ADVERTISEMENT

ನೆನಪುಗಳು ಭಾರವೇ?

ರಮ್ಯಾ ಶ್ರೀಹರಿ
Published 17 ಜೂನ್ 2024, 22:43 IST
Last Updated 17 ಜೂನ್ 2024, 22:43 IST
   

‘ಪದೇ ಪದೇ ಹಳೆಯದ್ದನ್ನೆಲ್ಲಾ ನೆನಪಿಸಿಕೊಂಡು ಕೊರಗಬೇಡ, ಮರೆತುಬಿಡು’ ಎಂದು ಸಲಹೆ ಕೊಡುವುದು ಸಾಮಾನ್ಯ. ಜಗಳವಾಡುವಾಗ ಆಗಿಹೋದ ಘಟನೆಯೊಂದನ್ನು ಪ್ರಸ್ತಾಪಿಸಿ ಹಳೆಯ ಗಾಯಕ್ಕೆ ನ್ಯಾಯ ಕೇಳಿದರೆ ‘ಇಂದಿನ ಜಗಳದ ಬಗೆಗೆ ಮಾತ್ರ ಮಾತಾಡು, ಹಳೆಯದೆಲ್ಲ ಕೆದಕಬೇಡ’ ಎಂದು ಹೇಳುತ್ತೇವೆ. ಕಳೆದುಹೋದ ಪ್ರೀತಿಯನ್ನು, ಮಧುರ ಕ್ಷಣಗಳನ್ನು ಇಂದು ನೆನಪಿಸಿಕೊಂಡು ಹೃದಯಕ್ಕೆ ಮುಳ್ಳು ಚುಚ್ಚಿಸಿಕೊಂಡವರಂತೆ ಆಡುತ್ತಾ ‘ಹಳೆಯದ್ದನ್ನೆಲ್ಲಾ ನಾನು ಮರೆತುಬಿಡುವಂತಾಗಬಾರದೇ’ ಎಂದು ಮತ್ತಷ್ಟು ಪರಿತಾಪ ಪಡುತ್ತೇವೆ.

ಹಳೆಯದನ್ನು, ಆಗಿಹೋದ ಕಹಿಘಟನೆಗಳನ್ನು, ಕಳೆದುಹೋದುದನ್ನು ಮರೆತುಬಿಡಬೇಕೆಂಬ ಒತ್ತಡ, ಅದೇಕೆ? ಯಾಕೆ ಹಾಗೆ ಕೆಲವು ನೆನಪುಗಳನ್ನು ಅಳಿಸಿಕೊಳ್ಳಬೇಕೆಂದು ಬಯಸುತ್ತೇವೆ? ಅದು ಭಾರ, ಅದರ ಭಾರದಿಂದ ಇಂದಿನ ನಡಿಗೆ ನಿಧಾನವಾಗುತ್ತಿದೆ, ಇಂದಿನ ಓಟ ಲಯ ತಪ್ಪುತ್ತಿದೆ ಎಂದಲ್ಲವೇ? ಇಷ್ಟೆಲ್ಲಾ ಗೊತ್ತಿದ್ದಮೇಲೆ, ಭಾರವನ್ನು ಸರಾಗವಾಗಿ ಇಳಿಸಿ ನಡೆದುಕೊಂಡು ಹೋಗಿಬಿಡಬಹುದಲ್ಲವೇ? ಹಾಗೆ ನೆನಪುಗಳನ್ನು ಬೇಕೆಂದಾಗ ನೆನಪಿಸಿಕೊಂಡು ಬೇಡವಾದಾಗ ಅಳಿಸಿಬಿಡುವುದು ನಮ್ಮ ಕೈಲಿದ್ದಿದ್ದರೆ ಅದನ್ನು ಯಾರ ಹತ್ತಿರವೂ ಹೇಳಿಸಿಕೊಳ್ಳದೆ, ‘ಮರೆಯುವಂತಾಗಬಾರದೇ’ ಎಂದು ಹಪಹಪಿಸದೆ ಸಹಜವಾಗಿಯೇ ಮರೆತುಬಿಡಬಹುದಾಗಿತ್ತಲ್ಲವೇ? ಅದು ಅಷ್ಟು ಸುಲಭವಲ್ಲ. ನೆನೆಪು-ಮರೆವಿನ ಕೀಲಿಕೈ ಕೆಲವೊಮ್ಮೆ ಮಾತ್ರವೇ ಬುದ್ಧಿಯ ಕೈಲಿರುತ್ತದೆ; ಹೆಚ್ಚಿನ ಸಮಯ ಅದು ಭಾವದ ಕೈಯಲ್ಲಿರುತ್ತದೆ. ಯಾವುದನ್ನು ಮರೆಯಬೇಕು ಯಾವುದನ್ನು ನೆನಪಿಟ್ಟುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದು ನಮ್ಮ ಎಚ್ಚರದ ಬುದ್ಧಿಯಲ್ಲ, ಅದನ್ನು ತೀರ್ಮಾನಿಸುವುದು ನಮ್ಮ ಆಳದ ಪ್ರಜ್ಞೆ, ನಮ್ಮ ಭಾವಲೋಕ.

ನೆನಪು ಕೇವಲ ನಮ್ಮ ಮಿದುಳಿನಲ್ಲಿರದೆ ನಮ್ಮ ದೇಹದ ಪ್ರತಿಯೊಂದು ಅಂಗದಲ್ಲಿಯೂ ಇದೆ; ದೇಹದ ಪ್ರತಿಯೊಂದು ಭಾಗವೂ ನೆನಪುಗಳನ್ನು ತನ್ನದೇ ರೀತಿಯಲ್ಲಿ ನೆನಪಿಟ್ಟುಕೊಂಡಿರುತ್ತದೆ. ಎಂದೋ ಆಗಿಹೋದ ಅನುಭವ ಮತ್ತು ಅಂದು ನಮ್ಮ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ನಾವು ನೀಡಿದ ಪ್ರತಿಕ್ರಿಯೆ ಪುನರಾವರ್ತನೆಯಾದಾಗ ಅದು ರೂಪಾಂತರ ಹೊಂದಿ ಇಂದಿನ ನಮ್ಮ ವರ್ತನೆಯಾಗಿ ಅಭ್ಯಾಸವಾಗಿಬಿಟ್ಟಿರುತ್ತದೆ. ಹಾಗಾಗಿಯೇ ಕೆಲವು ಸನ್ನಿವೇಶಗಳಿಗೆ ನಾವು ನೀಡುವ ಪ್ರತಿಕ್ರಿಯೆ, ವರ್ತಿಸುವ ರೀತಿಯನ್ನು ಎಷ್ಟೇ ಪ್ರಯತ್ನಪಟ್ಟರೂ ಬದಲಾಯಿಸಿಕೊಳ್ಳುವುದು ಸುಲಭವಾಗಿರುವುದಿಲ್ಲ. ಅಂದರೆ ನಮ್ಮ ನೆನಪುಗಳು ‘ಹಾಗಾಯಿತು, ಹೀಗಿತ್ತು, ಹೇಗೆಲ್ಲಾ ಅಂದುಬಿಟ್ಟರು’ ಎಂದು ಹೇಳುವ ಕಥೆಗಳಲ್ಲಿಲ್ಲ; ಅದು ಅಂದು ನಡೆದ ಘಟನೆಗೆ ನಾವು ನೀಡಿದ ಪ್ರತಿಕ್ರಿಯೆ ಹೇಗಿತ್ತು, ಅದನ್ನು ನಮ್ಮ ಆಳದ ಪ್ರಜ್ಞೆ, ನಮ್ಮ ದೇಹ ಯಾವ ರೀತಿಯಲ್ಲಿ ಸಂಗ್ರಹಿಸಿಟ್ಟುಕೊಂಡು ಯಾವಾಗ ಹೊರತೆಗೆಯುತ್ತದೆ ಎನ್ನುವುದರಲ್ಲಿದೆ.

ADVERTISEMENT

ಎಂದರೆ ಇಂದಿನ ನಮ್ಮ ಬದುಕಿನ ಬೇರುಗಳು ಹಿಂದೆ ಆಗಿಹೋದ ಘಟನೆಗಳಿಗೆ ನಾವು ನೀಡುತ್ತಿದ್ದ ಪ್ರತಿಕ್ರಿಯೆಗಳಲ್ಲಿ ನೆಲೆಯಾಗಿರುತ್ತದೆ. ಹಾಗಾಗಿಯೇ ನೆನಪುಗಳನ್ನು ನಾವು ಸ್ಮಾರ್ಟ್ ಫೋನಿನಲ್ಲಿ ಫೊಟೊಗಳನ್ನು, ಸಂದೇಶಗಳನ್ನು ತುಂಬಿಸಿಟ್ಟುಕೊಂಡಂತೆ ಸುಮ್ಮನೆ ಸಂಗ್ರಹಿಸಿಡಲಾಗುವುದಿಲ್ಲ. ನಮ್ಮ ಈಗಿನ ಬದುಕಿಗೆ ಪ್ರಸ್ತುತವಲ್ಲದ ನೆನಪುಗಳು ನಮ್ಮ ಯಾವ ಪ್ರಯತ್ನವೂ ಇಲ್ಲದೆ ತಾನೇ ಕಳೆದುಹೋಗುತ್ತಿರುತ್ತದೆ; ಅದು ಮುಗಿದುಹೋದದ್ದು ಎನ್ನುವ ಅರಿವಿರುತ್ತದೆ. ಅದೇ ಕೆಲವು ನೆನಪುಗಳು ಏನೇ ಮಾಡಿದರೂ ಅಳಿಸಿಹೋಗುವುದಿಲ್ಲ. ಕಾರಣ ಇಂದಿನ ಬದುಕಿಗೆ ಬೇಕಾದ ಯಾವುದೋ ಮುಖ್ಯ ಸಂದೇಶವೊಂದನ್ನು ಅದು ಹೊತ್ತು ನಿಂತಿರುತ್ತದೆ; ಸರಿಯಾದ ಸಮಯಕ್ಕೆ ನಮಗೆ ಬೇಕಾದ, ನಮ್ಮ ಜೀವನಕ್ಕೆ ಮಹತ್ವಪೂರ್ಣವಾದ ಯಾವುದೋ ಸಂಗತಿಯನ್ನು ತಿಳಿಸಿಕೊಡುವುದಕ್ಕೆ ಕಾಯುತ್ತಿರುತ್ತದೆ. ನಮ್ಮ ನಿನ್ನೆಯ, ಇಂದಿನ, ನಾಳಿನ ಬದುಕನ್ನು ಸಾವಯವವಾಗಿ ಬೆಸೆಯುವ ಸೂತ್ರವೇ ನೆನಪು. ನಮ್ಮನ್ನು ನಾವು ಕಂಡುಕೊಳ್ಳುವ ಹಾದಿಯಲ್ಲಿ ನೆನಪೂ ಸಹಾಯಕ್ಕೆ ಬರುತ್ತದೆ.

ಕಾಲದಿಂದ ಕಾಲಕ್ಕೆ ವ್ಯಕ್ತಿಗಳು ಬದಲಾಗುವ ಹಾಗೆ ನೆನಪುಗಳೂ ಬದಲಾಗುತ್ತಿರುತ್ತದೆ. ಒಂದೇ ಘಟನೆಯನ್ನು ಇಬ್ಬರು ವ್ಯಕ್ತಿಗಳು ತೀರಾ ವಿಭಿನ್ನವಾಗಿಯೇ ನೆನಪಿಟ್ಟುಕೊಳ್ಳುವುದು ಸಾಧ್ಯವಿದೆ. ನಮ್ಮೆಲ್ಲಾ ನೆನಪುಗಳು ಎಂದಿನದೋ ಘಟನೆಯ, ಯಾವುದೋ ವ್ಯಕ್ತಿ/ ವಸ್ತು/ ಅನುಭವದ ನಿಖರವಾದ ವಿವರಗಳನ್ನು, ಮಾಹಿತಿಯನ್ನು ತಿಳಿಸುವುದು ಸಾಧ್ಯವಿದೆಯೇ? ಇಲ್ಲವೇ? ನೆನಪುಗಳೆಷ್ಟು ವಿಶ್ವಾಸಾರ್ಹ? ಈ ವಿವರಗಳನ್ನು ಕುರಿತು ವಿಸ್ತೃತವಾದ ಚರ್ಚೆಗಳು, ಅಧ್ಯಯನಗಳು, ಪ್ರಯೋಗಗಳು ನಡೆದಿವೆ. ಇದೆಲ್ಲದರ ತಾತ್ಪರ್ಯ ನೆನಪುಗಳು ಎಂದರೆ ನಾವು ಬುದ್ಧಿಪೂರ್ವಕವಾಗಿ ಭಾಷೆಯ ನೆರವಿನಿಂದ ದಾಖಲಿಸಿದ್ದಷ್ಟೇ ಅಲ್ಲ, ಯಾವುದು ಅಪ್ರಜ್ಞಾಪೂರ್ವಕವಾಗಿ ನಮ್ಮ ನರಮಂಡಲದಲ್ಲೇ ಅಚ್ಚೊತ್ತಿಕೊಂಡಿದ್ದು, ಹೊರಜಗತ್ತಿನ ಪ್ರಚೋದಕಗಳಿಗೆ (triggers) ಅಪ್ರಯತ್ನಪೂರ್ವಕವಾಗಿ ಪ್ರತಿಕ್ರಿಯೆಯ ರೂಪದಲ್ಲಿ ತೋರ್ಪಡಿಸಿಕೊಳ್ಳುತ್ತದೋ ಅದು ನಮ್ಮ ಬದುಕಿಗೆ ಮುಖ್ಯವಾದ ವಿಷಯಗಳನ್ನು ಹೊತ್ತ ನೆನಪುಗಳಾಗಿರುತ್ತವೆ.

ನಮ್ಮ ಅತ್ಯಮೂಲ್ಯ ನೆನಪುಗಳು ಕೇವಲ ವಾಸ್ತವಿಕ ವಿವರಗಳಲ್ಲಿ ಅಡಗಿಲ್ಲ, ಬದಲಾಗಿ ಅವು ನಮ್ಮ ದೇಹದಲ್ಲಿ ಉಂಟುಮಾಡುವ ಸಂವೇದನೆಗಳಲ್ಲಿ ಮತ್ತು ಉಕ್ಕಿಸುವ ಭಾವಗಳಲ್ಲಿ ಅಡಗಿದೆ. ಯಾವ ನೆನಪು ಯಾವ ಭಾವವನ್ನು, ಯಾವ ಸಂವೇದನೆಯನ್ನು ಉಂಟುಮಾಡುತ್ತದೆ ಎಂದು ಗುರುತಿಸುವುದನ್ನು ಅಭ್ಯಾಸಮಾಡಿಕೊಂಡರೆ ಯಾಕೆ ಕೆಲವನ್ನು ಮರೆಯುವುದು ಅಷ್ಟು ಕಷ್ಟ ಎನ್ನುವುದೂ ಗೊತ್ತಾಗುತ್ತದೆ.

ಮನೆಯಲ್ಲಿರುವ, ಇನ್ಮುಂದೆ ಉಪಯೋಗವಿಲ್ಲದ ಒಂದು ವಸ್ತುವನ್ನೇ ಬಿಸಾಕಿಬಿಡಲು ಅದೆಷ್ಟು ಯೋಚಿಸುತ್ತೇವೆ ನಾವು, ಹಾಗಿದ್ದಮೇಲೆ ಹಿಂದೆಂದೋ ನಮಗೆ ಬದುಕಿ ಉಳಿಯಲು, ಸುರಕ್ಷೆಯನ್ನು ಪಡೆಯಲು ಸಹಾಯ ಮಾಡಿದ್ದ ವರ್ತನೆಯನ್ನು, ಪ್ರತಿಕ್ರಿಯೆಯನ್ನು ಅಷ್ಟು ಸುಲಭವಾಗಿ ಬಿಸಾಕಿ ಮುನ್ನಡೆದುಬಿಡಲಾದೀತೆ? ಹಾಗಾದರೆ ಕಾಡಿಸುವ ನೆನಪುಗಳಿಂದ ಬಿಡುಗಡೆಯೇ ಇಲ್ಲವೇ?

ಯಾವ ನೆನಪುಗಳನ್ನು ನಾವು ಕಥೆಯಂತೆ ಹೇಳುತ್ತಿರುತ್ತೇವೋ ಅಂತಹ ನೆನಪುಗಳಿಂದ ಬಿಡುಗಡೆ ಸುಲಭ. ಹೇಳುವ ಕ್ರಿಯೆಯೇ ಆ ಬಿಡುಗಡೆ ನೀಡುತ್ತದೆ. ಅಷ್ಟೇ ಅಲ್ಲದೆ ನಮ್ಮ ‘ನೆನಪಿನ ಕಥೆ’ಗಳು ಅನುಭವದ ಯಥಾವತ್ ಪ್ರತಿಕೃತಿಯಲ್ಲ; ನೆನಪಿನ ಕಥನ ಅನುಭವದ ವ್ಯಾಖ್ಯಾನ ಮಾತ್ರ. ಒಂದೇ ನೆನಪನ್ನು ಪಾಸಿಟಿವ್ ಆಗಿಯೂ ನೆಗೆಟಿವ್ ಆಗಿಯೂ ನಿರೂಪಿಸಬಹುದೆಂಬ ತಿಳಿವಳಿಕೆ ನಮ್ಮನ್ನು ನೆನಪಿನ ಸುಳಿಯಿಂದ ಬಿಡುಗಡೆಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.