೆ ಕ್ಷೇಮ. ನೀವು ಯಾವ ರೀತಿಯ ವರ್ಕ್‌ಔಟ್ ಮಾಡುತ್ತೀರಿ, ಅದು ನಿಮ್ಮ ದೇಹಕ್ಕೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದರ ಜ್ಞಾನ ಬಹಳಾ ಮುಖ್ಯ.
ಎಲ್ಲಾ ವ್ಯಾಯಾಮಗಳೂ ಎಲ್ಲರಿಗೂ ಹೊಂದುವುದಿಲ್ಲ. ಹಾಗೆಯೇ ಕೆಲವರು ವೇಗವಾಗಿ ಸಣ್ಣ ಅಥವಾ ದಪ್ಪವಾಗಲು ಗೂಗಲ್, ಯೂಟ್ಯೂಬ್ ಮೊರೆ ಹೋಗುತ್ತಾರೆ. ಅವೈಜ್ಞಾನಿಕ ಡಯಟ್ ಪ್ರಾರಂಭಿಸಿ ದೇಹದ ಮಾಂಸಖಂಡಗಳನ್ನು ಕಳೆದುಕೊಳ್ಳುತ್ತಾರೆ. ಡಯಟ್ ಹಾಗೂ ವ್ಯಾಯಾಮದಿಂದ ದೇಹದ ಕೊಬ್ಬು ಕರಗಬಹುದೇ ವಿನಃ ಮಾಂಸಖಂಡಗಳಲ್ಲ. ಈ ವ್ಯತ್ಯಾಸ ತಿಳಿಯದೇ ಸಾಕಷ್ಟು ಜನ ಡಯಟ್ ಹೆಸರಿನಲ್ಲಿ ರಕ್ತದೊತ್ತಡವನ್ನೇ ಕಡಿಮೆಗೊಳಿಸಿ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಇನ್ನೂ ಕೆಲವರು, ಅವೈಜ್ಞಾನಿಕ ಪೇಯಗಳ ಸೇವೆಯಿಂದಲೂ ಈ ಕಾಯಿಲೆಯನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣವಾಗಿ ಊಟ ತ್ಯಜಿಸಿ ದೇಹದ ತೂಕ ಕಳೆದುಕೊಳ್ಳಲು ಮುಂದಾದರೂ ದೈಹಿಕ ಸಮಸ್ಯೆ ತಪ್ಪಿದ್ದಲ್ಲ. ಈ ಅಭ್ಯಾಸಗಳಿಂದ ಫಲಿತಾಂಶ ತ್ವರಿತವಾಗಿ ಲಭ್ಯವಾದರೂ, ಹೃದಯದ ಅರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಯಾರೇ ಆಗಲಿ, ತಮ್ಮ ದೇಹಕ್ಕೆ ಹೊಂದುವ ಡಯಟ್‌ಗಳನ್ನು ಮಾತ್ರ ಪಾಲಿಸಬೇಕು. ಸಣ್ಣ ಅಥವಾ ದಪ್ಪ ಆಗಲು ಇಚ್ಚಿಸುವವರು ಮೊದಲು ವೈದ್ಯರು ಅಥವಾ ಆಹಾರ ತಜ್ಞರನ್ನು ಭೇಟಿ ಮಾಡಿ ಅವರ ಸಲಹೆಯಂತೆ ದೇಹದ ತೂಕ ಕಳೆದುಕೊಳ್ಳುವುದು ಸೂಕ್ತ.
ಜಿಮ್‌ಗಳಲ್ಲಿ ನೀಡುವ ಎಲ್ಲಾ ರೀತಿಯ ಪ್ರೋಟಿನ್ ಸೇವನೆಯೂ ಒಳ್ಳೆಯದಲ್ಲ. ಹೀಗಾಗಿ ಡಯಟ್ ಹಾಗೂ ಜಿಮ್ ವಿಷಯದಲ್ಲಿ ಇಂದಿನ ಯುವಕರು ಅತಿಯಾದ ಕಾಳಜಿ ವಹಿಸುವುದು ಸೂಕ್ತ.
ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನಿಂದ ದೇಹದಲ್ಲಾಗುವ ಬದಲಾವಣೆಯಿಂದಲೂ ಹೃದಯಾಘಾತ ಸಂಭವಿಸುವ ಸಾಧ್ಯತೆ ಇತ್ತು, ಅದೂ ಕೋವಿಡ್ ಬಂದ ಆರು ವಾರಗಳ ಅವಧಿಯಲ್ಲಿ ಈ ಸಾಧ್ಯತೆ ಕಂಡು ಬರುತ್ತಿತ್ತು.
ಆದರೆ ಈಗ ಕೋವಿಡ್ ಸಂಪೂರ್ಣ ಕಡಿಮೆಯಾಗಿದೆ. ಹೀಗಾಗಿ ಕೋವಿಡ್ ಪರಿಣಾಮದಿಂದ ಈಗಲೂ ಹೃದಯಾಘಾತ ಸಂಭವಿಸುತ್ತಿದೆ ಎಂಬುದು ಅವೈಜ್ಞಾನಿಕ. ಈ ವಾದಕ್ಕೆ ವೈದ್ಯಕೀಯವಾಗಿಯೂ ಯಾವುದೇ ಪುರಾವೆಗಳಿಲ್ಲ. ಆದರೆ, ಹೃದಯಾಘಾತಕ್ಕೆ ಇತರೆ ಕಾರಣಗಳು ಹೆಚ್ಚಾಗುತ್ತಿರುವುದು ಗಮನಾರ್ಹ.
ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ತೀರ ಕಡಿಮೆ ಇತ್ತು. ಮಹಿಳೆಯರಲ್ಲಿ ಈಸ್ಟ್ರೋಜನ್ ಎಂಬುವ ಹಾರ್ಮೋನ್‌ನಿಂದ ಹೃದಯಾಘಾತ ಸಂಭವ ಇರಲಿಲ್ಲ. ಆದರೆ ಇಂದು ಮಹಿಳೆಯರೂ ಪುರುಷರಂತೆ ಧೂಮಪಾನ, ಮದ್ಯ ಸೇವನೆಯಂತ ಅನಾರೋಗ್ಯಕರ ಅಭ್ಯಾಸದಲ್ಲಿ ತೊಡಗಿಸಿಕೊಂಡಿರುವುದರಿಂದ ಈಸ್ಟ್ರೋಜನ್‌ನಿಂದ ದೊರೆಯುತ್ತಿದ್ದ ರಕ್ಷಣೆಯೂ ಕ್ಷೀಣಿಸುತ್ತಿದೆ. ಇದರಿಂದ ಅವರೂ ಅತಿ ಕಡಿಮೆ ವಯಸ್ಸಿಗೆ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ.
(ಲೇಖಕರು ಫೋರ್ಟಿಸ್ ಆಸ್ಪತ್ರೆಯ ಹೃದಯತಜ್ಞ)
ಇದನ್ನೂ ಓದಿ: ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದ ನಂತರ ಹೃದಯ ತಪಾಸಣೆಗೆ ಮುಗಿಬಿದ್ದ ಜನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.