ADVERTISEMENT

ಹೋಳಿ ಆಡುವುದಕ್ಕೂ ಮುನ್ನ ಚರ್ಮ ಹಾಗೂ ಕೂದಲಿನ ಆರೈಕೆ ಬಗ್ಗೆ ತಿಳಿದುಕೊಳ್ಳಿ

ಪ್ರಜಾವಾಣಿ ವಿಶೇಷ
Published 15 ಮಾರ್ಚ್ 2022, 13:22 IST
Last Updated 15 ಮಾರ್ಚ್ 2022, 13:22 IST
ಐಎಎನ್‌ಎಸ್ ಚಿತ್ರ
ಐಎಎನ್‌ಎಸ್ ಚಿತ್ರ   

ನಮ್ಮ ಸಂಸ್ಕೃತಿಯ ಸಂಕೇತವಾದ ಬಣ್ಣಗಳ ಹಬ್ಬವೇ ಹೋಳಿ ಹಬ್ಬ, ಈ ಹಬ್ಬದಂದು ಎಲ್ಲರೂ ತಮ್ಮ ಇಚ್ಚೆಯಂತೆ ಖುಷಿಯಿಂದ ಬಣ್ಣಗಳನ್ನು ಒಬ್ಬರಿಗೊಬ್ಬರು ಹಚ್ಚಿಕೊಂಡು ಸಂಭ್ರಮಿಸುತ್ತಾರೆ. ಯಾವುದೇ ಲಿಂಗಭೇದವಿಲ್ಲದೇ ಎಲ್ಲರೂ ಓಕುಳಿಯಲ್ಲಿ ಮಿಂದೇಳುತ್ತಾರೆ. ರಾಸಾಯನಿಕಯುಕ್ತ ತರಹೇವಾರಿ ಬಣ್ಣಗಳನ್ನು ಹಚ್ಚಿ ಸಂಭ್ರಮಿಸುವುದೇನೋ ಸರಿ. ಆದರೆ, ಬಳಿಕ ಅದರಿಂದ ಆಗುವ ಹಾನಿಯಿಂದ ಚರ್ಮ ಹಾಗೂ ಕೂದಲ ಆರೈಕೆ ಬಗ್ಗೆಯೂ ಸಹ ಕಾಳಜಿ ವಹಿಸುವುದು ಬಹಳ ಮುಖ್ಯ. ಇಲ್ಲವಾದರೆ ಮುಂದಾಗುವ ಆರೋಗ್ಯ ಚರ್ಮ ಹಾಗೂ ಕೂದಲ ಸಮಸ್ಯೆಗೆ ಬೆಲೆ ತೆರಬೇಕಾಗುತ್ತದೆ. ಹೋಳಿ ಹಬ್ಬದಂದು ಓಕುಳಿ ಆಡುವ ಮೊದಲು ಹಾಗೂ ಚರ್ಮ ಹಾಗೂ ಕೂದಲಿನ ಆರೈಕೆ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ.

ಹೋಳಿ ಆಡುವ ಮೊದಲು ಕೂದಲಿನ ಆರೈಕೆಯ ಸಲಹೆಗಳು:
* ಪ್ರತಿಯೊಬ್ಬರಿಗೂ ಕೂದಲಿನ ಮೇಲೆ ವಿಪರೀತ ಪ್ರೀತಿ ಇದ್ದೇ ಇರುತ್ತದೆ. ರಾಸಾಯನಿಕಯುಕ್ತ ಬಣ್ಣ ತಲೆಗೆ ಅಂಟುವುದನ್ನು ತಡೆಗಟ್ಟಲು ಮೊದಲು ನೆತ್ತಿ ಹಾಗೂ ಕೂದಲಿಗೆ ಎಣ್ಣೆ ಹಚ್ಚುವುದು. ಇದರಿಂದ ಯಾವುದೇ ರೀತಿಯ ಬಣ್ಣ ಹಚ್ಚಿದರೂ ಅದು ನೆತ್ತಿಗೆ ಅಂಟುವುದಿಲ್ಲ. ಅಂಟಿದರೂ ಅದನ್ನು ಸುಲಭವಾಗಿ ತೊಳೆಯಲು ಸಾಧ್ಯವಾಗುತ್ತದೆ. ತೆಂಗಿನಕಾಯಿ, ಜೊಜೊಬಾ ಮತ್ತು ಹರಳೆಣ್ಣೆಯಂತಹ ಎಣ್ಣೆಗಳನ್ನು ಬಳಸುವುದು ಉತ್ತಮ.
* ಎಣ್ಣೆಗೆ ಕೆಲವು ಹನಿ ನಿಂಬೆ ರಸವನ್ನು ಸೇರಿಸುವುದು ನೆತ್ತಿ ಮೇಲೆ ಬಣ್ಣಗಳಿಂದ ಉಂಟಾಗುವ ಸೋಂಕನ್ನು ತಡೆಗಟ್ಟಬಹುದು.
* ಹೋಳಿ ಆಡುವಾಗ ಸಂದರ್ಭದಲ್ಲಿ ಸ್ಕಾರ್ಫ್ ಅಥವಾ ಕ್ಯಾಪ್‌ನಿಂದ ತಲೆಯನ್ನು ಕವರ್‌ ಮಾಡಿಕೊಳ್ಳುವುದು ಉತ್ತಮ. ಇಲ್ಲವಾದರೆ, ಕೂದಲನ್ನು ಬಿಡಿಯಾಗಿ ಬಿಡುವುದರ ಬದಲು ಗಂಟು ಕಟ್ಟುವುದರಿಂದ ಇಡೀ ಕೂದಲಿಗೆ ಬಣ್ಣ ಆಗುವುದನ್ನು ತಪ್ಪಿಸಬಹುದು. ಸೂರ್ಯನ ಕಿರಣಗಳಿಂದ ಹಾನಿ ಆಗುವುದು ಮತ್ತು ಶುಷ್ಕತೆಯಿಂದ ಕೂದಲನ್ನು ರಕ್ಷಿಸಲು ಹೇರ್‌ ಕ್ರೀಮ್‌ಗಳನ್ನ ಬಳಸಿ.

ಹೋಳಿ ನಂತರದ ಕೂದಲಿನ ಆರೈಕೆ ಸಲಹೆಗಳು:
*ಹೋಳಿ ಆಡಿದ ನಂತರ ನಿಮ್ಮ ಕೂದಲನ್ನು ತಣ್ಣೀರು ಅಥವಾ ಉಗುರು ಬೆಚ್ಚಗಿನ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಒಂದೆರಡು ಬಾರಿ ಯಾವುದೇ ಶಾಂಪು ಹಾಕದೇ ತೊಳೆಯುವುದರಿಂದ ಕೂದಲಿಗೆ ಅಂಟಿರುವ ಬಣ್ಣ ಬಿಟ್ಟುಕೊಳ್ಳಲು ಸಹಾಯವಾಗುತ್ತದೆ.
* ಇದಾದ ಬಳಿಕ ಬೇಬಿ ಶಾಂಪು ಅಥವಾ ಸೌಮ್ಯವಾದ ಶಾಂಪುವಿನಿಂದ ತೊಳೆಯುವುದು ಉತ್ತಮ. ರಾಸಾಯನಿಕಯುಕ್ತ ಶಾಂಪುಗಳಿಂದ ತೊಳೆಯುವುದರಿಂದ ನಿಮ್ಮ ನೆತ್ತಿಗೆ ಶುಷ್ಕವಾಗಲು ಹಿಂಬು ನೀಡುದಂತಾಗುತ್ತದೆ. ಶಾಂಪುವಿನ ಬಳಿಕ ಕಂಡಿಷನರ್ ಹಾಕುವುದನ್ನು ಯಾವುದೇ ಕಾರಣಕ್ಕೂ ಮರೆಯಕೂಡದು. ಇದು ಅತ್ಯವಶ್ಯಕ. ಇಲ್ಲವಾದರೆ ನಿಮ್ಮ ಕೂದಲು ಶುಷ್ಕವಾಗಬಹುದು.
* ಕೂದಲಿಗೆ ಹೆಚ್ಚು ಬಣ್ಣ ಅಂಟಿದ್ದರೆ ಆ ಸಂದಭದಲ್ಲಿ ಬಿಯರ್ ಮೂಲಕವೂ ಕೂದಲನ್ನು ತೊಳೆದುಕೊಳ್ಳಬಹುದು. ಬಿಯರ್‌ ನಿಮ್ಮ ಕೂದಲನ್ನು ಸಿಕ್ಕು ಮಾಡುವುದರಿಂದ ತಡೆಯುತ್ತದೆ.
* ನೆತ್ತಿಯು ಕಿರಿಕಿರಿಗೊಂಡಿದ್ದರೆ, ಅದನ್ನು ಶಮನಗೊಳಿಸಲು ಆಪಲ್ ಸೈಡರ್ ವಿನೆಗರ್‌ನನ್ನು ನೀರಿನಲ್ಲಿ ಮಿಶ್ರಣ ಮಾಡಿ ಬಳಸಬಹುದು.
* ಕೂದಲನ್ನು ಸ್ವಚ್ಛವಾಗಿ ತೊಳೆದು ಒಣಗಿಸುವ ಸಂದಭದಲ್ಲಿ ನೀವು ಬಳಸುವ ಕೂದಲ ಸೀರಮ್‌ನನ್ನು ಬಳಸಬಹುದು.

ADVERTISEMENT

ಚರ್ಮದ ಆರೈಕೆ ಹೇಗೆ:
ಬಣ್ಣ ಬಣ್ಣದ ಓಕುಳಿಯು ರಾಸಾಯನಿಕಯುಕ್ತವಾಗಿರುತ್ತದೆ. ಇದು ಚರ್ಮದ ಮೇಲೆ ಬಿದ್ದ ಬಳಿಕ ಅಲರ್ಜಿ ರೀತಿಯಾಗಿ ತಿರುಗಬಹುದು. ಆದಷ್ಟು ಮುಖಗಳಿಗೆ ಬಣ್ಣ ಹಾಕುವುದನ್ನು ನಿಯಂತ್ರಿಸಿಕೊಳ್ಳಿ. ಅಥವಾ ಬಣ್ಣ ಆಡಿದ ಬಳಿಕ ಮುಖ ಚರ್ಮದ ಆರೈಕೆ ಮಾಡಿ. ಮುಖವನ್ನು ಸ್ವಚ್ಛವಾದ ನೀರಿನಿಂದ ತೊಳೆಯಬೇಕು. ಕೆಮಿಕಲ್‌ಯುಕ್ತ ಫೇಸ್‌ವಾಶ್‌ನಿಂದ ಮುಖವನ್ನು ಸ್ವಚ್ಛಗೊಳಿಸಿ. ಮೊಸರು, ನಿಂಬೆಹುಳಿ, ಟೊಮ್ಯಾಟೋ, ಪಪ್ಪಾಯದಂಥಹ ಯಾವುದೇ ಪದಾರ್ಥಗಳನ್ನು ಹಚ್ಚುವುದು ಒಳ್ಳೆಯದಲ್ಲ. ಏಕೆಂದರೆ, ಚರ್ಮವು ರಾಸಾಯನಿಕ ಬಣ್ಣಗಳಿಂದ ಸೆಂಸೆಟಿವ್ ಆಗಿರಲಿದೆ. ಈ ಸಂದರ್ಭದಲ್ಲಿ ಇಂಥ ಪದಾರ್ಥ ಹಾಕುವುದರಿಂದ ಮುಖ ಇನ್ನಷ್ಟು ರಿಯಾಕ್ಟ್ ಆಗುವ ಸಾಧ್ಯತೆ ಇರುವುದರಿಂದ ಮುಖಕ್ಕೆ ಏನನ್ನೂ ಹಚ್ಚದೇ ಇರುವುದು ಒಳ್ಳೆಯದು. ಮುಖ ತೊಳೆದ ಬಳಿಕ ಸೌಮ್ಯವಾದ ಫೇಸ್ ಮಾಚ್ಶರೈಸರ್ ಅನ್ನು ಬಳಸಿ, ಸೂರ್ಯನ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ. ಓಕುಳಿಯಾಡಿದ ಒಂದೆರಡು ದಿನಗಳ ಕಾಲ ಮುಖಕ್ಕೆ ಮೇಕಪ್ ಹಾಕುವುದನ್ನು ಸಂಪೂರ್ಣ ನಿಲ್ಲಿಸಿ. ಸಾಧ್ಯವಾದರೆ, ಮುಖವನ್ನು ತಂಪಾಗಿರಿಸಿ.

ಇಡೀ ದೇಹದ ಆರೈಕೆಯೂ ಮುಖ್ಯ:
ಇಡೀ ದೇಹದ ಚರ್ಮವೂ ಮುಖದ ಚರ್ಮದಷ್ಟೇ ಪ್ರಾಮುಖ್ಯತೆ ಹೊಂದಿರುತ್ತದೆ. ಹೀಗಾಗಿ ದೇಹದ ಆರೈಕೆ ಕಡೆಗಣಿಸಬೇಡಿ. ಬಣ್ಣವಾಡಿದ ಬಳಿಕ ಉಗುರುಬೆಚ್ಚಗಿನ ನೀರಿನಲ್ಲಿಯೇ ಸ್ನಾನ ಮಾಡಿ, ಮರುದಿನ ಕೂಡ ಇಡೀ ದೇಹಕ್ಕೆ ಎಣ್ಣೆ ಮಸಾಜ್ ಮಾಡಿಕೊಂಡು ಸ್ನಾನ ಮಾಡುವುದು ಬಹಳ ಮುಖ್ಯ. ಇದರಿಂದ ದೇಹವು ಶುಷ್ಕವಾಗುವುದನ್ನು ತಡೆಯುತ್ತದೆ. ಈ ಸಂದರ್ಭದಲ್ಲಿ ರಾಸಾಯನಿಕಯುಕ್ತ ಸೋಪ್ ಬಳಸಬೇಡಿ.

ವಿಟಮಿನ್ ಸಿ ಆಹಾರ ಸೇವಿಸಿ: ದೇಹದ ಮೇಲೆ ಮಾತ್ರ ಆರೈಕೆ ಮಾಡಿದರೆ ಸಾಲದು, ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ಬಣ್ಣದ ಬಳಿಕ ಚರ್ಮವನ್ನು ಕೋಮಲ ಹಾಗೂ ನಯವಾಗಿ ಇಟ್ಟುಕೊಳ್ಳಲು ಹೆಚ್ಚು ನೀರು ಕುಡಿಯುವುದು ಹಾಗೂ ಲಿಕ್ವಿಡ್‌ಯುಕ್ತ ಆಹಾರ ಸೇವಿಸುವುದು ಒಳ್ಳೆಯದು. ಸದಾ ಹೈಡ್ರೇಟ್ ಆಗಿರಿ. ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ತೆಗೆದುಕೊಳ್ಳಿ.

ನೈಸರ್ಗಿಕ ಬಣ್ಣ ಬಳಸಿ: ರಾಸಾಯನಿಕಯುಕ್ತ ಬಣ್ಣ ಬಳಸುವ ಬದಲು, ಅರಿಶಿನ, ಬೀಟ್ರೂಟ್ ಮತ್ತು ಪಾಲಕದಂತಹ ನೈಸರ್ಗಿಕ ಪದಾರ್ಥಗಳಿಂದ ರಚಿಸಲಾದ ಸಾವಯವ ಬಣ್ಣಗಳನ್ನು ಬಳಸುವುದರಿಂದ ಓಕುಳಿಯ ಸಂತೋಷದ ಜೊತೆಗೆ ನಿಮ್ಮ ಚರ್ಮ ಹಾಗೂ ಕೂದಲು ಸಹ ಆರೋಗ್ಯವಾಗಿರುತ್ತದೆ.

- ಚರ್ಮರೋಗ ತಜ್ಞೆ ಡಾ. ಸ್ಮಿತಾ ವಾರಿಯರ್ ಹಾಗೂ ಡರ್ಮಟಾಲಜಿಸ್ಟ್ ಡಾ. ರಶ್ಮಿ ರವೀಂದ್ರ, ಫೊರ್ಟಿಸ್ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.