ಅತಿ ಹೆಚ್ಚು ಮಾಂಸಸೇವನೆ, ತಂಬಾಕು ಮತ್ತು ಮದ್ಯಪಾನ, ಬೊಜ್ಜು ಕಾರಣಗಳಿಂದ ಮಾರಕ ಕೊಲೊನ್ ಕ್ಯಾನ್ಸರ್(ದೊಡ್ಡ ಕರುಳಿನ ಕ್ಯಾನ್ಸರ್) ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿವೆ.
ರೆಕ್ಟಲ್ ಕ್ಯಾನ್ಸರ್ ಅಂದರೆ ಗುದನಾಳ ಕ್ಯಾನ್ಸರ್ ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತಿದ್ದರೆ, ಕೊಲೊನ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎನ್ನುತ್ತಾರೆ ಸಂಪ್ರದ ಬೆಂಗಳೂರಿನ ಹಾಸ್ಪಿಟಲ್‌ನ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಾಜಿಸ್ಟ್ ಡಾ.ರಾಧೇಶ್ಯಾಂ ನಾಯಕ್.
ಬೊಜ್ಜು ಹೆಚ್ಚಿರುವವರಲ್ಲಿ ಮತ್ತು ಪಾಶ್ಚಿಮಾತ್ಯ ಜೀವನಶೈಲಿ ಅನುಸರಿಸುತ್ತಿರುವವರಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ವಿಶೇಷವಾಗಿ ಆಹಾರ ಪದ್ಧತಿಗಳಿಂದಾಗಿ ಗ್ರಾಮೀಣ ಪ್ರದೇಶಗಳ ಜನರಿಗಿಂತ ಹೆಚ್ಚಾಗಿ ನಗರ ಪ್ರದೇಶಗಳ ಜನರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ.
ಇತ್ತೀಚಿನ ವರ್ಷಗಳಲ್ಲಿ ರೆಕ್ಟಲ್‌ನಿಂದ ಕೊಲೊನ್ ಕ್ಯಾನ್ಸರ್‌ಗೆ ತಿರುಗುತ್ತಿರುವ ಪ್ರಕರಣಗಳು ಅಧಿಕವಾಗಿವೆ. ಇದಕ್ಕೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡುತ್ತಾರೆ ಅವರು.
ಭಾರತದಲ್ಲಿನ ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳ ಪೈಕಿ ಶೇ 5ರಷ್ಟು ಕೊಲೊನ್ ಕ್ಯಾನ್ಸರ್ ಪ್ರಕರಣಗಳಿವೆ. ಭಾರತದಲ್ಲಿ ಪ್ರತಿ 1,00,000 ಪುರುಷರಲ್ಲಿ 4-6 ಜನರಿಗೆ ಈ ರೋಗ ಬಂದರೆ, ಮಹಿಳೆಯರಲ್ಲಿ 4-5 ಜನರಿಗೆ ಬರುತ್ತಿದೆ.
ಆರಂಭಿಕ ಹಂತದಲ್ಲಿಯೇ ಕೊಲೊನ್ ಕ್ಯಾನ್ಸರ್ ಪತ್ತೆಯಾದರೆ, ಸೂಕ್ತ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖವಾಗಲು ಸಾಧ್ಯವಿದೆ. ನಂತರದ ಹಂತಗಳಲ್ಲಿಯೂ ಗಣನೀಯ ಪ್ರಮಾಣದ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿರುವ ಉದಾಹರಣೆಗಳಿವೆ.
ಈ ರೋಗದ ಎಲ್ಲಾ ಹಂತಗಳಲ್ಲಿ ಬದುಕುವ ಪ್ರಮಾಣ ಶೇ 60ರಷ್ಟಿದೆ. ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದೇ ಆದಲ್ಲಿ ಗುಣಮುಖವಾಗುವ ಪ್ರಮಾಣ ಶೇ 95ರವರೆಗೆ ಇರುತ್ತದೆ.
ಸಕಾಲಕ್ಕೆ ತಪಾಸಣೆ ನಡೆದು, ರೋಗ ಪತ್ತೆಯಾದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ನಿಯಮಿತವಾಗಿ ತಜ್ಞ ವೈದ್ಯರಿಂದ ಆರೈಕೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.
ಕೊಲೊನ್ ಕ್ಯಾನ್ಸರ್‌ಗೆ ತಜ್ಞ ವೈದ್ಯರು ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ, ಭಾರತದಲ್ಲಿ ಬಹುತೇಕ ಸರ್ಜನ್‌ಗಳು ಕ್ಯಾನ್ಸರ್ ಪ್ರಕರಣಗಳಿಗೂ ಚಿಕಿತ್ಸೆ ನೀಡುತ್ತಿದ್ದಾರೆ. ಕಿಮೋಥೆರಪಿ ಮತ್ತು ರೇಡಿಯೋಥೆರಪಿಗಳ ಸೂಕ್ತ ಬಳಕೆಯನ್ನೂ ಮಾಡಲಾಗುತ್ತಿದೆ ಎಂದು ಡಾ.ರಾಧೇಶ್ಯಾಂ ತಿಳಿಸಿದರು.
‘ ರಕ್ತವನ್ನು ಪರೀಕ್ಷಿಸಿಕೊಳ್ಳಲು ಕೊಲೊನೋಸ್ಕೋಪಿ ಮತ್ತು ಮಲ ಪರೀಕ್ಷೆಯ ಮೂಲಕ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ರೋಗಿಗಳು ಹಿಂಜರಿಯುತ್ತಿರುವುದರಿಂದ ಕೊಲೊನ್ ಕ್ಯಾನ್ಸರ್ ಚಿಕಿತ್ಸೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಅದೇ ರೀತಿ, ಚಿಕಿತ್ಸೆಯ ಎಲ್ಲಾ ವಿಧಾನಗಳ ಸೂಕ್ತ ಬಳಕೆಯು ಒಂದು ಸಮಸ್ಯೆಯಾಗಿದೆ. ಏಕೆಂದರೆ, ಹೊಸ ಪ್ರತಿಕಾಯಗಳು ದುಬಾರಿಯಾಗಿರುವುದರಿಂದ ಚಿಕಿತ್ಸಾ ವೆಚ್ಚವು ಹೊರೆಯಾಗಿರುವುದು ಒಂದು ಪ್ರಮುಖ ಸವಾಲು ಎಂದೇ ಪರಿಗಣಿಸಬಹುದು ಎಂದು ಹೇಳುತ್ತಾರೆ ರಾಧೇಶ್ಯಾಂ ನಾಯಕ್.
‘ಅತಿಸಾರ, ಮಲಬದ್ಧತೆ, ಕರುಳಿನ ಲಯದಲ್ಲಿ ಆಗುವ ಬದಲಾವಣೆ, ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಮಲವಿಸರ್ಜನೆಯ ವೇಳೆ ನೋವುಂಟಾಗುವುದು, ರಕ್ತಹೀನತೆ, ಆಯಾಸ, ತೂಕ ಕಡಿಮೆಯಾಗುವುದು ಮತ್ತು ಹೊಟ್ಟೆಯಲ್ಲಿ ಹಿಗ್ಗುವಿಕೆಯಂಥ ಲಕ್ಷಣಗಳು ಕಂಡು ಬಂದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ, ಇವುಗಳು ಕೊಲೊನ್ ಕ್ಯಾನ್ಸರ್‌ನ ಕೆಲವು ಪ್ರಮುಖ ಲಕ್ಷಣಗಳಾಗಿವೆ’ ಎಂದು ಅವರು ಎಚ್ಚರಿಕೆ ನೀಡುತ್ತಾರೆ.
ಕಾರಣಗಳು: ಈ ರೋಗ ಉಂಟಾಗಲು ಪ್ರಮುಖ ಕಾರಣವೆಂದರೆ ಸ್ಥೂಲಕಾಯ, ತಂಬಾಕು ಸೇವನೆ ಮತ್ತು ಮದ್ಯಪಾನ, ವ್ಯಾಯಾಮ ಮಾಡದೇ ಇರುವುದು, ಆಹಾರದಲ್ಲಿ ಕಡಿಮೆ ನಾರಿನಂಶ ಸೇವನೆ, ಹೆಚ್ಚು ಮಾಂಸ ಸೇವನೆ ಮಾಡುವುದು, ಕೊಲೊರೆಕ್ಟಲ್ ಪಾಲಿಪ್ಸ್ ಹಿನ್ನೆಲೆ ಇರುವುದು, ಉರಿಯೂತ, ಕರುಳಿನ ಅಸ್ವಸ್ಥತೆ, ದೀರ್ಘಕಾಲೀನ ಮಲಬದ್ಧತೆಯೂ ಕಾರಣವಾಗಬಹುದು. ಶೇ 10ರಷ್ಟು ಅನುವಂಶಿಕ ಕಾರಣಗಳಿಂದಲೂ ಈ ಕಾಯಿಲೆ ಬರುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.