ADVERTISEMENT

ವಿಶ್ವ ಕ್ಯಾನ್ಸರ್ ದಿನ: ಪ್ರಾಸ್ಟೇಟ್‌ ಕ್ಯಾನ್ಸರ್‌ ಅರಿವು, ಎಚ್ಚರ ಇರಲಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 4:36 IST
Last Updated 4 ಫೆಬ್ರುವರಿ 2021, 4:36 IST
ಪ್ರಾತಿನಿಧಿಕ ಚಿತ್ರ (ಐ–ಸ್ಟಾಕ್ ಚಿತ್ರ)
ಪ್ರಾತಿನಿಧಿಕ ಚಿತ್ರ (ಐ–ಸ್ಟಾಕ್ ಚಿತ್ರ)   

ಪ್ರತಿ ವರ್ಷ ಫೆಬ್ರುವರಿ 4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ. 50 ವರ್ಷ ದಾಟಿದ ಪುರುಷರಲ್ಲಿ ಕಾಣಿಸಿಕೊಳ್ಳುವ ಪ್ರಾಸ್ಟೇಟ್ ಗ್ರಂಥಿ ಕ್ಯಾನ್ಸರ್‌ನ ಬಗ್ಗೆ ಅರಿವು ಕಡಿಮೆ ಇದೆ. ಅತ್ಯಂತ ಮುಂದುವರಿದ ದೇಶಗಳಲ್ಲೂ ಈ ಕ್ಯಾನ್ಸರ್‌ನ ಬಗ್ಗೆ ಅರಿವು ಇರುವವರ ಸಂಖ್ಯೆ ಶೇ 40ಕ್ಕಿಂತ ಕಡಿಮೆ. ಪ್ರಾಸ್ಟೇಟ್ ಕ್ಯಾನ್ಸರ್‌ನ ಬಗ್ಗೆ ಭಾರತೀಯರಲ್ಲಿ ಅರಿವು ಮೂಡಿಸುವ ಸೇವೆಯನ್ನು ಗ್ಲೋಬಲ್ ಪ್ರಾಸ್ಟೇಟ್ ಕ್ಯಾನ್ಸರ್ ಪ್ರತಿಷ್ಠಾನವು ಆರಂಭಿಸಿದೆ

*

ಪ್ರಾಸ್ಟೇಟ್ ಗ್ರಂಥಿಯು ಪುರುಷ ಸಂತಾನೋತ್ಪತಿಯ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಗ್ರಂಥಿಯಾಗಿದೆ. ವೀರ್ಯಾಣುಗಳ ಸರಾಗ ಹರಿಯುವಿಕೆಗೆ ನೆರವಾಗುವ ದ್ರವವನ್ನು ಈ ಗ್ರಂಥಿ ಉತ್ಪಾದಿಸುತ್ತದೆ. 55 ವರ್ಷ ದಾಟಿದ ಶೇ 75ರಷ್ಟು ಪುರುಷರಲ್ಲಿ ಪ್ರಾಸ್ಟೇಟ್‌ ಕ್ಯಾನ್ಸರ್‌ನ ಲಕ್ಷಣಗಳು ಗೋಚರಿಸುತ್ತವೆ. ಆದರೆ ಇದನ್ನು ವಯೋಸಹಜ ಲಕ್ಷಣಗಳು ಎಂದು ಕಡೆಗಣಿಸುವವರೇ ಹೆಚ್ಚು ಎನ್ನುತ್ತವೆ ಅಧ್ಯಯನಗಳು. ವಿಶ್ವದಲ್ಲಿ ಪ್ರತಿವರ್ಷ 13 ಲಕ್ಷಕ್ಕೂ ಹೆಚ್ಚು ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಒಳಗಾಗುತ್ತಾರೆ. ಆದರೆ ಈ ಕ್ಯಾನ್ಸರ್‌ನ ಬಗ್ಗೆ ಅರಿವು ಇರುವವರ ಪ್ರಮಾಣ ಅತ್ಯಂತ ಕಡಿಮೆ.

ADVERTISEMENT

ಬಹುತೇಕ ಎಲ್ಲಾ ಪ್ರಕರಣಗಳಲ್ಲೂ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್‌ ಅತ್ಯಂತ ನಿಧಾನಗತಿಯಲ್ಲಿ ಬೆಳೆಯುತ್ತದೆ. ಈ ಸ್ವರೂಪದ ಕ್ಯಾನ್ಸರ್‌ಗೆ ಅತ್ಯಂತ ಕಡಿಮೆ ಪ್ರಮಾಣದ ಚಿಕಿತ್ಸೆಯ ಅಗತ್ಯವಿದೆ. ಕೆಲವು ಪ್ರಕರಣಗಳಲ್ಲಿ ಮಾತ್ರ ಕ್ಷಿಪ್ರವಾಗಿ ಬೆಳೆಯುತ್ತವೆ. ಇಂತಹ ಪ್ರಕರಣಗಳಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬೇಕಾಗುತ್ತದೆ. ಚಿಕಿತ್ಸೆ ನಿಧಾನವಾದಷ್ಟೂ, ಅದು ಫಲಕಾರಿಯಾಗುವ ಪ್ರಮಾಣ ಕ್ಷೀಣಿಸುತ್ತದೆ ಎನ್ನುತ್ತದೆ ಗ್ಲೋಬಲ್ ಪ್ರಾಸ್ಟೇಟ್ ಕ್ಯಾನ್ಸರ್ ಪ್ರತಿಷ್ಠಾನ.

ಪ್ರಾಸ್ಟೇಟ್ ಗ್ರಂಥಿಯಲ್ಲಿರುವ ಜೀವಕೋಶಗಳ ಡಿಎನ್‌ಎಯಲ್ಲಿ ಆಗುವ ಬದಲಾವಣೆಯಿಂದ ಕ್ಯಾನ್ಸರ್‌ ತಲೆದೋರುತ್ತದೆ. ಡಿಎನ್‌ಎಯಲ್ಲಿ ಬದಲಾವಣೆಯಾದ ಜೀವಕೋಶಗಳ ಬೆಳವಣಿಗೆ ಕ್ಷಿಪ್ರಗತಿ ಪಡೆಯುತ್ತದೆ. ಆಗ ಸಾಮಾನ್ಯ ಮತ್ತು ಆರೋಗ್ಯವಂತ ಜೀವಕೋಶಗಳು ಸಾಯುತ್ತವೆ. ನಂತರ ಕ್ಯಾನ್ಸರ್ ಕ್ಷಿಪ್ರವಾಗಿ ಹರಡುತ್ತದೆ. ಈ ಹಂತದಲ್ಲಿ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಪ್ರಾಸ್ಟೇಟ್ ಕ್ಯಾನ್ಸರ್‌ ಕ್ಷಿಪ್ರವಾಗಿ ಹರಡಲು ಆರಂಭಿಸಿದ ನಂತರ, ಹತ್ತಿರದ ಭಾಗಗಳಿಗೆ ಮೊದಲು ವ್ಯಾಪಿಸುತ್ತದೆ. ರಕ್ತ, ಮೂಳೆ, ಮೂತ್ರಕೋಶ ಮತ್ತಿತರ ಭಾಗಗಳಿಗೆ ಇದು ಹರಡುವ ಸಾಧ್ಯತೆ ಹೆಚ್ಚು. ಈ ಹಂತದಲ್ಲೂ ಚಿಕಿತ್ಸೆ ನೀಡಿ ಅದನ್ನು ನಿಯಂತ್ರಿಸಬಹುದು. ಆದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಹೀಗಾಗಿ ಈ ಕ್ಯಾನ್ಸರ್ ಬರದಂತೆ ಎಚ್ಚರವಹಿಸುವುದು ಮತ್ತು ಆರಂಭದಲ್ಲೇ ಪತ್ತೆಮಾಡಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ ಎನ್ನುತ್ತದೆ ಗ್ಲೋಬಲ್ ಪ್ರಾಸ್ಟೇಟ್ ಕ್ಯಾನ್ಸರ್ ಪ್ರತಿಷ್ಠಾನ.

ಡಾ.ರಘುನಾಥ್

ಭಾರತೀಯರಲ್ಲಿ ಬೊಜ್ಜು ಮತ್ತು ಆನುವಂಶೀಯವಾಗಿ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಈ ಕ್ಯಾನ್ಸರ್‌ಗೆ
ಶಸ್ತ್ರಚಿಕಿತ್ಸೆ, ರೇಡಿಯೋಥೆರಪಿ, ಕಿಮೋಥೆರಪಿ, ಹಾರ್ಮೋನ್‌ಥೆರಪಿ ಚಿಕಿತ್ಸೆಗಳು ಲಭ್ಯವಿವೆ.

ಲಕ್ಷಣಗಳು
ಕೆಲವು ಸ್ವರೂಪದ ಪ್ರಾಸ್ಟೇಟ್ ಕ್ಯಾನ್ಸರ್‌ಗಳಲ್ಲಿ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಗೋಚರವಾಗುವುದಿಲ್ಲ. ಕ್ಯಾನ್ಸರ್‌ ಆರಂಭವಾಗಿ ದೀರ್ಘಾವಧಿಯ ನಂತರ ಕೆಲವು ಲಕ್ಷಣಗಳು ಗೋಚರಿಸುತ್ತವೆ.

* ಸರಾಗ ಮೂತ್ರವಿಸರ್ಜನೆಗೆ ತಡೆ
* ಮೂತ್ರವಿಸರ್ಜನೆ ವೇಳೆ ಮೂತ್ರದಹರಿವಿನ ವೇಗ ಕ್ಷೀಣ
* ಮೂತ್ರದಲ್ಲಿ ರಕ್ತ
* ವೀರ್ಯದಲ್ಲಿ ರಕ್ತ
* ಮೂಳೆಗಳಲ್ಲಿ ನೋವು
* ನಿಮಿರುವಿಕೆಯಲ್ಲಿ ಸಮಸ್ಯೆ

ತಡೆಯುವ ಕ್ರಮಗಳು
* ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಮತ್ತು ಹಣ್ಣು ಸೇವನೆ
* ಪೋಷಕಾಂಶಗಳು ಅಧಿಕವಾಗಿರುವ ಆಹಾರವನ್ನು ಸೇವಿಸಬೇಕು. ಪೋಷಕಾಂಶಗಳನ್ನು ಮಾತ್ರೆ,ಸಿರಪ್ ರೂಪದಲ್ಲಿ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು
* ವ್ಯಾಯಾಮ
* ದೇಹದ ಎತ್ತರ ಮತ್ತು ವಯಸ್ಸಿಗೆ ಸೂಕ್ತವಾದ ತೂಕವನ್ನು ನಿರ್ವಹಣೆ ಮಾಡಬೇಕು

ಅರಿವಿಗಾಗಿ ಪ್ರತಿಷ್ಠಾನ
ಪ್ರಾಸ್ಟೇಟ್ ಕ್ಯಾನ್ಸರ್‌ನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಗ್ಲೋಬಲ್ ಪ್ರಾಸ್ಟೇಟ್ ಕ್ಯಾನ್ಸರ್‌ ಪ್ರತಿಷ್ಠಾನವನ್ನು ನಿವೃತ್ತ ಕರ್ನಲ್ ಸಿ.ಎ. ಅಯ್ಯಪ್ಪ ಎಂಬುವವರು ಆರಂಭಿಸಿದ್ದಾರೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಷ್ಟೇ ಅಲ್ಲದೆ, ಈ ಕ್ಯಾನ್ಸರ್‌ನ ಪತ್ತೆ ಪರೀಕ್ಷೆಗಳು ಮತ್ತು ಚಿಕಿತ್ಸೆಯ ವೆಚ್ಚವನ್ನು ಕಡಿಮೆಗೊಳಿಸುವಲ್ಲಿ ಈ ಪ್ರತಿಷ್ಠಾನವು ದುಡಿಯುತ್ತಿದೆ.

ಕರ್ನಲ್ ಅಯ್ಯಪ್ಪ

‘ಪ್ರಾಸ್ಟೇಟ್‌ ಕ್ಯಾನ್ಸರ್‌ಗೆ ಒಳಗಾಗಿ, ಗುಣಮುಖನಾದ ವ್ಯಕ್ತಿ ನಾನು. ನನಗೆ ಪ್ರಾಸ್ಟೇಟ್ ಕ್ಯಾನ್ಸರ್‌ ಇರುವುದನ್ನು ಪತ್ತೆ ಮಾಡಲು ತಡವಾದ ಕಾರಣದಿಂದಲೇ ನಾನು ಮಾನಸಿಕವಾಗಿ, ದೈಹಿಕವಾಗಿ ನೋವು ಅನುಭವಿಸಬೇಕಾಯಿತು. ಭಾರಿ ಹಣವನ್ನೂ ವೆಚ್ಚ ಮಾಡಬೇಕಾಯಿತು. ಈ ಬಗ್ಗೆ ಅರಿವು ಇದ್ದು, ಮೊದಲೇ ಪತ್ತೆ ಮಾಡಿದ್ದರೆ ನಾನು ಈ ನೋವು ಅನುಭವಿಸುವ ಸ್ಥಿತಿ ಬರುತ್ತಿರಲಿಲ್ಲ’ ಎನ್ನುತ್ತಾರೆ ಕರ್ನಲ್ ಅಯ್ಯಪ್ಪ.

‘ಶಸ್ತ್ರಚಿಕಿತ್ಸೆಯ ನಂತರ, ನನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಾದ ರಘುನಾಥ್.ಎಸ್‌.ಕೆ. ಅವರ ಬಳಿ ಈ ಬಗ್ಗೆ ಮಾತನಾಡಿದೆ. ಜನರಲ್ಲಿ ಈ ಬಗ್ಗೆ ಅರಿವು ಇಲ್ಲ ಎಂದು ಅವರು ತಿಳಿಸಿದರು. ಅರಿವು ಮೂಡಿದರೆ, ಜನರು ಅನಗತ್ಯವಾಗಿ ತೊಂದರೆಗೆ ಸಿಲುಕುವುದನ್ನು ತಪ್ಪಿಸಬಹುದು.ಹೀಗಾಗಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ನಿರ್ಧರಿಸಿದೆ. ಇದಕ್ಕೆ ಅಗತ್ಯವಾದ ಮಾರ್ಗದರ್ಶನ ಮತ್ತು ಬೆಂಬಲವನ್ನು ಡಾ.ರಘುನಾಥ್ ನೀಡಿದರು. ಹೀಗಾಗಿಯೇ ಗ್ಲೋಬಲ್ ಪ್ರಾಸ್ಟೇಟ್ ಕ್ಯಾನ್ಸರ್ ಪ್ರತಿಷ್ಠಾನವನ್ನು ಆರಂಭಿಸಿದೆವು’ ಎನ್ನುತ್ತಾರೆ ಕರ್ನಲ್ ಅಯ್ಯಪ್ಪ.

ಹೆಚ್ಚಿನ ಮಾಹಿತಿಗೆ: http://gpcfindia.org/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.