ADVERTISEMENT

ಶ್ವಾಸಕೋಶ ಕ್ಯಾನ್ಸರ್‌ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 23:31 IST
Last Updated 2 ಆಗಸ್ಟ್ 2024, 23:31 IST
   

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಯುವಪೀಳಿಗೆಯಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಪ್ರಮುಖ ಕಾರಣ ಧೂಮಪಾನದ ಗೀಳು. ಅತಿಯಾದ ಧೂಮಪಾನ ಮಾಡುವವರಿಂದ ಹೊರಬರುವ ಹೊಗೆಯಿಂದಾಗಿ ಮಾಲಿನ್ಯಮಟ್ಟ ಹೆಚ್ಚಾಗುತ್ತಿದೆ ಮತ್ತು ಧೂಮಪಾನ ಮಾಡದೇ ಇರುವ ಮತ್ತು ಕಡಿಮೆ ಧೂಮಪಾನ ಮಾಡುತ್ತಿರುವ ವ್ಯಕ್ತಿಗಳಲ್ಲಿಯೂ ಶ್ವಾಸಕೋಶ ಕ್ಯಾನ್ಸರ್‌ ಕಂಡುಬರುತ್ತಿವೆ.

ಶೇ 80ಕ್ಕಿಂತಲೂ ಅಧಿಕ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಧೂಮಪಾನ ಮತ್ತು ತಂಬಾಕಿನ ಬಳಕೆಯಿಂದ ಬರುತ್ತಿವೆ. ಧೂಮಪಾನದ ಅವಧಿ ಮತ್ತು ದಿನಕ್ಕೆ ಒಬ್ಬರು ಸೇದುವ ಸಿಗರೇಟುಗಳ ಸಂಖ್ಯೆಯೊಂದಿಗೆ ಅಪಾಯದ ಮಟ್ಟವೂ ಹೆಚ್ಚಾಗುತ್ತದೆ.

ಚಿಕ್ಕ ವಯಸ್ಸಿನಲ್ಲೇ ಧೂಮಪಾನ ಮಾಡುವುದು ಅಪಾಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಧೂಮಪಾನದ ಜೊತೆಗೆ ಕಲ್ಲುನಾರಿನಂಥ ಕಾರ್ಸಿನೋಜೆನ್‌ಗಳಿಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಗಂಭೀರ ಸ್ವರೂಪಕ್ಕೆ ತಿರುಗಿ ಅಪಾಯವನ್ನು ಹಲವಾರು ಪಟ್ಟು ಹೆಚ್ಚು ಮಾಡುತ್ತದೆ.

ADVERTISEMENT

ಪ್ಯಾಸಿವ್ ಸ್ಮೋಕಿಂಗ್ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಇದರ ಪ್ರಮಾಣ ಶೇ 5ರಷ್ಟಿರುತ್ತದೆ. ಇದಲ್ಲದೇ ವಾಹನ ದಟ್ಟಣೆ ಮತ್ತು ಮನೆಯ ಅಡುಗೆ ಕೋಣೆಯಲ್ಲಿ ಬಳಸುವ ಉರುವಲು ಅಥವಾ ಇಂಧನಗಳನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯದಿಂದಲೂ ಧೂಮಪಾನ ಮಾಡದಿದ್ದವರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ಬರಬಹುದು.

ಪ್ರತಿ 1,00,000 ಜನರಲ್ಲಿ 5.6 ಜನರಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 5.9ರಷ್ಟಿದೆ. ಕ್ಯಾನ್ಸರ್ ಸಂಬಂಧಿ ಮರಣ ಪ್ರಮಾಣದಲ್ಲಿ ಶೇ 8ರಷ್ಟಿದೆ. ಈ ಪೈಕಿ ಅತ್ಯಧಿಕ ಶ್ವಾಸಕೋಶ ಕ್ಯಾನ್ಸರ್ ಕಂಡುಬರುವುದು 55 ರಿಂದ 64 ವರ್ಷದ ಜನರಲ್ಲಿ.

ಶ್ವಾಸಕೋಶ ಕ್ಯಾನ್ಸರ್ ಬಂದ ವ್ಯಕ್ತಿಗಳು 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷದವರೆಗೆ ಬದುಕಬಲ್ಲರು. ಕೇವಲ ಶೇ 10 ರಿಂದ15ರಷ್ಟು ರೋಗಿಗಳು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಬದುಕಬಲ್ಲರು. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದು.

ಬಹುತೇಕ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಮೂರು ಮತ್ತು ನಾಲ್ಕನೇ ಹಂತ ತಲುಪಿದಾಗ ಪತ್ತೆಯಾಗುತ್ತಿವೆ. ಆ ವೇಳೆಯಲ್ಲಿ ಕ್ಯಾನ್ಸರ್ ರೋಗವು ಗಂಭೀರ ಸ್ವರೂಪಕ್ಕೆ ತಿರುಗಿರುತ್ತದೆ. ಮೊದಲ ಅಥವಾ ಎರಡನೇ ಹಂತದಲ್ಲಿದ್ದಾಗಲೇ ಈ ರೋಗ ಪತ್ತೆಯಾದರೆ ಬದುಕುವ ಪ್ರಮಾಣ ಕೇವಲ ಶೇ 20ರಿಂದ 30ರಷ್ಟಿರುತ್ತದೆ.

ಕಂಡುಹಿಡಿಯುವುದು ಹೇಗೆ?

ದೀರ್ಘಕಾಲದ ಬ್ರಾಂಕೈಟಿಸಿನಿಂದ ಬಳಲುತ್ತಿರುವವರಲ್ಲಿ ಕಾಣಿಸುವ ರೋಗಲಕ್ಷಣಗಳೇ ಇಲ್ಲಿಯೂ ಕಾಣಿಸಬಹುದು. ಕೆಲವೊಮ್ಮೆ ಕ್ಷಯವಿರಬಹುದು ಎಂದು ತಪ್ಪಾಗಿ ಅಂದಾಜಿಸಲಾಗುತ್ತದೆ. ನಿಯಮಿತವಾಗಿ ಕ್ಯಾನ್ಸರ್‌ ರೋಗ ತಪಾಸಣೆಗೆ ಒಳಗಾಗಲು ಭಾರತೀಯರು ಹಿಂದೇಟು ಹಾಕುವುದೂ ದೊಡ್ಡ ಸವಾಲಾಗಿದೆ.

ಪ್ರಮುಖ ಸವಾಲುಗಳು

ಶ್ವಾಸಕೋಶ ಕ್ಯಾನ್ಸರ್‌ ರೋಗಿಗಳಲ್ಲಿ ಹಲವರು ಧೂಮಪಾನಿಗಳು, ಮದ್ಯಪಾನಿಗಳಾಗಿರುತ್ತಾರೆ. ಜತೆಗೆ ವಯಸ್ಸಿನ ಕಾರಣಕ್ಕೆ ಚಿಕಿತ್ಸೆಯನ್ನು ಪಡೆಯುವ ಧಾರಣ ಶಕ್ತಿ ಕಡಿಮೆ ಇರುತ್ತದೆ. ಯಕೃತ್‌, ಹೃದಯಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇದರಿಂದ ಚಿಕಿತ್ಸೆ ನೀಡುವುದು ದೊಡ್ಡ ಸವಲಾಗಬಹುದು.

ಚಿಕಿತ್ಸೆಯ ವೆಚ್ಚ, ವಿಶೇಷವಾಗಿ ಪ್ರತಿರಕ್ಷಣಾ ಚಿಕಿತ್ಸೆ, ಉದ್ದೇಶಿತ ಚಿಕಿತ್ಸೆ ಮತ್ತು ಆ್ಯಂಟಿ-ಆ್ಯಂಜಿಯೋಜೆನಿಕ್ ಚಿಕಿತ್ಸೆಯಂತಹ ಹೊಸ ಚಿಕಿತ್ಸೆಗಳು ಅನೇಕ ರೋಗಿಗಳಿಗೆ ಸಮಸ್ಯೆಯಾಗಿ ಪರಿಣಮಿಸಬಹುದು. ಮುಂದುವರಿದ ಹಂತಗಳಲ್ಲಿ ಚಿಕಿತ್ಸೆಯನ್ನು ಪಡೆದರೆ ಚಿಕಿತ್ಸೆಯ ಫಲಿತಾಂಶದ ಪ್ರಮಾಣವು ಕಡಿಮೆಯಾಗುತ್ತದೆ. ಇನ್ನು ಕೆಲವರು ಚಿಕಿತ್ಸೆಯಲ್ಲಿರುವಾಗಲೇ ಧೂಮಪಾನ ಮತ್ತು ಮದ್ಯಪಾನದಂಥ ಚಟದ ತೆಕ್ಕೆಯಿಂದ ಬಿಡಿಸಿಕೊಳ್ಳಲು ಆಗದೇ ಒದ್ಡಾಡುತ್ತಾರೆ. ಇದರಿಂದ ರೋಗ ಇನ್ನಷ್ಟು ಉಲ್ಬಣಗೊಳ್ಳುತ್ತಾ ಹೋಗುತ್ತದೆ.

ಧೂಮಪಾನಿಗಳು ಕಡ್ಡಾಯವಾಗಿ ನಿಯಮಿತ ತಪಾಸಣೆ ಮಾಡಬೇಕು. ಸರ್ಕಾರ ಮತ್ತು ನಾಗರಿಕ ಸಮಾಜವು ಧೂಮಪಾನ ತ್ಯಜಿಸುವ ಜಾಗೃತಿ ಅಭಿಯಾನಗಳನ್ನು ಏರ್ಪಡಿಸಬೇಕು. ಸಾಮಾನ್ಯ ಕ್ಯಾನ್ಸರ್ ರೋಗಿಯ ರೀತಿಯಲ್ಲಿಯೇ ಶ್ವಾಸಕೋಶ ಕ್ಯಾನ್ಸರ್ ರೋಗಿಗಳಿಗೂ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಬೇಕು. ಆಗ ಮಾತ್ರ ವಿಶ್ವ ಶ್ವಾಸಕೋಶ ದಿನಾಚರಣೆಗೆ ಅರ್ಥ ಬರುತ್ತದೆ.

ಲೇಖಕರು: ಕನ್ಸಲ್ಟೆಂಟ್ ರೇಡಿಯೇಷನ್ ಆಂಕಾಲಾಜಿಸ್ಟ್, ಸಂಪ್ರದ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.