ADVERTISEMENT

Late Pregnancy: ವಿಳಂಬಿತ ಗರ್ಭಧಾರಣೆ ಸಮಸ್ಯೆಗಳೇನು?

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2024, 8:48 IST
Last Updated 11 ಅಕ್ಟೋಬರ್ 2024, 8:48 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ರಾಯಿಟರ್ಸ್ ಚಿತ್ರ

ಇಂದಿನ ವೇಗದ ಜಗತ್ತಿನಲ್ಲಿ ಹೆಚ್ಚಿನ ದಂಪತಿಗಳು ಕುಟುಂಬ ಆರಂಭಿಸುವುದನ್ನು ಅಂದರೆ ಮಕ್ಕಳನ್ನು ಪಡೆಯುವುದನ್ನು ವಿಳಂಬ ಮಾಡಲು ಬಯಸುತ್ತಾರೆ. ಇದಕ್ಕೆ ಪ್ರಮುಖ ಕಾರಣ ತಮ್ಮ ವೃತ್ತಿಜೀವನದ ಮೇಲೆ ಗಮನಹರಿಸುವುದು, ಆರ್ಥಿಕ ಸ್ಥಿರತೆಯನ್ನು ಸಾಧಿಸುವುದು ಅಥವಾ ಸರಿಯಾದ ಸಮಯಕ್ಕಾಗಿ ಕಾಯುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಗರ್ಭಧಾರಣೆಯನ್ನು ಮುಂದೂಡುವ ಈ ನಿರ್ಧಾರ ಸಾಮಾನ್ಯ ಅಂಶವಾಗಿದೆ. ಸೂಕ್ತ ಸಮಯಕ್ಕಾಗಿ ಕಾಯುವುದು ಒಂದು ಸಂವೇದನಾಶೀಲ ಆಯ್ಕೆಯಂತೆ ಕಂಡುಬಂದರೂ, ವಿಳಂಬದಿಂದ ಎದುರಾಗಬಹುದಾದ ಸಂಭಾವ್ಯ ಅಪಾಯಗಳು ಮತ್ತು ಸವಾಲುಗಳನ್ನೂ ಅರ್ಥ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ.

ADVERTISEMENT

ಜೈವಿಕ ಗಡಿಯಾರ: ವಯಸ್ಸು ಏಕೆ ಮುಖ್ಯವಾಗುತ್ತದೆ?

ಫಲವತ್ತತೆಯ ಮೇಲೆ ಪರಿಣಾಮ ಬೀರುವ ಬಹುದೊಡ್ಡ ಅಂಶವೆಂದರೆ ವಯಸ್ಸು. ಮಹಿಳೆಯರು ಸೀಮಿತ ಮೊಟ್ಟೆಗಳೊಂದಿಗೆ ಜನಿಸಿರುತ್ತಾರೆ ಮತ್ತು ಅವರಿಗೆ ವಯಸ್ಸಾದಂತೆ ಈ ಮೊಟ್ಟೆಗಳ ಪ್ರಮಾಣ ಮತ್ತು ಗುಣಮಟ್ಟ ಕುಸಿಯುತ್ತಾ ಹೋಗುತ್ತದೆ. ಮಹಿಳೆಯು 30 ವರ್ಷ ತಲುಪುವ ವೇಳೆಗೆ ಈ ಕುಸಿತದ ಪ್ರಮಾಣ ಸ್ಪಷ್ಟವಾಗುತ್ತದೆ ಮತ್ತು 40 ರ ಪ್ರಾಯದ ವೇಳೆಗೆ ನೈಸರ್ಗಿಕವಾಗಿ ಮೊಟ್ಟೆಗಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತದೆ.

ಇನ್ನು ಪುರುಷರಲ್ಲಿ, ವಯಸ್ಸು ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಇದರ ಪರಿಣಾಮ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ವಯಸ್ಸಾದಂತೆ ವೀರ್ಯದ ಗುಣಮಟ್ಟ ಕ್ಷೀನಿಸಬಹುದು. ಇದು ಗರ್ಭ ಧರಿಸುವಲ್ಲಿ ತೊಂದರೆಗೆ ಕಾರಣವಾಗಬಹುದು ಅಥವಾ ಮಗುವಿನ ಆನುವಂಶಿಕ ಅಸಹಜತೆಗಳ ಅಪಾಯ ಮಟ್ಟವನ್ನು ಹೆಚ್ಚಿಸುತ್ತದೆ.

ವಿಳಂಬಿತ ಗರ್ಭಧಾರಣೆಯ ಸಾಮಾನ್ಯ ಸವಾಲುಗಳು

ಕುಂಠಿತ ಫಲವತ್ತತೆ: ತಡವಾಗಿ ಗರ್ಭಧಾರಣೆಯಾದರೆ ಎದುರಾಗುವ ತಕ್ಷಣದ ಸವಾಲೆಂದರೆ ಫಲವತ್ತತೆ ಪ್ರಮಾಣ ಕಡಿಮೆ ಇರುವುದು. ಮಹಿಳೆಯು ವಯಸ್ಸಾದಂತೆ ಆಕೆಯ ಮೊಟ್ಟೆಗಳು ಕ್ರೋಮೋಸೋಮ್ ಅಸಹಗತೆಗಳಿಂದ ಕೂಡಿರುವ ಸಾಧ್ಯತೆಗಳಿರುತ್ತವೆ. ಇದು ಗರ್ಭಿಣಿಯಾಗಲು ತೊಂದರೆ ಉಂಟು ಮಾಡಬಹುದು. ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ ಅಥವಾ ಆನುವಂಶಿಕ ಅಸ್ವಸ್ಥತೆಗಳೊಂದಿಗೆ ಮಗುವಿನ ಜನನಕ್ಕೆ ಕಾರಣವಾಗಬಹುದು.

ಸಮಸ್ಯೆಗಳ ಅಪಾಯ ಹೆಚ್ಚು: ವಯಸ್ಸಾದ ಸಂದರ್ಭದಲ್ಲಿ ಗರ್ಭ ಧರಿಸಿದರೆ ತಾಯಿ ಮತ್ತು ಮಗುವಿಗೆ ಹೆಚ್ಚಿನ ಅಪಾಯಗಳು ಎದುರಾಗುತ್ತವೆ. ಇಂತಹ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಅವಧಿಪೂರ್ವ ಜನನ ಮತ್ತು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವಂತಹ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ.

ಗರ್ಭ ಧರಿಸಲು ದೀರ್ಘ ಅವಧಿ: ಕುಟುಂಬವನ್ನು ಆರಂಭಿಸಲು ಅಂದರೆ ಮಗುವನ್ನು ಪಡೆಯಲು ವಿಳಂಬ ಮಾಡುವ ದಂಪತಿಗಳು ಗರ್ಭ ಧರಿಸಲು ತಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಇದು ಅವರಲ್ಲಿ ಹತಾಶೆ ಮತ್ತು ಭಾವನಾತ್ಮಕವಾಗಿ ನೋವನ್ನು ತರಬಹುದು. ಅಂದರೆ, ವಿಶೇಷವಾಗಿ ತಾವಂದುಕೊಂಡ ಸಮಯದಲ್ಲಿ ಗರ್ಭಧಾರಣೆಯಾಗದಿದ್ದ ಸನ್ನಿವೇಶದಲ್ಲಿ ಇಂತಹ ಬೇಸರ ಪರಿಸ್ಥಿತಿ ಎದುರಾಗುತ್ತದೆ.

ಬಂಜೆತನ ಪ್ರಮಾಣ ಹೆಚ್ಚಳ: ಮಹಿಳೆಯರಿಗೆ ವಯಸ್ಸಾದಂತೆ ಬಂಜೆತನ ಬರುವುದು ಸಾಮಾನ್ಯವಾಗಿರುತ್ತದೆ. ಅಧ್ಯಯನಗಳ ಪ್ರಕಾರ, 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಮೂರನೇ ಒಂದು ಭಾಗದಷ್ಟು ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟ ಅರ್ಧದಷ್ಟು ಮಹಿಳೆಯರು ಬಂಜೆತನವನ್ನು ಅನುಭವಿಸುತ್ತಾರೆ. ಇದು ಫರ್ಟಿಲಿಟಿ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕಾದ ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಆದರೆ, ಈ ಚಿಕಿತ್ಸೆಗಳು ದುಬಾರಿ, ಹೆಚ್ಚು ಸಮಯ ಮತ್ತು ಭಾವನಾತ್ಮಕವಾಗಿ ಹೊರೆ ಎನಿಸುತ್ತವೆ.

ಭಾವನಾತ್ಮಕ ಮತ್ತು ಮಾನಸಿಕ ಒತ್ತಡ: ವಿಳಂಬವಾಗಿ ಗರ್ಭ ಧರಿಸಲು ಪ್ರಯತ್ನಿಸುವ ವೇಳೆಯಲ್ಲಿ ಅನುಭವಿಸುವ ಮಾನಸಿಕ ಒತ್ತಡವು ಹೆಚ್ಚು ನೋವನ್ನುಂಟು ಮಾಡಬಹುದು. ಸಕಾರಾತ್ಮಕವಾಗಿ ಗರ್ಭಧಾರಣೆಯ ಪರೀಕ್ಷೆ ಇಲ್ಲದೇ ಕಳೆದು ಹೋಗುವ ತಿಂಗಳುಗಳು ದಂಪತಿಯಲ್ಲಿ ಆತಂಕ, ನಿರಾಶೆ, ದುಃಖ ಮತ್ತು ಖಿನ್ನತೆಯ ಭಾವನೆಗಳಿಗೆ ಕಾರಣವಾಗಬಹುದು.

ಏನು ಮಾಡಬಹುದು?

ಗರ್ಭಧಾರಣೆ ವಿಳಂಬವಾಗುತ್ತಿರುವುದನ್ನು ಗಮನಿಸುವ ದಂಪತಿಗಳಿಗೆ ಎದುರಾಗಬಹುದಾದ ಕೆಲವು ಅಪಾಯಗಳಿಂದ ಪಾರಾಗಲು ಹಲವಾರು ಹಂತಗಳನ್ನು ಪಾಲಿಸಬಹುದು:

ಸ್ವಯಂ ಶಿಕ್ಷಣ: ಲಫಲವತ್ತತೆಯ ಮೇಲೆ ವಯಸ್ಸಿನ ಪ್ರಭಾವ ಹೇಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ. ದಂಪತಿಗಳು ಮಗುವನ್ನು ಪಡೆಯುವ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವ ನೈಜತೆಯ ಬಗ್ಗೆ ತಮಗೆ ತಾವೇ ತಿಳಿದುಕೊಳ್ಳಬೇಕು ಅಥವಾ ಜಾಗೃತಿ ಹೊಂದಬೇಕು ಮತ್ತು ಈ ಬಗ್ಗೆ ಆರೋಗ್ಯ ಚಿಕಿತ್ಸೆ ಅಂದರೆ ತಜ್ಞರ ಬಳಿ ತಮ್ಮ ವಿಳಂಬದ ಯೋಜನೆ ಬಗ್ಗೆ ಚರ್ಚಿಸಿ ಅವರಿಂದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು.

ಫಲವತ್ತತೆಯ ಮೌಲ್ಯಮಾಪನ: ನೀವು ಗರ್ಭ ಧರಿಸುವುದನ್ನು ವಿಳಂಬ ಮಾಡಲು ನಿರ್ಧರಿಸಿದ್ದರೆ ಫಲವತ್ತತೆಯ ಮೌಲ್ಯಮಾಪನ ಮಾಡಿಸಿಕೊಳ್ಳಬೇಕು. ಇದು ನಿಮ್ಮ ಪ್ರಸ್ತುತದ ಸಂತಾನೋತ್ಪತ್ತಿ ಆರೋಗ್ಯದ ಅಂಶಗಳ ಬಗ್ಗೆ ಮಾಹಿತಿ ನೀಡುತ್ತದೆ. ಇದು ಹಾರ್ಮೋನ್ ಗಳ ಮಟ್ಟ, ಮೊಟ್ಟೆಯ ಗುಣಮಟ್ಟ ಮತ್ತು ವೀರ್ಯದ ಆರೋಗ್ಯವನ್ನು ಅಳೆಯುವ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.

ಮೊಟ್ಟೆ ಅಥವಾ ವೀರ್ಯ ಘನೀಕರಣ ಪರಿಗಣಿಸಿ: ಪಿತೃತ್ವವನ್ನು ವಿಳಂಬ ಮಾಡಲು ಬಯಸುತ್ತಲೇ ಫಲವತ್ತತೆ ಬಗ್ಗೆ ಕಾಳಜಿ ಹೊಂದಿರುವವರಿಗೆ ಮೊಟ್ಟೆ ಅಥವಾ ವೀರ್ಯ ಘನೀಕರಣವು ಒಂದು ಉತ್ತಮ ಆಯ್ಕೆಯಾಗಿದೆ. ಭವಿಷ್ಯದ ಬಳಕೆಗಾಗಿ ಕಿರಿಯ, ಆರೋಗ್ಯಕರವಾದ ಮೊಟ್ಟೆಗಳು ಅಥವಾ ವೀರ್ಯವನ್ನು ಸಂರಕ್ಷಿಸಿಡಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.

ಆರೋಗ್ಯಕರ ಜೀವನಶೈಲಿ ಆಯ್ಕೆಗಳು: ಆರೋಗ್ಯಕರವಾದ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದರಿಂದ ಫಲವತ್ತತೆಯ ಪ್ರಮಾಣ ಹೆಚ್ಚಳವಾಗುತ್ತದೆ. ಸಮತೋಲಿತ ಆಹಾರವನ್ನು ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಧೂಮಪಾನ ಮತ್ತು ಅತಿಯಾದ ಮದ್ಯ ಸೇವನೆಯನ್ನು ತಪ್ಪಿಸುವುದು ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಸಂತಾನೋತ್ಪತ್ತಿಗೆ ಕೊಡುಗೆ ನೀಡಿದಂತಾಗುತ್ತದೆ.

ಆರಂಭದಲ್ಲೇ ಬೆಂಬಲ ಪಡೆಯಿರಿ: ಆರಂಭಿಕ ಪ್ರಯತ್ನಗಳಲ್ಲಿ ಗರ್ಭಿಣಿಯಾಗಲು ಸಾಧ್ಯವಾಗದಿದ್ದರೆ ಫರ್ಟಿಲಿಟಿ ತಜ್ಞರಿಂದ ಸಲಹೆ ಸೂಚನೆಗಳನ್ನು ಪಡೆಯಲು ಹಿಂಜರಿಯಬೇಡಿ. ಆರಂಭಿಕ ಹಂತದಲ್ಲಿಯೇ ಅವರ ಬಳಿ ತಪಾಸಣೆ ಮಾಡಿಸಿಕೊಂಡರೆ ಯಶಸ್ವಿ ಚಿಕಿತ್ಸೆಯ ಸಾಧ್ಯತೆಗಳನ್ನು ಹೆಚ್ಚಿಸಬಹುದಾಗಿದೆ.

ವಾಸ್ತವಾಂಶಗಳನ್ನು ಅರ್ಥ ಮಾಡಿಕೊಳ್ಳಬೇಕು

ಅನೇಕ ಮಹಿಳೆಯರು ಮತ್ತು ಪುರುಷರಿಗೆ ವಯಸ್ಸಾಗಿದ್ದರೂ ನೈಸರ್ಗಿಕವಾಗಿ ಗರ್ಭಿಣಿಯಾಗಿರುವ ನಿದರ್ಶನಗಳಿವೆ. ಆದರೆ, ಸಮಯ ಕಳೆದಂತೆ ಈ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ವಿಳಂಬವಾಗಿ ಗರ್ಭಿಣಿಯಾಗುವುದು ಭಾವನಾತ್ಮಕ, ದೈಹಿಕ ಒತ್ತಡ, ಆರ್ಥಿಕ ವೆಚ್ಚಗಳಿಗೆ ಕಾರಣವಾಗಬಹುದು. ಇದು ಭವಿಷ್ಯದ ಯೋಜನೆಗಳ ಉತ್ಸಾಹವನ್ನು ಕಡಿಮೆ ಮಾಡುತ್ತದೆ.

ಅಂತಿಮವಾಗಿ, ಮಗುವನ್ನು ಹೊಂದುವ ನಿರ್ಧಾರ ತೆಗೆದುಕೊಳ್ಳುವುದು ವೈಯಕ್ತಿಕ ವಿಚಾರವಾಗಿದೆ ಮತ್ತು ಇದೇ ಸಂದರ್ಭದಲ್ಲಿ ಸಂಭವನೀಯ ಅಪಾಯಗಳ ಬಗ್ಗೆ ಚಿಂತನೆ ಮಾಡುವುದು ಅತ್ಯಗತ್ಯವಾಗಿದೆ. ಹೀಗಾಗಿ, ಈ ಬಗ್ಗೆ ತಿಳುವಳಿಕೆ ಮತ್ತು ಪೂರ್ವಭಾವಿಯಾಗಿ ದಂಪತಿಗಳು ತಮ್ಮ ಗುರಿಗಳು ಮತ್ತು ಸಂದರ್ಭಗಳಿಗೆ ಅನುಸಾರವಾಗಿ ಹೊಂದಿಕೊಳ್ಳುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ.

ವಿಳಂಬವಾಗಿ ಮಗುವನ್ನು ಪಡೆಯಬೇಕೆಂದುಕೊಂಡಿದ್ದವರು ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಬೆಂಬಲವಿದೆ ಎಂಬುದನ್ನು ಮನಗಾಣಬೇಕು. ವೈದ್ಯಕೀಯ ವಿಜ್ಞಾನದಲ್ಲಿನ ಪ್ರಗತಿಗಳು ವಿವಿಧ ಪರಿಹಾರಗಳನ್ನು ನೀಡುತ್ತವೆ ಮತ್ತು ಆರೋಗ್ಯ ಸೇವೆಗಳನ್ನು ನೀಡುತ್ತಿರುವವರೊಂದಿಗೆ ಅಂದರೆ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರೆ ಈ ಸಂಕೀರ್ಣವಾದ ಸಮಸ್ಯೆಯಿಂದ ಹೊರಬರಲು ನೆರವಾಗುತ್ತಾರೆ. ಇದೇ ವೇಳೆ, ಅವರು ನೀಡುವ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನಗಳಿಂದ ನಿಮ್ಮ ಸಂತಾನೋತ್ಪತ್ತಿ ಭವಿಷ್ಯದ ಬಗ್ಗೆ ಸಶಕ್ತ ಆಯ್ಕೆಗಳನ್ನು ಮಾಡಲು ಸಾಧ್ಯವಿದೆ.

ಲೇಖಕರು: ಡಾ.ರತ್ನಶ್ರೀ, ಎಂಬಿಬಿಎಸ್, ಡಿಜಿಒ, ಸಂಪ್ರದ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್, ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.