ಪ್ರಕೃತಿಯಲ್ಲಿ ಹೆಣ್ಣು ಮತ್ತು ಗಂಡಿನ ಜವಾಬ್ದಾರಿ ಸಮಪ್ರಮಾಣದಲ್ಲಿ ಇದೆ. ಆದರೆ ಹೆಣ್ಣಿನ ದೇಹ ಮತ್ತು ಮನಸ್ಸು ನಿರ್ವಹಿಸಬೇಕಾದ ಕೆಲಸಗಳು ಹೆಚ್ಚಿನ ಮಟ್ಟದವು. ಗರ್ಭಧಾರಣೆಯಿಂದ ಹಿಡಿದು ಭ್ರೂಣವನ್ನು ಬೆಳೆಸಿ ಈ ಲೋಕಕ್ಕೆ ತರುವಲ್ಲಿ ಅನೇಕ ಹಂತಗಳನ್ನು ಅವಳು ನಿರ್ವಹಿಸಬೇಕಾಗುತ್ತದೆ. ಮಗುವಿಗೆ ಹಾಲುಣಿಸುವ ಕೆಲಸವು ಸುಮಾರು ಎರಡರಿಂದ ಮೂರು ವರ್ಷಗಳ ಕಾಲ ಹಿಡಿಯುತ್ತದೆ. ಅಲ್ಲದೆ ತಿಂಗಳು ಮುಟ್ಟಿನ ಜವಾಬ್ದಾರಿಯನ್ನೂ ಅವಳು ವಹಿಸಬೇಕಾಗುತ್ತದೆ.
ಸುಮಾರು ಹತ್ತು ವರ್ಷಗಳವರೆಗೂ ಗಂಡುಮಗು-ಹೆಣ್ಣುಮಗುವಿನ ಮಧ್ಯೆ ಅಂತಹ ವ್ಯತ್ಯಾಸಗಳು ಕಾಣಿಸದಿದ್ದರೂ, ದೈಹಿಕವಾಗಿ ರಚನೆಯಲ್ಲಿ ವ್ಯತ್ಯಾಸವಿರುವುದರಿಂದ ಹೆಣ್ಣುಮಕ್ಕಳ ಮೂತ್ರನಾಳದಲ್ಲಿನ ನಂಜು ಮತ್ತು ಯೋನಿಯಲ್ಲಿಯೂ ನಂಜು ಉಂಟಾಗಬಹುದು. ಮೂತ್ರನಾಳ ಮತ್ತು ಯೋನಿ ಮಲದ್ವಾರದ ಸಮೀಪವಿರುವುದರಿಂದ ಈ ಸಮಸ್ಯೆ ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು.
ಹತ್ತು ವರ್ಷದ ನಂತರ ಹೆಣ್ಣಿನ ದೇಹದಲ್ಲಿ ಆಗುವ ವ್ಯತ್ಯಾಸಗಳಲ್ಲಿ ಮುಖ್ಯವಾದದ್ದು ಸ್ತನಗಳ ಬೆಳವಣಿಗೆ ಮತ್ತು ಋತುಚಕ್ರದ ಪ್ರಾರಂಭ. ಹೆಣ್ಣುಮಗುವಿಗೆ ಎದೆಯಲ್ಲಿ ನೋವು ಮತ್ತು ಊತ ಕಾಣಿಸಿಕೊಂಡಾಗ ಭಯ, ಆತಂಕ, ಮುಜುಗರ ಉಂಟಾಗುವ ಸಾಧ್ಯತೆಗಳು ಇವೆ. ಸೂಕ್ತ ಸಮಾಲೋಚನೆಯಿಂದ ಮಕ್ಕಳನ್ನು ಈ ಆತಂಕದಿಂದ ಹೊರಗೆ ತರುವುದು ಅವಶ್ಯಕ. ಎದೆಯಲ್ಲಿ ಕಾಣಿಸಿಕೊಳ್ಳುವ ನೋವು ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.
ಋತುಚಕ್ರಕ್ಕೆ ಸಂಬಂಧಿಸಿದಂತೆ ರಕ್ತಸ್ರಾವದಲ್ಲಿ ಹೆಚ್ಚಳ, ಅನಿಯಮಿತ ರಕ್ತಸ್ರಾವ ಕಂಡುಬರಬಹುದು. ಸುಮಾರು ಹದಿನೆಂಟು ವರ್ಷಗಳವರೆಗೆ ಋತುಚಕ್ರ ನಿಯಮಿತವಾಗಿ ಬಾರದೆ ಇರುವುದು ಹೆತ್ತವರಲ್ಲಿ ಮತ್ತು ಮಕ್ಕಳಲ್ಲಿ ಆತಂಕಕ್ಕೆ ಕಾರಣವಾಗಬಹುದು.
ಮುಟ್ಟಿನ ಸಮಯದಲ್ಲಿ ಕೆಳಹೊಟ್ಟೆ, ಸೊಂಟನೋವು ಕೈಕಾಲುಗಳ ಸೆಳೆತ, ವಾಂತಿ ಬಂದಂತೆ ಆಗುವುದು, ಆಹಾರ ರುಚಿಸದೇ ಇರುವುದು – ಇಂಥವು ಕೆಲವು ತಿಂಗಳುಗಳ ಕಾಲ ಕಾಡಬಹುದು.
ಬೆಳವಣಿಗೆಯ ಸಮಯದಲ್ಲಿ ಕಬ್ಬಿಣ ಅಂಶದ ಕೊರತೆಯಿಂದ ಹೆಣ್ಣುಮಕ್ಕಳು ತೊಂದರೆಗೆ ಈಡಾಗುವುದನ್ನು ಕಾಣುತ್ತೇವೆ. ಸರಿಯಾದ ಪೋಷಕ ಅಂಶಗಳನ್ನು ಒಳಗೊಂಡ ಆಹಾರವನ್ನು ಕೊಡದೆ ಹೋದರೆ ಮುಟ್ಟಿನ ಸಮಯದಲ್ಲಿ ಕಳೆದುಕೊಳ್ಳುವ ರಕ್ತದಿಂದ ಉಂಟಾಗುವ ಕಬ್ಬಿಣದ ಅಂಶದ ಕೊರತೆಯನ್ನು ನೀಗಿಸಲು ಸಾಧ್ಯವಾಗುವುದಿಲ್ಲ. ಕಬ್ಬಿಣದ ಅಂಶದ ಕೊರತೆಯ ಜೊತೆಗೇ ಹೆಣ್ಣುಮಗು ಬೆಳೆಯುತ್ತಾ ಹೋಗುತ್ತಾಳೆ. ಮುಂದೆ ಮದುವೆಯಾಗಿ ಗರ್ಭಿಣಿಯಾಗುವ ಸಮಯದಲ್ಲೂ ರಕ್ತಹೀನತೆಯಿಂದ ಬಳಲುವ ತಾಯಿಯ ಹೊಟ್ಟೆಯಲ್ಲಿ ಹುಟ್ಟುವ ಮಗು ಕೂಡ ರಕ್ತಹೀನತೆಯಿಂದ ಬಳಲುತ್ತದೆ. ಹೀಗೆ ರಕ್ತಹೀನತೆಯ ಚಕ್ರ ಪುನರಾವರ್ತನೆಯಾಗುತ್ತದೆ.
ಋತುಚಕ್ರದಲ್ಲಿ ವ್ಯತ್ಯಾಸವಾದಾಗ, ರಕ್ತಸ್ರಾವ ಹೆಚ್ಚಾದಾಗ ಇದು ಸಹಜ ಎಂದು ಅನೇಕ ತಿಂಗಳುಗಳ ಕಾಲ ವೈದ್ಯಕೀಯ ನೆರವನ್ನು ಪಡೆಯದೆ ಸುಮ್ಮನಿರುವುದನ್ನು ನೋಡುತ್ತೇವೆ. ಮನೆಯಲ್ಲಿರುವ ಹಿರಿಯರಿಗೂ ಇದನ್ನು ತಿಳಿಸದೆ ರಕ್ತಹೀನತೆಗೆ ಬಲಿಯಾಗುತ್ತಾರೆ. ಗರ್ಭಕೋಶದಲ್ಲಿ ಬೆಳೆಯುವ ಗಡ್ಡೆಯೂ ಹೆಚ್ಚಿನ ರಕ್ತಸ್ರಾವಕ್ಕೆ ಕಾರಣವಾಗಿರಬಹುದು.
ಯೋನಿಯ ಸಮಸ್ಯೆ ಮತ್ತು ಗರ್ಭಕೋಶದ ಕೊರಳಿನ ಸಮಸ್ಯೆಯಿಂದ ಉಂಟಾಗುವ ಬಿಳಿಸ್ರಾವದಿಂದ ಬಳಲುವ ಅನೇಕ ಮಹಿಳೆಯರು ವೈದ್ಯರನ್ನು ಕಾಣಲು ಹಿಂದೇಟು ಹಾಕುತ್ತಾರೆ. ಅದು ಗರ್ಭಕೋಶದ ಸುತ್ತುಮುತ್ತಲಿನ ನಂಜಿನ ಸೂಚನೆಯಾಗಿರಬಹುದು ಅಥವಾ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ನ ಸೂಚನೆಯೂ ಆಗಿರಬಹುದು.
ಋತುಬಂಧದ ಸಮಯದಲ್ಲೂ ಏರುಪೇರಾಗುವ ಋತುಚಕ್ರವನ್ನು ಸಹಜವೆಂದೇ ಭಾವಿಸಿ, ರಕ್ತಹೀನತೆಯಿಂದ ಬಳಲುವ ಸಾಧ್ಯತೆಯೂ ಇದೆ. ಹಾರ್ಮೋನ್‌ಗಳ ವ್ಯತ್ಯಾಸದಿಂದ ರಕ್ತಸ್ರಾವ ಹೆಚ್ಚಾಗಿರಬಹುದು ಅಥವಾ ಗರ್ಭಕೋಶದ ಒಳಪದರದ ಕ್ಯಾನ್ಸರ್ ಸಮಸ್ಯೆಯ ಪ್ರಾರಂಭದ ಹಂತವೂ ಇದಾಗಿರಬಹುದು.
ಮುಟ್ಟು ನಿಂತು ಆರು ತಿಂಗಳ ಬಳಿಕ ಸ್ವಲ್ಪ ರಕ್ತಸ್ರಾವ ಆದರೂ ತೀವ್ರ ತಪಾಸಣೆ ಅಗತ್ಯ. ಏಕೆಂದರೆ ಅದು ಕ್ಯಾನ್ಸರ್‌ನ ಸೂಚನೆ ಆಗಿರುವ ಸಾಧ್ಯತೆ ಹೆಚ್ಚು.
ಮೂತ್ರ ಮಾಡಲು ತೊಂದರೆ ಎಂದು ವೈದ್ಯರಲ್ಲಿಗೆ ಬರುವ ಬರುವ 60-70 ವರ್ಷಗಳ ಹಿರಿಯ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣುವ ತೊಂದರೆ ಎಂದರೆ ಗರ್ಭಕೋಶ ಮತ್ತು ಮೂತ್ರಕೋಶದ ಜಾರುವಿಕೆ. ಈ ಸಮಸ್ಯೆ ಪ್ರಾರಂಭವಾಗಿ ಅನೇಕ ವರ್ಷಗಳೇ ಕಳೆದಿದ್ದರೂ ನಾಚಿಕೆ ಮುಜುಗರಗಳಿಂದ ಇದನ್ನು ಯಾರಿಗೂ ತಿಳಿಸದೆ ಈ ಹಿರಿಯ ಜೀವಗಳು ಬಳಲುತ್ತಿರುತ್ತವೆ.
ಇಂಥ ಸಮಸ್ಯೆಗಳಿಗೆ ಪರಿಹಾರ ಎಂದರೆ ಹೆಣ್ಣುಮಕ್ಕಳ ಸಮಸ್ಯೆಗಳನ್ನು ಮನೆಯ ಹಿರಿಯರು ಎಲ್ಲರೂ ಅರಿತಿರುವುದು. ಸಕಾಲದಲ್ಲಿ ವೈದ್ಯರನ್ನ ಭೇಟಿಯಾಗಿ ರಕ್ತಹೀನತೆ, ಕ್ಯಾನ್ಸರ್ , ಗರ್ಭಕೋಶದ ಜಾರುವಿಕೆ, ಗಡ್ಡೆ–ಅಂಡಾಶಯದ ನೀರುಗುಳ್ಳೆಗಳನ್ನು ಸರಿಯಾದ ಸಮಯದಲ್ಲಿ ಕಂಡುಹಿಡಿದು ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು. ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸುಖವಾಗಿ ಬಾಳುವಂತೆ ನೋಡಿಕೊಳ್ಳುವುದರಲ್ಲಿ ಮನೆಯಲ್ಲಿನ ಎಲ್ಲರ ಪಾತ್ರವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.