ದೇಹದಲ್ಲಿ ಕನಿಷ್ಠ ಕಲೆಯನ್ನು ಉಳಿಸುವ ಹಾಗೂ ವೇಗವಾಗಿ ಚೇತರಿಸಿಕೊಳ್ಳಲು ರೋಗಿಗಳಿಗೆ ಅನುವು ಮಾಡಿಕೊಡುತ್ತದೆ ಲ್ಯಾಪರೋಸ್ಕೋಪಿಕ್ ವಿಧಾನದ ಶಸ್ತ್ರಚಿಕಿತ್ಸೆ.
ಗ್ರೀಕ್‌ನ ಲ್ಯಾಪರೋಸ್‌ನಿಂದ ಈ ಲ್ಯಾಪರೋಸ್ಕೋಪಿಕ್ ಪದವು ಹುಟ್ಟಿಕೊಂಡಿದ್ದು, ಹೊಟ್ಟೆಯೊಳಗೆ ಇಣುಕಿ ನೋಡುವುದು ಎಂಬರ್ಥವನ್ನು ನೀಡುತ್ತದೆ. ಕಿಬ್ಬೊಟ್ಟೆಯಲ್ಲಿರುವ ಅಂಗಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಇರುವ ಪರಿಸ್ಥಿತಿಯನ್ನು ಯಥಾವತ್ತು ತಿಳಿಸುವ ವಿಧಾನವೇ ಲ್ಯಾಪರೋಸ್ಕೋಪಿಕ್.
ರೋಗಗಳನ್ನು ಪತ್ತೆ ಹಚ್ಚಿ, ನಿರ್ಣಯಿಸಿ, ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಶಿಫಾರಸು ಮಾಡುವಲ್ಲಿ ಲ್ಯಾಪರೋಸ್ಕೋಪಿಕ್ ವಿಧಾನವು ಬಹಳ ಮಹತ್ತರ ಪಾತ್ರವನ್ನು ವಹಿಸುತ್ತದೆ.
ಉಪಯೋಗ ಹೇಗೆ?
ಇದು ಉದ್ದ ಹಾಗೂ ತೆಳುವಾಗಿರುವ ಉಪಕರಣವಾಗಿದ್ದು , 5 ಮಿಲಿ ಮೀಟರ್‌ನಿಂದ 15 ಮಿಲಿ ಮೀಟರ್‌ವರೆಗೆ ಇರುತ್ತದೆ. ಇದೊಂದು ಕೌಶಲಯುಕ್ತ ಚಿಕಿತ್ಸೆಯಾಗಿದ್ದು, ಶಸ್ತ್ರಚಿಕಿತ್ಸಕರಿಗೆ ಉತ್ತಮ ತರಬೇತಿಯ ಅಗತ್ಯವಿರುತ್ತದೆ. HDTV/4K ಮತ್ತು 3D ಲ್ಯಾಪರೊಸ್ಕೋಪಿ ಉಪಕರಣಗಳು ಹೆಚ್ಚು ನೈಜ ಚಿತ್ರಣವನ್ನು ಒದಗಿಸುತ್ತದೆ. ಸಾಮಾನ್ಯ ಮಟ್ಟದ ಅರವಳಿಕೆ ನೀಡಿ ರೋಗಿಯ ಹೊಕ್ಕುಳಿನ ಮೂಲಕ ‘ಹೈ ಡೆಫಿನಿಷನ್‘ ಕ್ಯಾಮೆರಾವನ್ನು ಶಸ್ತ್ರಚಿಕಿತ್ಸಕ ಸೇರಿಸುತ್ತಾನೆ. ಇದು ಅಂಗಾಂಗಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ವಿವರವಾದ ಮಾಹಿತಿ ನೀಡುತ್ತದೆ. ಹೆಚ್ಚಿನ ಪರೀಕ್ಷೆಗಾಗಿ ಅಂಗಾಂಶ ಅಥವಾ ದ್ರವ ಮಾದರಿಯನ್ನು ಸಂಗ್ರಹಿಸುತ್ತದೆ. ಇದರ ನಿಖರವಾದ ಪರಿಶೀಲನೆಯಿಂದ ರೋಗವನ್ನು ಸಮರ್ಪಕವಾಗಿ ನಿರ್ಣಯಿಸಲು ಸಾಧ್ಯವಾಗುತ್ತದೆ.
ಎಂಆರ್‌ಐ ಅಥವಾ ಸಿ.ಟಿ. ಸ್ಕ್ಯಾನ್‌ನಂಥ ಪರೀಕ್ಷೆಗಳು ರೋಗವನ್ನು ಸಮರ್ಪಕವಾಗಿ ಕಂಡುಹಿಡಿಯಲು ಸಾಧ್ಯವಾಗದೇ ಹೋದರೂ ಈ ವಿಧಾನವು ಚಿಕಿತ್ಸೆ ನೀಡುವ ವೈದ್ಯರಿಗೆ ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ.
ರೋಗಿಯ ಕಿಬ್ಬೊಟ್ಟೆಯ ಮೇಲೆ 2.8 ಮಿಲಿ ಮೀಟರ್‌ನಿಂದ 15 ಮಿಲಿ ಮೀಟರ್‌ವರೆಗಿನ ರಂಧ್ರ ಮಾಡಲಾಗುತ್ತದೆ. ಇದು ಕನಿಷ್ಠ ಪ್ರಮಾಣದ ರಂಧ್ರವಾಗಿರುವುದರಿಂದ ಕೀಹೋಲ್ ಸರ್ಜರಿ ಎಂದೂ ಕರೆಯಲಾಗುತ್ತದೆ. ರೋಗಿಯು ಬಹುಬೇಗ ಚೇತರಿಕೆ ಕಾಣಬಹುದು.
ಎಲ್ಲೆಲ್ಲಿ ಬಳಕೆ?
ಅಪೆಂಡಿಕ್ಸ್ ಸರ್ಜರಿ ಅಥವಾ ಪಿತ್ತಕೋಶ ತೆಗೆದುಹಾಕುವುದು. ಕಿಬ್ಬೊಟ್ಟೆಯ ಅಂಡವಾಯು( ಅಪೆಂಡಿಕ್ಸ್) ಸರಿಪಡಿಸುವುದು. ಕ್ಯಾನ್ಸರ್ ಗಡ್ಡೆಗಳನ್ನು ತೆಗೆದುಹಾಕುವ ಚಿಕಿತ್ಸೆಗಳಲ್ಲಿ ಈ ವಿಧಾನವನ್ನು ಬಳಸಲಾಗುತ್ತದೆ. ಯಾವ ಕಾಯಿಲೆಗೆ ಎಂಥ ಚಿಕಿತ್ಸೆ ನೀಡಬೇಕು ಮತ್ತು ರೋಗಿಯ ಸ್ಥಿತಿಗೆ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸುವುದರಲ್ಲಿ ಶಸ್ತ್ರಚಿಕಿತ್ಸಕರ ಯಶಸ್ಸು ಅಡಗಿರುತ್ತದೆ. ಕಲ್ಲುಗಳು ಉತ್ಪತ್ತಿಯಾದ ಕಾರಣದಿಂದ ಪಿತ್ತಕೋಶಗಳನ್ನು ತೆಗೆದುಹಾಕಲು, ಅಪೆಂಡಿಕ್ಸ್ ಸರಿಪಡಿಸುವ ಚಿಕಿತ್ಸೆಯಲ್ಲಿ ಹೆಚ್ಚಾಗಿ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಬಳಸಲಾಗುತ್ತದೆ. ಈಗೀಗ 2.8 ಮಿಲಿ ಮೀಟರ್‌ನಿಂದ 3.5 ಮಿಲಿ ಮೀಟರ್‌ನಷ್ಟು ಮಿನಿ ಲ್ಯಾಪರ್‌ಸ್ಕೋಪಿ ವಿಧಾನವೂ ಬಳಕೆಯಾಗುತ್ತಿದೆ. ಗಾಯಗಳನ್ನು ಮುಚ್ಚಲು ಹೊಲಿಗೆಗಳ ಅಗತ್ಯವಿರುವುದಿಲ್ಲ. ಬದಲಾಗಿ ಶಸ್ತ್ರಚಿಕಿತ್ಸೆಯಾದ ಜಾಗವನ್ನು ಸ್ಟೆರಿ ಸ್ಟ್ರಿಪ್‌ನಿಂದ ಮುಚ್ಚಲಾಗುತ್ತದೆ. ತೆಳ್ಳಗಿನ ಮತ್ತು ಕಿರಿದಾದ ಬ್ಯಾಂಡೇಜ್‌ನಂಥ ಪ್ಲ್ಯಾಸ್ಟರ್‌ನಿಂದಾಗಿ ರೋಗಿಗಳು ಮರುದಿನವೇ ಸ್ನಾನ ಮಾಡಲು ಅನುವು ಮಾಡಿಕೊಡುತ್ತದೆ.
–ಡಾ. ರಾಜೀವ್ ಪ್ರೇಮನಾಥ್, ಲ್ಯಾಪ್ರೋಸ್ಕೋಪಿಕ್ ತಜ್ಞ, ರಾಮಕೃಷ್ಣ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.